Pro Kabaddi League: ಫೈನಲ್‌ಗೆ ಜೈಪುರ ಪಿಂಕ್ ಪ್ಯಾಂಥರ್ಸ್‌, ಪುಣೇರಿ ಪಲ್ಟಾನ್!

By Kannadaprabha News  |  First Published Dec 16, 2022, 8:12 AM IST

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದ ಬೆಂಗಳೂರು ಬುಲ್ಸ್‌, ತಮಿಳ್ ತಲೈವಾಸ್
ಫೈನಲ್‌ಗೆ ಲಗ್ಗೆಯಿಟ್ಟ ಜೈಪುರ ಪಿಂಕ್‌ ಪ್ಯಾಂಥರ್ಸ್‌, ಪುಣೇರಿ ಪಲ್ಟಾನ್
ಚೊಚ್ಚಲ ಬಾರಿಗೆ ಪ್ಲೇ-ಆಫ್‌ ಪ್ರವೇಶಿಸಿ ಕಪ್‌ ಗೆಲ್ಲುವ ಕನಸು ಕಾಣುತ್ತಿದ್ದ ತಲೈವಾಸ್‌ಗೆ ನಿರಾಸೆ


ಮುಂಬೈ(ಡಿ.16): 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ಹಾಗೂ ಪುಣೇರಿ ಪಲ್ಟಾನ್‌ ತಂಡಗಳು ಫೈನಲ್‌ಗೆ ಲಗ್ಗೆಯಿಟ್ಟಿವೆ. ಇನ್ನು ಬೆಂಗಳೂರು ಬುಲ್ಸ್‌ ಹಾಗೂ ತಮಿಳ್ ತಲೈವಾಸ್ ತಂಡದ ಫೈನಲ್‌ಗೇರುವ ಅವಕಾಶ ಭಗ್ನವಾಗಿದೆ

ಬೆಂಗಳೂರು ಗೂಳಿಗಳನ್ನು ಬೇಟೆಯಾಡಿದ ಪ್ಯಾಂಥ​ರ್ಸ್!

Tap to resize

Latest Videos

ರೈಡಿಂಗ್‌, ಡಿಫೆನ್ಸ್‌ ಎರಡರಲ್ಲೂ ಹೀನಾಯ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ 9ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದೆ. ಗುರುವಾರ ಜೈಪುರ ಪಿಂಕ್‌ಪ್ಯಾಂಥ​ರ್‍ಸ್ ವಿರುದ್ಧ ಬುಲ್ಸ್‌ 29-49 ಅಂಕಗಳ ಹೀನಾಯ ಸೋಲುಕಂಡಿತು. ಇದರೊಂದಿಗೆ 3ನೇ ಬಾರಿ ಫೈನಲ್‌ ಪ್ರವೇಶಿಸುವ ಬುಲ್ಸ್‌ ಕನಸು ಭಗ್ನಗೊಂಡರೆ, ಚೊಚ್ಚಲ ಆವೃತ್ತಿ ಚಾಂಪಿಯನ್‌ ಜೈಪುರ 3ನೇ ಫೈನಲ್‌ಗೆ ಲಗ್ಗೆ ಇಟ್ಟಿತು.

14ನೇ ನಿಮಿಷದಲ್ಲಿ ಬುಲ್ಸ್‌ ಮೊದಲ ಬಾರಿಗೆ ಆಲೌಟ್‌ ಆಗಿ 10-18ರ ಹಿನ್ನಡೆ ಅನುಭವಿಸಿತು. 24-15ರ ಮುನ್ನಡೆಯೊಂದಿಗೆ ಮೊದಲಾರ್ಧ ಮುಕ್ತಾಯಗೊಳಿಸಿದ ಪ್ಯಾಂಥ​ರ್‍ಸ್, ದ್ವಿತೀಯಾರ್ಧದಲ್ಲಿ 5 ನಿಮಿಷದಲ್ಲಿ ಬೆಂಗಳೂರನ್ನು 2 ಬಾರಿ ಆಲೌಟ್‌ ಮಾಡಿತು. 28ನೇ ನಿಮಿಷದಲ್ಲಿ 19-39ರ ಹಿನ್ನಡೆಗೆ ಒಳಗಾದ ಬುಲ್ಸ್‌ ಮತ್ತೆ ಮೇಲೇಳಲು ಆಗಲಿಲ್ಲ. ಪಂದ್ಯದಲ್ಲಿ ಬುಲ್ಸ್‌ನ ಒಟ್ಟು 17 ಟ್ಯಾಕಲ್‌ ಯತ್ನಗಳು ವಿಫಲವಾದವು. ಜೈಪುರದ ಅಜಿತ್‌ 13 ರೈಡ್‌ ಅಂಕ ಗಳಿಸಿದರೆ, ಸಾಹುಲ್‌ ಕುಮಾರ್‌ 10 ಟ್ಯಾಕಲ್‌ ಅಂಕ ಸಂಪಾದಿಸಿ ತಂಡಕ್ಕೆ ದೊಡ್ಡ ಗೆಲುವು ತಂದುಕೊಟ್ಟರು.

