ಯಾವುದೋ ಕೋಚ್‌, ಎಲ್ಲೋ ಕೆಲಸ..! ಕ್ರೀಡಾ ಇಲಾಖೆಯ ಭ್ರಷ್ಟಾಚಾರ ಬಯಲು

By Kannadaprabha News  |  First Published Jan 22, 2021, 11:30 AM IST

ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ಬೆಳಕಾಗಬೇಕಿದ್ದ ಕೆಲವು ಕೋಚ್‌ಗಳು ತಮ್ಮ ಕಾರ್ಯಸ್ಥಳದಲ್ಲಿರದೇ ಬೇರೆ ಕಡೆ ಇದ್ದುಕೊಂಡು ಸರ್ಕಾರದ ಸಂಬಳ ಪಡೆಯುತ್ತಿರುವ ವಿಚಾರ ಕನ್ನಡಪ್ರಭ ನಡೆಸಿದ ವಿಶೇಷ ವರದಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


- ಧನಂಜಯ್ ಎಸ್‌ ಹಕಾರಿ, ಕನ್ನಡಪ್ರಭ

ಬೆಂಗಳೂರು(ಜ.22): ರಾಜ್ಯದ ಭವಿಷ್ಯದ ಕ್ರೀಡಾತಾರೆಗಳನ್ನು ಗುರುತಿಸಿ, ಪೋಷಿಸುವಂತಹ ಕಾರ್ಯದಲ್ಲಿ ನಿರತರಾಗಬೇಕಾಗಿರುವ ತರಬೇತುದಾರರು (ಕೋಚ್‌ಗಳ) ನೇಮಕಾತಿ ಆರಂಭದಿಂದಲೂ ಲೋಪದೋಷಗಳ ಸರಮಾಲೆಯೇ ನಡೆದಿದೆ ಎಂಬ ಆಘಾತಕಾರಿ ಸಂಗತಿ ಇದೀಗ ಬೆಳಕಿಗೆ ಬಂದಿದೆ. 

Tap to resize

Latest Videos

ಸುಮಾರು 20 ವರ್ಷಗಳಿಂದ ಕ್ರೀಡಾ ಇಲಾಖೆಯ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಕೋಚ್‌ಗಳು, ಯಾವುದೋ ಜಿಲ್ಲೆಗೆ ನಿಯುಕ್ತಿಗೊಂಡಿದ್ದರೆ, ಇನ್ಯಾವುದೋ ಜಿಲ್ಲೆಯಲ್ಲಿ ಇದ್ದುಕೊಂಡು ಮಾಸಿಕ ವೇತನ ಪಡೆಯುತ್ತಿದ್ದಾರೆ. ಕೆಲವೊಂದು ಕಡೆ ಆಯಾ ಕ್ರೀಡೆಗೆ ಹಾಸ್ಟೆಲ್‌ನ ಮಕ್ಕಳು ಯಾರು ಇಲ್ಲ. ಆದರೂ ಕೋಚ್‌ಗಳು ಸರ್ಕಾರಿ ವೇತನ ಪಡೆಯುತ್ತಿದ್ದಾರೆ ಇದು ಕಳೆದ 20 ವರ್ಷಗಳಿಂದ ಸರಾಗವಾಗಿ ನಡೆದುಕೊಂಡುಬಂದಿದೆ. ಕ್ರೀಡಾ ಇಲಾಖೆಯಲ್ಲಿ ಯಾವುದೇ ಖಾಯಂ ಕೋಚ್‌ಗಳಿಲ್ಲ. ಈ ಹಿಂದೆ 1999-2000 ರ ಅವಧಿಯಲ್ಲಿ 42 ಕೋಚ್‌ಗಳು, ನಂತರ 2004ರ ಮುನ್ನ ಮತ್ತೆ 42 ಕೋಚ್‌ಗಳನ್ನು ಅನಿರ್ದಿಷ್ಟಾವಧಿ ಗುತ್ತಿಗೆ ಆಧಾರದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ನೇಮಕ ಮಾಡಲಾಯಿತು. 84 ಕೋಚ್‌ಗಳ ಪೈಕಿ ಐವರು ಕೋಚ್‌ಗಳು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಸದ್ಯ ಒಟ್ಟಾರೆ 79 ಕೋಚ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ 48 ಕೋಚ್‌ಗಳು ಸರಿಯಾದ ಜಿಲ್ಲೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 31 ತರಬೇತುದಾರರು ಅವರಿಗೆ ಸಂಬಂಧಿಸಿದ ಕ್ರೀಡೆ ಆ ಜಿಲ್ಲೆಯಲ್ಲಿ ಇರದಿದ್ದರೂ ಸುಮಾರು 20 ವರ್ಷಗಳಿಂದ ಕ್ರೀಡಾ ಇಲಾಖೆಯ ಕೋಚ್ ಹೆಸರಲ್ಲಿ ಮಾಸಿಕ ವೇತನ ಪಡೆಯುತ್ತಿದ್ದಾರೆ. ಈ ಮೂಲಕ ಕ್ರೀಡಾ ಇಲಾಖೆಗೆ ಪ್ರತಿ ತಿಂಗಳು ಲಕ್ಷಾಂತರ ರು.ಗಳನ್ನು ನಷ್ಟ ಮಾಡುತ್ತಿದ್ದಾರೆ ಎಂದು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿ ಯೊಬ್ಬರು ‘ಕನ್ನಡಪ್ರಭ’ ಕ್ಕೆ ಮಾಹಿತಿ ನೀಡಿದರು. 

