* ವರ್ಷದಲ್ಲೇ ಎರಡನೇ ಬಾರಿಗೆ ಮ್ಯಾಗ್ನಸ್ ಕಾಲ್‌ರ್‍ಸನ್‌ರನ್ನು ಸೋಲಿಸಿದ ಪ್ರಜ್ಞಾನಂದ
* ವಿಶ್ವದ ನಂ.1 ಚೆಸ್ ಪಟು ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸನ್
* ಕಾಲ್‌ರ್‍ಸನ್‌ರನ್ನು 3 ತಿಂಗಳ ಅಂತರದಲ್ಲಿ 2ನೇ ಬಾರಿ ಸೋಲಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ
ಚೆನ್ನೈ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ (R Praggnanandhaa) ಅವರು ಐದು ಬಾರಿ ಚೆಸ್ ವಿಶ್ವ ಚಾಂಪಿಯನ್, ವಿಶ್ವ ನಂ.1 ನಾರ್ವೆಯ ಮ್ಯಾಗ್ನಸ್ ಕಾಲ್‌ರ್‍ಸನ್‌ರನ್ನು (Magnus Carlsen) 3 ತಿಂಗಳ ಅಂತರದಲ್ಲಿ 2ನೇ ಬಾರಿ ಸೋಲಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಫೆಬ್ರವರಿಯಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರಾರಯಪಿಡ್ ಚೆಸ್ ಟೂರ್ನಿಯಲ್ಲಿ ಕಾಲ್‌ರ್‍ಸನ್‌ರನ್ನು ಸೋಲಿಸಿದ್ದ 16 ವರ್ಷದ ಪ್ರಜ್ಞಾನಂದ, ಶುಕ್ರವಾರ ಚೆಸ್ಸೇಬಲ್ ಮಾಸ್ಟರ್ಸ್ ಆನ್‌ಲೈನ್ ರ‍್ಯಾಪಿಡ್ ಚೆಸ್ ಟೂರ್ನಿಯ 5ನೇ ಸುತ್ತಿನಲ್ಲೂ ಅವರನ್ನು ಮಣಿಸಿದರು.
40 ನಡೆಗಳ ಬಳಿಕ ಪಂದ್ಯ ಡ್ರಾದತ್ತ ಮುಖ ಮಾಡಿದ್ದರೂ ಕಾಲ್‌ರ್‍ಸನ್ ಪಂದ್ಯ ತೊರೆದು ಅಚ್ಚರಿ ಮೂಡಿಸಿದರು. ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಕಿರಿಯರ ವಿಶ್ವ ಚಾಂಪಿಯನ್ ಪಿ.ಹರಿಕೃಷ್ಣ ಬಳಿಕ ನಾರ್ವೆಯ ದಿಗ್ಗಜ ಆಟಗಾರನ ವಿರುದ್ಧ ಗೆದ್ದ ಭಾರತದ 3ನೇ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿರುವ ಪ್ರಜ್ಞಾನಂದ ಕಳೆದ ತಿಂಗಳು ಲಾ ರೋಡ ಓಪನ್‌ನಲ್ಲಿ 3ನೇ ಸ್ಥಾನ ಪಡೆದಿದ್ದರು.
ಮಿನಿ ಒಲಿಂಪಿಕ್ಸ್: 2ನೇ ಚಿನ್ನಕ್ಕೆ ಮುತ್ತಿಟ್ಟಮೋನಿಶ್, ಸ್ವರಾ
ಬೆಂಗಳೂರು: 2ನೇ ಆವೃತ್ತಿ ಕರ್ನಾಟಕ ಮಿನಿ ಒಲಿಂಪಿಕ್ಸ್‌ನಲ್ಲಿ ಬೆಂಗಳೂರಿನ ಮೋನಿಶ್ ಚಂದ್ರಶೇಕರ್ ಹಾಗೂ ಬೆಳಗಾವಿಯ ಸ್ವರಾ ಸಂತೋಷ್ 2ನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 100 ಮೀ. ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ ಇವರಿಬ್ಬರೂ ಶನಿವಾರ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ 200 ಮೀ. ಸ್ಪರ್ಧೆಯಲ್ಲೂ ಚಿನ್ನ ತಮ್ಮದಾಗಿಸಿಕೊಂಡರು.
