5 ಕೋಟಿ ಪರಿಹಾರ ಕೋರಿದ್ದ ಪತ್ನಿಗೆ 50 ಲಕ್ಷ ಜೀವನಾಂಶ: ಹೈಕೋರ್ಟ್‌

By Kannadaprabha News  |  First Published Feb 13, 2023, 3:48 AM IST

ವಿಚ್ಛೇದಿತ ಪತಿಯಿಂದ ಐದು ಕೋಟಿ ರು. ಶಾಶ್ವತ ಜೀವನಾಂಶ ಕೋರಿದ ಪತ್ನಿಗೆ 50 ಲಕ್ಷ ರು. ನಿಗದಿಗೊಳಿಸಿದ ಹೈಕೋರ್ಟ್‌, ಪುತ್ರನ ಭವಿಷ್ಯದ ಶಿಕ್ಷಣದಲ್ಲಿ ಶೇ.60ರಷ್ಟುಖರ್ಚು ಭರಿಸುವಂತೆ ಪತಿಗೆ ಆದೇಶಿಸಿದೆ. 


ವಿಶೇಷ ವರದಿ

ಬೆಂಗಳೂರು (ಫೆ.13): ವಿಚ್ಛೇದಿತ ಪತಿಯಿಂದ ಐದು ಕೋಟಿ ರು. ಶಾಶ್ವತ ಜೀವನಾಂಶ ಕೋರಿದ ಪತ್ನಿಗೆ 50 ಲಕ್ಷ ರು. ನಿಗದಿಗೊಳಿಸಿದ ಹೈಕೋರ್ಟ್‌, ಪುತ್ರನ ಭವಿಷ್ಯದ ಶಿಕ್ಷಣದಲ್ಲಿ ಶೇ.60ರಷ್ಟುಖರ್ಚು ಭರಿಸುವಂತೆ ಪತಿಗೆ ಆದೇಶಿಸಿದೆ. ಗಂಡನ ಆದಾಯ, ಹಣಕಾಸು ಸ್ಥಿತಿಗತಿ, ಆತನ ಮೇಲೆ ಕುಟುಂಬ ಸದಸ್ಯರ ಅವಲಂಬನೆ, ಪತ್ನಿಯ ಆದಾಯ, ಆಕೆಯ ಜೀವನ ನಿರ್ವಹಣೆ ಗುಣಮಟ್ಟ, ಮಕ್ಕಳ ಆರೈಕೆ, ವೈದ್ಯಕೀಯ ಹಾಗೂ ಶಿಕ್ಷಣದ ಖರ್ಚು ಆಧರಿಸಿ ಶಾಶ್ವತ ಜೀವನಾಂಶ ನಿಗದಿ ಮಾಡಬೇಕಿರುತ್ತದೆ. 

Tap to resize

Latest Videos

ಹಾಗೆಯೇ, ಪತ್ನಿ ಉದ್ಯೋಗ ಮಾಡುತ್ತಾ ಮಾಸಿಕ ಆದಾಯ ಗಳಿಸುತ್ತಿದ್ದಾರೆ ಎಂಬ ಕಾರಣಕ್ಕೆ ಶಾಶ್ವತ ಜೀವನಾಂಶ ಪಡೆಯುವುದರಿಂದ ಆಕೆಯನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಪತ್ನಿಯೂ ಸಾಕಷ್ಟುಆದಾಯ ಗಳಿಕೆ ಮಾಡುತ್ತಿದ್ದರೆ, ಮಕ್ಕಳ ಜೀವನ ನಿರ್ವಹಣೆಗೆ ಪತಿ-ಪತ್ನಿ ಅಗತ್ಯ ಪ್ರಮಾಣದಲ್ಲಿ ಪಾಲು ಹೊಂದಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ. ವಿಚ್ಛೇದಿತ ಪತಿಯಿಂದ ಶಾಶ್ವತ ಜೀವನಾಂಶ ಕೋರಿ ಬೆಂಗಳೂರಿನ ಕೆಂಪೇಗೌಡ ನಗರದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ರಾಜ್ಯದ ಎಲ್ಲ ಗೋಶಾಲೆಯಲ್ಲಿ ಚೆಕ್‌ಡ್ಯಾಂ: ಸಚಿವ ಪ್ರಭು ಚವ್ಹಾಣ್‌

