ಕಂಠೀರವ ಕ್ರೀಡಾಂಗಣದಲ್ಲಿ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುತ್ತೇವೆ ಎಂದು ಕ್ರೀಡಾ ಇಲಾಖೆ ಭರವಸೆ ನೀಡುತ್ತಿದೆ. ಒಂದೊಮ್ಮೆ ತನ್ನ ಮಾತಿನಂತೆ ಹೊಸ ಟ್ರ್ಯಾಕ್ ಅಳವಡಿಸಿದರೆ, ಅದರ ನಿರ್ವಹಣೆ ಹೇಗೆ ಮಾಡಬೇಕು?, ಬೆಂಗಳೂರಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ನಿಂದ ರಾಜ್ಯ ಕ್ರೀಡಾ ಇಲಾಖೆ ಏನೇನು ಕಲಿಯಬೇಕು? ಎನ್ನುವ ವಿವರಗಳನ್ನು ಸಾಯ್‌ನ ಮಾಜಿ ಅಥ್ಲೆಟಿಕ್ಸ್ ಕೋಚ್ ಒಬ್ಬರು ಸುವರ್ಣನ್ಯೂಸ್'ನ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.
ಬೆಂಗಳೂರು(ಮೇ.18): ಗುಂಡಿ ಬಿದ್ದು ಹಾಳಾಗಿರುವ ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಸರಿಪಡಿಸಲು ಆಗದಿರುವ ಸ್ಥಿತಿ ತಲುಪಿದೆ. ಇನ್ನೇನಿದ್ದರೂ ಸಿಂಥೆಟಿಕ್ ಟ್ರ್ಯಾಕ್ ಹೊಸದಾಗಿ ಅಳವಡಿಕೆ ಮಾಡಬೇಕಷ್ಟೇ. 2006ರಲ್ಲಿ ಹೊಸದಾಗಿ ಅಳವಡಿಕೆ ಮಾಡಿದ್ದ ಟ್ರ್ಯಾಕ್ ಸಂಪೂರ್ಣ ಹಾಳಾಗಿದೆ. ಉತ್ತಮವಾಗಿ ನಿರ್ವಹಣೆ ನಡೆಸಿಯೂ ಸಾಮಾನ್ಯವಾಗಿ 6 ವರ್ಷಕ್ಕೊಮ್ಮೆ ಟ್ರ್ಯಾಕ್ ಬದಲಿಸಲಾಗುತ್ತದೆ. ಇಷ್ಟೊತ್ತಿಗೆ ಕಂಠೀರವದಲ್ಲಿ 2 ಬಾರಿ ಟ್ರ್ಯಾಕ್ ಬದಲಿಸಬೇಕಿತ್ತು. ಇಲ್ಲವೇ ಹಾಳಾಗದಂತೆ ನಿರ್ವಹಿಸಬೇಕಿತ್ತು. ಆದರೆ ನಿರ್ವಹಣೆಯನ್ನೂ ಮಾಡದೆ, ಹೊಸ ಟ್ರ್ಯಾಕನ್ನೂ ಅಳವಡಿಸದೆ ರಾಜ್ಯ ಕ್ರೀಡಾ ಇಲಾಖೆ ಬರೀ ಭರವಸೆಗಳನ್ನು ನೀಡುತ್ತಿದೆ.
ಕಂಠೀರವ ಕ್ರೀಡಾಂಗಣ ನಿರ್ವಹಣೆ: ಸರಕಾರ ಫೇಲ್!
ಸಣ್ಣ ಸಮಸ್ಯೆ ದೊಡ್ಡದಾಗುವ ವರೆಗೂ ಬಿಟ್ಟು ಆ ಬಳಿಕ ಪರಿಹಾರ ಹುಡುಕುವ ಕಾರ್ಯಕ್ಕಿಳಿಯುವ ಅಭ್ಯಾಸ ಕ್ರೀಡಾ ಇಲಾಖೆಗೆ ಹೊಸದಲ್ಲ. ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಥ್ಲೀಟ್‌ಗಳು ತೊಂದರೆ ಅನುಭವಿಸುವುದು ನಿಂತಿಲ್ಲ.
