ಧಾರವಾಡ: ಕಲುಷಿತ ನೀರು ಪೂರೈಕೆ ಪತ್ತೆ ಹಚ್ಚಿದ ರೋಬೋಟ್‌!

By Kannadaprabha News  |  First Published Aug 15, 2023, 12:03 PM IST

ಮದ್ರಾಸ್‌  ಐಐಟಿಯಲ್ಲಿ ಕಲಿತ ವಿದ್ಯಾರ್ಥಿಗಳ ತಂಡ ಕಲುಷಿತ ನೀರು ಸರಬರಾಜಿಗೆ ಕಾರಣವೇನು ಎಂಬುದನ್ನು ಒಂದೇ ದಿನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ. ರೋಬೋಟ್‌ ಮತ್ತು ಕ್ಯಾಮೆರಾ ಬಳಸಿ ಕಲುಷಿತ ನೀರು ಪೂರೈಕೆಯ ಕಾರಣ ಪತ್ತೆ ಹಚ್ಚಿರುವುದು ರಾಜ್ಯದಲ್ಲೇ ಇದೇ ಮೊದಲು.


ಶಿವಾನಂದ ಗೊಂಬಿ

ಹುಬ್ಬಳ್ಳಿ (ಆ.15) :  ಮದ್ರಾಸ್‌  ಐಐಟಿ(Madras IIT)ಯಲ್ಲಿ ಕಲಿತ ವಿದ್ಯಾರ್ಥಿಗಳ ತಂಡ ಕಲುಷಿತ ನೀರು ಸರಬರಾಜಿಗೆ ಕಾರಣವೇನು ಎಂಬುದನ್ನು ಒಂದೇ ದಿನದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ. ರೋಬೋಟ್‌ ಮತ್ತು ಕ್ಯಾಮೆರಾ ಬಳಸಿ ಕಲುಷಿತ ನೀರು ಪೂರೈಕೆಯ ಕಾರಣ ಪತ್ತೆ ಹಚ್ಚಿರುವುದು ರಾಜ್ಯದಲ್ಲೇ ಇದೇ ಮೊದಲು. ಇದೀಗ ಮಹಾನಗರದಲ್ಲಿ ಎಲ್ಲೆಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆಯೋ ಅಲ್ಲಿನ ಸಮಸ್ಯೆ ಕಂಡು ಹಿಡಿಯಲು ಈ ತಂಡ ಕಾರ್ಯಪ್ರವೃತ್ತವಾಗಿದೆ.

Tap to resize

Latest Videos

ಆಗಿರುವುದೇನು?

ಇಲ್ಲಿನ ವಾರ್ಡ್‌ ನಂ. 48ರ ಸಿದ್ದೇಶ್ವರ ಪಾರ್ಕ್, ಮಾರುತಿನಗರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ನೀರು ಸರಬರಾಜಾದ ಕೆಲ ಹೊತ್ತು ನೀರು ದುರ್ವಾರ್ಸನೆ ಹಾಗೂ ಕೊಳಚೆಯಿಂದ ಕೂಡಿರುತ್ತಿತ್ತು. ಈ ಬಗ್ಗೆ ಬಡಾವಣೆಯ ನಿವಾಸಿಗಳು ಹತ್ತಾರು ಬಾರಿ ಮಹಾನಗರ ಪಾಲಿಕೆಗೆ ಮನವಿಯನ್ನು ಕೊಟ್ಟಿದ್ದುಂಟು.

