ಒಂಟಿ ಕಾಲಿನಲ್ಲಿ ಕಬಡ್ಡಿ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡ ಸುಷ್ಮಂತ್..!

By Naveen KodaseFirst Published May 14, 2022, 10:49 AM IST
Highlights

* ವಿಧಿಗೆ ಸವಾಲೊಡ್ಡಿ ಕಬಡ್ಡಿ ಟೂರ್ನಿ ಆಯೋಜಿಸಿದ್ದ ಸುಷ್ಮಂತ್

* ಕಬಡ್ಡಿ ಆಡುವಾಗ ಕಾಲು ಕಳೆದುಕೊಂಡರೂ ಛಲ ಬಿಡದೇ ಕ್ರೀಡಾಸ್ಪೂರ್ತಿ ಮೆರೆದ ಮಾಜಿ ಆಟಗಾರ

* ಕಬಡ್ಡಿ ಟೂರ್ನಿ ಆಯೋಜಿಸಿ ಸೈ ಎನಿಸಿಕೊಂಡ ಸುಷ್ಮಂತ್ 

ನವೀನ್ ಕೊಡಸೆ, ಏಷ್ಯಾನೆಟ್ ಸುವರ್ಣ ನ್ಯೂಸ್

ಶಿವಮೊಗ್ಗ: ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಸುಷ್ಮಂತ್ ಎನ್ನುವ ಮಲೆನಾಡಿನ ಅಪ್ಪಟ ಗ್ರಾಮೀಣ ಪ್ರತಿಭೆ ಈಗ ವಿಧಿಗೆ ಸವಾಲೊಡ್ಡಿ ಮತ್ತೊಮ್ಮೆ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ವರ್ಷಗಳ ಹಿಂದೆ ಕಬಡ್ಡಿ ಆಡುವ ವೇಳೆ ಬಿದ್ದು ಕಾಲು (Kabaddi Leg Injury) ಮುರಿದುಕೊಂಡು, ತನ್ನ ಎಡಗಾಲನ್ನೇ ಕಳೆದುಕೊಂಡರೂ ಸಹಾ, ಆತನಲ್ಲಿರುವ ಕ್ರೀಡಾಸ್ಪೂರ್ತಿ ಒಂದಿನಿತು ಕಮ್ಮಿಯಾಗಿಲ್ಲ. ತಾನು ಆಡದಿದ್ದರೇನಂತೆ, ನಮ್ಮ ಭಾಗದ ಹುಡುಗರು ಕಬಡ್ಡಿ ಆಡಿ ಹೆಸರು ಮಾಡಲಿ ಎನ್ನುವ ಸುಷ್ಮಂತ್ ಉತ್ಸಾಹ ಆತನ ಬಗ್ಗೆ ಎಂತಹವರಲ್ಲಿಯೂ ಹೆಮ್ಮೆಯ ಭಾವ ಮೂಡಿಸುತ್ತದೆ.

