World Athletics Championships: ಟ್ರಿಪಲ್‌ ಜಂಪ್‌ ಫೈನಲ್‌ಗೆ ಲಗ್ಗೆಯಿಟ್ಟ ಮೊದಲ ಭಾರತೀಯ ಎಲ್ಡೋಸ್ ಪೌಲ್

By Naveen Kodase  |  First Published Jul 22, 2022, 3:28 PM IST

* ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಾಲಿಗೆ ಶುಭ ಶುಕ್ರವಾರ
* ಟ್ರಿಪಲ್‌ ಜಂಪ್‌ನಲ್ಲಿ ಫೈನಲ್‌ಗೇರಿದ ಎಲ್ಡೋಸ್ ಪೌಲ್
* ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ನ ಟ್ರಿಪಲ್‌ ಜಂಪ್‌ನಲ್ಲಿ ಫೈನಲ್‌ಗೇರಿದ ಮೊದಲ ಭಾರತೀಯ ಪೌಲ್


ಯುಜೀನ್‌(ಜು.22): ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾರತೀಯರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿಂದು ನೀರಜ್ ಚೋಪ್ರಾ ಹಾಗೂ ರೋಹಿತ್ ಯಾದವ್ ಫೈನಲ್ ಪ್ರವೇಶಿಸಿದ್ದರು. ಇದೀಗ ಟ್ರಿಪಲ್‌ ಜಂಪ್‌ನಲ್ಲಿ ಎಲ್ಡೋಸ್ ಪೌಲ್ ಕೂಡಾ ಫೈನಲ್‌ ಪ್ರವೇಶಿಸುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಎಲ್ಡೋಸ್ ಪೌಲ್ 16.68 ಮೀಟರ್ ದೂರ ಜಿಗಿಯುವ ಮೂಲಕ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ ಕ್ರೀಡಾಕೂಟದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 

25 ವರ್ಷದ ಎಲ್ಡೋಸ್ ಪೌಲ್, 'ಎ' ಗುಂಪಿನಲ್ಲಿ ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನಿಯಾಗಿ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೀಸಾ ಸಮಸ್ಯೆಯಿಂದಾಗಿ ಸ್ಪರ್ಧೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯುಜೀನ್ ತಲುಪಿದ್ದ ಎಲ್ಡೋಸ್ ಪೌಲ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ನಡೆದ ಫೆಡರೇಷನ್ ಕಪ್ ಟೂರ್ನಿಯಲ್ಲಿ ಎಲ್ಡೋಸ್ ಪೌಲ್ 16.99 ಮೀಟರ್ ದೂರ ಜಿಗಿಯುವ ಮೂಲಕ ವೈಯುಕ್ತಿಕ ಶ್ರೇಷ್ಠ ಪ್ರದರ್ಶನದ ಜತೆಗೆ ಚಿನ್ನದ ಪದಕ ಜಯಿಸಿದ್ದರು. ಇದೀಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕೂಟದ ಟ್ರಿಪಲ್ ಜಂಪ್ ಫೈನಲ್‌ ಇದೇ ಭಾನುವಾರ ಬೆಳಗ್ಗೆ 6.50(ಭಾರತೀಯ ಕಾಲಮಾನ)ಕ್ಕೆ ಆರಂಭವಾಗಲಿದ್ದು, ಪದಕದ ಆಸೆ ಮೂಡಿಸಿದ್ದಾರೆ.

World Athletics Championships: Eldhose Paul becomes first Indian to qualify for triple jump final

Read Story | https://t.co/uxsn47R5me pic.twitter.com/cTz09owtNG

— ANI Digital (@ani_digital)

Tap to resize

Latest Videos

World Championships ಮೊದಲ ಪ್ರಯತ್ನದಲ್ಲೇ ಫೈನಲ್‌ಗೆ ನೀರಜ್ ಚೋಪ್ರಾ, ರೋಹಿತ್ ಯಾದವ್ ಲಗ್ಗೆ

ಭಾರತದ ಇನ್ನಿಬ್ಬರು ಟ್ರಿಪಲ್ ಜಂಪ್ ಸ್ಪರ್ಧಿಗಳಾದ ಪ್ರವೀಣ್ ಚಿತ್ರಾವಲ್ ಹಾಗೂ ಅಬ್ದುಲ್ಲಾ ಅಬುಬುಕರ್‌ ಕ್ರಮವಾಗಿ 16.49 ಮೀ ಹಾಗೂ 16.45 ಮೀಟರ್ ದೂರ ಜಿಗಿಯುವ ಮೂಲಕ ಫೈನಲ್‌ ಪ್ರವೇಶಿಸುವ ಅವಕಾಶದಿಂದ ವಂಚಿತರಾದರು. ಟ್ರಿಪಲ್ ಜಂಪ್ ಅರ್ಹತಾ ಸುತ್ತಿನಲ್ಲಿ 'ಎ' ಗುಂಪಿನಲ್ಲಿ 8ನೇ ಹಾಗೂ ಒಟ್ಟಾರೆ 17ನೇ ಸ್ಥಾನ ಪಡೆದರೇ, 'ಬಿ' ಗುಂಪಿನಲ್ಲಿ ಅಬ್ದುಲ್ಲಾ 10ನೇ ಹಾಗೂ ಒಟ್ಟಾರೆ 19ನೇ ಸ್ಥಾನ ಪಡೆದರು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲು 17.05 ಮೀಟರ್ ಇಲ್ಲವೇ ಅರ್ಹತಾ ಸುತ್ತಿನ ಎರಡು ಗುಂಪಿನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ 12 ಅಥ್ಲೀಟ್‌ಗಳು ಫೈನಲ್‌ ಪ್ರವೇಶಿಸುವ ಮಾನದಂಡ ನಿಗದಿ ಪಡಿಸಲಾಗಿತ್ತು. ಇದೀಗ 12 ಟ್ರಿಪಲ್ ಜಂಪ್ ಅಥ್ಲೀಟ್‌ಗಳ ಪೈಕಿ ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಯಾರು ಪದಕಗಳಿಗೆ ಮುತ್ತಿಕ್ಕುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

click me!