ಉಡುಪಿ: ಬಾರದ ತೂಫಾನ್ ಸಂಕಷ್ಟದಲ್ಲಿ ಮೀನುಗಾರರು!

By Ravi JanekalFirst Published Jul 4, 2023, 2:05 PM IST
Highlights

ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇದುವರೆಗೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಿಲ್ಲ. ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ, ಮಾತ್ರವಲ್ಲದೆ ಇನ್ನೂ ಸಹ ಸಮುದ್ರದಲ್ಲಿ ತೂಫಾನ್‌ ಆಗದೇ ಇರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗಿ ಆರಂಭವಾಗುವ ಸಾಧ್ಯತೆಗಳಿವೆ.

ಉಡುಪಿ (ಜು.4) : ಜಿಲ್ಲೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿ ಒಂದು ತಿಂಗಳಾಗುತ್ತಾ ಬಂದಿದೆ. ಆದರೆ ಇದುವರೆಗೂ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಪ್ರಾರಂಭವಾಗಿಲ್ಲ. ಜೂನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಇರುವುದರಿಂದ, ಮಾತ್ರವಲ್ಲದೆ ಇನ್ನೂ ಸಹ ಸಮುದ್ರದಲ್ಲಿ ತೂಫಾನ್‌ ಆಗದೇ ಇರುವುದರಿಂದ ಈ ಬಾರಿ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗಿ ಆರಂಭವಾಗುವ ಸಾಧ್ಯತೆಗಳಿವೆ.

ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್‌, ಅಳ್ವೆಗದ್ದೆಯಲ್ಲಿ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್‌, 35 ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ ಸುಮಾರು 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. 

ನೆಕ್ಕುಂದಿ ಕೆರೆ ಅವ್ಯವಸ್ಥೆ: ಮೀನುಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಸಚಿವ ಸುಧಾಕರ್‌ ಗರಂ

ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್‌ ದೋಣಿಗಳಿವೆ. ಆದರೆ ಮುಂಗಾರು ವಿಳಂಬವಾಗಿರುವ ಹಿನ್ನೆಲೆಯಲ್ಲಿ ನಾಡ ದೋಣಿ ಮೀನುಗಾರಿಕೆ ಇದುವರೆಗೆ ಆರಂಭವಾಗಿಲ್ಲ. ಸರಿಸುಮಾರು 3000ಕ್ಕೂ ಅಧಿಕ ನಾಡ ದೋಣಿಗಳು ಸದ್ಯ ದಡದಲ್ಲಿ ಲಂಗರು ಹಾಕಿ ತೂಫಾನಿನ  ನಿರೀಕ್ಷೆಯಲ್ಲಿ ಕಾದು ಕುಳಿತಿದೆ. 

ಸದ್ಯ ಸಮುದ್ರದ ಪರಿಸ್ಥಿತಿ ನೋಡಿಕೊಂಡು ಜುಲೈ ಮೊದಲ ವಾರ ಅಥವಾ ಜು.15ರ ಅನಂತರ ಕುಂದಾಪುರ, ಬೈಂದೂರು ಭಾಗದನಾಡದೋಣಿ ಮೀನುಗಾರರು ಕಡಲಿಗಿಳಿಯುವ ನಿರೀಕ್ಷೆ ಇದೆ.

ಜೂನ್ ಮೊದಲ ವಾರದಲ್ಲಿ ಸಾಕಷ್ಟು ಮಳೆಯಾಗಿದ್ದರೆ ಜೂನ್ ಕೊನೆಯ ವಾರಕ್ಕೆ ತೂಫಾನ್‌ ಏಳುವ ಸಾಧ್ಯತೆ ಇತ್ತು. ಕಡಲಾಳದಲ್ಲಿ ತೂಫಾನ್‌ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಇದರಿಂದ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಜೂನ್‌ನಲ್ಲಿ ಅಷ್ಟೊಂದು ಪ್ರಮಾಣದ ಮಳೆಯಾಗದೇ ಇರುವುದರಿಂದ ತೂಫಾನ್‌ ವಿಳಂಬಗೊಂಡಿದೆ. 

ತೂಫಾನ್‌ ಏಳದೇ ಮೀನುಗಾರರು ಕಡಲಿಗಿಳಿದರೂ, ಅದರಿಂದ ಹೇರಳವಾಗಿ ಮೀನುಗಳು ಸಿಗುವುದಿಲ್ಲ.ಜೂನ್‌ನಲ್ಲಿ ಉತ್ತಮ ಮಳೆಯಾಗುತ್ತಿದ್ದರೆ ಇಷ್ಟೊತ್ತಿಗಾಗಲೇ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗುತ್ತಿದ್ದರು. ಮೊದಲೇ ಸಂಕಷ್ಟದಲ್ಲಿರುವ ಸಾಂಪ್ರದಾಯಿಕ ಮೀನುಗಾರರು ಈ ಬಾರಿ ಮತ್ತಷ್ಟು ಸಂಕಟ ಎದುರಿಸುತ್ತಿದ್ದಾರೆ. ಕಳೆದ ವರ್ಷ ಕೂಡ ಏಕಾಏಕಿ ಬಿರುಗಾಳಿ ಹೊಡೆದ ಕಾರಣ ಅನೇಕ ನಾಡ ದೋಣಿಗಳು ಹಾನಿಗೀಡಾಗಿದ್ದವು. ಮೀನುಗಾರಿಕೆ ನಡೆಸುವವರಲ್ಲಿ ಈ ಸಾಂಪ್ರದಾಯಿಕ ಮೀನುಗಾರರು ಕಡುಬಡವರಾಗಿದ್ದಾರೆ. 

ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ

ಸಾಲಸೋಲ ಮಾಡಿ ನಾಡ ದೋಣಿ ಮೀನುಗಾರಿಕೆ ಆರಂಭಿಸಿರುವ ಮೀನುಗಾರರು ತಲೆ ಮೇಲೆ ಕೈ ಕೊಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಮುಂದೆ ವಾತಾವರಣ ದ ಪರಿಸ್ಥಿತಿ ನೋಡಿ ನಾಡದೋಣಿಗಳು ನೀರಿಗಿಳಿಯುವ ಸಾಧ್ಯತೆ ಇದೆ. ಜುಲೈ ತಿಂಗಳಿನಲ್ಲಾದರೂ ಮುಂಗಾರು ಬಿರುಸಾಗುವ ನಿರೀಕ್ಷೆಯಿದ್ದು, ಬಿರುಸಾದರೆ ಮಾತ್ರ ನಾಡದೋಣಿ ಮೀನುಗಾರಿಕೆ ನಡೆಸಬಹುದು.

click me!