Latest Videos

ಆಯ್ಕೆ ಟ್ರಯಲ್ಸ್‌ ಇಲ್ಲ: ಕೋಟಾ ಗೆದ್ದ ಕುಸ್ತಿಪಟುಗಳೇ ಪ್ಯಾರಿಸ್ ಒಲಿಂಪಿಕ್ಸ್‌ಗೆ..!

By Kannadaprabha NewsFirst Published May 22, 2024, 10:52 AM IST
Highlights

ಪುರುಷರ ಫ್ರೀಸ್ಟೈಲ್‌ನಲ್ಲಿ ಅಮನ್‌(57 ಕೆ.ಜಿ.), ಮಹಿಳಾ ವಿಭಾಗದಲ್ಲಿ ವಿನೇಶ್‌ ಫೋಗಟ್‌(50 ಕೆ.ಜಿ.), ಅಂತಿಮ್‌ ಪಂಘಲ್‌(53 ಕೆ.ಜಿ.), ಅನ್ಶು ಮಲಿಕ್‌(57 ಕೆ.ಜಿ.), ನಿಶಾ ದಹಿಯಾ(68 ಕೆ.ಜಿ.) ಹಾಗೂ ರಿತಿಕಾ ಹೂಡಾ(76 ಕೆ.ಜಿ.) ವಿವಿಧ ಅರ್ಹತಾ ಟೂರ್ನಿಗಳ ಮೂಲಕ ಒಲಿಂಪಿಕ್ಸ್‌ ಕೋಟಾ ಗೆದ್ದಿದ್ದರು.

ನವದೆಹಲಿ(ಮೇ.22): ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತೀಯ ಕುಸ್ತಿಪಟುಗಳ ವಿಚಾರದಲ್ಲಿ ಮೂಡಿದ್ದ ಕುತೂಹಲಕ್ಕೆ ಭಾರತೀಯ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಮಂಗಳವಾರ ತೆರೆ ಎಳೆದಿದ್ದು, ರೆಸ್ಲರ್‌ಗಳ ಆಯ್ಕೆಗೆ ಹೊಸದಾಗಿ ಟ್ರಯಲ್ಸ್‌ ನಡೆಸುವುದಿಲ್ಲ ಎಂದಿದೆ. ಹೀಗಾಗಿ ಕೋಟಾ ಗೆದ್ದ ರೆಸ್ಲರ್‌ಗಳೇ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಒಲಿಂಪಿಕ್ಸ್‌ಗೂ ಮುನ್ನ ಫಿಟ್ನೆಸ್‌ ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಡಬ್ಲ್ಯುಎಫ್‌ಐ ತಿಳಿಸಿದೆ.

ಪುರುಷರ ಫ್ರೀಸ್ಟೈಲ್‌ನಲ್ಲಿ ಅಮನ್‌(57 ಕೆ.ಜಿ.), ಮಹಿಳಾ ವಿಭಾಗದಲ್ಲಿ ವಿನೇಶ್‌ ಫೋಗಟ್‌(50 ಕೆ.ಜಿ.), ಅಂತಿಮ್‌ ಪಂಘಲ್‌(53 ಕೆ.ಜಿ.), ಅನ್ಶು ಮಲಿಕ್‌(57 ಕೆ.ಜಿ.), ನಿಶಾ ದಹಿಯಾ(68 ಕೆ.ಜಿ.) ಹಾಗೂ ರಿತಿಕಾ ಹೂಡಾ(76 ಕೆ.ಜಿ.) ವಿವಿಧ ಅರ್ಹತಾ ಟೂರ್ನಿಗಳ ಮೂಲಕ ಒಲಿಂಪಿಕ್ಸ್‌ ಕೋಟಾ ಗೆದ್ದಿದ್ದರು. ಆದರೆ ತೂಕ ವಿಭಾಗಗಳಲ್ಲಿ ಒಲಿಂಪಿಕ್ಸ್‌ಗೆ ಕುಸ್ತಿಪಟುಗಳನ್ನು ಅಂತಿಮಗೊಳಿಸುವುದು ಡಬ್ಲ್ಯುಎಫ್‌ಐ. ಹೀಗಾಗಿ ಕೋಟಾ ಗೆದ್ದವರೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಾರೊ ಅಥವಾ ಕೋಟಾ ಸಿಕ್ಕ ವಿಭಾಗಕ್ಕೆ ಡಬ್ಲ್ಯುಎಫ್‌ಐ ಹೊಸದಾಗಿ ಆಯ್ಕೆ ಟ್ರಯಲ್ಸ್‌ ನಡೆಸಲಿದೆಯೋ ಎಂಬ ಕುತೂಹಲವಿತ್ತು.

