ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ನೋವಾಕ್ ಜೋಕೋವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಗೆಲುವಿನ ಸಿಹಿ ಕಂಡಿದ್ದರೆ, ಮಿಚೆಲ್ ಕ್ರುಗರ್ 2ನೇ ಸುತ್ತು ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಅಪ್‌ಡೇಟ್ಸ್ ಇಲ್ಲಿದೆ.
ಮೆಲ್ಬರ್ನ್(ಜ.16): 7ನೇ ಆಸ್ಪ್ರೇಲಿಯನ್ ಓಪನ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೋವಾಕ್ ಜೋಕೋವಿಚ್, ಮೊದಲ ಸುತ್ತಿನಲ್ಲಿ ಸುಲಭ ಗೆಲುವಿನೊಂದಿಗೆ ಮುನ್ನಡೆದಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಅಮೆರಿಕದ ಮಿಚೆಲ್ ಕ್ರುಗರ್ ವಿರುದ್ಧ 6-3, 6-2, 6-2 ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ವಿಶ್ವ ನಂ.1 ಆಟಗಾರ ಸತತ 13ನೇ ವರ್ಷ ಆಸ್ಪ್ರೇಲಿಯನ್ ಓಪನ್ 2ನೇ ಸುತ್ತು ಪ್ರವೇಶಿಸಿದ ದಾಖಲೆ ಬರೆದರು.
ಇದನ್ನೂ ಓದಿ: 15/01- ಆರ್ಮಿ ಡೇ, ವಿರಾಟ್ ಕೊಹ್ಲಿಗೆ ಲಕ್ಕಿ ಡೇ..!
300ನೇ ಗ್ರ್ಯಾಂಡ್‌ಸ್ಲಾಂ ಪಂದ್ಯವನ್ನಾಡಿದ ಜೋಕೋವಿಚ್ ಆರಂಭಿಕ ಸೆಟ್‌ನಲ್ಲಿ 1-2 ಗೇಮ್‌ಗಳ ಹಿನ್ನಡೆ ಅನುಭವಿಸಿದರೂ ತಕ್ಷಣ ಎಚ್ಚೆತ್ತುಕೊಂಡು ಗ್ರ್ಯಾಂಡ್‌ಸ್ಲಾಂನಲ್ಲಿ 259ನೇ ಗೆಲುವು ಪಡೆದರು. ಇದೇ ವೇಳೆ 4ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, 7ನೇ ಶ್ರೇಯಾಂಕಿತ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮಂಗಳವಾರ ಗೆಲುವು ಕಂಡ ಪ್ರಮುಖರು.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!
ಮಹಿಳಾ ಸಿಂಗಲ್ಸ್ ಮೊದಲ ಸುತ್ತಲ್ಲಿ ಜರ್ಮನಿಯ ಟಟಾನ ಮರಿಯಾ ವಿರುದ್ಧ 6-0, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದ ಅಮೆರಿಕದ ಸೆರೆನಾ ವಿಲಿಯಮ್ಸ್ 2ನೇ ಸುತ್ತಿಗೆ ಪ್ರವೇಶ ಪಡೆದರು. ತಾಯಿಯಾರ ಬಳಿಕ ಸೆರೆನಾ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲುವಿಗಾಗಿ ಕಾತರಿಸುತ್ತಿದ್ದಾರೆ. ಇದೇ ವೇಳೆ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್ ಮೊದಲ ಸುತ್ತಲ್ಲೇ ಸೋಲುವ ಭೀತಿಗೆ ಒಳಗಾಗಿದ್ದರು. ಎಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ 6-7, 6-4,6-2 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿ 2ನೇ ಸುತ್ತಿಗೆ ಪ್ರವೇಶ ಪಡೆದರು.