ಪ್ರಕರಣದ ವಿವರ: ಬೆಂಗಳೂರಿನ ವಿದ್ಯಾ ಮತ್ತು ರವಿ (ಹೆಸರು ಬದಲಿಸಲಾಗಿದೆ) 2005ರ ನ.20ರಂದು ವಿವಾಹವಾಗಿದ್ದು 2006ರಲ್ಲಿ ಗಂಡು ಮಗು ಜನಿಸಿತ್ತು. ಸಂಬಂಧ ಹಳಸಿದ್ದರಿಂದ ತವರು ಮನೆ ಸೇರಿದ್ದ ವಿದ್ಯಾ ವೈವಾಹಿಕ ಜೀವನ ಮುಂದುವರಿಸಲು ನಿರಾಕರಿಸಿದ್ದರಿಂದ ಪತಿ ವಿಚ್ಛೇದನ ಕೋರಿದ್ದರು. ಕೌಟುಂಬಿಕ ನ್ಯಾಯಾಲಯ 2013ರರಲ್ಲಿ ವಿಚ್ಛೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ವಿದ್ಯಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅದು ವಿಲೇವಾರಿಗೆ ಬಾಕಿಯಿರುವಾಗಲೇ ಶಾಶ್ವತ ಜೀವನಾಂಶಕ್ಕಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ವಿದ್ಯಾ ಪರ ವಕೀಲರು, ಶಾಶ್ವತ ಜೀವನಾಂಶ ಕೋರಿದ ಕ್ಲೇಮನ್ನು ಕೋರ್ಟ್‌ ಪುರಸ್ಕರಿಸಿದರೆ ವಿಚ್ಛೇದನ ಆದೇಶ ಪ್ರಶ್ನಿಸಿದ ಅರ್ಜಿಯನ್ನು ಮೇಲ್ಮನವಿದಾರರು ಮುಂದುವರಿಸುವುದಿಲ್ಲ. ರವಿ ಮಾಸಿಕ 2.5 ಲಕ್ಷ ರು. ವೇತನ ಪಡೆಯುತ್ತಿದ್ದಾರೆ. ಅವರ ಪೋಷಕರ ಒಡೆತನದ ಕುಟುಂಬದ ಆಸ್ತಿಯಿಂದ ದೊಡ್ಡ ಮೊತ್ತದ ಬಾಡಿಗೆ ಪಡೆಯುತ್ತಿದ್ದಾರೆ. ಪುತ್ರ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದಾನೆ. ಮಗನ ಶಿಕ್ಷಣಕ್ಕೆ ರವಿ ಈವರೆಗೆ ನಯಾ ಪೈಸೆ ಕೊಟ್ಟಿಲ್ಲ. ಹಾಗಾಗಿ ವಿದ್ಯಾ ಮತ್ತವರ ಪುತ್ರನಿಗೆ 5 ಕೋಟಿ ರು. ಶಾಶ್ವತ ಜೀವನಾಂಶ ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ರವಿ ಪರ ವಕೀಲರು ಆಕ್ಷೇಪಿಸಿದ್ದರು.

ಆದೇಶವೇನು: ವಿಚಾರಣೆ ನಡೆಸಿದ ಹೈಕೋರ್ಟ್‌, ದಾಖಲೆ ಪ್ರಕಾರ ವೇತನ ಮತ್ತು ಭತ್ಯೆಯಿಂದ ರವಿ ಮಾಸಿಕ 2,21,514 ರು. ಸಂಪಾದಿಸುತ್ತಿದ್ದಾರೆ. ತಂದೆ-ತಾಯಿ ಸ್ಥಿತಿವಂತರಾಗಿದ್ದು, ರವಿಯನ್ನು ಅವಲಂಬಿಸಿಲ್ಲ. ಮಗನ ಶೈಕ್ಷಣಿಕ ವೆಚ್ಚಕ್ಕಾಗಿ ರವಿ ಈವರೆಗೂ ನಯಾಪೈಸೆ ಖರ್ಚು ಮಾಡಿಲ್ಲ. ಆಕೆ ಮಾಸಿಕ 85 ಸಾವಿರ ರು. ವೇತನ ಪಡೆಯುತ್ತಿದ್ದರೂ, ಈಗಾಗಲೇ 28 ಲಕ್ಷ ರು. ಅಡಮಾನ ಸಾಲ ಪಡೆದಿದ್ದಾರೆ. ಮಗನ ನೀಟ್‌ ತರಬೇತಿಗೆ 1,09,510 ರು. ಶಿಕ್ಷಣ ಸಾಲ ಪಡೆದಿದ್ದಾರೆ. 

ಜನರ ಋುಣ ತೀರಿ​ಸಲು ಪ್ರಾಮಾ​ಣಿಕ ಸೇವೆ: ಯಡಿ​ಯೂ​ರ​ಪ್ಪ

ರವಿ 11 ವರ್ಷ ಸೇವಾವಧಿ ಹೊಂದಿದ್ದಾರೆ. ಪತ್ನಿಗಿಂತ ಹೆಚ್ಚಿನ ಆದಾಯ ಹೊಂದಿರುವುದರಿಂದ ಶಾಶ್ವತ ಜೀವನಾಂಶವಾಗಿ 50 ಲಕ್ಷ ರು. ಪಾವತಿಸುವುದು ಸೂಕ್ತ ಎಂದು ಆದೇಶಿಸಿದೆ. ಅಲ್ಲದೆ, ಪುತ್ರನ ಭವಿಷ್ಯದ ಶಿಕ್ಷಣ ವೆಚ್ಚದಲ್ಲಿ ಶೇ.60ರಷ್ಟುರವಿಯೇ ಭರಿಸಬೇಕು. ಶಿಕ್ಷಣ ವೆಚ್ಚ ಭರಿಸಲು ಪತ್ನಿ ಮನವಿ ಸಲ್ಲಿಸಿದ ಐದು ದಿನದೊಳಗೆ ಪತಿ ಹಣ ಪಾವತಿಸಬೇಕು. ವಿಳಂಬ ಮಾಡಿದರೆ ಆ ಅವಧಿಗೆ ಕ್ಲೇಮು ಮಾಡಿದ ಹಣಕ್ಕೆ ಶೇ.12ರಷ್ಟುಬಡ್ಡಿದರ ಪಾವತಿಸಬೇಕು ಎಂದು ನಿರ್ದೇಶಿಸಿದೆ.

click me!