ಮುಂಬರುವ ವರ್ಷಗಳಲ್ಲಿ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗಳ ಬದಲಾಗಿ ಒಂದೇ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಫೆ.18): ಕ್ರೀಡಾ ಪ್ರಶಸ್ತಿಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿ ಎರಡನ್ನೂ ಒಟ್ಟುಗೂಡಿಸಿ ಎರಡು ವಿಭಾಗಗಳಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ನೀಡಲು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಕೇಂದ್ರ ಗೃಹ ಸಚಿವಾಲಯ ಶಿಫಾರಸು ಮಾಡಿದೆ.
ಗೃಹ ಸಚಿವಾಲಯದ ಶಿಫಾರಸ್ಸಿನ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವಾಲಯ ಈ ಬಗ್ಗೆ ಪರಿಶೀಲಿಸಿ ಪರಿಗಣಿಸುವುದಾಗಿ ತಿಳಿಸಿದೆ. ಕಳೆದ ವರ್ಷ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ‘ಮಾರ್ಗಸೂಚಿಯಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ದ್ರೋಣಾಚಾರ್ಯ, ಧ್ಯಾನ್‌ಚಂದ್ ಪ್ರಶಸ್ತಿ ವಿಭಾಗಗಳಲ್ಲೂ ಹೆಚ್ಚಿನವರಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ತಿಳಿಸಿದೆ. ಇದಕ್ಕೆ ಉತ್ತರಿಸಿರುವ ಕ್ರೀಡಾ ಸಚಿವಾಲಯ, ‘ಕೋವಿಡ್‌ನಿಂದಾಗಿ ಕುಗ್ಗಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹೆಚ್ಚಿನ ಪ್ರಶಸ್ತಿ ಸಂಖ್ಯೆ ಹೆಚ್ಚಿಸಲಾಗಿದೆ’ ಎಂದಿದೆ.
ಕ್ರೀಡಾ ಸಾಧಕರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ
ಸರ್ಕಾರದ ಮಾರ್ಗಸೂಚಿ ಪ್ರಕಾರ 6 ಕ್ರೀಡಾ ಪ್ರಶಸ್ತಿಗಳ ವಿಭಾಗಗಳಿಂದ ಗರಿಷ್ಠ 32 ಪ್ರಶಸ್ತಿಗಳನ್ನು ನೀಡಬೇಕು ಎನ್ನುವ ಸೂಚನೆಯಿದೆ. ಆದರೆ ಕಳೆದ ವರ್ಷ ಪ್ರಶಸ್ತಿಗೆ ಭಾಜನರಾದವರ ಸಂಖ್ಯೆ 74ಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷ ರೋಹಿತ್ ಶರ್ಮಾ, ಮನಿಕಾ ಭಾತ್ರಾ, ವಿನೇಶ್ ಫೋಗಟ್, ಮರಿಯಪ್ಪನ್ ತಂಗವೇಲು ಹಾಗೂ ರಾಣಿ ರಾಂಪಾಲ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.