ರಾಜ್ಯದಲ್ಲಿ ಮೂರು ತಿಂಗಳ ಬಳಿಕ 30 ಸಾವಿರಕ್ಕೂ ಅಧಿಕ ಕೊರೋನಾ ಪರೀಕ್ಷೆಗಳು ನಡೆದಿದ್ದು, ಈ ಹಿನ್ನೆಲೆ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ 800ರ ಗಡಿ ದಾಟಿದೆ. ಗುರುವಾರ 858 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರು (ಜೂ.24): ರಾಜ್ಯದಲ್ಲಿ ಮೂರು ತಿಂಗಳ ಬಳಿಕ 30 ಸಾವಿರಕ್ಕೂ ಅಧಿಕ ಕೊರೋನಾ ಪರೀಕ್ಷೆಗಳು ನಡೆದಿದ್ದು, ಈ ಹಿನ್ನೆಲೆ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ 800ರ ಗಡಿ ದಾಟಿದೆ. ಗುರುವಾರ 858 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 682 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ 72 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸದ್ಯ 5067 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 36,289 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 2.3 ರಷ್ಟು ದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳನ್ನು ಬರೋಬ್ಬರಿ 25 ಸಾವಿರದಷ್ಟು ಹೆಚ್ಚು ನಡೆಸಲಾಗಿದೆ.
ಹೀಗಾಗಿ ಹೊಸ ಪ್ರಕರಣಗಳು 182 ಹೆಚ್ಚಾಗಿವೆ (ಬುಧವಾರ 676, ಸಾವು ಶೂನ್ಯ). ಮಾರ್ಚ್ 18ರಂದು 36 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದವು. ಆ ಬಳಿಕ ಇಳಿಕೆಯಾಗುತ್ತಾ ಸಾಗಿ ಐದು ಸಾವಿರಕ್ಕೆ ತಗ್ಗಿದ್ದವು. ನಾಲ್ಕನೇ ಅಲೆ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರವು ಸೋಂಕು ಪರೀಕ್ಷೆ ಹೆಚ್ಚಳಕ್ಕೆ ಕಳೆದ ವಾರ ಸೂಚನೆ ನೀಡಿತ್ತು. ಈ ಹಿನ್ನೆಲೆ ಪರೀಕ್ಷೆಗಳನ್ನು ರಾಜ್ಯದಲ್ಲಿ ಹೆಚ್ಚಿಸಲಾಗುತ್ತಿದೆ. 700 ಆಸುಪಾಸಿನಲ್ಲಿದ್ದ ಹೊಸ ಪ್ರಕರಣಗಳು ಪರೀಕ್ಷೆ ಹೆಚ್ಚು ನಡೆದ ಪರಿಣಾಮ ಮತ್ತೆ ಏರಿಕೆಯಾಗಿವೆ. ಈ ಹಿಂದೆ ಜೂನ್ 16 ರಂದು 833 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ವಾರದ ಅಂತರಲ್ಲಿ ಎರಡನೇ ಬಾರಿ 800 ಗಡಿದಾಟಿದಂತಾಗಿದೆ.
Covid Crisis: ಕರ್ನಾಟಕದಲ್ಲಿ ಒಮಿಕ್ರೋನ್ ಉಪತಳಿ ಪತ್ತೆ
ಎಲ್ಲಿ ಎಷ್ಟು ಮಂದಿಗೆ ಸೋಂಕು?: ಗುರುವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 820 ಪತ್ತೆಯಾಗಿವೆ. ಉಳಿದಂತೆ ಮೈಸೂರು ಮತ್ತು ದಕ್ಷಿಣ ಕನ್ನಡ ತಲಾ 7, ಹಾಸನ ಮತ್ತು ಕೋಲಾರ ತಲಾ 3, ಮಂಡ್ಯ, ಧಾರವಾಡ, ರಾಯಚೂರು, ತುಮಕೂರು ಹಾಗೂ ಉಡುಪಿಯಲ್ಲಿ ತಲಾ ಇಬ್ಬರಿಗೆ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಯಾದಗಿರಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 12 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 37 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದ 5030 ಮಂದಿ ಮನೆ ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣ ಮುಖರಾಗಿದ್ದು, 40,072 ಮಂದಿ ಸಾವಿಗೀಡಾಗಿದ್ದಾರೆ.
ದುಡ್ಡು ಕೊಡ್ತೀನಿ ಅಂದ್ರೂ ಸಿಗ್ತಿಲ್ಲ ಬೂಸ್ಟರ್ ಡೋಸ್..!
ಹೆಚ್ಚಿನ ನಿಗಾ: ‘ಒಮಿಕ್ರೋನ್ ಉಪತಳಿಗಳಾದ ಬಿಎ4, ಬಿಎ5 ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಹೆಚ್ಚು ಪತ್ತೆಯಾಗಿದ್ದು, ಅಲ್ಲಿನ ಸರ್ಕಾರಗಳು ಈ ಉಪತಳಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿವೆ. ಒಮಿಕ್ರೋನ್‌ನ ಬಿಎ1.1.529, ಬಿಎ1, ಬಿಎ2 ಉಪತಳಿಗಳು ಶ್ವಾಸಕೋಶಕ್ಕೆ ನುಗ್ಗುವ ಸಾಮರ್ಥ್ಯ ಹೊಂದಿರಲಿಲ್ಲ. ಬಾಯಿ ಮತ್ತು ಮೂಗಿಗೆ ಸೀಮಿತವಾಗಿ ಕೆಮ್ಮು, ನೆಗಡಿಗೆ ಮಾತ್ರ ಉಂಟು ಮಾಡಿತು. ಹೀಗಾಗಿಯೇ ಮೂರನೇ ಅಲೆಯಲ್ಲಿ ಆಸ್ಪತ್ರೆ ದಾಖಲಾತಿ ಸಾವು, ನೋವು ಹೆಚ್ಚಿನ ಹಾನಿಯಾಗಲಿಲ್ಲ. ಆದರೆ, ಸದ್ಯ ಕಾಣಿಸಿಕೊಂಡಿರುವ ಉಪತಳಿಗಳಾದ ಬಿಎ4, ಬಿಎ5 ಸಾಕಷ್ಟು ತೀವ್ರವಾಗಿದ್ದು, ಶ್ವಾಸಕೋಶಕ್ಕೆ ದಾಳಿ ಮಾಡಬಹುದು. ಇವುಗಳಿಂದಲೇ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ರಾಜ್ಯ ಕೊರೋನಾ ವಂಶವಾಹಿ ಪರೀಕ್ಷೆಗಳ ಸಮಿತಿ ಸದಸ್ಯ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.