ಜನವರಿ 8ಕ್ಕೆ ಬೆಂಗಳೂರು ಗ್ರೇಟ್‌ 10k ಮ್ಯಾರಥಾನ್‌

By Kannadaprabha News  |  First Published Jan 5, 2023, 10:49 AM IST

ಚೊಚ್ಚಲ ಆವೃತ್ತಿಯ ಗ್ರೇಟ್‌ ಬೆಂಗಳೂರು 10ಕೆ ಮ್ಯಾರಥಾನ್‌ ಜನವರಿ 8ಕ್ಕೆ ಚಾಲನೆ
ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟ
ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಮಾಹಿತಿ


ಬೆಂಗಳೂರು(ಜ.05): ಚೊಚ್ಚಲ ಆವೃತ್ತಿಯ ಗ್ರೇಟ್‌ ಬೆಂಗಳೂರು 10ಕೆ ಮ್ಯಾರಥಾನ್‌ ಜನವರಿ 8ರಂದು ಭಾನುವಾರ ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಸರ್ಕಾರ, ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ(ಕೆಒಎ) ಹಾಗೂ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಮ್ಯಾರಥಾನ್‌ ಆಯೋಜಿಸುತ್ತಿದೆ ಎಂದು ಕೆಒಎ ಅಧ್ಯಕ್ಷ ಡಾ.ಕೆ.ಗೋವಿಂದರಾಜು ಮಾಹಿತಿ ನೀಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಆವೃತ್ತಿಯ ಮ್ಯಾರಥಾನ್‌ ಆಯೋಜಿಸಲು ಉತ್ಸುಕರಾಗಿದ್ದೇವೆ. ಮ್ಯಾರಥಾನ್‌ನಲ್ಲಿ ದೇಶದ ವಿವಿಧ ಕಡೆಯ ಎಲೈಟ್‌ ಅಥ್ಲೀಟ್‌ಗಳು ಸೇರಿ 7,500ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಕೂಡಾ ನೀಡಲಾಗುತ್ತದೆ’ ಎಂದರು.

Tap to resize

Latest Videos

3 ವಿಭಾಗದಲ್ಲಿ ಮ್ಯಾರಥಾನ್‌

ಮ್ಯಾರಥಾನ್‌ 10ಕೆ, 5ಕೆ ಹಾಗೂ 3ಕೆ ವಿಭಾಗದಲ್ಲಿ ನಡೆಯಲಿದೆ. ಈ ಪೈಕಿ 5ಕೆ ಹಾಗೂ 3ಕೆ ವಿಭಾಗದಲ್ಲಿ 12+ ವರ್ಷ ಮೇಲ್ಪಟ್ಟ ಮಕ್ಕಳು ಭಾಗವಹಿಸಲಿದ್ದಾರೆ. ಅಥ್ಲೆಟಿಕ್ಸ್‌ನತ್ತ ಮಕ್ಕಳನ್ನು ಉತ್ತೇಜಿಸಲು ಈ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗೋವಿಂದರಾಜು ತಿಳಿಸಿದರು.

ರಾಷ್ಟ್ರೀಯ ಬೀಚ್‌ ಫುಟ್ಬಾಲ್‌: ಜನವರಿ 7, 8ರಂದು ಆಯ್ಕೆ ಪ್ರಕ್ರಿಯೆ

ಭಟ್ಕಳ: ಜನವರಿ 24ರಿಂದ ಫೆ.1ರ ವರೆಗೆ ಗುಜರಾತ್‌ನ ಸೂರತ್‌ನಲ್ಲಿ ನಡೆಯಲಿರುವ ಚೊಚ್ಚಲ ಆವೃತ್ತಿಯ ರಾಷ್ಟ್ರೀಯ ಬೀಚ್‌ ಫುಟ್ಬಾಲ್‌ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡದ ಆಟಗಾರರ ಆಯ್ಕೆಗಾಗಿ ಜ.7 ಮತ್ತು 8ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ತಿಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತರು ಬೆಂಗಳೂರಿನ ಕೆಎಸ್‌ಎಫ್‌ಎ ಕಚೇರಿ ಅಥವಾ ಸಲೀಂ(8050296058), ಆದಿತ್ಯ(7338584114) ಅವರನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದೆ.