ಸುಷ್ಮಂತ್, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಸಮೀಪದ ತೊರೆಗದ್ದೆ ನಿವಾಸಿ. ರಾಜ್ಯಮಟ್ಟವನ್ನು ಪ್ರತಿನಿಧಿಸಿದಂತಹ ಪ್ರತಿಭಾನ್ವಿತ ಕಬಡ್ಡಿ ಆಟಗಾರ ಈಗ ಅಕ್ಷರಶಃ ತನ್ನ ಕಾಲು ಕಳೆದುಕೊಂಡು ಬೆಡ್‌ ರೆಸ್ಟ್‌ನಲ್ಲಿದ್ದಾರೆ. ಪ್ರೊ ಕಬಡ್ಡಿಯಲ್ಲಿ (Pro Kabaddi) ಪಾಲ್ಗೊಳ್ಳುವ ಕನಸು ಕಾಣುತ್ತಿದ್ದ ಸುಷ್ಮಂತ್, 2019ರಲ್ಲಿ ರಿಪ್ಪನ್‌ಪೇಟೆ ಸಮೀಪದ ಅಡ್ಡೇರಿಯಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಆಡುವಾಗ ಗಂಭೀರವಾಗಿ ಗಾಯಗೊಂಡರು. ಗಾಯದ ತೀವ್ರತೆ ಹೇಗಿತ್ತು ಎಂದರೆ ಹಲವು ಶಸ್ತ್ರಚಿಕಿತ್ಸೆ ಬಳಿಕ ಅನಿವಾರ್ಯವಾಗಿ ಆತನ ಎಡಗಾಲನ್ನೇ ಕತ್ತರಿಸಬೇಕಾಗಿ ಬಂದಿತು. ಕನ್ನಡದ ಖ್ಯಾತ ನಟ ಸುದೀಪ್ ಅವರ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ನವರು ಸುಷ್ಮಂತ್ ಕಾಲಿನ ಶಸ್ತ್ರ ಚಿಕಿತ್ಸೆ ನಡೆಸಲು ನೆರವಾಗಿದ್ದಾರೆ. ಹೊಸ ಕೃತಕ ಕಾಲು ಹಾಕಿಸುವ ಭರವಸೆ ನೀಡಿದ್ದು, ಕಳೆದೊಂದು ವರ್ಷದಿಂದ ಕೃತಕ ಕಾಲಿನ ನೆರವನ್ನು ಸುಷ್ಮಂತ್ ಎದುರು ನೋಡುತ್ತಿದ್ದಾರೆ. ಸುಷ್ಮಂತ್ ದೈರ್ಯಗೆಡದಂತೆ ನೋಡಿಕೊಳ್ಳುವಲ್ಲಿ ಆದರ್ಶ್ ಹುಂಚದಕಟ್ಟೆ ಸೇರಿದಂತೆ ಹಲವು ಮಂದಿ ಸಂಕಷ್ಟದ ಕಾಲದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಕೃತಕ ಕಾಲು ಆದಷ್ಟು ಬೇಗ ಅಳವಡಿಸಿದರೆ, ತಾನು ದುಡಿದು ಗೌರವದ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಸುಷ್ಮಂತ್ ಮಹದಾಸೆ.

ಒಂದು ಕಡೆ ಹೆಚ್ಚೇನು ಸ್ಥಿತಿವಂತರಲ್ಲದ ಆತನ ಕುಟುಂಬ, ಬೆಳೆದುನಿಂತ ಮಗನ ಈ ದುಸ್ಥಿತಿಗೆ ಪೋಷಕರು ಈಗಲೂ ಕಣ್ಣೀರಾಗುತ್ತಿದ್ದಾರೆ. ದುಡಿದು ತಂದೆ-ತಾಯಿಗಳಿಗೆ ನೆರವಾಗಬೇಕಾದ ವಯಸ್ಸಿನಲ್ಲಿ ಕುಟುಂಬದವರ ಮೇಲೆ ಅವಲಂಬನೆಯಾಗಿದ್ದೇನೆ ಎನ್ನುವ ಕೊರಗು ಆತನನ್ನು ಆಗಾಗ ಕಾಡುತ್ತಿದೆ. ತನ್ನದೇ ಸಾವಿರ ಸಮಸ್ಯೆಗಳಿದ್ದರೂ, ಎಲೆಮರೆಯ ಕಾಯಿಗಳನ್ನು ಗುರುತಿಸುವ ಸವಾಲಿನ ಕೆಲಸಕ್ಕೆ ಕೈ ಹಾಕಿ ಸುಷ್ಮಂತ್ ಈಗ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಗ್ರಾಮೀಣ ಮಟ್ಟದ ಪ್ರೀಮಿಯರ್ ಲೀಗ್ ಮಾದರಿಯ ಟೂರ್ನಿಯನ್ನು ತಾನು ಹುಟ್ಟಿ ಬೆಳೆದ ಊರಿನಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿ ಹಲವರಿಗೆ ಮಾದರಿಯಾಗಿದ್ದಾರೆ.  

ಐತಿಹಾಸಿಕ ಸಾಧನೆ ಮಾಡಿದ ಭಾರತ ಬ್ಯಾಡ್ಮಿಂಟನ್ ತಂಡ, ಥಾಮಸ್ ಕಪ್ ಫೈನಲ್ ಗೆ ಲಗ್ಗೆ!

