Pro Kabaddi League: ಸತತ 10ನೇ, ಒಟ್ಟಾರೆ 12ನೇ ಸೋಲು ಕಂಡ ಟೈಟಾನ್ಸ್‌!

By Kannadaprabha News  |  First Published Nov 13, 2022, 11:35 AM IST

ಪ್ರೊ ಕಬಡ್ಡಿ ಲೀಗ್‌ನಲ್ಲಿ ಮುಂದುವರೆದ ತೆಲುಗು ಟೈಟಾನ್ಸ್ ಸೋಲಿನ ಶಾಕ್
ಪಿಕೆಎಲ್ ಟೂರ್ನಿಯಲ್ಲಿ ಸತತ 10ನೇ ಸೋಲು ಅನುಭವಿಸಿದ ಟೈಟಾನ್ಸ್‌
ಯು.ಪಿ. ಯೋಧಾ ಎದುರು ಸೋಲುಂಡ ತೆಲುಗು ಟೈಟಾನ್ಸ್ ಪಡೆ


ಪುಣೆ(ನ.13): 9ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ತೆಲುಗು ಟೈಟಾನ್ಸ್‌ ಸೋಲಿನ ಸರಪಳಿ ಕಳಚಲು ಸಾಧ್ಯವಾಗುತ್ತಿಲ್ಲ. ಶನಿವಾರ ಯು.ಪಿ.ಯೋಧಾಸ್‌ ವಿರುದ್ಧ 30-41 ಅಂಕಗಳ ಅಂತರದಲ್ಲಿ ಸೋಲುಂಡಿತು. ತಂಡಕ್ಕಿದು ಸತತ 10ನೇ, ಒಟ್ಟಾರೆ 12ನೇ ಸೋಲು. ಈ ಆವೃತ್ತಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಕೇವಲ 1 ಜಯ ಮಾತ್ರ ಕಂಡಿದೆ. 

ತೆಲುಗು ಟೈಟಾನ್ಸ್‌ ಎದುರು ಆರಂಭದಿಂದಲೇ ಯು.ಪಿ. ಯೋಧಾಸ್ ತಂಡದ ಎದುರು ಮೇಲುಗೈ ಸಾಧಿಸಿತ್ತು. ಮೊದಲಾರ್ಧದ ಅಂತ್ಯದ ವೇಳೆ ಯೋಧಾಸ್ 21-15 ಅಂಕಗಳ ಮುನ್ನಡೆ ಸಾಧಿಸಿತ್ತು. ಇನ್ನು ದ್ವಿತಿಯಾರ್ಧದಲ್ಲೂ ಯೋಧಾ ತಂಡವು ಟೈಟಾನ್ಸ್ ಎದುರು ಸಂಪೂರ್ಣ ಪ್ರಾಬಲ್ಯ ಮೆರೆಯುವ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.

Tap to resize

Latest Videos

ತೆಲುಗು ಟೈಟಾನ್ಸ್‌ ತಂಡದ ಪರ ಸಿದ್ದಾರ್ಥ್ ದೇಸಾಯಿ 11 ಅಂಕಗಳನ್ನು ಕಲೆಹಾಕಿದರಾದರೂ, ಉಳಿದ ಆಟಗಾರರು ಸೂಕ್ತ ಬೆಂಬಲ ನೀಡಲಿಲ್ಲ. ಇನ್ನು ಯು.ಪಿ. ಯೋಧಾ ತಂಡದ ಪರ ಸುರೇಂದರ್ ಗಿಲ್ 13 ಅಂಕಗಳನ್ನು ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಬಿಜೆಪಿ ಸೇರಿಕೊಳ್ತಾರ ಧೋನಿ? ಅಮಿತ್ ಶಾ ಜೊತೆ ಕಾಣಿಸಿಕೊಂಡ ಕ್ಯಾಪ್ಟನ್ ಕೂಲ್!

ದಿನದ ಮೊದಲ ಪಂದ್ಯದಲ್ಲಿ ಬೆಂಗಾಲ್‌ ವಾರಿಯ​ರ್ಸ್ 46-27 ಅಂಕಗಳಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಜಯಿಸಿತು. ಇನ್ನು ದಿನದ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಎದುರು ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವು 32-57 ಅಂಕಗಳ ಅಂತರದ ಗೆಲುವು ಸಾಧಿಸಿ ಬೀಗಿದೆ. ಈ ಗೆಲುವಿನೊಂದಿಗೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಬೆಂಗಳೂರು ಬುಲ್ಸ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಇಂದಿನ ಪಂದ್ಯಗಳು: 
ಯು ಮುಂಬಾ-ಪಾಟ್ನಾ, ಸಂಜೆ 7.30ಕ್ಕೆ, 
ಬೆಂಗಳೂರು-ತಲೈವಾಸ್‌, ರಾತ್ರಿ 8.30ಕ್ಕೆ

ಅಥ್ಲೆಟಿಕ್ಸ್‌: ರಾಜ್ಯದ ಪವನಾ, ಪ್ರಿಯಾಗೆ ಚಿನ್ನ

ಗುವಾಹಟಿ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪವನಾ ನಾಗರಾಜ್‌ ಹಾಗೂ ಪ್ರಿಯಾ ಮೋಹನ್‌ ಚಿನ್ನದ ಪದಕ ಗೆದ್ದಿದ್ದಾರೆ. ಅಂಡರ್‌-18 ವಿಭಾಗದ ಹೈಜಂಪ್‌ನಲ್ಲಿ ಪವನಾ 1.71 ಮೀ. ಎತ್ತರಕ್ಕೆ ಜಿಗಿದು ಮೊದಲ ಸ್ಥಾನ ಪಡೆದರೆ, ಅಂಡರ್‌-20 ವಿಭಾಗದ 400 ಮೀ. ಓಟದಲ್ಲಿ ಪ್ರಿಯಾ 53.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

ಏಷ್ಯನ್‌ ಶೂಟಿಂಗ್‌: ಚಿನ್ನ ಗೆದ್ದ ರಾಜ್ಯದ ತಿಲೋತ್ತಮ

ನವದೆಹಲಿ: ಕೊರಿಯಾದ ದೇಗುನಲ್ಲಿ ನಡೆಯುತ್ತಿರುವ 15ನೇ ಏಷ್ಯನ್‌ ಏರ್‌ಗನ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ತಿಲೋತ್ತಮ ಸೇನ್‌ ಚಿನ್ನದ ಪದಕ ಗೆದ್ದಿದ್ದಾರೆ. ಕಿರಿಯ ಮಹಿಳೆಯರ ವಿಭಾಗದ 10 ಮೀ. ಏರ್‌ ರೈಫಲ್‌ ಸ್ಪರ್ಧೆಯ ಫೈನಲ್‌ನಲ್ಲಿ ತಿಲೋತ್ತಮ ಭಾರತದವರೇ ಆದ ನ್ಯಾನ್ಸಿ ವಿರುದ್ಧ 17-12ರ ಅಂತರದಲ್ಲಿ ಗೆದ್ದು ಚಿನ್ನಕ್ಕೆ ಮುತ್ತಿಟ್ಟರು. ಹಿರಿಯ ಮಹಿಳೆಯರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ಮೆಹುಲಿ ಘೋಷ್‌ ಸ್ವರ್ಣ ಪದಕ ಗೆದ್ದರು.

click me!