ಭಾನುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ತಮಿಳುನಾಡಿನ ಗುಕೇಶ್ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು. ರಷ್ಯಾದ ಇಯಾನ್ ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಕರುನಾ ನಡುವಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಗುಕೇಶ್ ಚಾಂಪಿಯನ್ ಎನಿಸಿಕೊಂಡರು.
ಟೊರೊಂಟೊ(ಕೆನಡಾ): ಭಾರತದ ಚೆಸ್ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ವಿಶ್ವ ಚಾಂಪಿಯನ್ ಎನಿಸಿಕೊಳ್ಳಲು ಇನ್ನೊಂದೇ ಹೆಜ್ಜೆ ಬಾಕಿ ಇದೆ. ವಿಶ್ವ ಚಾಂಪಿಯನ್‌ಶಿಪ್‌ನ ಸೆಮಿಫೈನಲ್ ಎನಿಸಿಕೊಂಡಿರುವ ಫಿಡೆ ಕ್ಯಾಂಡಿಡೇಟ್ಸ್ ಚೆಸ್‌ನಲ್ಲಿ 17ರ ಗುಕೇಶ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 14 ಹಾಗೂ ಕೊನೆ ಸುತ್ತಿನ ಹಣಾಹಣಿಯಲ್ಲಿ ತಮಿಳುನಾಡಿನ ಗುಕೇಶ್ ಅವರು ಅಮೆರಿಕದ ಹಿಕರು ನಕಮುರಾ ವಿರುದ್ಧ ಡ್ರಾ ಸಾಧಿಸಿದರು. ಇದರೊಂದಿಗೆ ಗುಕೇಶ್ ಅಂಕ ಗಳಿಕೆಯನ್ನು 9ಕ್ಕೆ ಹೆಚ್ಚಿಸಿ ಅಗ್ರಸ್ಥಾನ ಕಾಯ್ದುಕೊಂಡರು. ರಷ್ಯಾದ ಇಯಾನ್ ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಕರುನಾ ನಡುವಿನ ಪಂದ್ಯ ಡ್ರಾಗೊಳ್ಳುವುದರೊಂದಿಗೆ ಗುಕೇಶ್ ಚಾಂಪಿಯನ್ ಎನಿಸಿಕೊಂಡರು. ಗುಕೇಶ್ ಜೊತೆ ಅಗ್ರಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸಿದ್ದ ಹಿಕರು, ನೆಪೊಮ್ನಿಯಾಚಿ ಹಾಗೂ ಫ್ಯಾಬಿಯಾನೊ ಮೂವರೂ ತಲಾ 8 ಅಂಕದೊಂದಿಗೆ ಜಂಟಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇದೇ ವೇಳೆ ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಪ್ರಜ್ಞಾನಂದ(7 ಅಂಕ), ವಿದಿತ್ ಗುಜರಾತಿ(6 ಅಂಕ) ಕ್ರಮವಾಗಿ 5 ಮತ್ತು 6ನೇ ಸ್ಥಾನಿಯಾದರು. ಮಹಿಳಾ ವಿಭಾಗದಲ್ಲಿ ಕೊನೆರು ಹಂಪಿ ಹಾಗೂ ಆರ್.ವೈಶಾಲಿ ತಲಾ 7 ಅಂಕದೊಂದಿಗೆ ಜಂಟಿ 2ನೇ ಸ್ಥಾನ ಹಂಚಿಕೊಂಡರು.
ಗುಕೇಶ್ ಖರ್ಚಿಗಾಗಿ ಕ್ರೌಡ್ ಫಂಡಿಂಗ್ ನಡೆಸಿದ್ದ ಪೋಷಕರು
2019ರಲ್ಲಿ ತಮ್ಮ 12ನೇ ವರ್ಷದಲ್ಲೇ ಗುಕೇಶ್ ಗ್ರ್ಯಾಂಡ್‌ಮಾಸ್ಟರ್ ಆಗಿ ಹೊರಹೊಮ್ಮಿದರೂ, ಅವರ ಸಾಧನೆ ಹಿಂದೆ ಪೋಷಕರ ಶ್ರಮ, ತ್ಯಾಗ ದೊಡ್ಡದಿದೆ. ಬಾಲ್ಯದಲ್ಲೇ ಚೆಸ್ ಮೇಲೆ ಒಲವು ಹೊಂದಿದ್ದ ಗುಕೇಶ್‌ರ ಕೋಚಿಂಗ್, ಟೂರ್ನಿಯ ಸಿದ್ಧತೆ, ಪ್ರಯಾಣಕ್ಕಾಗಿ ಪೋಷಕರು ಆರ್ಥಿಕ ಸಮಸ್ಯೆ ಎದುರಿಸಿದ್ದರು.
ಯಶಸ್ವಿ ಜೈಸ್ವಾಲ್ ರಾಯಲ್ ಆಟಕ್ಕೆ ಮುಂಬೈ ಇಂಡಿಯನ್ಸ್ ಕಂಗಾಲು
ಆದರೆ ಹಣಕಾಸಿನ ಕೊರತೆ ಗುಕೇಶ್ ಭವಿಷ್ಯಕ್ಕೆ ತೊಡಕಾಗಬಾರದು ಎಂಬುದು ತಂದೆ ಡಾ.ರಜನೀಕಾಂತ್, ತಾಯಿ ಪದ್ಮಾ ಅವರ ದೃಢನಿರ್ಧಾರ. ಗುಕೇಶ್ ಜೊತೆ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಕಾರಣಕ್ಕಾಗಿ ಅವರ ತಂದೆ 2017-18ರಲ್ಲಿ ತಮ್ಮ ವೈದ್ಯ ವೃತ್ತಿಯನ್ನೇ ತಾತ್ಕಾಲಿಕವಾಗಿ ತೊರೆದಿದ್ದರು. ಅಲ್ಲದೆ ಹಣ ಹೊಂದಿಸಲು ಕ್ರೌಂಡ್ ಪಂಡಿಂಗ್ ಕೂಡಾ ನಡೆಸಿದ್ದರು.
