ನರಗುಂದದಲ್ಲಿ ಇಂದಿನಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ

By Kannadaprabha News  |  First Published Oct 12, 2022, 12:45 PM IST
  • ನರಗುಂದದಲ್ಲಿ ಇಂದಿನಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ
  • ರಾಷ್ಟ್ರಮಟ್ಟದ 35 ಪುರುಷ, 30 ಮಹಿಳಾ ತಂಡಗಳು ಭಾಗಿ
  • ಸಚಿವ ಸಿ.ಸಿ. ಪಾಟೀಲರ ಜನ್ಮದಿನ ನಿಮಿತ್ತ ಈ ಪಂದ್ಯಾವಳಿ

ಎಸ್‌.ಜಿ.ತೆಗ್ಗಿಮನಿ

ನರಗುಂದ (ಅ.12) : ಮಹದಾಯಿ ಹೋರಾಟ, ಬೆಲೆ ಕುಸಿತದ ಆಕ್ರೋಶ, ನೆರೆ ಸಂತ್ರಸ್ತರ ಗೋಳಿನಿಂದÜ ಆಗಾಗ ನಾಡಿನ ಗಮನ ಸೆಳೆಯುತ್ತಿದ್ದ ಬಂಡಾಯದ ನೆಲ ನರಗುಂದ ಇದೀಗ ‘ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ’ ಆಯೋಜನೆಯಿಂದಾಗಿ ನಾಡಿನ ಕ್ರೀಡಾಲೋಕ ತಿರುಗಿ ನೋಡುತ್ತಿದೆ.

Tap to resize

Latest Videos

undefined

National Games 2022 ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಹೆಕ್ಕಿದ ಅಶ್ವಿನ್-ಪ್ರತೀಕ್ ಜೋಡಿ.!

ಇದೇ 12 ರಿಂದ 14ರ ವರೆಗೆ ಮೂರುದಿನಗಳ ಕಾಲ ನಡೆಯುವ ಈ ‘ಅಖಿಲ ಭಾರತ ಪುರುಷ ಮತ್ತು ಮಹಿಳಾ ಎ ಶ್ರೇಣಿಯ ಕಬಡ್ಡಿ ಪಂದ್ಯಾವಳಿ’ಯಲ್ಲಿ ರಾಷ್ಟ್ರಮಟ್ಟದ 35 ಪುರುಷ, 30 ಮಹಿಳಾ ತಂಡಗಳು ಭಾಗಿಯಾಗಲಿವೆ. ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕಬಡ್ಡಿ ಪಂದ್ಯಾವಳಿ ನಡೆಯುತ್ತಿರುವುದು ನರಗುಂದ ಜನತೆಯಲ್ಲಿ ಸಂಭ್ರಮ ಮನೆಮಾಡಿಸಿದೆ.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಅವ​ರ 64ನೇ ಜನ್ಮದಿನದ ನಿಮಿತ್ತ ಅವರ ಅಭಿಮಾನಿ ಬಳಗ, ಬಿಜೆಪಿ, ಲಯನ್ಸ್‌ ಕ್ಲಬ್‌ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಜಂಟಿಯಾಗಿ ಈ ಪಂದ್ಯಾವಳಿ ಆಯೋಜಿಸಿವೆ.

ಇಲ್ಲಿನ ತಾಲೂಕಾ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗೆ ವ್ಯವಸ್ಥೆ ಮಾಡಲಾಗಿದೆ. ಮಳೆಯಿಂದ ಆಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಇಡೀ ಕ್ರೀಡಾಂಗಣಕ್ಕೆ ವಾಟರ್‌ಪ್ರೋಪ್‌ ಹೊದಿಕೆ ಹಾಕಲಾಗಿದೆ. ಪಂದ್ಯಾ​ವಳಿ ವೀಕ್ಷ​ಣೆಗೆ ಬರುವ ಕ್ರೀಡಾ​ಭಿ​ಮಾ​ನಿ​ಗ​ಳಿಗೆ 3 ದಿನ​ಗ​ಳ ಕಾಲ ಉಚಿತ ವಾಹನ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ.

780 ಆಟಗಾರರು:

ಪುರುಷ ವಿಭಾಗದಲ್ಲಿ ಕರ್ನಾಟಕ, ಗುಜರಾತ್‌, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಆಂದ್ರಪ್ರದೇಶ, ಭಾರತೀಯ ಸೇನಾ ತಂಡ ಹಾಗೂ ವಿವಿಧ ರಾಜ್ಯಗಳ ರೈಲ್ವೆ ತಂಡಗಳು ಸೇರಿ 35 ತಂಡಗಳು ಭಾಗವಹಿಸಲಿವೆ. ಮಹಿಳಾ ವಿಭಾಗದಲ್ಲಿ ಕರ್ನಾಟಕದ 7 ತಂಡಗಳಲ್ಲದೆ ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂದ್ರಪ್ರದೇಶ ಹಾಗೂ ರೈಲ್ವೆ ವಿಭಾಗ ಸೇರಿ 30 ತಂಡಗಳ ಭಾಗವಹಿಸಲಿವೆ.

