ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸೇರಿಸಲಾಗಿದ್ದ ಅಂಶಗಳನ್ನು ರದ್ದುಪಡಿಸಲು ರೂಪಿಸಿರುವ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ- 2023’ಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಧರಣಿ ನಡುವೆಯೇ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ವಿಧಾನಸಭೆ (ಜು.18) : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಸೇರಿಸಲಾಗಿದ್ದ ಅಂಶಗಳನ್ನು ರದ್ದುಪಡಿಸಲು ರೂಪಿಸಿರುವ ‘ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕ- 2023’ಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ಹಾಗೂ ಧರಣಿ ನಡುವೆಯೇ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಈ ಮಧ್ಯೆ, ವಿಧೇಯಕದ ಅಂಗೀಕಾರದ ಬಳಿಕ ಸ್ಪೀಕರ್ ಅವರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪ್ರತಿಪಕ್ಷಗಳ ಆಗ್ರಹದಂತೆ ತಿದ್ದುಪಡಿ ವಿಧೇಯಕದ ನಿಯಮಾವಳಿ ರೂಪಿಸುವ ಮುನ್ನ ರಾಜ್ಯದ ರೈತ ಮುಖಂಡರ ಸಲಹೆ ಪಡೆಯಲು ಸರ್ಕಾರ ಸಮ್ಮತಿಸಿದೆ.
ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಕೃಷಿ ಕ್ಷೇತ್ರಕ್ಕೆ ದೊಡ್ಡ ಆಘಾತ ನೀಡಿದೆ
ಈ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾದರೆ ಇನ್ಮುಂದೆ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಇದ್ದ ಅವಕಾಶ ರದ್ದಾಗಲಿದೆ. ರಾಜ್ಯದ ಎಪಿಎಂಸಿಗಳ ಪ್ರಾಂಗಣಗಳಲ್ಲಿ ಮಾತ್ರ ರೈತರು ಅಧಿಸೂಚಿತ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮೂಲ ಅಧಿನಿಯಮದಲ್ಲಿ ಇದ್ದ ನಿರ್ಬಂಧಗಳು ಮರು ಜಾರಿಯಾಗಲಿವೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 5 ಸಾವಿರ ರು.ನಿಂದ ಗರಿಷ್ಠ 30 ಸಾವಿರ ರು. ವರೆಗೆ ದಂಡ ವಿಧಿಸಲೂ ಕಾನೂನಲ್ಲಿ ಅವಕಾಶವಾಗಲಿದೆ.
ವಿಧೇಯಕದ ತಿದ್ದುಪಡಿ ಅಂಶಗಳ ಪ್ರಕಾರ, ಸರ್ಕಾರ ಗೊತ್ತುಪಡಿಸಿದ ಮಾರುಕಟ್ಟೆಪ್ರಾಂಗಣ, ಉಪ ಪ್ರಾಂಗಣ, ಉಪ ಮಾರುಕಟ್ಟೆಪ್ರಾಂಗಣ, ಖಾಸಗಿ ಮಾರುಕಟ್ಟೆಪ್ರಾಂಗಣ ಅಥವಾ ಸಂದರ್ಭಾನುಸಾರವಾಗಿ ರೈತ ಗ್ರಾಹಕ ಮಾರುಕಟ್ಟೆಪ್ರಾಂಗಣವನ್ನು ಹೊರತುಪಡಿಸಿ ಇನ್ಯಾವುದೇ ಸ್ಥಳದಲ್ಲಿ ಕೃಷಿ ಉತ್ಪನ್ನದ ಖರೀದಿ ಮತ್ತು ಮಾರಾಟ ಮಾಡುವಂತಿಲ್ಲ. ಜಿಲ್ಲಾ, ತಾಲ್ಲೂಕು ಎಪಿಎಂಸಿಗಳು, ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆಮತ್ತು ರಾಜ್ಯ ಸರ್ಕಾರ ಅನುಮತಿ ನೀಡಿದ ಯಾವುದೇ ಇತರೆ ಸಹಕಾರ ಸಂಘದ ಮೂಲಕ ಮಾಡಿರುವ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಮಾಡಬಹುದು.
3 ತಿಂಗಳು ಜೈಲು, ದಂಡಕ್ಕೆ ಅವಕಾಶ:
ಎಪಿಎಂಸಿ ತಿದ್ದುಪಡಿ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿ ಯಾವುದೇ ಮಾರುಕಟ್ಟೆಪ್ರದೇಶವನ್ನು ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಬಳಸಿದರೆ ಅಥವಾ ಅಧಿಕೃತ ಪರವಾನಗಿ ಇಲ್ಲದೆ ವ್ಯಾಪಾರಿಯಾಗಿ, ದಲ್ಲಾಳಿಯಾಗಿ, ಬ್ರೋಕರ್ ಆಗಿ, ಸಂಸ್ಕರಣಕಾರನಾಗಿ, ದಾಸ್ತಾನುದಾರನಾಗಿರುವುದು ಸಾಬೀತಾದರೆ ಅವರಿಗೆ ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು ಐದು ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಂಡ ವಿಧಿಸಬಹುದು. 2ನೇ ಬಾರಿ ನಿಯಮ ಉಲ್ಲಂಘನೆಗೆ 20 ಸಾವಿರ ರು. ಮತ್ತು 3ನೇ ಬಾರಿ ಉಲ್ಲಂಘನೆಗೆ 30 ಸಾವಿರ ರು. ದಂಡ ವಿಧಿಸಬಹುದಾಗಿದೆ.
ತಿದ್ದುಪಡಿ ರದ್ದತಿ ವಿರುದ್ಧ ಬಿಜೆಪಿ, ಜೆಡಿಎಸ್ ಧರಣಿ
ಜವಳಿ, ಕಬ್ಬು, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆಸಚಿವ ಶಿವಾನಂದ ಎಸ್.ಪಾಟೀಲ್ ಅವರು ಈ ತಿದ್ದುಪಡಿ ವಿಧೇಯಕವನ್ನು ಸದನದ ಪರ್ಯಾಲೋಚನೆಗೆ ಮಂಡಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗಿತ್ತು. ಆದರೆ, ರೈತರ ವಿರೋಧ, ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಈ ಕಾನೂನನ್ನು ವಾಪಸ್ ಪಡೆದರೂ ರಾಜ್ಯದಲ್ಲಿ ಮುಂದುವರೆಸಲಾಗಿತ್ತು. ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಇದರಿಂದ ಕೃಷಿ ಮಾರುಕಟ್ಟೆಗಳು ಪುನಶ್ಚೇತನಗೊಳ್ಳಲಿವೆ. ರೈತರಿಗೆ ತಾವು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ರಕ್ಷಣೆ ದೊರೆಯಲಿದೆ ಎಂದು ವಿವರಿಸಿದರು.
ಬಳಿಕ ಸ್ಪೀಕರ್ ಯು.ಟಿ.ಖಾದರ್ ಅವರು ವಿಧೇಯಕ ಮೇಲೆ ಚರ್ಚೆಗೆ ಅವಕಾಶ ನೀಡಿದರು. ಈ ವೇಳೆ ಮಾಜಿ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ನೀವು ಎಪಿಎಂಸಿ ಬಗ್ಗೆ ಅಧ್ಯಯನ ಮಾಡಿದರೆ ಕಾನೂನು ವಾಪಸ್ ಪಡೆಯುತ್ತಿರಲಿಲ್ಲ. ಎಪಿಎಂಸಿಯನ್ನು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರಂಭ ಮಾಡಿದ್ದು. ಎಪಿಎಂಸಿ ಒಳಗಡೆ ಬೆಳೆ ಮಾರಾಟ ಮಾಡಬೇಕು. ಹೊರಗಡೆ ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ, ಹಿಂದಿನ ಸರ್ಕಾರದಲ್ಲಿ ಇದಕ್ಕೆ ತಿದ್ದುಪಡಿ ಮಾಡಿ ರೈತರ ಬೆಳೆಯನ್ನು ಯಾವಾಗ ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾಡಲು ಅವಕಾಶ ಇತ್ತು. ಇದರಿಂದ ಅವರಿಗೆ ಹೆಚ್ಚಿನ ಲಾಭವಾಗುತ್ತಿತ್ತು. ರೈತನಿಗೆ ತಾನು ಬೆಳೆದ ಬೆಳೆಯನ್ನು ಬೇರೆ ಕಡೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವೇ? ಈ ಹಿನ್ನಲೆಯಲ್ಲಿ ಈ ಕಾನೂನನ್ನು ಸರಿಯಾಗಿ ಅಧ್ಯಯನ ಮಾಡದೆ ತಿದ್ದುಪಡಿ ತರಲಾಗಿದೆ ಎಂದರು.