'ಮುಂದೊಂದು ದಿನ ಖಂಡಿತಾ ದೊಡ್ಡ ಆಲ್ರೌಂಡರ್‌ ಆಗ್ತೀಯಾ..' ಸಚಿನ್‌ ಪುತ್ರನಿಗೆ ಯುವರಾಜ್‌ ತಂದೆಯ ಸಂದೇಶ!

ಟರ್ನಿಂಗ್‌ ಪಾಯಿಂಟ್‌

ದ್ವಿತೀಯಾರ್ಧದಲ್ಲಿ ಪುಟಿದೇಳಲು ಹೆಸರುವಾಸಿಯಾಗಿದ್ದ ಬುಲ್ಸ್‌ 5 ನಿಮಿಷದಲ್ಲಿ 2 ಬಾರಿ ಆಲೌಟ್‌ ಆಗಿದ್ದೇ ಸೋಲಿಗೆ ಪ್ರಮುಖ ಕಾರಣ. ಪಂದ್ಯದಲ್ಲಿ ಭರತ್‌ರನ್ನು ಒಟ್ಟು 7 ಬಾರಿ ಔಟ್‌ ಮಾಡಿ ಅವರನ್ನು ಬಹುತೇಕ ಸಮಯ ಹೊರಗಿಡುವಲ್ಲಿ ಯಶಸ್ವಿಯಾಗಿದ್ದರಿಂದ ಪ್ಯಾಂಥ​ರ್‍ಸ್ಗೆ ಲಾಭವಾಯಿತು.

ಚೊಚ್ಚಲ ಫೈನಲ್‌ಗೆ ಪಲ್ಟನ್‌

ಮುಂಬೈ: ಕೊನೆ 6 ನಿಮಿಷಗಳಲ್ಲಿ ಅಬ್ಬರದ ಪ್ರದರ್ಶನ ತೋರಿದ ಪುಣೇರಿ ಪಲ್ಟನ್‌ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚೊಚ್ಚಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗುರುವಾರ ತಮಿಳ್‌ ತಲೈವಾಸ್‌ ವಿರುದ್ಧದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಪುಣೇರಿ 39-37 ಅಂಕಗಳ ರೋಚಕ ಗೆಲುವು ಸಾಧಿಸಿತು. ಚೊಚ್ಚಲ ಬಾರಿಗೆ ಪ್ಲೇ-ಆಫ್‌ ಪ್ರವೇಶಿಸಿ ಕಪ್‌ ಗೆಲ್ಲುವ ಕನಸು ಕಾಣುತ್ತಿದ್ದ ತಲೈವಾಸ್‌ಗೆ ನಿರಾಸೆಯಾಗಿದೆ.

13ನೇ ನಿಮಿಷದಲ್ಲಿ ಪುಣೆಯನ್ನು ಆಲೌಟ್‌ ಮಾಡಿದ ತಲೈವಾಸ್‌ 15-9ರ ಮುನ್ನಡೆ ಪಡೆಯಿತು. ಮೊದಲಾರ್ಧದ ಮುಕ್ತಾಯಕ್ಕೆ 15-21ರ ಮುನ್ನಡೆ ಕಾಯ್ದುಕೊಂಡ ತಲೈವಾಸ್‌, ದ್ವಿತೀಯಾರ್ಧದ ಆರಂಭದಲ್ಲಿ ಉತ್ತಮ ಆಟವಾಡಿತು. ಆದರೆ 27ನೇ ನಿಮಿಷದಲ್ಲಿ ತಲೈವಾಸ್‌ ಅನ್ನು ಆಲೌಟ್‌ ಮಾಡಿದ ಪುಣೆ ಅಂತರವನ್ನು 23-24ಕ್ಕೆ ಇಳಿಸಿತು. 24ನೇ ನಿಮಿಷದಲ್ಲಿ ಮೊದಲ ಬಾರಿಗೆ ಮುನ್ನಡೆ ಪಡೆದ ಪುಣೆ, 37ನೇ ನಿಮಿಷದಲ್ಲಿ ಮತ್ತೊಮ್ಮೆ ಎದುರಾಳಿಯನ್ನು ಆಲೌಟ್‌ ಮಾಡಿ 5 ಅಂಕ ಮುನ್ನಡೆ ಗಳಿಸಿತು.

ಕೊನೆ ಎರಡು ನಿಮಿಷಗಳಲ್ಲಿ ಪುಣೆ ತಲೈವಾಸ್‌ ತಿರುಗಿಬೀಳದಂತೆ ಎಚ್ಚರ ವಹಿಸಿತು. ಪಂಕಜ್‌ ಮೋಹಿತೆ 14 ರೈಡ್‌ ಅಂಕ ಗಳಿಸಿ ಪುಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟರ್ನಿಂಗ್‌ ಪಾಯಿಂಟ್‌

ಕೊನೆ 15 ನಿಮಿಷದಲ್ಲಿ ಪುಣೆ ಲೆಕ್ಕಾಚಾರ ಕೈಹಿಡಿತು. ಪ್ರಮುಖವಾಗಿ 37ನೇ ನಿಮಿಷದಲ್ಲಿ ತಲೈವಾಸ್‌ ಅನ್ನು ಆಲೌಟ್‌ ಮಾಡಿ 5 ಅಂಕ ಮುನ್ನಡೆ ಪಡೆದಿದ್ದು ಪುಣೆ ಗೆಲುವಿಗೆ ಕಾರಣ.

click me!