8 ಬಾರಿ ವಿಂಬಲ್ಡನ್ ಗೆದ್ದಿದ್ದೇನೆ ಎಂದರೂ ಅವರು ನಂಬಲಿಲ್ಲ; ಕುತೂಹಲಕಾರಿ ಸಂಗತಿ ಬಿಚ್ಚಿಟ್ಟ ರೋಜರ್ ಫೆಡರರ್..!

By Naveena K VFirst Published Dec 10, 2022, 10:33 AM IST
Highlights

ದಿಗ್ಗಜ ಟೆನಿಸಿಗ ವಿಂಬಲ್ಡನ್‌ ಕ್ಲಬ್‌ನೊಳಕ್ಕೆ ಫೆಡರರ್‌ಗೇ ಪ್ರವೇಶವಿಲ್ಲ
ಗುರುತಿನ ಚೀಟಿ ತೋರಿಸದಿದ್ದಕ್ಕೆ ಪ್ರವೇಶ ನಿರಾಕರಣೆ
ಅಚ್ಚರಿಯ ಸಂಗತಿಯನ್ನು ವಿವರಿಸಿದ ಸ್ವಿಸ್ ದಂತಕಥೆ ಫೆಡರರ್

ಲಂಡನ್‌(ಡಿ.10): ಟೆನಿಸ್‌ ದಂತಕಥೆ ರೋಜರ್ ಫೆಡರರ್‌ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಸ್ವಿಸ್ ಟೆನಿಸ್‌ ಮಾಂತ್ರಿಕನಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹೀಗಿರುವಾಗ ದಿಗ್ಗಜ ಟೆನಿಸಿಗ ರೋಜರ್‌ ಫೆಡರರ್‌ಗೆ ವಿಂಬಲ್ಡನ್‌ ಕ್ಲಬ್‌ನೊಳಕ್ಕೆ ಪ್ರವೇಶ ನಿರಾಕರಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಈ ವಿಷಯವನ್ನು ಟೀವಿ ಶೋವೊಂದರಲ್ಲಿ ಸ್ವತಃ ಫೆಡರರ್‌ ಹೇಳಿಕೊಂಡಿದ್ದಾರೆ.

ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ ಸ್ಲಾಂ ಇತಿಹಾಸದಲ್ಲಿ 8 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಅತಿಹೆಚ್ಚು ವಿಂಬಲ್ಡನ್ ಗ್ರ್ಯಾನ್‌ ಸ್ಲಾಂ ಜಯಿಸಿದ ಪುರುಷ ಟೆನಿಸಿಗ ಎನ್ನುವ ದಾಖಲೆ ಬರೆದಿರುವ ರೋಜರ್ ಫೆಡರರ್‌ಗೆ ಗುರುತಿನ ಚೀಟಿ ತೋರಿಸದಿದ್ದಕ್ಕೆ ವಿಂಬಲ್ಡನ್ ಕ್ಲಬ್‌ನೊಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ಅಚ್ಚರಿಯ ಘಟನೆಯೊಂದನ್ನು ' ದ ಡೈಲಿ ಶೋ' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ.

ಜಾಹೀರಾತು ಒಪ್ಪಂದದ ಕೆಲಸವನ್ನು ಮುಗಿಸಿ ಜಪಾನ್‌ನಿಂದ ಲಂಡನ್‌ಗೆ ಬಂದಿಳಿದ ಫೆಡರರ್‌, ಸ್ವಿಜರ್‌ಲೆಂಡ್‌ಗೆ ವಿಮಾನ ಹತ್ತಲು ಇನ್ನೂ 2 ಗಂಟೆ ಸಮಯವಿತ್ತಂತೆ. ಈ ವೇಳೆ ಚಹಾ ಕುಡಿಯಲು ವಿಂಬಲ್ಡನ್‌ ಕ್ಲಬ್‌ಗೆ ತೆರಳಿದಾಗ ಮಹಿಳಾ ಭದ್ರತಾ ಸಿಬ್ಬಂದಿಯೊಬ್ಬರು ಕ್ಲಬ್‌ನೊಳಗೆ ಪ್ರವೇಶಿಸಲು ಸದಸ್ಯತ್ವ ಚೀಟಿ ತೋರಿಸುವಂತೆ ಕೇಳಿದ್ದಾರೆ. 

You're welcome any time, 😅

🎥 pic.twitter.com/3XKRS7C6nd

— Wimbledon (@Wimbledon)

‘ನಾನು 8 ಬಾರಿ ವಿಂಬಲ್ಡನ್‌ ಗೆದ್ದಿದ್ದೇನೆ. ನಾನು ಕ್ಲಬ್‌ನ ಸದಸ್ಯ, ಗುರುತಿನ ಚೀಟಿ ಮನೆಯಲ್ಲಿದೆ. ಅಲ್ಲದೇ ಅದನ್ನು ತೋರಿಸಿದರಷ್ಟೇ ಪ್ರವೇಶ ಎಂದು ನನಗೆ ಗೊತ್ತಿರಲಿಲ್ಲ. ಟೂರ್ನಿ ನಡೆಯದ ಸಂದರ್ಭದಲ್ಲಿ ನಾನು ಮೊದಲ ಬಾರಿ ಬಂದಿದ್ದೇನೆ’ ಎಂದು ಫೆಡರರ್‌ ವಿವರಿಸಿದರೂ ಸಿಬ್ಬಂದಿ ಕೇಳಲಿಲ್ಲವಂತೆ. ಕೊನೆಗೆ ವಿಂಬಲ್ಡನ್‌ ಅಧಿಕಾರಿಗಳಿಗೆ ಕರೆ ಮಾಡಿದ ಬಳಿಕ ಅವರೇ ಬಂದು ರೋಜರ್ ಫೆಡರರ್‌ರನ್ನು ಒಳಕ್ಕೆ ಕರೆದೊಯ್ದಿದ್ದಾರೆ.