ಲೀಗ್‌ ಮತ್ತು ನಾಕೌಟ್‌ ಹಂತದ ಪಂದ್ಯ ಇದಾಗಿದೆ. ಪುರುಷರ ತಂಡಕ್ಕೆ ಪ್ರಥಮ .2.5 ಲಕ್ಷ, ದ್ವಿತೀಯ .2 ಲಕ್ಷ, ತೃತೀಯ .1.5 ಲಕ್ಷ ನಗದು ಬಹುಮಾನ ಇದೆ. ಮಹಿಳಾ ತಂಡಕ್ಕೆ ಪ್ರಥಮ .2 ಲಕ್ಷ, ದ್ವಿತೀಯ .1.5 ಲಕ್ಷ, ತೃತೀಯ .1 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಕ್ರೀಡಾ ಜಾತ್ರೆ:

ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಜಾತ್ರೆಯಲ್ಲಿ 17 ದೇಶಿಯ ವಸ್ತು, ಉತ್ಪನ್ನಗಳ ವಾಣಿಜ್ಯ ಮಳಿಗೆಗಳು, 10ಕ್ಕೂ ಹೆಚ್ಚು ಸರ್ಕಾರಿ ಯೋಜನೆ, ಸೌಲಭ್ಯಗಳ ಮಾಹಿತಿ ನೀಡುವ ಮಳಿಗೆಗಳನ್ನು ಹಾಕಲಾಗಿದೆ. ಅ. 12 ಹಾಗೂ 13ರಂದು ರಕ್ತದಾನ ಶಿಬಿರ ನಡೆಯಲಿದೆ.

ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಈಶ್ವರ ಅಂಗಡಿ, ಸತೀಶ ನಾಯಕ ಸೇರಿದಂತೆ ಈ ಭಾಗದ 100 ದೈಹಿಕ ಶಿಕ್ಷಕರು ಮತ್ತು ನಿವೃತ್ತ ದೈಹಿಕ ಶಿಕ್ಷಕರ ನೇತೃತ್ವದಲ್ಲಿ ಕ್ರೀಡೆ ನಡೆಯಲಿದ್ದು, ಪ್ರತಿ ದಿನ 40ರಿಂದ 50 ಸಾವಿರ ಜನರು ಕಬಡ್ಡಿ ಪಂದ್ಯಾವಳಿ ವೀಕ್ಷಿಸಲಿದ್ದಾರೆ. ಕ್ರೀಡಾಂಗಣದ ಸುತ್ತಲೂ ಬೃಹತ್‌ ಎಲ್‌ಇಡಿ ಸ್ಕ್ರೀನ್‌ ಅಳ​ವ​ಡಿ​ಸ​ಲಾ​ಗಿ​ದೆ.

ಇಂದು ಉದ್ಘಾಟನೆ:

ಅ. 12ರಂದು ಸಂಜೆ 4.30ಕ್ಕೆ ಪಂದ್ಯಾವಳಿಯನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್‌ ಉದ್ಘಾಟಿಸುವರು. ಶಾಸಕರು, ಸಂಸದರು ಹಾಗೂ ಸಿ.ಸಿ. ಪಾಟೀಲ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಲಿದ್ದಾರೆ.

National Games 2022: ಮತ್ತೆ ಎಂಟು ಪದಕ ಬಾಚಿಕೊಂಡ ಕರ್ನಾಟಕ..!

ಉತ್ತರ ಕರ್ನಾಟಕ ಭಾಗದ ಕ್ರೀಡಾಭಿಮಾನಿಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಭಾಗದ ಯುವಕ, ಯುವತಿಯರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಈ ಭಾಗದ ಕೀರ್ತಿ ಹೆಚ್ಚಿಸುವ ಉದ್ದೇಶದಿಂದ ಕಳೆದ ಮೂರು ತಿಂಗಳಿಂದ ಕಬಡ್ಡಿ ಆಟದ ವ್ಯವಸ್ಥೆ ನಡೆಸಿದ್ದೇವೆ.

- ಉಮೇಶಗೌಡ ಪಾಟೀಲ, ಬಿಜೆಪಿ ಯುವ ಧುರೀಣ

ನರಗುಂದ ವಿಧಾನಸಭೆ ಮತಕ್ಷೇತ್ರದ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ. ಪಾಟೀಲ ಅವ​ರ 64ನೇ ಜನ್ಮದಿನದ ಪ್ರಯುಕ್ತ ಯುವ ಕ್ರೀಡಾ ಅಭಿಮಾನಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಷ್ಟ್ರ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾ​ಗಿದೆ.

- ಮಲ್ಲಪ್ಪ ಮೇಟಿ, ಯುವ ಮುಖಂಡ

ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಉದ್ದೇ​ಶ​ದಿಂದ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಸಚಿವರ ಅಭಿಮಾನಿಗಳು ಹಮ್ಮಿಕೊಂಡಿದ್ದು ಸಂತಸ ತಂದಿದೆ. ಬಂಡಾಯದ ನಾಡಿಗೆ ಮತ್ತೊಂದು ಇತಿಹಾಸ ಎಂದರೆ ತಪ್ಪಾಗಲಾರದು.

- ಮೋಹನ ಕಲಹಾಳ, ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಕ

click me!