ಕಂಠೀರವ ಕ್ರೀಡಾಂಗಣದಲ್ಲಿ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುತ್ತೇವೆ ಎಂದು ಕ್ರೀಡಾ ಇಲಾಖೆ ಭರವಸೆ ನೀಡುತ್ತಿದೆ. ಒಂದೊಮ್ಮೆ ತನ್ನ ಮಾತಿನಂತೆ ಹೊಸ ಟ್ರ್ಯಾಕ್ ಅಳವಡಿಸಿದರೆ, ಅದರ ನಿರ್ವಹಣೆ ಹೇಗೆ ಮಾಡಬೇಕು?, ಬೆಂಗಳೂರಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ನಿಂದ ರಾಜ್ಯ ಕ್ರೀಡಾ ಇಲಾಖೆ ಏನೇನು ಕಲಿಯಬೇಕು? ಎನ್ನುವ ವಿವರಗಳನ್ನು ಸಾಯ್‌ನ ಮಾಜಿ ಅಥ್ಲೆಟಿಕ್ಸ್ ಕೋಚ್ ಒಬ್ಬರು ‘ಕನ್ನಡಪ್ರಭ’ದೊಂದಿಗೆ ಹಂಚಿಕೊಂಡಿದ್ದಾರೆ.
ಸಾಯ್ ಟ್ರ್ಯಾಕ್ ಹೆಚ್ಚು ಬಾಳಿಕೆ ಬಂದಿದ್ದೇಗೆ?
ಭಾರತದ ಅಗ್ರ ಅಥ್ಲೀಟ್‌ಗಳು ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಾರೆ. ಇಲ್ಲಿ ಅಭ್ಯಾಸ ನಡೆಸಿದ ಅಥ್ಲೀಟ್‌ಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪದಕಗಳನ್ನು ಜಯಿಸಿದ್ದಾರೆ. ಸಾಯ್‌ನಲ್ಲಿ 1987ರಲ್ಲಿ ವಿದೇಶದಿಂದ ತರಿಸಿದ್ದ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಲಾಗಿತ್ತು. ಅತ್ಯುತ್ತಮ ನಿರ್ವಹಣೆಯಿಂದಾಗಿ ಆ ಟ್ರ್ಯಾಕ್ ಬರೋಬ್ಬರಿ 26 ವರ್ಷಗಳ ಕಾಲ ಬಾಳಿಕೆ ಬಂದಿತ್ತು.
ಬೆಂಗಳೂರಿನ ಹವಾಮಾನ ಹೆಚ್ಚಿನ ಉಷ್ಣತೆ ಹೊಂದಿರುವುದಿಲ್ಲ, ಅಲ್ಲದೇ ಸಾಯ್‌ನಲ್ಲಿದ್ದ ಸಿಂಥೆಟಿಕ್ ಟ್ರ್ಯಾಕನ್ನು ತಜ್ಞರು ನಿರಂತರವಾಗಿ ನಿರ್ವಹಣೆ ಮಾಡುತ್ತಿದ್ದರಿಂದ ಟ್ರ್ಯಾಕ್‌ನಲ್ಲಿ ಯಾವುದೇ ದೋಷ ಕಾಣಿಸಿಕೊಳ್ಳಲಿಲ್ಲ. ಇತರೆ ಟ್ರ್ಯಾಕ್‌ಗಳಿಗಿಂತ ಸಾಯ್‌ನಲ್ಲಿನ ಟ್ರ್ಯಾಕ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಟ್ರ್ಯಾಕ್ ಎಷ್ಟು ಬಳಕೆಯಾಗುತ್ತದೆ ಎನ್ನುವುದರ ಮೇಲೆ ನಿರ್ವಹಣೆ ಮಾದರಿಯನ್ನು ರೂಪಿಸಬೇಕಿದೆ. ಟ್ರ್ಯಾಕ್‌ನಲ್ಲಿ ಅಭ್ಯಾಸಿಸುವ ಅಥ್ಲೀಟ್‌ಗಳು ಬಳಸುವ ಶೂ ಕೂಡ ಉತ್ತಮ ಗುಣಮಟ್ಟದ್ದಾಗಿರಬೇಕು. ಅಲ್ಲದೇ ಟ್ರ್ಯಾಕ್ ಮೇಲೆ ಜಾವೆಲಿನ್, ಶಾಟ್‌ಪುಟ್ ಬೀಳದಂತೆ ಎಚ್ಚರಿಕೆ ವಹಿಸಬೇಕು.