ಮಹಾನಗರ ಪಾಲಿಕೆ ಹಾಗೂ ಎಲ್‌ಆ್ಯಂಡ್‌ಟಿ ಅಧಿಕಾರಿಗಳ ತಂಡ ಎಷ್ಟೇ ಪ್ರಯತ್ನ ಪಟ್ಟರೂ ಸಮಸ್ಯೆ ಎಲ್ಲಿದೆ ಎಂಬುದು ಮಾತ್ರ ಗೊತ್ತೇ ಆಗಿರಲಿಲ್ಲ. ಇದರಿಂದ ನಿವಾಸಿಗಳು ಪ್ರತಿಭಟನೆ ನಡೆಸಲು ಸಿದ್ಧವಾಗಿತ್ತು. ಕೊನೆಗೆ ಈ ಸಮಸ್ಯೆ ಬಗೆಹರಿಸಲು ಮದ್ರಾಸ್‌ ಐಐಟಿಯಲ್ಲಿ ಕಲಿತ ವಿದ್ಯಾರ್ಥಿಗಳು ತೆರೆದಿರುವ ‘ಸ್ವಾಲೀಸ್‌ನಾಸ್‌ (Swalesnaas company)’ ಎಂಬ ಕಂಪನಿಯನ್ನು ಸಂಪರ್ಕಿಸಿದರೆ ಅನುಕೂಲವಾಗಬಹುದು ಎಂಬುದನ್ನು ಯೋಚಿಸಿ ಕಂಪನಿಯನ್ನು ಸಂಪರ್ಕಿಸಿದೆ. ಸ್ವಾಲೀಸ್‌ನಾಸ ಕಂಪನಿಯ ಸಿಬ್ಬಂದಿ ಆಗಮಿಸಿ ಸಮಸ್ಯೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಹೊಸ ಕಾಮಗಾರಿಯೇ ಆರಂಭವಾಗಿಲ್ಲ, ಕಮೀಷನ್‌ ಹೇಗೆ ಕೇಳೋದು?: ಸಂತೋಷ್ ಲಾಡ್ ವ್ಯಂಗ್ಯ

ಏನಿದು ತಂತ್ರಜ್ಞಾನ:

ಮದ್ರಾಸ್‌ ಐಐಟಿಯಲ್ಲಿ ಕಲಿತ ವಿದ್ಯಾರ್ಥಿಗಳೇ ಸ್ವಾಲೀಸ್‌ನಾಸ್‌(Swalesnaas company chennai) ಎಂಬ ಕಂಪನಿಯನ್ನು ಚೆನ್ನೈನಲ್ಲಿ ತೆರೆದಿದ್ದಾರಂತೆ. ಈ ಕಂಪನಿ ಕುಡಿಯುವ ನೀರು ಕಲುಷಿತಗೊಳ್ಳುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತದೆ. ‘ಸ್ಮಾಲ್‌ಪುಷ್‌ ಕ್ಯಾಮ್‌- ಎಂಡೋ- 90’ ರೋಬೋಟ್‌ ಟೆಕ್ನಾಲಜಿಯನ್ನು ಬಳಸುತ್ತದೆ. ಅದರಂತೆ ಸಿದ್ದೇಶ್ವರ ಪಾರ್ಕ್ಲ್ಲೂ ಇದೇ ಟೆಕ್ನಾಲಜಿಯಂತೆ 10 ಇಂಚು ಉದ್ದದ ರೋಬೋಟ್‌(Robot) ಹಾಗೂ ಚಿಕ್ಕ ಕ್ಯಾಮೆರಾವನ್ನು ಕಳುಹಿಸಿದೆ. ಪೈಪ್‌ಲೈನ್‌ ಉದ್ದಕ್ಕೂ ರೋಬೋಟ್‌ ಕ್ಯಾಮರಾವನ್ನು ಹೊತ್ತುಕೊಂಡು ಸಾಗಿದೆ. ಇಡೀ ಪೈಪ್‌ಲೈನ್‌ನ ಒಳಗೆ ಏನೇನಿದೆ ಎಂಬುದನ್ನೆಲ್ಲ ದಾಖಲಿಸಿದೆ. ಜತೆಗೆ ಇದು ಲ್ಯಾಪ್‌ಟ್ಯಾಪ್‌ನಲ್ಲಿ ಕಾಣಿಸಿಕೊಂಡಿದೆ. ಒಂದು ಕಡೆ ಚರಂಡಿಯ ನೀರು ಮಿಕ್ಸ್‌ ಆಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೆಲ್ಲವನ್ನು ಈ ತಂಡ ಬರೀ ಒಂದೆರಡು ಗಂಟೆಯಲ್ಲಿ ಮಾಡಿ ಮುಗಿಸಿದೆ.

