Roger Federer: 'ನೀನೆಲ್ಲಿ ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಆಗ್ತೀಯ, ಮೊದ್ಲು ಸರಿಯಾಗಿ ಓದು' ಅಂದಿದ್ರು ಅಪ್ಪ!

By Santosh NaikFirst Published Sep 16, 2022, 12:26 PM IST
Highlights

ಲೆವರ್‌ ಕಪ್‌ ಟೆನಿಸ್‌ ಟೂರ್ನಿಯೊಂದಿಗೆ ಟೆನಿಸ್‌ ಜಗತ್ತಿನಲ್ಲಿ ರೋಜರ್‌ ಫೆಡರರ್‌ ಎನ್ನುವ ಅಭೂತಪೂರ್ವ ಅಷ್ಟೇ ಯಶಸ್ವಿ ಪುಟವೊಂದು ಅಂತ್ಯವಾಗಲಿದೆ. ಸೆ.23 ರಿಂದ 25ರವರಗೆ ಲೆವರ್‌ ಕಪ್‌ ಟೂರ್ನಿ ಲಂಡನ್‌ನಲ್ಲಿ ನಡೆಯಲಿದೆ. 20 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳ ಒಡೆಯನ ನಿವೃತ್ತಿ ಘೋಷಣೆಯ ಸಮಯದಲ್ಲಿ ಅವರ ಟೆನಿಸ್‌ ಜೀವನದ ಆರಂಭಿಕ ದಿನಗಳು ಸಾಮಾನ್ಯ ವ್ಯಕ್ತಿಯಂತೆಯೇ ಇತ್ತು ಎನ್ನುವುದು ವಿಶೇಷ.
 

ಬೆಂಗಳೂರು (ಸೆ. 16): ಟೆನಿಸ್‌ನ ಬಿಗ್‌-3 ಆಟಗಾರರಲ್ಲಿ ಒಬ್ಬರಾದ ರೋಜರ್‌ ಫೆಡರರ್‌ ನಿವೃತ್ತಿ ಘೋಷಣೆ ಮಾಡಿದ ಸಮಯದಲ್ಲಿ ಅವರ ಟೆನಿಸ್‌ ಜೀವನದ ಸ್ಮರಣೀಯ ದಾಖಲೆಗಳು, ವಿದ್ಯಮಾನಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. ಲಂಡನ್‌ನಲ್ಲಿ ಸೆ. 23 ರಿಂದ 25ರವರೆಗೆ ನಡೆಯಲಿರುವ ಲೆವರ್‌ ಕಪ್‌ ಟೆನಿಸ್‌ ಟೂರ್ನಿ 41 ವರ್ಷದ ಟೆನಿಸ್‌ ಸಜ್ಜನನ ವೃತ್ತಿಪರ ಕಣದ ಕೊನೆಯ ಟೂರ್ನಿ. ಆದರೆ, 20 ಗ್ರ್ಯಾಂಡ್‌ಸ್ಲಾಂ ಚಾಂಪಿಯನ್‌ ಆದ ಟೆನಿಸ್‌ ತಾರೆಯ ಬದುಕಿನ ಆರಂಭಿಕ ಹಾದಿ ಸಾಮಾನ್ಯ ವ್ಯಕ್ತಿಗಳಂತೆಯೇ ಇತ್ತು. ಪೋಷಕರ ಒತ್ತಡ, ಹಣಕಾಸು ಸಮಸ್ಯೆ ಇವೆಲ್ಲವೂ ಫೆಡರರ್‌ ಅವರ ಬಾಲ್ಯದ ಜೀವನದಲ್ಲಿ ಬಾಧಿಸಿತ್ತು. ಸ್ವತಃ ರೋಜರ್‌ ಫೆಡರರ್‌ ಅವರ ತಂದೆಗೆ ಮಗನ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿಲ್ಲ. ಮಗ ಗ್ರ್ಯಾಂಡ್‌ ಸ್ಲಾಂ ಚಾಂಪಿಯನ್‌ ಆಗ್ತೇನೆ ಅಂದರೆ, ನೀನೆಲ್ಲಿ ಚಾಂಪಿಯನ್‌ ಆಗ್ತೀಯ, ಮೊದಲು ಸರಿಯಾಗಿ ಓದು ಎನ್ನುತ್ತಿದ್ದರು. ಕೊನೆಗೆ ಅಪ್ಪನ ಒಪ್ಪಿಗೆ ಪಡೆದು ಬರೀ ಎರಡು ವರ್ಷಕ್ಕೆ ವಿದ್ಯಾಭ್ಯಾಸ ತೊರೆದು ಟೆನಿಸ್‌ನ ಮೇಲೆ ಗಮನವಿಟ್ಟಿದ್ದ ರೋಜರ್‌ ಫೆಡರರ್‌ ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ.  1981ರ ಆಗಸ್ಟ್‌ 8 ರಂದು ಸ್ವಿಸ್‌ನ ಬಾಸೆಲ್‌ ನಗರದಲ್ಲಿ ಜನಿಸಿದ್ದ ಫೆಡರರ್‌, ತನ್ನದೇ ಊರಿನಲ್ಲಿ ನಡೆಯುತ್ತಿದ್ದ ಸ್ವಿಸ್‌ ಇಂಡೋರ್‌ ಟೆನಿಸ್‌ ಟೂರ್ನಮೆಂಟ್‌ಗೆ 1992-93ರಲ್ಲಿ ಬಾಲ್‌ ಬಾಯ್‌ (ಟೆನಿಸ್‌ ಕೋರ್ಟ್‌ನಲ್ಲಿ ಚೆಂಡನ್ನು ಹೆಕ್ಕಿಕೊಡುವ ಕೆಲಸ ಮಾಡುವವರು) ಆಗಿ ಕೆಲಸ ಮಾಡುತ್ತಿದ್ದರು. ತಮ್ಮ 14ನೇ ವರ್ಷದಲ್ಲಿ ಅಂದರೆ 1996ರಲ್ಲಿ ಜೂನಿಯರ್‌ ಮಟ್ಟದಲ್ಲಿ ರೋಜರ್‌ ಫೆಡರರ್‌ ತಮ್ಮ ಮೊದಲ ಟೂರ್ನಿ ಆಡಿದ್ದರು.