ನಿರಂತರವಾಗಿ ಟ್ರ್ಯಾಕ್‌ಗೆ ನೀರು ಹಾಕಿ, ಹೆಚ್ಚು ಉಷ್ಣಾಂಶವಿರದಂತೆ ನೋಡಿಕೊಳ್ಳಬೇಕು. ಟ್ರ್ಯಾಕ್ ಆಗ್ಗಾಗೆ ಸ್ವಚ್ಛ ಮಾಡಬೇಕು. ಇದರಿಂದ ಟ್ರ್ಯಾಕ್ ಕಲುಷಿತಗೊಳ್ಳುವುದನ್ನು ತಡೆಯಬಹುದು. ಗಟ್ಟಿಇಲ್ಲವೇ ಚೂಪಾಗಿರುವ ವಸ್ತುಗಳು ಟ್ರ್ಯಾಕ್ ಮೇಲೆ ಬೀಳದಂತೆಯೂ ನೋಡಿಕೊಳ್ಳಬೇಕು. ಹಲವು ಖಾಸಗಿ ಸಂಸ್ಥೆಗಳು ಟ್ರ್ಯಾಕ್ ಸ್ವಚ್ಛತೆಯಲ್ಲಿ ಪರಿಣಿತಿ ಹೊಂದಿವೆ. ಆ ಸಂಸ್ಥೆಗಳಿಗೆ ಹೊರಗುತ್ತಿಗೆ ನೀಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಟ್ರ್ಯಾಕ್ ಬಗ್ಗೆ ಗೌರವಿಡಬೇಕು. ಈ ಟ್ರ್ಯಾಕ್‌ನ ಸಹಾಯದಿಂದ ಅಥ್ಲೀಟ್‌ಗಳು ನಮ್ಮ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎನ್ನುವ ವಿಚಾರವನ್ನು ಮನದಲ್ಲಿಟ್ಟುಕೊಂಡು ನಿರ್ವಹಣೆ ನಡೆಸಬೇಕು.
ಹೊಸದಾಗಿ ಅಳವಡಿಸಿದ ಟ್ರ್ಯಾಕ್‌ನಲ್ಲಿ ಕೆಲ ವರ್ಷಗಳ ಬಳಿಕ ಗುಳ್ಳೆಗಳು ಕಾಣಿಸಿಕೊಳ್ಳುವುದು ಸಹಜ. ಟ್ರ್ಯಾಕ್ ಬಳಕೆ ಹೆಚ್ಚಾದಂತೆ, ಭೂಮಿಯೊಳಗಿನ ಉಷ್ಣಾಂಶ ಏರು-ಪೇರಾದಾಗ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಉಬ್ಬು-ತಗ್ಗುಗಳಾಗುತ್ತವೆ. ಟ್ರ್ಯಾಕ್ ನಿರ್ವಹಣೆಗೆ ತಜ್ಞರ ಅವಶ್ಯಕತೆ ಇದೆ. ಸೂಕ್ತ ತರಬೇತಿಯುಳ್ಳ ಸಿಬ್ಬಂದಿಯಿಂದ ಉತ್ತಮ ನಿರ್ವಹಣೆ ಸಾಧ್ಯ. ‘ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ, ಇಡೀ ಟ್ರ್ಯಾಕ್ ಹಾಳಾಗುತ್ತದೆ. ತೂತು ಬಿದ್ದ ಜಾಗದಲ್ಲಿ ತೇಪೆ ಕಾರ‍್ಯ ನಡೆಸಿದರೆ ಸಿಂಥೆಟಿಕ್ ಟ್ರ್ಯಾಕ್ ಇನ್ನಷ್ಟುಕಾಲ ಬಳಕೆಗೆ ಯೋಗ್ಯವಾಗಿರಲಿದೆ’ ಎಂದು ಹಿರಿಯ ಅಥ್ಲೆಟಿಕ್ಸ್ ಕೋಚ್ ಹೇಳಿದ್ದಾರೆ.