FIFA World Cup 2022: ವಿಶ್ವಕಪ್‌ನಿಂದ ಬ್ರೆಜಿಲ್‌ ಔಟ್‌, ಪೆನಾಲ್ಟಿ ಕಿಂಗ್‌ ಕ್ರೋವೇಷಿಯಾ ಸೂಪರ್‌ ವಿನ್‌!

20 ಟೆನಿಸ್ ಗ್ರ್ಯಾನ್‌ ಸ್ಲಾಂ ಒಡೆಯ ರೋಜರ್ ಫೆಡರರ್, ಇತ್ತೀಚೆಗಷ್ಟೇ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದರು. ಸಾಂಪ್ರದಾಯಿಕ ಎದುರಾಳಿ ಹಾಗೂ ಆತ್ಮೀಯ ಸ್ನೇಹಿತ ರಾಫೆಲ್ ನಡಾಲ್ ಜತೆಗೂಡಿ ಲೆವರ್ ಕಪ್ ಟೆನಿಸ್‌ ಟೂರ್ನಿಯಲ್ಲಿ ಫೆಡರರ್‌ ಕೊನೆಯ ಬಾರಿಗೆ ಟೆನಿಸ್‌ ಪಂದ್ಯವನ್ನಾಡಿ, ಎರಡೂವರೆ ದಶಕಗಳ ಟೆನಿಸ್ ವೃತ್ತಿಜೀವನಕ್ಕೆ ಗುಡ್‌ ಬೈ ಹೇಳಿದ್ದರು.

ವಿಶ್ವ ನಂ.1 ಆಕ್ಸೆಲ್ಸೆನ್‌ ವಿರುದ್ಧ ಗೆದ್ದ ಪ್ರಣಯ್‌

ಬ್ಯಾಂಕಾಕ್‌: ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯನ್ನು ಭಾರತದ ಎಚ್‌.ಎಸ್‌.ಪ್ರಣಯ್‌ ಭರ್ಜರಿಯಾಗಿ ಮುಕ್ತಾಯಗೊಳಿಸಿದ್ದಾರೆ. ‘ಎ’ ಗುಂಪಿನ ಮೊದಲೆರಡು ಪಂದ್ಯಗಳಲ್ಲಿ ಸೋತು ಸೆಮೀಸ್‌ ರೇಸ್‌ನಿಂದ ಹೊರಬಿದ್ದಿದ್ದ ಪ್ರಣಯ್‌, 3ನೇ ಹಾಗೂ ಕೊನೆ ಪಂದ್ಯದಲ್ಲಿ ಹಾಲಿ ವಿಶ್ವ ಹಾಗೂ ಒಲಿಂಪಿಕ್‌ ಚಾಂಪಿಯನ್‌, ವಿಶ್ವ ನಂ.1 ಡೆನ್ಮಾರ್ಕ್ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ಧ 14-21, 21-17, 21-18 ಗೇಮ್‌ಗಳಲ್ಲಿ ಗೆದ್ದರು.

ವಿಶ್ವ ವೇಟ್‌ಲಿಫ್ಟಿಂಗ್‌ ಕೂಟ: ಬಿಂದಿಯಾಗೆ 25ನೇ ಸ್ಥಾನ

ಬೊಗೋಟಾ(ಕೊಲಂಬಿಯಾ): ಕಾಮನ್‌ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಬಿಂದಿಯಾರಾಣಿ ದೇವಿ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ 25ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದ್ದಾರೆ. ಗುರುವಾರ ನಡೆದ ಸ್ಪರ್ಧೆಯಲ್ಲಿ ಬಿಂದಿಯಾ ಒಟ್ಟು 200 ಕೆ.ಜಿ.(ಸ್ನ್ಯಾಚ್‌ನಲ್ಲಿ 86 ಕೆ.ಜಿ.+ಕ್ಲೀನ್‌ ಅಂಡ್‌ ಜರ್ಕ್ನಲ್ಲಿ 114 ಕೆ.ಜಿ.) ತೂಕ ಎತ್ತಿದರು.

ಇಂದು ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷೆ ಹುದ್ದೆಗೆ ಉಷಾ!

ನವದೆಹಲಿ: ದಿಗ್ಗಜ ಅಥ್ಲೀಟ್‌ ಪಿ.ಟಿ.ಉಷಾ ಶನಿವಾರ ಅಧಿಕೃತವಾಗಿ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ)ಯ ಅಧ್ಯಕ್ಷೆ ಹುದ್ದೆಗೇರಲಿದ್ದಾರೆ. ಶನಿವಾರ ವಿವಿಧ ಹುದ್ದೆಗಳಿಗೆ ಚುನಾವಣೆ ನಡೆಯಲಿದ್ದು, ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐಒಎ ಅಧ್ಯಕ್ಷ ಸ್ಥಾನಕ್ಕೇರಲಿರುವ ಮೊದಲ ಮಹಿಳೆ ಎನ್ನುವ ದಾಖಲೆಯನ್ನು ಬರೆಯಲಿದ್ದಾರೆ.
 

click me!