ನನ್ನ ಸಾಹಿತ್ಯ ಬೆಳವಣಿಗೆ ಗಮನಿಸಿದರೆ, ನಾನು ಯಾವತ್ತೂ ಒಂದೇ ಬಗೆಯ ವಸ್ತುಗಳಿಗೆ ಅಂಟಿಕೊಂಡ ಲೇಖಕನಲ್ಲ ಎಂದು ನಿನಗೆ ತಿಳಿಯುತ್ತದೆ. ಸಂಡೂರು, ಬೆಂಗಳೂರು, ಬ್ರಾಹ್ಮಣ, ಕಾರ್ಪೊರೇಟ್, ಗೇ, ಅಮ್ಮ, ಇತಿಹಾಸ, ಪುರಾಣ - ಎಲ್ಲವೂ ಬಂದು ಹೋಗಿವೆ. ಇನ್ನು ಮುಂದೆ ಬೇರೆಯ ವಸ್ತುಗಳೂ ಬರುತ್ತವೆ. ಇತಿಹಾಸದ ರುಚಿಯೂ ನನ್ನ ಮಟ್ಟಿಗೆ ತಾತ್ಕಾಲಿಕವೇ ಆಗಿರುತ್ತದೆ.
- ಜೋಗಿ
ನಿಮ್ಮ ಹೊಸ ಕಾದಂಬರಿ ಯಾವುದರ ಕುರಿತಾಗಿದೆ?
undefined
ಎರಡನೆಯ ಶತಮಾನದಲ್ಲಿ ಏಷ್ಯಾದ ಉದ್ದಗಲಕ್ಕೆ ಹತ್ತಾರು ಕಾಲ್ದಾರಿಗಳು ಪ್ರಬಲವಾದವು. ಈಗ ಅದಕ್ಕೆ ನಾವು ‘ಸಿಲ್ಕ್ ರೂಟ್’ ಎನ್ನುತ್ತೇವೆ. ಆಗ ಅಂತಹ ಯಾವ ಹೆಸರೂ ಇರಲಿಲ್ಲ. ಮೂಲತಃ ಚೀನಾ ಮತ್ತು ರೋಮ್ ದೇಶಗಳ ನಡುವೆ ವಾಣಿಜ್ಯ ಸಂಪರ್ಕ ಮೂಡಿಸುವುದು ಇದರ ಉದ್ದೇಶವಾದರೂ, ಮಧ್ಯದಲ್ಲಿನ ಭಾರತ, ಕಂದಹಾರ, ಬಾಹ್ಲಿಕ, ಸೊಗ್ದಾ, ಪರ್ಶಿಯಾ, ಪಾರ್ಥಿಯನ್, ತಕ್ಲಾಮಕನ್ ಮುಂತಾದ ದೇಶಗಳ ಜನಸಾಮಾನ್ಯರು ಈ ವ್ಯಾಪಾರದ ದಾರಿಯಲ್ಲಿ ಬದುಕನ್ನು ಕಂಡುಕೊಂಡರು. ಸರಕುಗಳು ಮಾತ್ರವಲ್ಲ, ಧರ್ಮ, ಭಾಷೆ, ಸಂಸ್ಕೃತಿ, ಕೌಶಲ್ಯ, ರಾಜನೀತಿ - ಎಲ್ಲವೂ ಈ ದಾರಿಯ ಮೂಲಕ ಚಲಿಸಿದವು. ಜಗತ್ತು ಕಂಡ ಅತಿ ದೊಡ್ಡ ಜಾಗತೀಕರಣ ಇದಾಗಿದೆ. ಈ ಯುಗಸಂಘರ್ಷವನ್ನು ಜನಸಾಮಾನ್ಯರ ಬದುಕಿನ ತಲ್ಲಣಗಳ ಮೂಲಕ ಹಿಡಿಯುವುದು ಈ ಕಾದಂಬರಿಯ ಉದ್ದೇಶವಾಗಿದೆ.
ವರ್ಷಕ್ಕೊಂದೋ ಎರಡೋ ಬರೆಯುತ್ತಿದ್ದ ನೀವು ಈಗ ವಿರಳವಾಗಿ ಬರೆಯುತ್ತಿರುವ ಕಾರಣ?