ಹೆದ್ದಾರಿಪುರ ಪ್ರೀಮಿಯರ್ ಲೀಗ್ ರೂವಾರಿ ಸುಷ್ಮಂತ್:

ಕಳೆದೊಂದು ತಿಂಗಳ ಹಿಂದಷ್ಟೇ ಅನಿಲ್ ಸಳ್ಳಿ ಹಾಗೂ ಅವರ ಮತ್ತಿತರ ಸ್ನೇಹಿತರು ಸೇರಿ ಹೆದ್ದಾರಿಪುರ ಪ್ರೀಮಿಯರ್ ಲೀಗ್(HPL 2022) ಕ್ರಿಕೆಟ್ ಟೂರ್ನಿಯನ್ನು ನಡೆಸಿ ಸೈ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಸುಷ್ಮಂತ್ ನಾವು ಯಾಕೆ ಕಬಡ್ಡಿ ಟೂರ್ನಿ ನಡೆಸಬಾರದು ಎಂದು ಆಲೋಚಿಸಿದರು. ತಮಗೆ ಕಾಲು ಇಲ್ಲದೇ ಹೋದರೇನಂತೆ, ನಮ್ಮ ಭಾಗದ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಲಿ ಎನ್ನುವ ಉದ್ದೇಶದಿಂದ ಹೆದ್ದಾರಿಪುರ ಕಬಡ್ಡಿ ಲೀಗ್ ಆಯೋಜಿಸಲು ಮುಂದಾದರು. ಈಗಿನ ದಿನಗಳಲ್ಲಿ ಎಲ್ಲವೂ ಸರಿಯಿದ್ದೂ ಒಂದು ಟೂರ್ನಿ ನಡೆಸುವುದು ಸುಲಭವಲ್ಲ, ಆದರೆ ಸುಷ್ಮಂತ್ ತನ್ನ ಸ್ಥಳೀಯ ಜನಪ್ರಿಯತೆಯಿಂದಾಗಿ ಮನೆಯಲ್ಲಿಯೇ ಕುಳಿತು ಅಂಕಗಳ ಆಧಾರದಲ್ಲಿ ಹರಾಜಿಗೆ ಆಟಗಾರರ ಪಟ್ಟಿ ತಯಾರಿಸಿ, ತಂಡಗಳಿಗೆ ಮಾಲೀಕರನ್ನು ಹುಡುಕಿದರು. ಇದರ ಜತೆಗೆ ಸ್ಥಳೀಯವಾಗಿಯೇ ಪ್ರಾಯೋಜಕರನ್ನು ಸಂಪರ್ಕಿಸಿ ತುಂಬಾ ಅಚ್ಚುಕಟ್ಟಾಗಿ ಟೂರ್ನಿಯನ್ನು ನಡೆಸಿ ನೆರೆದ ಎಲ್ಲಾ ಪ್ರೇಕ್ಷಕರು ಹಾಗೂ ಕಬಡ್ಡಿ ಅಭಿಮಾನಿಗಳ ಮನ ಗೆದ್ದರು. ಎಷ್ಟೋ ಮಂದಿ ಈ ರೀತಿ ಕೈ ಕಾಲ ಕಳೆದುಕೊಂಡರೆ ಮನೆಯಿಂದ ಹೊರಗೇ ಬರಲು ಹಿಂದೇಟು ಹಾಕುತ್ತಾರೆ, ಆದರೆ ಸುಷ್ಮಂತ್ ಈ ಎಲ್ಲಾ ಅಡ್ಡಿ ಆತಂಕಗಳನ್ನು ಮೆಟ್ಟಿನಿಂತು ಹಲವರ ಪಾಲಿಗೆ ಸ್ಪೂರ್ತಿ ಎನಿಸಿದ್ದಾರೆ.

ಚಾಂಪಿಯನ್‌ ತಂಡಕ್ಕೆ ಸುಷ್ಮಂತ್ ಮೆಂಟರ್: 

ಚೊಚ್ಚಲ ಆವೃತ್ತಿಯ ಹೆದ್ದಾರಿಪುರ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಹೆದ್ದಾರಿಪುರ ಗ್ರಾಮಪಂಚಾಯತ್ ವ್ಯಾಪ್ತಿಯೊಳಗಿನ ಒಟ್ಟು ಎಂಟು ತಂಡಗಳು ಪಾಲ್ಗೊಂಡಿದ್ದವು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಗಳು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ. ಹೊನಲು-ಬೆಳಕಿನ ಈ ಕಬಡ್ಡಿ ಟೂರ್ನಿಯಲ್ಲಿ ಸಮನ್ವಯ ಸ್ಟಾರ್ಸ್‌ ಕೊಡಸೆ-ಗಿಣಿಸೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಡ್ರೀಮ್ ಚೇಸರ್ಸ್‌ ಕಲ್ಲೂರು ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇನ್ನು ಆದಿಶಕ್ತಿ ಬಾಯ್ಸ್ ಗಾಜಿನಗೋಡು ಹಾಗೂ ಎಸ್‌ಎಸ್‌ ಜಿ ತಂಡಗಳು ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದವು.

