ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸಿದ ನಾಗರಿಕ; ಇಲ್ಲಿ ಯಾರಿಗೆ ನಾಚಿಕೆಯಾಗಬೇಕು?

By Sathish Kumar KH  |  First Published Nov 21, 2024, 8:07 PM IST

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸಿರುವ ವ್ಯಕ್ತಿಯೊಬ್ಬರು, ಮುಂದಿನ 5 ವರ್ಷಗಳಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇಲ್ಲಿ ಯಾರಿಗೆ ನಾಚಿಕೆ ಆಗಬೇಕು ಎಂಬುದು ಚರ್ಚಿತ ವಿಷಯವಾಗಿದೆ..


ಬೆಂಗಳೂರು (ನ.21): ವಿಶ್ವದಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್ ಜಾಮ್ ಹೊಂದಿರುವ ನಗರಗಳಲ್ಲಿ 4ನೇ ಸ್ಥಾನವನ್ನು ಹೊಂದಿರುವ ಬೆಂಗಳೂರು ನಗರ, ನಮ್ಮ ಭಾರತ ದೇಶದಲ್ಲಿ ಮೊದಲೇ ಸ್ಥಾನವನ್ನು ಪಡೆದುಕೊಂಡಿದೆ. ಇದಕ್ಕೆ ಕಾರಣ 1.4 ಕೋಟಿ ಜನರ ಪೈಕಿ ಶೇ.70ಕ್ಕೂ ಅಧಿಕ ಜನರು ಖಾಸಗಿ ವಾಹನಗಳನ್ನು ಹೊಂದಿದ್ದಾರೆ. ಇದರಿಂದಾಗಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮುಂದಿನ 5 ವರ್ಷಗಳಲ್ಲಿ ಈ ಕ್ರಮಗಳನ್ನು ಕೈಗೊಂಡಲ್ಲಿ ಸಮಸ್ಯೆ ನಿಯಂತ್ರಿಸಬಹುದು ಎಂದು ಬೆಂಗಳೂರು ವ್ಯಕ್ತಿಯೊಬ್ಬರು ಸಲಹೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ @Bnglrweatherman ಎಂಬ ಖಾತೆಯಿಂದ ಸರ್ಕಾರಕ್ಕೆ ಬೆಂಗಳೂರಿನಲ್ಲಿ ಮುಂದಿನ 5 ವರ್ಷಗಳಲ್ಲಿ ಯಾವೆಲ್ಲಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಟ್ರಾಫಿಕ್ ಜಾಮ್ ನಿಯಂತ್ರಣ ಮಾಡಬಹುದು ಎಂದು ಸಲಹೆಗಳನ್ನು ನೀಡಿದ್ದಾರೆ. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ಟ್ರಾಫಿಕ್ ಸಮಸ್ಯೆಯಿಂದ ತಗ್ಗಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಬೆಂಗಳೂರು ನಗರದಲ್ಲಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಯ ಕುರಿತು ಕೆಲವು ಅಂಕಿ ಅಂಶಗಳನ್ನು ಕಲೆ ಹಾಕಿ ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜನರೇ ಸರ್ಕಾರಕ್ಕೆ ಸಲಹೆ ನೀಡುವಂತಾಗಿರುವುದು ಇಲ್ಲಿ ಜನರು ನಮ್ಮ ನಗರಕ್ಕೆ ಇಂತಹ ಪರಿಸ್ಥಿತಿ ಬಂದಿದೆಯಲ್ಲಾ ಎಂದು ನಾಚಿಕೆ ಪಟ್ಟುಕೊಳ್ಳಬೇಕೋ ಅಥವಾ ಜನರೇ ನಮಗೆ ಸಲಹೆ ಕೊಡುತ್ತಾರೆಂದು ಸರ್ಕಾರವೇ ನಾಚಿಕೆ ಪಟ್ಟುಕೊಳ್ಳಬೇಕೋ ನಿಮ್ಮ ಅಭಿಪ್ರಾಯಕ್ಕೆ ಬಿಟ್ಟಿದೆ..

Tap to resize

Latest Videos

undefined

ಬೆಂಗಳೂರು ವ್ಯಕ್ತಿ ಕೊಟ್ಟ ಸಲಹೆಗಳು:
ಬೆಂಗಳೂರು ನಗರವು ಈಗ 1.4 ಕೋಟಿ ಜನರು ಮತ್ತು 1.05 ಕೋಟಿ ಖಾಸಗಿ ವಾಹನಗಳಿಗೆ ನೆಲೆಯಾಗಿದೆ. ಕಳೆದ ತಿಂಗಳಲ್ಲಿ ನಗರವು ಸುಮಾರು 70k ಹೊಸ ಖಾಸಗಿ ವಾಹನಗಳನ್ನು ಸೇರಿಸಿದೆ, ಖಾಸಗಿ ವಾಹನಗಳು ಈಗ 87.6% ಟ್ರಾಫಿಕ್‌ನಲ್ಲಿ ಪ್ರಾಬಲ್ಯ ಹೊಂದಿವೆ. ನಗರವನ್ನು ವಾಸಯೋಗ್ಯ ಮಾಡಲು ಈ ಕ್ರಮಗಳನ್ನು ಪಾಲಿಸಬೇಕು.