ನಾನು ಸಣ್ಣಕತೆ ಬರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಈಗಾಗಲೇ ಆರು ಕಥಾಸಂಕಲನ ಬಂದಿವೆ. ಆದ್ದರಿಂದ ಆ ಪ್ರಕಾರದಲ್ಲಿ ಆಸಕ್ತಿ ಕಡಿಮೆಯಾಗಿದೆ. ಕಾದಂಬರಿ ರಚನೆ ಹೆಚ್ಚು ಸವಾಲಿನದೂ, ಹೆಚ್ಚು ಓದುಗರನ್ನು ಸೆಳೆಯುವ ಪ್ರಕಾರವಾಗಿಯೂ ಕಂಡುಕೊಂಡಿದ್ದೇನೆ. ಸಣ್ಣಕತೆ ಮನೆಪೂರ್ತಿ ಮಾಡುವ ಅಡುಗೆಯಾದರೆ, ಕಾದಂಬರಿ ಇಡೀ ಮದುವೆ ಮನೆಗೆ ಮಾಡುವ ‘ವಿವಾಹ ಭೋಜನ’.
ಒಂಟಿತನ ಎಂದರೆ ಸುಮ್ಮನಿರುವುದು ಚಿಗುರುವ ಸಂಭ್ರಮ, ಉದುರುವ ಬೇಸರ ಯಾವುದೂ ಇಲ್ಲದ ಎಲೆಯ ಹಾಗೆ!
ಕಾದಂಬರಿಯೊಂದನ್ನು ಗಂಭೀರವಾಗಿ ಬರೆಯಲು ನನಗೆ ಮೂರರಿಂದ ನಾಲ್ಕು ವರ್ಷ ಬೇಕಾಗುತ್ತದೆ. ಅಧ್ಯಯನಕ್ಕೇ ಹೆಚ್ಚಿನ ಸಮಯ ಹೋಗುತ್ತದೆ. ಬಹುತೇಕ ಆಕರ ಗ್ರಂಥಗಳು ಇಂಗ್ಲೀಷ್‌ನಲ್ಲಿ ಇರುವುದರಿಂದ, ನನ್ನ ಓದು ನಿಧಾನಕ್ಕೆ ಸಾಗಬೇಕು. ಆದ್ದರಿಂದ ನನ್ನ ಪುಸ್ತಕ ಪ್ರಕಟಣೆ ಇತ್ತೀಚೆಗೆ ವಿರಳವಾಗಿದೆ. ಹಾಗಂತ ನನಗಾಗಲಿ, ನನ್ನ ಓದುಗರಿಗಾಗಲಿ ಬೇಸರವಿಲ್ಲ. ಇಬ್ಬರೂ ತಾಳ್ಮೆಯಿಂದ ಕಾಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ.
ತೇಜೋತುಂಗಭದ್ರಾ ನಂತರದ ನಿಮ್ಮ ಕಾದಂಬರಿಗಳು ವಿಶ್ವ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡಿವೆಯೋ?
ಮೊದಲಿಗೆ ನಾನು ಕನ್ನಡ ಲೇಖಕ. ಅನಂತರ ಹೊರಗಿನ ಜಗತ್ತು. ಒಳ್ಳೆಯ ಕಾದಂಬರಿ ಬರೆದರೆ ಅದರ ಓದುಗರು ಯಾವತ್ತೂ ಒಂದು ಪ್ರದೇಶಕ್ಕೆ ಸೀಮಿತರಾಗಿರುವುದಿಲ್ಲ. ಪೆರುಮಾಳ್ ಮುರುಗನ್ ಅವರು ತಮ್ಮ ಹಳ್ಳಿಯ ಮೇಕೆಯ ಕುರಿತಾಗಿ ಬರೆದದ್ದನ್ನು ಇಡೀ ಪ್ರಪಂಚವೇ ಸಂಭ್ರಮದಿಂದ ಓದಿದೆ. ಹಾಗಿದ್ದ ಮೇಲೆ ಕನ್ನಡದ ಕತೆಗಳು ವಿಶ್ವ ಓದುಗನನ್ನು ತಲುಪುವದಿಲ್ಲವೆ? ಒಳ್ಳೆಯ ಕತೆಗೆ ದೇಶೀ-ವಿದೇಶೀ ಎಂಬ ವರ್ಗೀಕರಣ ಇರುವುದಿಲ್ಲ. ಅದು ಕ್ಲಾಸ್ ಸಿನಿಮಾ, ಮಾಸ್ ಸಿನಿಮಾ ಎಂದು ವರ್ಗೀಕರಿಸಿದಂತೆ.