ಫುಟ್ಬಾಲ್‌ ಮಾಂತ್ರಿಕ ಪೀಲೆ ಅಂತ್ಯಕ್ರಿಯೆ

ಸ್ಯಾಂಟೋಸ್‌: ಕಳೆದ ಶುಕ್ರವಾರ ನಿಧನರಾದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಅಟಗಾರರ ಬ್ರೆಜಿಲ್‌ನ ಪೀಲೆ ಮೃತದೇಹ ಅಂತ್ಯಕ್ರಿಯೆ ಮಂಗಳವಾರ ನಡೆಯಿತು. ಪೀಲೆ ಅವರ ಹುಟ್ಟೂರು ಸ್ಯಾಂಟೋಸ್‌ನಲ್ಲಿರುವ ವಿಲಾ ಬೆಲ್ಮಿರೊ ಕ್ರೀಡಾಂಗಣದ ಸಮೀಪದಲ್ಲೇ ಇರುವ ಸ್ಯಾಂಟೋಸ್‌ ಸ್ಮಾರಕ ಸ್ಮಶಾನದಲ್ಲಿ ಅವರನ್ನು ಸಮಾಧಿ ಮಾಡಲಾಯಿತು. ಬ್ರೆಜಿಲ್‌ ಅಧ್ಯಕ್ಷ ಲೂಯಿಸ್‌ ಇನಾಸಿಯೋ ಲುಲಾ ಡ ಸಿಲ್ವಾ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಸೇರಿದಂತೆ ಲಕ್ಷಾಂತರ ಮಂದಿ ಪೀಲೆ ಅಂತಿಮ ದರ್ಶನ ಪಡೆದರು. ಸ್ಯಾಂಟೋಸ್‌ನ ಪ್ರಮುಖ ರಸ್ತೆಗಳಲ್ಲಿ ಅಂತಿಮಯಾತ್ರೆ ನಡೆದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಪೀಲೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

Rishabh Pant car accident: ಡೆಹರಾಡೂನ್‌ನಿಂದ ಪಂತ್‌ ಮುಂಬೈಗೆ ಶಿಫ್ಟ್‌; ವಿದೇಶದಲ್ಲಿ ಚಿಕಿತ್ಸೆಗೆ ಚಿಂತನೆ?

2022ರಲ್ಲಿ ಸಿಂಧು ಗಳಿಕೆ 59 ಕೋಟಿ ರುಪಾಯಿ: ನಂ.12

ನವದೆಹಲಿ: ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು 2022ರಲ್ಲಿ ಬರೋಬ್ಬರಿ 59 ಕೋಟಿ ರು. ಹಣ ಸಂಪಾದಿಸಿದ್ದು, ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಹಣಗಳಿಸಿದ ಮಹಿಳಾ ಕ್ರೀಡಾಪಟುಗಳ ಪೈಕಿ 12ನೇ ಸ್ಥಾನ ಪಡೆದಿದ್ದಾರೆ. 27 ವರ್ಷದ ಸಿಂಧು ಅಮೆರಿಕದ ನಿಯತಕಾಲಿಕ ಫೋಬ್ಸ್‌ರ್‍ ಬಿಡುಗಡೆ ಮಾಡಿದ ವಿಶ್ವದ ಅಗ್ರ 25 ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿರುವ ಏಕೈಕ ಬ್ಯಾಡ್ಮಿಂಟನ್‌ ಆಟಗಾರ್ತಿ. ಅಲ್ಲದೇ ಪಟ್ಟಿಯಲ್ಲಿರುವ ಭಾರತದ ಏಕೈಕ ಮಹಿಳಾ ಕ್ರೀಡಾಪಟು ಕೂಡ ಹೌದು. ಜಪಾನ್‌ನ ಟೆನಿಸ್‌ ಆಟಗಾರ್ತಿ ನವೋಮಿ ಒಸಾಕ(422 ಕೋಟಿ ರು.) ಅಗ್ರಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ 7 ಮಂದಿ ಟೆನಿಸಿಗರಿದ್ದಾರೆ.

click me!