ಇದನ್ನೂ ಓದಿ: Bengaluru: ಈ 4 ಭಾಗದಲ್ಲಿನ ಟ್ರಾಫಿಕ್ ನಿಯಂತ್ರಿಸಲು ಸಂಸ್ಥೆ ಸೂಪರ್ ಪ್ಲಾನ್

ಮುಂದಿನ 5 ವರ್ಷಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು:

  • ನಗರದ ಜನಸಂಖ್ಯೆಯ ಶೇ.70ಕ್ಕೂ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮೇಲೆ ಅವಲಂಬಿತರಾಗುವಂತೆ ಮಾಡಬೇಕು. ಆದರೆ, ಈಗ ಸುಮಾರು ಶೇ. 10 ಜನರು ಮಾತ್ರ ಸಾರ್ವಜನಿಕ ಸಾರಿಗೆ ಮೇಲೆ ಅವಲಂಬಿತರಾಗಿದ್ದಾರೆ.
  • ನಗರದಲ್ಲಿ ಬಹುಮಾದರಿಯ ಸಾರಿಗೆ ಪ್ರಯಾಣಗಳನ್ನು ಉತ್ತೇಜಿಸಬೇಕು. ಅಲ್ಲಿ ಬಸ್ ಸವಾರಿ, ಮೆಟ್ರೋ ಪ್ರಯಾಣ ಮತ್ತು ಸೈಕಲ್ ಸವಾರಿಗೆ ಅನುಕೂಲ ಮಾಡಿಕೊಡಬೇಕು.
  • ಬೆಂಗಳೂರು ನಗರದಲ್ಲಿ ಜನರು ನಡೆದುಕೊಂಡು ಹೋಗಲು ಅನುಕೂಲ ಆಗುವಂತೆ ಪಾದಚಾರಿ ಮಾರ್ಗಗಳನ್ನು ಸುಸ್ಥಿತಿಯಲ್ಲಿಡಬೇಕು. ಪಾದಚಾರಿ-ಸ್ನೇಹಿ ವಲಯಗಳನ್ನು ನಿರ್ಮಿಸಬೇಕು.
  • ಬೆಂಗಳೂರಿನಲ್ಲಿ ಬಿಎಂಟಿಸಿಯಿಂದ ದೊಡ್ಡ ಮತ್ತು ಮಿನಿ ಎರಡೂ ಬಸ್ಸುಗಳನ್ನು ಸಂಚಾರಕ್ಕೆ ಬಳಸಬೇಕು. ಮೆಟ್ರೋ ಮತ್ತು ದೊಡ್ಡ ಬಸ್‌ಗಳಿಗೆ ಕೊನೆಯ ಮೈಲಿ ಸಂಪರ್ಕವಾಗಿ ಹಾಗೂ ವಸತಿ ಪ್ರದೇಶಗಳಲ್ಲಿ ಮಿನಿ ಬಸ್‌ಗಳನ್ನು ಸಂಚಾರಕ್ಕೆ ಬಳಸಬೇಕು.
  • ನಗರದಾದ್ಯಂತ ಮೆಟ್ರೋ ರೈಲು ಜಾಲದ ಗರಿಷ್ಠ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಣೆ ಮಾಡಬೇಕು. 
  • ಉಪನಗರ ರೈಲಿನ ವಿಶಾಲ ಜಾಲವನ್ನು ಕೂಡಲೇ ಸಿದ್ಧಪಡಿಸುವ ಅಗತ್ಯವಿದೆ.
  • ನಾವು ಇಲ್ಲಿ ವಾಸಮಾಡಲು ಅನುಕೂಲ ಆಗುವಂತೆ ಸುಸಜ್ಜಿತ ಪಾದಚಾರಿ ಮಾರ್ಗಗಳು, ಸೈಕಲ್ ಮತ್ತು ಬಸ್ ಲೇನ್‌ಗಳನ್ನು ನಿರ್ಮಿಸಬೇಕು. 

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ನಲ್ಲಿ ಆಫೀಸ್‌ನಿಂದ ಮನೆ ತಲುಪಲು 4 ಗಂಟೆ, ಹಿಂದಿನ ಎಲ್ಲಾ ದಾಖಲೆ ಉಡೀಸ್!

ಬೆಂಗಳೂರು ನಗರವು ಈಗ ಜನಸಂಖ್ಯೆ ಸ್ಫೋಟ ಮತ್ತು ಖಾಸಗಿ ವಾಹನಗಳ ಅತಿರೇಕದ ಬೆಳವಣಿಗೆಯ ಸವಾಲುಗಳನ್ನು ಎದುರಿಸುತ್ತಿದೆ. ಬೆಂಗಳೂರು ನಗರ ಎಷ್ಟೇ ವಿಸ್ತರಣೆ ಮತ್ತು ದಟ್ಟಣೆಯಿಂದ ಕೂಡಿದರೂ ತನ್ನ ಮೂಲ ಸ್ವರೂಪ ಕಳೆದುಕೊಳ್ಳದಂತೆ ಜಾಗ್ರತೆವಹಿಸಬೇಕು. ಮುಂದಿನ 5 ವರ್ಷಗಳಲ್ಲಿ ನಗರದ ಅಭಿವೃದ್ಧಿಗೆ ವೇಗದ ಕಾರ್ಯತಂತ್ರ ಹಾಗೂ ಸಮಗ್ರ ವಿಧಾನದ ಅಗತ್ಯವಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದರೆ, ಇದನ್ನು ಸರ್ಕಾರಕ್ಕಾಗಲೀ, ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿಗಾಗಲೀ ಟ್ಯಾಗ್ ಮಾಡಿಲ್ಲ.

click me!