ನಿಮಗೆ ಚರಿತ್ರೆಯಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ?
ಅದು ನನಗೂ ಅಚ್ಚರಿ. ಅಪ್ಪಟ ಇಂಜಿನಿಯರಿಂಗ್, ಕಾರ್ಪೊರೇಟ್ ಪ್ರಪಂಚದ ಹಿನ್ನೆಲೆಯವನಾದ ನಾನು ಇತಿಹಾಸದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು ಸೋಜಿಗ. ಬಾಲ್ಯದಲ್ಲಿ ಗಣಿತವನ್ನು ಇಷ್ಟಪಟ್ಟಷ್ಟು ಇತಿಹಾಸವನ್ನು ಇಷ್ಟ ಪಟ್ಟಿಲ್ಲ. ಅದು ನಮ್ಮ ಶಿಕ್ಷಣ ಕ್ರಮದ ಸೋಲೂ ಇರಬಹುದು. ಮೇಕೆ ಮೇಯ್ದಂತೆ ಬೇರೆ ಬೇರೆ ಬಗೆಯ ಪುಸ್ತಕಗಳನ್ನು ಓದುವ ಹವ್ಯಾಸ ನನಗಿದೆ. ಹಾಗೊಮ್ಮೆ ಇತಿಹಾಸದ ಪುಸ್ತಕಗಳ ರುಚಿ ನೋಡಿ ಬೆರಗಾಗಿದ್ದೇನೆ. ಅದನ್ನು ಕಾದಂಬರಿಗೆ ಒಗ್ಗಿಸಲು ನೋಡಿದ್ದೇನೆ. ತೇಜೋದ ಭರ್ಜರಿ ಯಶಸ್ಸು ಮತ್ತೊಂದು ಅಂತಹ ಕಾದಂಬರಿ ಬರೆಯಲು ಪ್ರೋತ್ಸಾಹ ಕೊಟ್ಟಿದೆ. ನನ್ನ ಸಾಹಿತ್ಯ ಬೆಳವಣಿಗೆ ಗಮನಿಸಿದರೆ, ನಾನು ಯಾವತ್ತೂ ಒಂದೇ ಬಗೆಯ ವಸ್ತುಗಳಿಗೆ ಅಂಟಿಕೊಂಡ ಲೇಖಕನಲ್ಲ ಎಂದು ನಿನಗೆ ತಿಳಿಯುತ್ತದೆ. ಸಂಡೂರು, ಬೆಂಗಳೂರು, ಬ್ರಾಹ್ಮಣ, ಕಾರ್ಪೊರೇಟ್, ಗೇ, ಅಮ್ಮ, ಇತಿಹಾಸ, ಪುರಾಣ - ಎಲ್ಲವೂ ಬಂದು ಹೋಗಿವೆ. ಇನ್ನು ಮುಂದೆ ಬೇರೆಯ ವಸ್ತುಗಳೂ ಬರುತ್ತವೆ. ಇತಿಹಾಸದ ರುಚಿಯೂ ನನ್ನ ಮಟ್ಟಿಗೆ ತಾತ್ಕಾಲಿಕವೇ ಆಗಿರುತ್ತದೆ.
ಕನ್ನಡದಲ್ಲಿ, ಇದ್ದಕ್ಕಿದ್ದಂತೆ ಐತಿಹಾಸಿಕ ಕಾದಂಬರಿಗಳ ಬೆಳೆ ಶುರುವಾಗಿದೆ. ಇದಕ್ಕೆ ಮಾರಾಟ, ಜನಪ್ರಿಯತೆ ಕಾರಣವೆ?