ಅದಾದ ಎರಡು ವರ್ಷದ ಬಳಿಕ 16 ವರ್ಷದ ಫೆಡರರ್‌ ತಂದೆ ರಾಬರ್ಟ್‌ ಫೆಡರರ್‌ ಮುಂದೆ ನಿಂತು ಇನ್ನು ನನಗೆ ಓದೋಕೆ ಆಗಲ್ಲ. ಶಾಲೆಗೆ ಹೋದರೆ ನನಗೆ ಆಟದ ಮೇಲೆ ಗಮನ ಕೊಡೋಕೆ ಆಗೋದಿಲ್ಲ ಎಂದುಬಿಟ್ಟಿದ್ದ. ಆದರೆ, ಅಪ್ಪನಿಗೆ ಆಟಕ್ಕಾಗಿ ಓದುವುದನ್ನು ಮಗ ಬಿಡೋದು ಇಷ್ಟವಿರಲಿಲ್ಲ. ಹಾಗಂತ ಮಗನ ಆಸೆಯನ್ನು ಬೇಡ ಅನ್ನೋಕು ಆಗದಂಥ ಸ್ಥಿತಿ. ಉಪಾಯ ಮಾಡಿದ ರಾಬರ್ಟ್‌, ಸರಿ ಎರಡು ವರ್ಷ ನೀನು ಶಾಲೆಗೆ ಹೋಗೋದು ಬೇಡ. ಈ ಎರಡು ವರ್ಷದಲ್ಲಿ ನೀನು ಏನಾದ್ರು ಮಾಡಿ ತೋರಿಸಬೇಕು. ಇಲ್ಲದೇ ಇದ್ದಲ್ಲಿ ಟೆನಿಸ್‌ ಆಸೆಯನ್ನು ಬಿಟ್ಟು ಶಾಲೆಗೆ ಹೋಗಬೇಕು ಎಂದಿದ್ದರು. ಆದರೆ, ಫೆಡರರ್‌ಗೆ ಮತ್ತೆ ಶಾಲೆಗೆ ಹೋಗೋದು ಇಷ್ಟವಿರಲಿಲ್ಲ. ಎರಡೇ ವರ್ಷದಲ್ಲಿ ಜೂನಿಯರ್‌ ವಿಶ್ವ ನಂ.1 ಟೆನಿಸ್‌ ತಾರೆಯಾದ ಫೆಡರರ್‌, 1998ರಲ್ಲಿ ಜೂನಿಯರ್‌ ಪ್ಲೇಯರ್‌ಆಗಿ ವಿಂಬಲ್ಡನ್‌ನಲ್ಲಿ ಆಡಲು ಆರಂಭಿಸಿದ್ದರು. ಅದೇ ವರ್ಷ ಜೂನಿಯರ್‌ ವಿಭಾಗದಲ್ಲಿ ಯುಎಸ್‌ ಓಪನ್‌ ಫೈನಲ್‌ ಸಾಧನೆಯನ್ನೂ ಮಾಡಿದ್ದರು.