ಇದೇ ಕಾರಣಕ್ಕೆ ರಹಾನೆ ಇಷ್ಟ; ಕಾಂಗರೂ ಕೇಕ್ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ!

ಬೆಂಗಳೂರು ನಗರದ ಕ್ರೀಡಾ ಹಾಸ್ಟೆಲ್‌ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯಿಲ್ಲ. ಆದರೂ ಇಲಾಖೆಯ ಬ್ಯಾಡ್ಮಿಂಟನ್ ಕೋಚ್ ಒಬ್ಬರು ಕಾರ್ಯನಿರ್ವಹಿಸುತ್ತಿ ದ್ದಾರೆ. ಕ್ರೀಡಾ ಇಲಾಖೆಯಲ್ಲಿ ಕ್ರಿಕೆಟ್ ಹಾಗೂ ವೇಟ್ ಲಿಫ್ಟಿಂಗ್ ಕ್ರೀಡೆಗಳಿಗೆ ರಾಜ್ಯದಲ್ಲಿ ಎಲ್ಲಿಯೂ ಮಕ್ಕಳಿಲ್ಲ. ಆದರೂ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಇಲಾಖೆಯ ಕ್ರಿಕೆಟ್ ಕೋಚ್‌ಗಳಿದ್ದು, ವೇತನ ಪಡೆಯುತ್ತಿದ್ದಾರೆ. ಅದರಂತೆ ಬೆಳಗಾವಿ, ಮಂಗಳೂರಿನಲ್ಲಿ ವೇಟ್ ಲಿಫ್ಟಿಂಗ್ ಕೋಚ್ ಇಲಾಖೆಯ ಸಂಬಳಕ್ಕೆ ಖಾಯಂ ಆಗಿದ್ದಾರೆ. ಬೆಳಗಾವಿಯಲ್ಲಿ ಈಜು ಸ್ಪರ್ಧೆಗೆ ಹಾಸ್ಟೆಲ್ ಇಲ್ಲ. ಇಲ್ಲಿಯೂ ಒಬ್ಬರು ಇಲಾಖೆಯ ಈಜು ತರಬೇತುದಾರಿದ್ದಾರೆ. ಕುಂದಾನಗರಿಯಲ್ಲಿ ಬಾಸ್ಕೆಟ್‌ಬಾಲ್ ಇಲ್ಲದಿದ್ದರೂ ಇಲಾಖೆಯ ಕೋಚ್ ಇರುವುದಂತು ಸತ್ಯ. ಬೆಂಗಳೂರು ಗ್ರಾಮಾಂತರದಲ್ಲಿ ಕ್ರೀಡಾ ಹಾಸ್ಟೆಲ್ ಇಲ್ಲ. ಆದರೂ ಅಲ್ಲಿ ಅಥ್ಲೆಟಿಕ್ಸ್ ಕೋಚ್ ಇದ್ದಾರೆ. ಬೆಂಗ್ಳೂರಿನಲ್ಲಿ ಜಿಮ್ನಾಸ್ಟಿಕ್ಸ್, ಜುಡೋ ಕ್ರೀಡೆಗೆ ಕ್ರೀಡಾ ಹಾಸ್ಟೆಲ್‌ನಲ್ಲಿ ಯಾವುದೇ ಮಕ್ಕಳಿಲ್ಲ. ಆದರೂ ಇಲ್ಲಿ ಜಿಮ್ನಾಸ್ಟಿಕ್ಸ್, ಮತ್ತು ಜುಡೋಗೆ ಇಲಾಖೆಯ ಕೋಚ್‌ಗಳಿದ್ದಾರೆ. ಲಾನ್ ಟೆನಿಸ್‌ನಲ್ಲಿ ಕೂಡಾ ಇದೇ ಕಥೆ, ಯಾವುದೇ ಮಕ್ಕಳು ಹಾಸ್ಟೆಲ್‌ನಲ್ಲಿ ಲಾನ್ ಟೆನಿಸ್ ಅಭ್ಯಾಸ ಮಾಡಲ್ಲ. ಆದರೂ ಇಲಾಖೆಯ ಕೋಚ್ ಒಬ್ಬರು ಪ್ರತಿ ತಿಂಗಳು ವೇತನ ಪಡೆಯುತ್ತಿದ್ದಾರೆ. 