ಜನರಿಗೆ ಇತಿಹಾಸದ ಕುರಿತು ಬೆರಗಿರುತ್ತದೆ. ನಮ್ಮ ಹಿರಿಯರು ಹೇಗೆ ಬಾಳಿದರು ಎಂದು ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಇದೊಂದು ರೀತಿ ಪಿತೃಪಕ್ಷ ಆಚರಣೆಯ ಭಾಗವಾಗಿದೆ. ಆದ್ದರಿಂದಲೇ ಐತಿಹಾಸಿಕ ಕಾದಂಬರಿಗೆ ಬೇಡಿಕೆ ಹೆಚ್ಚು.ಹಾಗಂತ ಒಳ್ಳೆಯ ಕಥನವಿಲ್ಲದ ಪ್ರಚಾರದ ವಸ್ತುವಿನ ಕೃತಿಯೊಂದು ಯಾವಾಗಲೂ ಯಶಸ್ವಿಯಾಗಲಾರದು. ದೊಡ್ಡ ಅಲೆಯಲ್ಲಿ ದೂರಕ್ಕೆ ಈಜಿದೆನೆಂದು ಭ್ರಮಿಸಿದವನು, ಮತ್ತೊಮ್ಮೆ ಅಷ್ಟು ದೂರ ತಾನೊಬ್ಬನೇ ಈಜಲಾರ. ಕನ್ನಡದ ಓದುಗರು ಯಾವತ್ತೂ ಪ್ರಭುದ್ಧರು. ಸಾವಿರಾರು ವರ್ಷಗಳ ಸಾಹಿತ್ಯದ ಓದಿನ ಹಿನ್ನೆಲೆ ಅವರಿಗಿದೆ. ಆದ್ದರಿಂದ ಒಳ್ಳೆಯದನ್ನು ಮತ್ತು ಹೊಸತನ್ನು ಗುರುತಿಸುವ, ಗುರುತಿಸಿದ್ದನ್ನು ಉಳಿಸಿಕೊಳ್ಳುವ ಕೌಶಲ್ಯ ಅವರಿಗಿದೆ. ಹತ್ತಾರು ಬಹುಮಾನ, ಪ್ರಶಸ್ತಿ ನೀಡಿ ಸಂಭ್ರಮಿಸುವ ಕನ್ನಡ ಓದುಗರ ಸ್ವಭಾವ ಭಾರತದ ಬೇರೆ ಯಾವ ಭಾಷೆಯ ಓದುಗರಲ್ಲಿಯೂ ಕಾಣುವುದಿಲ್ಲ. ಕನ್ನಡದ ಸಿನಿಮಾದವರು ಸುಲಭವಾಗಿ ಪ್ರೇಕ್ಷಕರನ್ನು ತಮ್ಮ ಚಿತ್ರದ ಸೋಲಿಗೆ ಕಾರಣವೆಂದು ಆರೋಪಿಸಿದಂತೆ, ಕತೆಗಾರರು ತಮ್ಮ ಕೃತಿಯ ವೈಫಲ್ಯಕ್ಕೆ ಎಂದೂ ಓದುಗರನ್ನು ಆರೋಪಿಸಲು ಸಾಧ್ಯವಿಲ್ಲ.
ನಿಮ್ಮ ಹೊಸ ಕಾದಂಬರಿ ಓದುವುದಕ್ಕೆ ಐದು ಕಾರಣ ಕೊಡಿ ಅಂದರೆ ಏನು ಹೇಳುತ್ತೀರಿ?
