ರಾಜ್ಯದ ದಿಗ್ಗಜ ಅಥ್ಲೀಟ್‌ ಕೆನೆಥ್‌ ಪೋವೆಲ್‌ ಹೃದಯಾಘಾತದಿಂದ ನಿಧನ..!

By Kannadaprabha News  |  First Published Dec 12, 2022, 10:43 AM IST

ಕೋಲಾರ ಮೂಲದ ದಿಗ್ಗಜ ಅಥ್ಲೀಟ್‌ ಕೆನೆಥ್ ಪೋವೆಲ್ ನಿಧನ
1965ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಕೆನೆಥ್‌ ಪೋವೆಲ್
19 ಬಾರಿ ರಾಷ್ಟ್ರೀಯ ಓಪನ್‌ ಚಾಂಪಿಯನ್‌ಶಿಪ್‌ ಹಾಗೂ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಬೇಟೆ


ನವದೆಹಲಿ(ಡಿ.12): ಭಾರತದ ದಿಗ್ಗಜ ಅಥ್ಲೀಟ್‌, ಒಲಿಂಪಿಯನ್‌ ಕೆನೆಥ್‌ ಪೋವೆಲ್‌ ಭಾನುವಾರ ಹೃದಯಾಘಾತದಿಂದ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. 1964ರ ಟೋಕಿಯೋ ಒಲಿಂಪಿಕ್ಸ್‌ನ 4*100 ಮೀ ರಿಲೇ ಓಟದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ತಂಡದಲ್ಲಿದ್ದ ಪೋವೆಲ್‌, 1970ರ ಬ್ಯಾಂಕಾಕ್‌ ಏಷ್ಯನ್‌ ಗೇಮ್ಸ್‌ನ 4*100 ಮೀ. ರಿಲೇಯಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದರು.

1965ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಕೆನೆಥ್‌ ಅವರು 19 ಬಾರಿ ರಾಷ್ಟ್ರೀಯ ಓಪನ್‌ ಚಾಂಪಿಯನ್‌ಶಿಪ್‌ ಹಾಗೂ ಅಂತರ-ರಾಜ್ಯ ಚಾಂಪಿಯನ್‌ಶಿಪ್‌ಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಏಪ್ರಿಲ್ 20, 1940ರಲ್ಲಿ ಕೋಲಾರದಲ್ಲಿ ಜನಿಸಿದ್ದ ಪೋವೆಲ್‌ ಅವರು, 1957ರಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ರಾಷ್ಟ್ರೀಯ ಶಾಲಾ ಗೇಮ್ಸ್‌ನಲ್ಲಿ 3ನೇ ಸ್ಥಾನ ಪಡೆದಿದ್ದರು. 

Tap to resize

Latest Videos

ತಮ್ಮ 19ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಭಾರತೀಯ ಟೆಲಿಫೋನ್‌ ಇಂಡಸ್ಟ್ರೀಸ್‌ನಲ್ಲಿ ಉದ್ಯೋಗಕ್ಕೆ ಸೇರಿದ ಪೋವೆಲ್‌, ರೇಂಜ​ರ್‍ಸ್ ಕ್ಲಬ್‌ನಲ್ಲಿ ಅಥ್ಲೆಟಿಕ್ಸ್‌ ಕೋಚಿಂಗ್‌ ಪಡೆಯಲು ಆರಂಭಿಸಿದರು. 1963ರ ಉದ್ಘಾಟನಾ ಆವೃತ್ತಿಯ ರಾಷ್ಟ್ರೀಯ ಅಂತರ-ರಾಜ್ಯ ಅಥ್ಲೆಟಿಕ್ಸ್‌ನಲ್ಲಿ 100 ಮೀ. ಓಟವನ್ನು 10.8 ಸೆಕೆಂಡ್‌ಗಳಲ್ಲಿ, 200 ಮೀ. ಓಟವನ್ನು 22.0 ಸೆಕೆಂಡ್‌ಗಳಲ್ಲಿ ತಲುಪಿ ಗಮನ ಸೆಳೆದಿದ್ದರು. ಪೋವೆಲ್‌ ನಿಧನಕ್ಕೆ ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ ಹಾಗೂ ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಸಂತಾಪ ಸೂಚಿಸಿದೆ.