ಟ್ರ್ಯಾಕ್ ನಿರ್ವಹಣೆಗೆ ಬೇಕಿದೆ ತಜ್ಞರ ಸಮಿತಿ
ಅಥ್ಲೆಟಿಕ್ ಸಿಂಥೆಟಿಕ್ ಟ್ರ್ಯಾಕ್ ನಿರ್ವಹಣೆಗೆ ತಜ್ಞರ ಸಮಿತಿ ರಚನೆಯಾಗಬೇಕು ಎನ್ನುವ ಮಾತುಗಳು ಹಿರಿಯ ಅಥ್ಲೀಟ್‌ಗಳು, ಕೋಚ್‌ಗಳಿಂದ ಕೇಳಿ ಬರುತ್ತಿದೆ. ‘ಕಾಲಕಾಲಕ್ಕೆ ತಜ್ಞರ ಸಮಿತಿ, ಟ್ರ್ಯಾಕ್‌ನ ತಪಾಸಣೆ ನಡೆಸಿ ವರದಿಯನ್ನು ನೀಡಬೇಕು. ಬಳಕೆ ಹೆಚ್ಚಾದಂತೆ ಟ್ರ್ಯಾಕನ್ನು ಪರಿಶೀಲಿಸಿ, ಉಬ್ಬು-ತಗ್ಗುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಹೊಸದಾಗಿ ಟ್ರ್ಯಾಕ್ ಅಳವಡಿಸುವಾಗ ಅತ್ಯುತ್ತಮ ಗುಣಮಟ್ಟದ ಟ್ರ್ಯಾಕನ್ನು ಆಯ್ಕೆ ಮಾಡಿಕೊಳ್ಳಬೇಕು. ಸಂಸ್ಥೆಯಿಂದ ಕ್ರೀಡಾಂಗಣದ ಸಿಬ್ಬಂದಿಗೆ ಟ್ರ್ಯಾಕ್ ನಿರ್ವಹಣೆಯ ತರಬೇತಿ ಕೊಡಿಸಬೇಕು’ ಎಂದು ಹಿರಿಯ ಅಥ್ಲೆಟಿಕ್ಸ್ ಕೋಚ್ ಒಬ್ಬರು ಕ್ರೀಡಾ ಇಲಾಖೆಗೆ ಸಲಹೆ ನೀಡಿದ್ದಾರೆ.
ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್ ಅಭ್ಯಾಸಕ್ಕಿಂತ ಹೆಚ್ಚಾಗಿ ಖಾಸಗಿ ಕಾರ್ಯಕ್ರಮಗಳಿಗೆ, ಸಮಾರಂಭಗಳಿಗೆ ಬಳಕೆಯಾಗುತ್ತಿದೆ. ಇಲ್ಲಿ ಅಭ್ಯಾಸ ಒಂದು ಭಾಗವಷ್ಟೇ, ಇದು ಅಂ.ರಾ. ಮಟ್ಟದ ಕೂಟಗಳನ್ನು ಆಯೋಜಿಸುವಂತಹ ಟ್ರ್ಯಾಕ್, ಇದರ ನಿರ್ವಹಣೆಯನ್ನು ತಜ್ಞರಿಂದಲೇ ನಡೆಸಬೇಕು. ಕಾಲ-ಕಾಲಕ್ಕೆ ಟ್ರ್ಯಾಕ್‌ನ ಆರೋಗ್ಯವನ್ನು ವಿಚಾರಿಸದೇ ಇದ್ದರೆ, ಅಥ್ಲೀಟ್‌ಗಳಿಗೆ ದೊಡ್ಡ ಮಟ್ಟದಲ್ಲಿ ಸಮಸ್ಯೆಯಾಗುವುದು ಖಚಿತ.
- ಹಿರಿಯ ಅಥ್ಲೆಟಿಕ್ಸ್ ಕೋಚ್
ವರದಿ: ಧನಂಜಯ ಎಸ್. ಹಕಾರಿ, ಕನ್ನಡಪ್ರಭ