RCB ಗೆ ಚೊಚ್ಚಲ IPL ಕಪ್ ಗೆಲ್ಲಿಸಲು ಪಣತೊಟ್ಟು ಮದುವೆಯನ್ನೇ ಮುಂದೂಡಿದ ರಜತ್ ಪಾಟೀದಾರ್..! ಸೆಲ್ಯೂಟ್

ಸದ್ಯ ಆಯ್ಕೆ ಟ್ರಯಲ್ಸ್‌ ನಿರ್ಧಾರದಿಂದ ಡಬ್ಲ್ಯುಎಫ್‌ಐ ಹಿಂದೆ ಸರಿದಿದೆ. ಆದರೆ ಮುಂದಿನ ತಿಂಗಳು ಹಂಗೇರಿಯಲ್ಲಿ ನಡೆಯಲಿರುವ ಟೂರ್ನಿ ಮತ್ತು ತರಬೇತಿ ಶಿಬಿರದ ಬಳಿಕ ಡಬ್ಲ್ಯುಎಫ್‌ಐ ಅಗತ್ಯವಿದ್ದರೆ ಬದಲಾವಣೆ ಮಾಡುವುದಾಗಿ ತಿಳಿಸಿದೆ. ಜುಲೈ 8ಕ್ಕೆ ಮುನ್ನ ಸ್ಪರ್ಧಿಗಳ ಹೆಸರನ್ನು ಅಂತಿಮಗೊಳಿಸಿ ಒಲಿಂಪಿಕ್ಸ್‌ ಆಯೋಜಕರಿಗೆ ನೀಡಬೇಕಿದೆ.

53 ಕೆಜಿ ಸ್ಪರ್ಧೆಯಿಲ್ಲ: ವಿನೇಶ್‌ಗೆ ನಿರಾಸೆ

ಆಯ್ಕೆ ಟ್ರಯಲ್ಸ್‌ ನಡೆಸದಿರಲು ಡಬ್ಲ್ಯುಎಫ್‌ಐ ನಿರ್ಧರಿಸಿದ ಕಾರಣ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ವಿನೇಶ್‌ ಫೋಗಟ್‌ಗೆ ನಿರಾಸೆ ಉಂಟಾಗಿದೆ. ಹೀಗಾಗಿ ಅವರು 50 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಬೇಕಿದೆ. 

ಪ್ಯಾರಿಸ್ ಒಲಿಂಪಿಕ್ಸ್‌: ಯೂಕಿ ಅಥವಾ ಬಾಲಾಜಿ ಜತೆ ಬೋಪಣ್ಣ ಸ್ಪರ್ಧೆ

ವಿನೇಶ್‌ ಸಾಮಾನ್ಯವಾಗಿ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸುತ್ತಿದ್ದರು. ಆದರೆ ಈ ವಿಭಾಗದಲ್ಲಿ ಅಂತಿಮ್ ಪಂಘಲ್‌ ಕೋಟಾ ಗೆದ್ದಿದ್ದರು. ಹೀಗಾಗಿ ವಿನೇಶ್ 50 ಕೆ.ಜಿ.ಯಲ್ಲಿ ಸ್ಪರ್ಧಿಸಿ ಕೋಟಾ ಜಯಿಸಿದ್ದರು. ಒಂದು ವೇಳೆ ಆಯ್ಕೆ ಟ್ರಯಲ್ಸ್‌ ನಡೆಸಿದ್ದರೆ ವಿನೇಶ್‌ 53 ಕೆ.ಜಿ. ವಿಭಾಗದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ನಿರೀಕ್ಷೆಯಿತ್ತು.
 

click me!