ಪ್ರೊ ಕಬಡ್ಡಿ: ಲೀಗ್‌ ಹಂತ ಮುಕ್ತಾಯ

ಹೈದರಾಬಾದ್‌: 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ ಲೀಗ್‌ ಹಂತ ಮುಕ್ತಾಯಗೊಂಡಿದೆ. ಈ ಆವೃತ್ತಿಯಲ್ಲಿ ಇನ್ನು ಎರಡು ಎಲಿಮಿನೇಟರ್‌, ಎರಡು ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ಬಾಕಿ ಇದೆ. 22 ಪಂದ್ಯಗಳಲ್ಲಿ 15 ಗೆಲುವು, 6 ಸೋಲು, 1 ಟೈ ಕಂಡ ಜೈಪುರ ಪಿಂಕ್‌ ಪ್ಯಾಂಥ​ರ್ಸ್ 82 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, 14 ಜಯ, 6 ಸೋಲು, 2 ಟೈ ಕಂಡ ಪುಣೇರಿ ಪಲ್ಟನ್‌ 80 ಅಂಕ ಪಡೆದು 2ನೇ ಸ್ಥಾನ ಗಳಿಸಿತು.

ಬೆಂಗಳೂರು ಬುಲ್ಸ್‌ 13 ಜಯ, 8 ಸೋಲು, 1 ಟೈನೊಂದಿಗೆ 74 ಅಂಕ ಪಡೆದು 3ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಯು.ಪಿ.ಯೋಧಾಸ್‌, ತಮಿಳ್‌ ತಲೈವಾಸ್‌, ದಬಾಂಗ್‌ ಡೆಲ್ಲಿ ಕ್ರಮವಾಗಿ 4, 5 ಹಾಗೂ 6ನೇ ಸ್ಥಾನ ಪಡೆದು ಪ್ಲೇ-ಆಫ್‌ಗೇರಿವೆ. ತೆಲುಗು ಟೈಟಾನ್ಸ್‌ 22 ಪಂದ್ಯಗಳಲ್ಲಿ 20 ಸೋಲು, 2 ಜಯದೊಂದಿಗೆ ಕೇವಲ 15 ಅಂಕ ಪಡೆದು ಕೊನೆ ಸ್ಥಾನಕ್ಕೆ ತೃಪ್ತಿಪಟ್ಟಿತು.

ತಾಯಿ ಜೊತೆ ಮೊರಾಕ್ಕೊ ಫುಟ್ಬಾಲಿಗ ಸೋಫಿಯಾನ್‌ ಬೂಫಾಲ್‌ ಸಂಭ್ರಮ!

ಡಿಸೆಂಬರ್ 13ರಂದು ಮೊದಲ ಎಲಿಮಿನೇಟರ್‌ನಲ್ಲಿ ಬೆಂಗಳೂರು ಹಾಗೂ ಡೆಲ್ಲಿ ಸೆಣಸಲಿದ್ದು, 2ನೇ ಎಲಿಮಿನೇಟರ್‌ನಲ್ಲಿ ಯೋಧಾಸ್‌-ತಲೈವಾಸ್‌ ಮುಖಾಮುಖಿಯಾಗಲಿವೆ. ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡಗಳು ಸೆಮೀಸ್‌ಗೇರಲಿವೆ. ಜೈಪುರ ಹಾಗೂ ಪುಣೆ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಡಿಸೆಂಬರ್ 15ಕ್ಕೆ ಸೆಮೀಸ್‌, ಡಿಸೆಂಬರ್ 17ಕ್ಕೆ ಫೈನಲ್‌ ನಡೆಯಲಿದೆ.

click me!