ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ಡೋಪ್‌ ಟೆಸ್ಟ್‌ ಫೇಲಾದ ಧನಲಕ್ಷ್ಮಿ, ಐಶ್ವರ್ಯ ಬಾಬು..!

By Suvarna News  |  First Published Jul 21, 2022, 9:16 AM IST

* ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ಭಾರತಕ್ಕೆ ದೊಡ್ಡ ಆಘಾತ
* ಭಾರತದ ತಾರಾ ಅಥ್ಲೀಟ್‌ಗಳಾದ ಧನಲಕ್ಷ್ಮಿ, ಐಶ್ವರ್ಯ ಬಾಬು
* ಬರ್ಮಿಂಗ್‌ಹ್ಯಾಮ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಕಳೆದುಕೊಂಡ ಇಬ್ಬರು ಅಥ್ಲೀಟ್‌ಗಳು


ನವದೆಹಲಿ(ಜು.21): ಬರ್ಮಿಂಗ್‌ಹ್ಯಾಮ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟಕ್ಕೂ ಮುನ್ನ ಭಾರತಕ್ಕೆ ದೊಡ್ಡ ಶಾಕ್ ಎದುರಾಗಿದ್ದು ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಓಟಗಾರ್ತಿ ಎಸ್‌.ಧನಲಕ್ಷ್ಮಿ ಮತ್ತು ಟ್ರಿಪಲ್‌ ಜಂಪ್‌ ಪಟು ಐಶ್ವರ್ಯ ಬಾಬು ಉದ್ದೀಪನ ಮದ್ದು ಸೇವಿಸಿರುವುದು ಡೋಪಿಂಗ್‌ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಜುಲೈ 28ರಿಂದ ಆರಂಭಗೊಳ್ಳಲಿರುವ ಬರ್ಮಿಂಗ್‌ಹ್ಯಾಮ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇಬ್ಬರನ್ನೂ ತಾತ್ಕಲಿಕವಾಗಿ ಅಮಾನತುಗೊಳಿಸಲಾಗಿದೆ. ಧನಲಕ್ಷ್ಮಿ 100 ಮೀ., 4*100 ಮೀ. ರಿಲೇ ತಂಡದಲ್ಲಿ ಸ್ಥಾನ ಪಡೆದಿದ್ದರು. ಐಶ್ವರ್ಯ ಟ್ರಿಪಲ್‌ ಜಂಪ್‌, ಲಾಂಗ್‌ಜಂಪ್‌ಗೆ ಆಯ್ಕೆಯಾಗಿದ್ದಾರೆ.

24 ವರ್ಷದ ಎಸ್. ಧನಲಕ್ಷ್ಮಿ ಇತ್ತೀಚೆಗಷ್ಟೇ ನಡೆದ 200 ಮೀಟರ್ ಓಟದ ಸ್ಪರ್ಧೆಯಲ್ಲಿ 22.89 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಮೂರನೇ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇದೀಗ ಅಂತಾರಾಷ್ಟ್ರೀಯ ಡೋಪಿಂಗ್ ಸಂಸ್ಥೆಯಾದ ಅಥ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌(AIU) ನಡೆಸಿದ ಡೋಪಿಂಗ್ ಟೆಸ್ಟ್‌ ವೇಳೆ ಧನಲಕ್ಷ್ಮಿ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು ಬೆಳಕಿಗೆ ಬಂದಿದೆ. 

Tap to resize

Latest Videos

ಇನ್ನು ಮತ್ತೊಂದೆಡೆ ತ್ರಿಪಲ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ 25 ವರ್ಷದ ಐಶ್ವರ್ಯ ಬಾಬು ಅವರೂ ಕೂಡಾ ನಿಷೇಧಿತ ಉದ್ದೀಪನಾ ಮದ್ದು ಸೇವಿಸಿರುವುದು NADA ನಡೆಸಿದ ಟೆಸ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ನಡೆದ ಅಂತರ್‌ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 14.14 ಮೀಟರ್ ದೂರ ಜಿಗಿಯುವ ಮೂಲಕ ದಶಕಗಳ ಕಾಲದಿಂದ ಇದ್ದ ರಾಷ್ಟೀಯ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಐಶ್ವರ್ಯ ಮುಂಬರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತ್ರಿಪಲ್ ಜಂಪ್ ಹಾಗೂ ಲಾಂಗ್‌ ಜಂಪ್‌ನಲ್ಲಿ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳಲ್ಲಿ ಒಬ್ಬರು ಎನಿಸಿದ್ದರು.

ಯಾವುದೇ ಒತ್ತಡವಿಲ್ಲದೇ ಆಡಿ ಗೆದ್ದು ಬನ್ನಿ; ಕಾಮನ್‌ವೆಲ್ತ್‌ ಗೇಮ್ಸ್‌ ಅಥ್ಲೀಟ್‌ಗಳಿಗೆ ಮೋದಿ ಶುಭಹಾರೈಕೆ

ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 215 ಭಾರತೀಯ ಅಥ್ಲೀಟ್‌ಗಳು ಬಾಗಿ

ಕಾಮನ್‌ವೆಲ್ತ್‌ ಗೇಮ್ಸ್‌ ಜುಲೈ 28ರಿಂದ ಆಗಸ್ಟ್‌ 8ರ ವರೆಗೆ ನಡೆಯಲಿದ್ದು, ಭಾರತದ 215 ಅಥ್ಲೀಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಆಸ್ಪ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಗೇಮ್ಸ್‌ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 66 ಪದಕಗಳನ್ನು ಗೆದ್ದು, ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ವರ್ಷ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಾಧಿಸಿರುವ ಭಾರತ ಈ ಬಾರಿ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆಯಿದೆ.

ಶೂಟಿಂಗ್‌ ವಿಶ್ವಕಪ್‌: 15 ಪದಕ ಗೆದ್ದ ಭಾರತ ಅಗ್ರಸ್ಥಾನಿ

ಚಾಂಗ್‌ವೊನ್‌(ದ.ಕೊರಿಯಾ): ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಶೂಟರ್‌ಗಳು 5 ಚಿನ್ನ, 6 ಬೆಳ್ಳಿ ಹಾಗೂ 4 ಕಂಚು ಸೇರಿದಂತೆ 15 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದ್ದಾರೆ. ಕೂಟದ ಕೊನೆ ದಿನವಾದ ಬುಧವಾರ ಪುರುಷರ 25 ಮೀ. ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ತಂಡ ವಿಭಾಗದಲ್ಲಿ ಅನೀಶ್‌ ಭನ್ವಾಲಾ, ವಿಜಯ್‌ವೀರ್‌ ಸಿಧು ಹಾಗೂ ಸಮೀರ್‌ ಬೆಳ್ಳಿ ಪದಕ ಗೆದ್ದುಕೊಂಡರು.

ಭಾರತ 2019ರಲ್ಲಿ ಎಲ್ಲಾ 5 ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ ಹಂತಗಳಲ್ಲಿ ಗೆದ್ದಿದ್ದು, ಈ ವರ್ಷ ಕೈರೋದಲ್ಲಿ ನಡೆದಿದ್ದ ಕೂಟದಲ್ಲೂ ಜಯ ಸಾಧಿಸಿತ್ತು. ಅಕ್ಟೋಬರ್‌ನಲ್ಲಿ ಕೈರೋದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಭಾರತದ ಶೂಟರ್‌ಗಳು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

click me!