ಟಿ.ಬಿ.ಜಯಚಂದ್ರ ಮಾತನಾಡಿ, ಕೇಂದ್ರದ ಕಾನೂನನ್ನು ರೈತರು ಒಂದು ವರ್ಷ ವಿರೋಧ ಮಾಡಿ ಪ್ರತಿಭಟನೆ ಮಾಡಿದ್ದರು. 800 ಜನ ರೈತರು ಪ್ರಾಣ ಕಳೆದುಕೊಂಡಿದ್ದರು. ಕೇಂದ್ರ ವಾಪಸ್ ತೆಗೆದುಕೊಂಡರೂ ರಾಜ್ಯದಲ್ಲಿ ವಾಪಸ್ ಪಡೆದಿಲ್ಲ ಏಕೆ? ಈ ನಿಟ್ಟಿನಲ್ಲಿ ಕಾನೂನು ವಾಪಸ್ ಪಡೆಯುವ ತಿದ್ದುಪಡಿಗೆ ಬೆಂಬಲ ಕೊಡಿ ಎಂದು ಆಗ್ರಹಿಸಿದರು.
ಸಿದ್ದು ಸವದಿ ಮಾತನಾಡಿ, ಎಪಿಎಂಸಿಯಲ್ಲಿ ರೈತರ ರಕ್ತ ಹೀರಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ವಾಪಸ್ ಪಡೆಯುವುದು ಭಂಡತನ ಎಂದರು. ಆದರೆ ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಕಾನೂನು ರದ್ದು ಮಾಡಿದ್ದು ಭಂಡತನವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ರೈತರ ಶೋಷಣೆ ಎಂಪಿಎಂಸಿಯಿಂದ ನಿಲ್ಲಲ್ಲ. ಅದು ಸಂಘಟಿತವಾದ ಶೋಷಣೆಯಾಗಿದೆ. ರೈತರು ವಿದ್ಯಾವಂತರಾಗಿದ್ದಾರೆ. ಈ ಕಾರಣದಿಂದ ತೂಕದಲ್ಲಿ ವ್ಯತ್ಯಾಸ ಆಗಲು ಸಾಧ್ಯವಿಲ್ಲ. ಎಪಿಎಂಸಿಯಲ್ಲಿ ದಲ್ಲಾಳಿಗಳು ರೈತರ ಸುಲಿಗೆ ಮಾಡುತ್ತಾರೆ. ಆದರೆ ನಾವು ತಂದ ಕಾನೂನಿನಲ್ಲಿ ರೈತರ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಇದೆ ಎಂದರು.
ಹಳೆ ಎಪಿಎಂಸಿ ಕಾಯ್ದೆ ಮರುಜಾರಿ: 650 ಕೋಟಿ ರು. ಆದಾಯ, ಸಚಿವ ಶಿವಾನಂದ ಪಾಟೀಲ್
ವ್ಯಾಪಾರಿಗೋಸ್ಕರ ತಂದ ತಿದ್ದುಪಡಿ ಇದಾಗಿದೆ. ಇದು ರೈತರ ವಿರೋಧಿ ಕಾಯ್ದೆಯಾಗಿದೆ ಎಂದು ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಕೂಡ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಸ್ಪೀಕರ್ ವಿಧೇಯಕಕ್ಕೆ ಸದನದ ಅನುಮೋದನೆ ಪಡೆಯಲು ಮುಂದಾದಾಗ ವಿಧೇಯಕದ ಮೇಲೆ ಇನ್ನಷ್ಟುಚರ್ಚೆಗೆ ಅವಕಾಶ ನೀಡಬೇಕು. ಇದು ರೈತರಿಗೆ ಅನನುಕೂಲವಾಗುವ ಅಂಶಗಳನ್ನು ಕೈಬಿಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಲಾರಂಭಿಸಿದರು. ಇದರ ನಡುವೆಯೇ ಸ್ಪೀಕರ್ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ಪಡೆದರು.