ಒಂದು ಕಡೆ ಟೂರ್ನಿಯ ಆಯೋಜನೆ ಜವಾಬ್ದಾರಿ ಹೊತ್ತಿದ್ದ ಸುಷ್ಮಂತ್, ಇನ್ನೊಂದೆಡೆ ಸಮನ್ವಯ ಸ್ಟಾರ್ಸ್‌ ತಂಡದ ಮೆಂಟರ್ ಆಗಿಯೂ ಯಶಸ್ವಿಯಾಗಿದ್ದಾರೆ. ತಮ್ಮಲ್ಲಿರುವ ಅಪಾರ ಕಬಡ್ಡಿ ಅನುಭವವನ್ನು ಸಮನ್ವಯ ಸ್ಟಾರ್ಸ್ ತಂಡಕ್ಕೆ ಧಾರೆ ಎಸೆಯುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಸೈ ಎನಿಸಿಕೊಂಡಿದ್ದಾರೆ. ಅನನುಭವಿ ಆಟಗಾರರನ್ನೊಳಗೊಂಡಿದ್ದ ಸಮನ್ವಯ ಸ್ಟಾರ್ಸ್ ತಂಡವು ಸುಷ್ಮಂತ್ ಮಾರ್ಗದರ್ಶನದಲ್ಲಿ ಎಲ್ಲಾ ಸವಾಲುಗಳನ್ನು ಮೀರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವನ್ನು ಸಮನ್ವಯ ಸ್ಟಾರ್ಸ್ ತಂಡವು ಸುಷ್ಮಂತ್‌ಗೆ ಡೆಡಿಕೇಟ್ ಮಾಡಿದೆ. ಈ ಮೂಲಕ ಸುಷ್ಮಂತ್ ತಾವು ಕಬಡ್ಡಿ ಆಡದಿದ್ದರೇನಂತೆ, ತಾನೊಬ್ಬ ಉತ್ತಮ ಸಂಘಟಕ ಮಾತ್ರವಲ್ಲದೇ ಉತ್ತಮ ಕೋಚ್ ಕೂಡಾ ಆಗಬಲ್ಲೇ ಎನ್ನುವುದನ್ನು ಅನಾವರಣ ಮಾಡಿದ್ದಾರೆ. ಸುಷ್ಮಂತ್ ನಿಮ್ಮ ಜೀವನ ಸ್ಪೂರ್ತಿಗೆ ಹ್ಯಾಟ್ಸ್‌ಅಫ್..!!!

ಟೂರ್ನಿ ಆಯೋಜನೆ ನನಗೆ ಹೊಸ ಅನುಭವ. ಗ್ರಾಮೀಣ ಮಟ್ಟದ ಕಬಡ್ಡಿ ಆಟಗಾರರು ರಾಜ್ಯ ಹಾಗೂ ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವಂತಾಗಬೇಕು. ಸ್ಥಳೀಯ ಸರ್ಕಾರಗಳು ಕೂಡಾ ಆಟಗಾರರಿಗೆ ಬೇರುಮಟ್ಟದಿಂದಲೇ ಸೂಕ್ತ ಕೋಚಿಂಗ್ ನೀಡಬೇಕು. ಆಗ ಮತ್ತಷ್ಟು ಪ್ರತಿಭಾನ್ವಿತ ಕಬಡ್ಡಿ ಆಟಗಾರರು ಬೆಳಕಿಗೆ ಬರುತ್ತಾರೆ. ಕಬಡ್ಡಿ ನನ್ನ ಕನಸು, ನಾನು ಕಬಡ್ಡಿ ಆಡುವಾಗ ಹಾಗೂ ಕಾಲು ಕಳೆದುಕೊಂಡ ಬಳಿಕ ಸಾಕಷ್ಟು ಜೀವನ ಪಾಠ ಕಲಿತಿದ್ಧೇನೆ - ಸುಷ್ಮಂತ್ ತೊರೆಗದ್ದೆ, ಮಾಜಿ ಕಬಡ್ಡಿ ಆಟಗಾರ.
 

click me!