ಬೆಂಗಳೂರಿನ ವಿದ್ಯಾನಗರ ಕ್ರೀಡಾಂಗಣದಲ್ಲಿ ವಾಲಿಬಾಲ್ ಕ್ರೀಡೆಗೆ ಕೇವಲ 7 ಜನ ಕ್ರೀಡಾಪಟುಗಳಿದ್ದಾರೆ. ಇವರಿಗೆ ತರಬೇತಿ ನೀಡಲು ಇಬ್ಬರು ಕೋಚ್‌ಗಳನ್ನು ನಿಯುಕ್ತಿಗೊಳಿಸಲಾಗಿದೆ. ಬಳ್ಳಾರಿಯಲ್ಲಿ ಅಥ್ಲೆಟಿಕ್ಸ್ ಕ್ರೀಡೆಗೆ ಹಾಸ್ಟೆಲ್‌ನ ಯಾವುದೇ ಮಕ್ಕಳಿಲ್ಲ. ಇಲ್ಲಿ ಮಹಿಳಾ ಕೋಚ್ ಒಬ್ಬರು ಹೊಸಪೇಟೆಯಲ್ಲಿದ್ದುಕೊಂಡು ಇಲಾಖೆಯ ಮಾಸಿಕ ವೇತನ ಎಣಿಸುತ್ತಿದ್ದಾರೆ. ಧಾರವಾಡದಲ್ಲಿ ಸೈಕ್ಲಿಂಗ್, ವಾಲಿಬಾಲ್ ಕ್ರೀಡೆ ಇಲ್ಲ. ಸೈಕ್ಲಿಂಗ್‌ಗೆ ಒಬ್ಬರು ಮತ್ತು ವಾಲಿಬಾಲ್‌ಗೆ ಇಬ್ಬರು ಕೋಚ್‌ಗಳು ನಿಯುಕ್ತಿಗೊಂಡಿದ್ದು ವೇತನ ಪಡೆಯುತ್ತಿದ್ದಾರೆ. ಹಾಗೇ ಹಾಸನದಲ್ಲಿ ಖೋಖೋ ಕ್ರೀಡೆಯಿಲ್ಲ. ಇಲಾಖೆಯ ಖೋಖೋ ಕೋಚ್ ಇದ್ದಾರೆ. ಹಾಸನದಲ್ಲಿ ಬಾಸ್ಕೆಟ್‌ಬಾಲ್ ಹಾಗೂ ಜಿಮ್ನಾಸ್ಟಿಕ್‌ಸ್ ಕೂಡಾ ಇಲ್ಲ. ಆದರೂ ಇಲ್ಲಿ ಎರಡೂ ಕ್ರೀಡೆಗಳಿಗೆ ಇಲಾಖೆಯ ಕೋಚ್ ಇದ್ದಾರೆ. ಹಾವೇರಿಯಲ್ಲಿ ವಾಲಿಬಾಲ್ ಕ್ರೀಡೆಗೆ ಹಾಸ್ಟೆಲ್‌ನ ಯಾವುದೇ ಮಕ್ಕಳಿಲ್ಲ. ಆದರೂ ಇಲ್ಲಿ ವಾಲಿಬಾಲ್ ಕೋಚ್ ಇದ್ದಾರೆ. ಕಾರವಾರದಲ್ಲಿ ವಾಲಿಬಾಲ್ ಕೋಚ್ ಆಗಿರುವ ಇಲಾಖೆಯ ತರಬೇತುದಾರರೊಬ್ಬರು ಮತ್ತೊಂದು ನಗರದಲ್ಲಿದ್ದುಕೊಂಡು ವೇತನ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ಹಾಕಿ ಕ್ರೀಡೆಗೆ ಹಾಸ್ಟೆಲ್‌ನ ಯಾವುದೇ ಮಕ್ಕಳಿಲ್ಲ. ಆದರೂ ಅಲ್ಲಿ ಮಹಿಳಾ ಕೋಚ್‌ವೊಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರಿನಲ್ಲಿ ಜಿಮ್ನಾಸ್ಟಿಕ್ಸ್‌ಗೆ 15 ಮಕ್ಕಳಿದ್ದಾರೆ. ಇವರಿಗೆ ಮೂವರು ಕೋಚ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ತುಮಕೂರಿನಲ್ಲಿ ಕಬಡ್ಡಿ ಕ್ರೀಡೆಗೆ ಹಾಸ್ಟೆಲ್‌ನ ಯಾವುದೇ ಮಕ್ಕಳಿಲ್ಲ. ಆದರೂ ಇಲ್ಲಿ ಇಲಾಖೆಯ ಕಬಡ್ಡಿ ಕೋಚ್ ಒಬ್ಬರು ಕಾರ್ಯನಿರ್ವಹಿಸುತ್ತಿದ್ದು ವೇತನ ಪಡೆಯುತ್ತಿದ್ದಾರೆ.  

ರಾಜ್ಯದಲ್ಲಿ ಎಷ್ಟೋ ಮಂದಿ ಪ್ರತಿಭಾನ್ವಿತ ಕೋಚ್‌ಗಳಿಗೆ ಮಾಡಲು ಕೆಲಸವಿಲ್ಲ. ಆದರೆ ಈ ಹಿಂದೆ ಅನಿರ್ದಿಷ್ಟಾವಧಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಬಹುತೇಕ ತರಬೇತುದಾರರು ಮಕ್ಕಳಿಗೆ ಕೋಚಿಂಗ್ ನೀಡದೆ, ಕರ್ತವ್ಯಲೋಪ ಎಸಗುತ್ತಿದ್ದಾರೆ. ಪ್ರತಿ ತಿಂಗಳು ಇಲಾಖೆಯ ಕೋಚ್ ಹೆಸರಲ್ಲಿ ಮಾಸಿಕ ವೇತನ ಪಡೆಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ. ಆದರೂ ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿಜಕ್ಕೂ ಬೇಸರ ತಂದಿದೆ.  

click me!