ಇದು ಓದುಗರು ಕಂಡುಕೊಳ್ಳಬೇಕಾದ ಉತ್ತರ. ನನ್ನ ಕೃತಿಯನ್ನು ಯಾರ ಮೇಲೂ ಆಮಿಷ ಒಡ್ಡಿ ಓದಲು ಒತ್ತಾಯಿಸಲಾರೆ. ಇಂತಹದೇ ಕಾರಣಕ್ಕೆ ಓದಿ ಎಂಬ ಬೇಲಿ ಹಾಕುವುದು ಓದುಗರಿಗೆ ಮಾಡಿದ ಅನ್ಯಾಯವೆಂದು ಭಾವಿಸುವೆ. ಕೃತಿಯೊಂದು ಮೂಡಿಸುವ ಭಾವವು ಪ್ರತಿಯೊಬ್ಬ ಓದುಗನಿಗೂ ಅನನ್ಯವಾಗಿರುತ್ತದೆ. ಅದು ಕಾಲಕಾಲಕ್ಕೆ ಒಬ್ಬನೇ ಓದುಗನಿಗೆ ಬೇರೆಯಾಗುತ್ತಾ ಹೋಗುತ್ತದೆ.
ರೇಷ್ಮೆ ಬಟ್ಟೆ- Peter Frankopan ಬರೆದ ಸಿಲ್ಕ್ ರೋಡ್-ನಿಂದ ಪ್ರಭಾವಿತವೆ?
ಖಂಡಿತಾ ಅಲ್ಲ. ಅವನು ಆ ಹೆಸರಿನ ತನ್ನ ಕೃತಿಯಲ್ಲಿ ವಿಶ್ವದ ಸಾವಿರಾರು ವರ್ಷಗಳ ಇತಿಹಾಸವನ್ನು ಸಂಕ್ಷಿಪ್ತವಾಗಿ ಬರೆದಿದ್ದಾನೆ. ನಾನು ಕೇವಲ ಎರಡನೆಯ ಶತಮಾನ ಮತ್ತು ಏಷ್ಯಾ ಖಂಡಕ್ಕೆ ಸೀಮಿತವಾಗಿದ್ದೇನೆ. ಅವನ ಪುಸ್ತಕದಲ್ಲಿ ನಾಲ್ಕು ಪುಟಗಳಲ್ಲಿ ಚುಟುಕಾಗಿ ಹೇಳಿದ ಭಾವಗೀತೆ, ನನ್ನಲ್ಲಿ ಶಾಸ್ತ್ರೀಯ ಸಂಗೀತದ ಆಲಾಪನೆಯಾಗಿ ಸುದೀರ್ಘವಾಗಿ ಹೊರಹೊಮ್ಮಿದೆ. ಅವನದು ಲಾಂಗ್‌ಶಾಟ್ ಆದರೆ, ನನ್ನದು ಕ್ಲೋಜ್‌ಅಪ್. ಅವನಿಗೆ ಜನಸಾಮಾನ್ಯರ ಬದುಕಿಗಿಂತಲೂ ರಾಜಕೀಯ ಇತಿಹಾಸ ಮುಖ್ಯ. ನನ್ನದು ತದ್ವಿರುದ್ಧ ಮನೋಭಾವ.
ಕಾದಂಬರಿ ಬರೆಯುವ ಹೊತ್ತಿಗೆ ಎದುರಾದ ಸಂಕಟ ಸಂಭ್ರಮಗಳೇನು?