40 ವರ್ಷದ ದಾಖಲೆ ಮುರಿದ 17ರ ಗುಕೇಶ್
ಗುಕೇಶ್ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದ ವಿಶ್ವದ ಅತಿ ಕಿರಿಯ ಚೆಸ್ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಷ್ಯಾದ ದಿಗ್ಗಜ ಚೆಸ್ ಪಟು ಗ್ಯಾರಿ ಕಾಸ್ಪರೋವ್ 1984ರಲ್ಲಿ ತಮ್ಮ 22ನೇ ವರ್ಷದಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದಿದ್ದರು. 40 ವರ್ಷಗಳ ದಾಖಲೆಯನ್ನು ಗುಕೇಶ್ ಅಳಿಸಿ ಹಾಕಿ, ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಗುಕೇಶ್ ತಮ್ಮ 12ನೇ ವರ್ಷದಲ್ಲೇ ಗ್ರ್ಯಾಂಡ್‌ಮಾಸ್ಟರ್ ಆಗಿ, ಈ ಸಾಧನೆ ಮಾಡಿದ ವಿಶ್ವದ 3ನೇ ಅತಿ ಕಿರಿಯ ಎನಿಸಿಕೊಂಡಿದ್ದರು.
ಕ್ಯಾಂಡಿಡೇಟ್ಸ್ ಚೆಸ್: ಡಿ ಗುಕೇಶ್‌ಗೆ ಚಾಂಪಿಯನ್ ಪಟ್ಟ, ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ ಚೆನ್ನೈ ಹುಡುಗ
ಕ್ಯಾಂಡಿಡೇಟ್ಸ್ ಗೆದ್ದ 2ನೇ ಭಾರತೀಯ
ಗುಕೇಶ್ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದ 2ನೇ ಭಾರತೀಯ. 5 ಬಾರಿ ವಿಶ್ವ ಚಾಂಪಿಯನ್ ಎನಿಸಿಕೊಂಡಿರುವ ವಿಶ್ವನಾಥನ್ ಆನಂದ್ ಅವರು 2014ರಲ್ಲಿ ಕ್ಯಾಂಡಿಡೇಟ್ಸ್ ಪ್ರಶಸ್ತಿ ಗೆದ್ದಿದ್ದರು.
ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಚೀನಾದ ಲಿರೆನ್ ಜೊತೆ ಫೈಟ್
ಕ್ಯಾಂಡಿಡೇಟ್ಸ್‌ನಲ್ಲಿ ಗೆದ್ದ ಗುಕೇಶ್ ವಿಶ್ವ ಚಾಂಪಿಯನ್ ಕಿರೀಟಕ್ಕಾಗಿ ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್ ವಿರುದ್ಧ ಸೆಣಸಾಡಲಿದ್ದಾರೆ. ವರ್ಷಾಂತ್ಯದಲ್ಲಿ ಪಂದ್ಯ ನಡೆಯಲಿದ್ದು, ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಭಾರತದಿಂದ ಈ ವರೆಗೂ ವಿಶ್ವನಾಥನ್ ಆನಂದ್ ಮಾತ್ರ ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು 5 ಬಾರಿ ಕಿರೀಟ ಗೆದ್ದಿದ್ದಾರೆ. 2000, 2007, 2008, 2010 ಹಾಗೂ 2012ರಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು. ಸದ್ಯ ಭಾರತದಿಂದ ವಿಶ್ವ ಚಾಂಪಿಯನ್ ಆಗಲಿರುವ 2ನೇ ಚೆಸ್ ಪಟು ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗುವ ಕಾತರದಲ್ಲಿದ್ದಾರೆ.
ಭಾರತ ಹೆಮ್ಮೆ ಪಡುತ್ತಿದೆ
ಫಿಟ್ ಕ್ಯಾಂಡಿಡೇಟ್ಸ್ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿಕೊಂಡಿರುವ ಗುಕೇಶ್ ಬಗ್ಗೆ ಭಾರತವೇ ಹೆಮ್ಮೆ ಪಡುತ್ತಿದೆ. ಗುಕೇಶ್‌ರ ಗಮನಾರ್ಹ ಸಾಧನೆಯು ಅವರ ಅಸಾಧಾರಣ ಪ್ರತಿಭೆ, ಕೌಶಲ್ಯವನ್ನು ಜಗತ್ತಿಗೇ ಪ್ರದರ್ಶಿಸಿದೆ. ಘಟಾನುಘಟಿಗಳನ್ನು ಸೋಲಿಸಿದ ಗುಕೇಶ್ ಮಿಲಿಯನ್‌ಗಟ್ಟಲೆ ಜನರಿಗೆ ಸ್ಫೂರ್ತಿ.
-ಪ್ರಧಾನ ಮಂತ್ರಿ ನರೇಂದ್ರ ಮೋದಿ