ಬಾಲಕರ ವಿಭಾಗದಲ್ಲಿ ಧಾರವಾಡದ ಸಯ್ಯದ್ ಸಬೀರ್ ಬೆಳ್ಳಿ, ಉ.ಕನ್ನಡದ ಸಾಯಿನಾಥ್ ಕಂಚು ಗೆದ್ದರೆ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಸುಚಿತ್ರಾ ಹಾಗೂ ಮೈಸೂರಿನ ಅಪೇಕ್ಷಾ ಕ್ರಮವಾಗಿ ಬೆಳ್ಳಿ, ಕಂಚು ಪಡೆದರು. ಬಾಲಕರ ಲಾಂಗ್ ಜಂಪ್‌ನಲ್ಲಿ ಚಾಮರಾಜನಗರದ ಮನ್ವಿತ್, ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಅಪೇಕ್ಷಾ ಸ್ವರ್ಣಕ್ಕೆ ಮುತ್ತಿಟ್ಟರು. ಡಿಸ್ಕಸ್ ಎಸೆತದಲ್ಲಿ ಉಡುಪಿಯ ಅನುರಾಗ್, ಮೈಸೂರಿನ ವರ್ಷಾ ಗೌಡ ಕ್ರಮವಾಗಿ ಬಾಲಕ, ಬಾಲಕಿಯರ ವಿಭಾಗದಲ್ಲಿ ಬಂಗಾರ ಗೆದ್ದರು. 4*100 ಮೀ. ರಿಲೇ ಬಾಲಕರ ವಿಭಾಗದಲ್ಲಿ ಧಾರವಾಡ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಚಾಂಪಿಯನ್ ಆಯಿತು.
ಕಿವುಡರ ಒಲಿಂಪಿಕ್ಸ್ ಸಾಧಕರಿಗೆ ಪ್ರಧಾನಿ ನರೇಂದ್ರ ಮೋದಿ ಔತಣ
ಬಾಸ್ಕೆಟ್‌ಬಾಲ್ ಬಾಲಕರ ವಿಭಾಗದಲ್ಲಿ ಎಂಎನ್‌ಕೆ ರಾವ್ ತಂಡ ಚಿನ್ನ ಗೆದ್ದರೆ, ಎಚ್‌ಬಿಆರ್ ಕ್ಲಬ್ ಬೆಳ್ಳಿ, ಜಯನಗರ ಕ್ಲಬ್ ಕಂಚು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಮೌಂಟ್ಸ್ ಕ್ಲಬ್ ತಂಡ ಪ್ರಶಸ್ತಿ ಗೆದ್ದರೆ, ಎಂಸಿಎಚ್‌ಎಸ್ ಬೆಳ್ಳಿ, ಕೋರಮಂಗಲ ಕ್ಲಬ್ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಇಂದು ಕ್ರೀಡಾಕೂಟಕ್ಕೆ ತೆರೆ
ಮೇ 16ರಂದು ಆರಂಭಗೊಂಡಿದ್ದ 2ನೇ ಆವೃತ್ತಿಯ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾನುವಾರ ತೆರೆ ಬೀಳಲಿದೆ. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ತೋಟಗಾರಿಕೆ ಸಚಿವ ಎನ್.ಮುನಿರತ್ನ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.
90 ಮೀ. ಎಸೆತ ಮುಂದಿನ ಗುರಿ: ನೀರಜ್ ಚೋಪ್ರಾ
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಚಿನ್ನ ವಿಜೇತ ಜಾವೆಲಿನ ಎಸೆತಗಾರ ನೀರಜ್ ಚೋಪ್ರಾ 90 ಮೀ. ದೂರಕ್ಕೆ ಜಾವೆಲಿನ್ ಎಸೆಯುವುದು ತಮ್ಮ ಮುಂದಿನ ಗುರಿ ಎಂದು ಹೇಳಿದ್ದಾರೆ. ಟರ್ಕಿಯಲ್ಲಿ ಅಭ್ಯಾಸ ನಿರತರಾಗಿರುವ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೂರದ ಎಸೆತದ ಬಗ್ಗೆ ಚಿಂತಿಸಿ ಒತ್ತಡಕ್ಕೆ ಒಳಗಾಗುವುದಿಲ್ಲ. ಆದರೆ 90 ಮೀ. ದೂರಕ್ಕೆ ಎಸೆಯುವುದು ನನ್ನ ಕನಸು. ಇದೇ ವರ್ಷ ಅದನ್ನು ಸಾಧಿಸಲು ಪ್ರಯತ್ನಿಸುತ್ತೇನೆ’ ಎಂದರು.