
ನವದೆಹಲಿ(ಫೆ.25): ಭಾರತದ ಅಗ್ರ ಕುಸ್ತಿಪಟುಗಳು ಈ ವರ್ಷದ 2 ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಗೈರಾಗಿರುವುದಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ‘ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸಿದ ಬಳಿಕವೂ ಅವರು ಸ್ಪರ್ಧಿಸಲು ನಿರಾಕರಿಸುತ್ತಿರುವುದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಅವರನ್ನು ಸ್ಪರ್ಧಿಸುವಂತೆ ಒತ್ತಡ ಹೇರಲು ಸಾಧ್ಯವಿಲ್ಲ. ಆದರೆ ಟೂರ್ನಿಗಳನ್ನು ತಪ್ಪಿಸಿಕೊಳ್ಳಬಾರದು’ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಭಾರತೀಯ ಕುಸ್ತಿ ಫೆಡರೇಶನ್ ಜೊತೆಗಿನ ಸಂಘರ್ಷದಿಂದಾಗಿ ವಿನೇಶ್ ಪೋಗಟ್, ಭಜರಂಗ್ ಪೂನಿಯಾ, ರವಿ ದಹಿಯಾ, ಅನ್ಶು ಮಲಿಕ್ ಸೇರಿದಂತೆ ಪ್ರಮುಖರು ಜಾಗ್ರೆಬ್ ಮತ್ತು ಅಲೆಕ್ಸಾಂಡ್ರಿಯಾ ಕೂಟಗಳಲ್ಲಿ ಪಾಲ್ಗೊಂಡಿಲ್ಲ.
ಭಾರತದಿಂದ ಏಷ್ಯಾ ಕುಸ್ತಿ ಪಂದ್ಯಾವಳಿ ಸ್ಥಳಾಂತರ!
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳ ಆರೋಪದ ತನಿಖೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಾ.28ರಿಂದ ಏ.2ರ ವರೆಗೂ ಇಲ್ಲಿ ನಡೆಯಬೇಕಿದ್ದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಸ್ಥಳಾಂತರಿಸಲಾಗಿದೆ. ಕುಸ್ತಿಯ ಜಾಗತಿಕ ಮಟ್ಟದ ಸಂಸ್ಥೆಯಾದ ಯುನೈಟೆಡ್ ವಿಶ್ವ ಕುಸ್ತಿ(ಯುಡಬ್ಲ್ಯುಡಬ್ಲ್ಯು) ಈ ವಿಷಯವನ್ನು ಡಬ್ಲ್ಯುಎಫ್‌ಐನ ದೈನಂದಿನ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ಮೇಲುಸ್ತುವಾರಿ ಸಮಿತಿಗೆ ತಿಳಿಸಿದೆ ಎಂದು ತಿಳಿದುಬಂದಿದೆ. ಪಂದ್ಯಾವಳಿಯನ್ನು ಸ್ಥಳಾಂತರಗೊಳಿಸದಂತೆ ಡಬ್ಲ್ಯುಎಫ್‌ಐ ಜಾಗತಿಕ ಮಂಡಳಿಯ ಮನವೊಲಿಸಲು ಪ್ರಯತ್ನವನ್ನೂ ಮಾಡಲಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.
ಭಾರತ ಮಹಿಳಾ ಕ್ರಿಕೆಟ್ ತಂಡವು ನಾಕೌಟ್‌ನಲ್ಲಿ ಮುಗ್ಗರಿಸಲು ಕಾರಣವೇನು..? ಇಲ್ಲಿವೆ ನೋಡಿ ಇಂಟ್ರೆಸ್ಟಿಂಗ್ ಸಂಗತಿ
ತನಿಖೆಗೆ ಮತ್ತೆರಡು ವಾರ ಕಾಲಾವಕಾಶ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷನ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ತನಿಖೆ ನಡೆಸಲು ಮೇಲುಸ್ತುವಾರಿ ಸಮಿತಿಗೆ ಕ್ರೀಡಾ ಸಚಿವಾಲಯ ಇನ್ನೆರಡು ವಾರಗಳ ಕಾಲಾವಕಾಶ ನೀಡಿದೆ. ಜ.23ರಂದು ಬಾಕ್ಸಿಂಗ್ ದಿಗ್ಗಜೆ ಮೇರಿ ಕೋಮ್ ನೇತೃತ್ವದ ಸಮಿತಿಯನ್ನು ರಚಿಸಿ ತನಿಖೆಯನ್ನು ಪೂರ್ಣಗೊಳಿಸಲು ಒಂದು ತಿಂಗಳು ಸಮಯಾವಕಾಶ ನೀಡಲಾಗಿತ್ತು. ಇದೀಗ ಸಮಿತಿಯು ಹೆಚ್ಚುವರಿ ಸಮಯ ಕೇಳಿದ್ದು, ಮಾ.9ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕೋಚ್ ಪಾರ್ಕ್ರನ್ನು ಕೈಬಿಟ್ಟ ಪಿ.ವಿ.ಸಿಂಧು
ನವದೆಹಲಿ: ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತಮ್ಮ ಬಹುಕಾಲದ ಕೋಚ್, ದ.ಕೊರಿಯಾದ ಪಾರ್ಕ್ ಟಾಯ್ ಸಾಂಗ್ ಅವರಿಂದ ದೂರವಾಗಿದ್ದಾರೆ. ಇತ್ತೀಚಿನ ಟೂರ್ನಿಗಳಲ್ಲಿ ಸಿಂಧು ಕಳಪೆ ಪ್ರದಶರ್ನ ತೋರಿದ್ದು, ಇದರ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಾರ್ಕ್ ತಿಳಿಸಿದ್ದಾರೆ. ‘ಸಿಂಧು ನನ್ನ ಬದಲು ಹೊಸ ಕೋಚ್ ಹುಡುಕುತ್ತಿದ್ದಾರೆ. ಅವರ ನಿರ್ಧಾರ ಗೌರವಿಸಿ ಹುದ್ದೆ ತೊರೆಯುತ್ತಿದ್ದೇನೆ’ ಎಂದಿದ್ದಾರೆ. ಪಾರ್ಕ್ ಕೋಚಿಂಗ್ ಅವಧಿಯಲ್ಲೇ ಸಿಂಧು ಟೋಕಿಯೋ ಒಲಿಂಪಿಕ್ಸ್ ಕಂಚು, ಕಾಮನ್ವೆಲ್ತ್ ಗೇಮ್ಸ್ ಚಿನ್ನ ಗೆದ್ದಿದ್ದರು.
ಶೂಟಿಂಗ್: ಅನೀಶ್ಗೆ ಕಂಚು
ಕೈರೋ: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. ಗುರುವಾರ ಪುರುಷರ 25 ಮೀ. ರಾರಯಪಿಡ್ ಫೈರ್ ಪಿಸ್ತೂಲ್ನಲ್ಲಿ ಅನೀಶ್ ಭನ್ವಾಲಾ ಕಂಚಿನ ಪದಕ ಜಯಿಸಿದರು. ಟೂರ್ನಿಯಲ್ಲಿ ಈವರೆಗೂ ಭಾರತ 4 ಚಿನ್ನ ಸೇರಿ ಒಟ್ಟು 7 ಪದಕ ಜಯಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.