Friend and Rival: ಫೆಡರರ್‌ ನಿವೃತ್ತಿಗೆ ರಾಫೆಲ್‌ ನಡಾಲ್‌ ಭಾವುಕ ಮಾತು!

ಇನ್ನು ಫೆಡರರ್‌ ಟೆನಿಸ್‌ ಮಾತ್ರವಲ್ಲ ಸ್ವಿಜರ್ಲೆಂಡ್‌ನಲ್ಲಿ ಪ್ರಖ್ಯಾತವಾಗಿರುವ ಫುಟ್‌ಬಾಲ್‌, ಬ್ಯಾಡ್ಮಿಂಟನ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ನ್ನೂ ಆಡಿದ್ದರು. ಫುಟ್‌ಬಾಲ್‌ನಲ್ಲಿ ಬಾಸೆಲ್‌ ಎಫ್‌ಸಿ ಹಾಗೂ ಸ್ವಿಜರ್ಲೆಂಡ್‌ ರಾಷ್ಟ್ರೀಯ ತಂಡದ ಪರವಾಗಿ ಆಟವಾಡಿದ್ದರು. ಚಿಕ್ಕ ವಯಸ್ಸಿನಲ್ಲಿ ಬ್ಯಾಡ್ಮಿಂಟನ್‌, ಬಾಸ್ಕೆಟ್‌ಬಾಲ್‌ನಲ್ಲೂ ಗಮನಸೆಳೆದಿದ್ದರು.

Roger Federer Retires 1996ರಲ್ಲಿ ಟೆನಿಸ್‌ಗೆ ಕಾಲಿಟ್ಟಿದ್ದ ಫೆಡರರ್‌, ದಿಢೀರ್ ನಿವೃತ್ತಿ ಘೋಷಿಸಿದ್ದೇಕೆ..?

ತಂದೆಗೆ ನನ್ನ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿಲ್ಲ: ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡುವ ವೇಳೆ ಫೆಡರರ್‌, ತಂದೆಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿಲ್ಲ ಎಂದು ಹೇಳಿದ್ದರು. ಪ್ರತಿ ವರ್ಷ ನನ್ನ ಟೆನಿಸ್‌ ತರಬೇತಿಗಾಗಿ 30 ಸಾವಿರ ಸ್ವಿಸ್‌ ಫ್ರಾಂಕ್ಸ್‌ (ಅಂದಾಜು 24 ಲಕ್ಷ ರೂಪಾಯಿ) ಖರ್ಚು ಮಾಡುತ್ತಿದ್ದರು. ಇದೆಲ್ಲವೂ ನನ್ನ ಮೇಲಿನ ಪ್ರೀತಿಗಾಗಿ ಮಾತ್ರ. ಆದರೆ, ನನ್ನ ಸಾಮರ್ಥ್ಯದ ಮೇಲೆ ಅವರಿಗೆ ನಂಬಿಕೆ ಇರಲಿಲ್ಲ. ನಾನು ವೃತ್ತಿಪರ ಟೆನಿಸ್‌ ಆಟಗಾರನಾಗಿ ಗ್ರ್ಯಾಂಡ್‌ ಸ್ಲಾಂ ಗೆಲ್ಲೋದು ಸಾಧ್ಯವೇ ಇಲ್ಲ ಎಂದು ಅವರು ಅಂದುಕೊಂಡಿದ್ದರು ಎಂದು ಹೇಳಿದ್ದರು.

click me!