ಇದರಿಂದ ಸಮಸ್ಯೆ ಎಲ್ಲಿದೆ? ಎಲ್ಲಿ ಕೊಳಚೆ ನೀರು ಮಿಕ್ಸ್‌ ಆಗುತ್ತಿದೆ ಎಂಬುದು ಪತ್ತೆಯಾಗಿದೆ. ಬಳಿಕ ಆ ಲೈನ್‌ನ್ನು ಡೆಡ್‌ ಮಾಡಿ ಇದೀಗ ಅದನ್ನು ದುರಸ್ತಿಪಡಿಸುವ ಕೆಲಸ ಬಲುಜೋರಿನಿಂದ ನಡೆಯುತ್ತಿದೆ. ಇನ್ನೆರಡ್ಮೂರು ದಿನಗಳಲ್ಲಿ ದುರಸ್ತಿ ಕಾರ್ಯ ಪೂರ್ಣವಾಗಲಿದೆ ಎಂದು ಎಲ್‌ ಆ್ಯಂಡ್‌ ಟಿ ಕಂಪನಿ ಎಂಜಿಯರ್‌ಗಳು ತಿಳಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಧಾರವಾಡ ಜಿಲ್ಲಾಸ್ಪತ್ರೆ ಪರಿಶೀಲನೆ: ಟೆಲಿಮನಸ್‌ ಸೇವೆಗೆ ಫುಲ್‌ ಖುಷ್‌

ಉಳಿದೆಡೆ ಕಾರ್ಯ:

ಬರೀ ಇಷ್ಟಕ್ಕೆ ಸೀಮಿತವಾಗಿಲ್ಲ ಈ ತಂಡದ ಕೆಲಸ. ನಗರದಲ್ಲಿ ಯಾವ್ಯಾವ ವಾರ್ಡ್‌ಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತದೆಯೋ ಅಲ್ಲಿ ಈ ತಂತ್ರಜ್ಞಾನ ಬಳಸಿ ಸಮಸ್ಯೆ ಪತ್ತೆ ಹಚ್ಚಲಾಗುತ್ತಿದೆ. ಇದೀಗ ಗಿರಣಿಚಾಳದಲ್ಲಿ ಈ ಕಾರ್ಯ ನಡೆಯಲಿದೆ. ಅಶುದ್ಧ ಅಥವಾ ಕಲುಷಿತ ನೀರು ಪೂರೈಕೆಯನ್ನು ತಡೆಗಟ್ಟಲು, ಸಮಸ್ಯೆ ಪತ್ತೆ ಹಚ್ಚಲು ಈ ತಂತ್ರಜ್ಞಾನ ಹೆಚ್ಚು ಸಹಕಾರಿಯಾಗಿದೆ ಎಂಬುದು ಪಾಲಿಕೆ ಅಧಿಕಾರಿಗಳ ಅಂಬೋಣ.

ವಾರ್ಡ್‌ ನಂ. 48ರಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಆ ಬಗ್ಗೆ ಸಾಕಷ್ಟುದೂರು ನೀಡಿದ್ದರೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮದ್ರಾಸ್‌ ಐಐಟಿಯಲ್ಲಿ ಕಲಿತ ವಿದ್ಯಾರ್ಥಿಗಳ ತಂಡವೂ ಸ್ಮಾಲ್‌ಪುಷ್‌ ಕ್ಯಾಮ್‌- ಎಂಡೋ-90 ಟೆಕ್ನಾಲಜಿ ಮೂಲಕ ಕಂಡು ಹಿಡಿದಿದೆ. ಇದು ಹೆಮ್ಮೆಯ ವಿಷಯ.

ಕಿಶನ ಬೆಳಗಾವಿ, ಪಾಲಿಕೆ ಸದಸ್ಯ

ಸಿದ್ದೇಶ್ವರ ಪಾರ್ಕ್ ಸೇರಿದಂತೆ ವಿವಿಧೆಡೆ ಕಲುಷಿತ ನೀರು ಪೂರೈಕೆಯಾಗುತ್ತಿತ್ತು. ಚೆನ್ನೈ ಮೂಲದ ಕಂಪನಿಯೊಂದು ಆಧುನಿಕ ತಂತ್ರಜ್ಞಾನದಿಂದ ಪತ್ತೆ ಹಚ್ಚಿದೆ. ಇದೀಗ ಸಮಸ್ಯೆ ಬಗೆಹರಿಸಲು ಕೆಲಸ ನಡೆದಿದೆ. ಉಳಿದ ವಾರ್ಡ್‌ಗಳಲ್ಲೂ ಪತ್ತೆ ಹಚ್ಚುವ ಕೆಲಸ ನಡೆದಿದೆ.

ಕಿರಣ ಗಂಜಿಹಾಳ, ಎಂಜಿನಿಯರ್‌, ಎಲ್‌ಆ್ಯಂಡ್‌ಟಿ ಕಂಪನಿ

click me!