ಮಥುರಾ ಮತ್ತು ಕಾಶ್ಮೀರ ಹೊರತು ಪಡಿಸಿದರೆ, ಇಡೀ ಕಾದಂಬರಿಯ ಯಾವ ಭೂಭಾಗವನ್ನೂ ನಾನು ಕಂಡಿಲ್ಲ. ನಾನು ನಿರೂಪಿಸಿದ ಧರ್ಮಗಳ ಅನುಯಾಯಿಗಳ ನಿಕಟ ಪರಿಚಯ ನನಗಿಲ್ಲ. ಎರಡನೆಯ ಶತಮಾನದ ಬದುಕಿನ ಕ್ರಮಗಳೂ ಜಗತ್ತಿಗೆ ಅಷ್ಟಾಗಿ ತಿಳಿದಿಲ್ಲ. ಆದ್ದರಿಂದ ಇದರ ರಚನೆಯು ಕಲ್ಪನಾಶಕ್ತಿಗೆ ದೊಡ್ಡ ಸವಾಲಾಗಿತ್ತು. ಈ ಹಿಂದೆ ತೇಜೋ ಕೃತಿಯಲ್ಲಿ ಓದುಗರು ವಿಜಯನಗರ ಭಾಗಕ್ಕಿಂತಲೂ ಲಿಸ್ಬನ್ ನಗರದ ಕಥನವನ್ನು ಹೆಚ್ಚು ಇಷ್ಟ ಪಟ್ಟಿದ್ದರು. ಈ ಸಂಗತಿ ನನಗೆ ಭಂಡ ಧೈರ್ಯವನ್ನು ಕೊಟ್ಟಿತ್ತು. ಇದನ್ನಿಲ್ಲಿ ಇಡೀ ಕಾದಂಬರಿಗೆ ಅಳವಡಿಸಿದ್ದೇನೆ. ನಮ್ಮದೇ ಆತ್ಮಕತೆಯ ಸಂಗತಿಗಳನ್ನು ಕಾದಂಬರಿಯಾಗಿ ಬರೆಯುವುದರಲ್ಲಿ ನನಗೆ ಆಸಕ್ತಿ ಹೋಗಿದೆ. ಅದು ಅಂತಹ ಸವಾಲಿನ ಬರವಣಿಗೆಯಲ್ಲ ಅನ್ನಿಸುತ್ತಿದೆ. ತತನ್ನದಲ್ಲದ ಜಗತ್ತನ್ನು ಓದುಗರು ಅಹುದೆನ್ನುವಂತೆ ಸೃಷ್ಟಿಸುವುದೇ ಕತೆಗಾರನ ಅಗ್ನಿದಿವ್ಯ. ವಾಲ್ಮೀಕಿ, ವ್ಯಾಸ, ಪಂಪ, ಕುಮಾರವ್ಯಾಸ ನಿರೂಪಿಸಿ ತೋರಿಸಿದ್ದಾರೆ. ಈಗ ನಮ್ಮ ಸರದಿ.
ವಿಶೇಷವೆಂದರೆ ಈ ಕಾದಂಬರಿ ಆರಂಭದಲ್ಲಿ ಕಷ್ಟವೆಂದು ಕಂಡರೂ ನಿಧಾನಕ್ಕೆ ದಾರಿ ತೆರೆದುಕೊಳ್ಳುತ್ತಾ ಹೋಯಿತು. ತೇಜೋ ಕೃತಿಯನ್ನು ಬರೆವಾಗ ಇಡೀ ಕಾದಂಬರಿಯನ್ನು ಮನಸ್ಸಿನಲ್ಲಿ ಕಟ್ಟಿಕೊಂಡು ಅನಂತರ ಅಕ್ಷರಕ್ಕಿಳಿಸಿದ್ದೆ. ಆದ್ದರಿಂದ ನನಗೆ ಅಚ್ವರಿಗಳಿರಲಿಲ್ಲ. ಈ ಕೃತಿಯಲ್ಲಿ ಕತ್ತಲ ದಾರಿಯಲ್ಲಿ ನಡೆದರೂ, ಸುಖವಾಗಿ ಪ್ರಯಾಣಿಸಿದ ರೀತಿ ನನಗೆ ಬೆರಗು ತಂದಿದೆ. ನನಗೆ ತಿಳಿಯದ ನನ್ನ ಶಕ್ತಿಯನ್ನು ಈ ಕೃತಿ ನನಗೆ ಪರಿಚಯಿಸಿದೆ.
ಹಲವು ಧರ್ಮಗಳ ಅಧ್ಯಯನ ನನ್ನ ಸಹಿಷ್ಣುತೆಯನ್ನು ಹೆಚ್ಚಿಸಿವೆ. ಯಾವ ಧರ್ಮವೂ ಮನುಷ್ಯನಿಗೆ ಕೇಡು ಬಗೆಯಲು ಹುಟ್ಟಿಕೊಂಡಿಲ್ಲ. ಆದರೆ ಸ್ವಾರ್ಥಿ ಮನುಷ್ಯ, ಅದನ್ನು ಧರ್ಮದ ದುರುಪಯೋಗ ಮಾಡುತ್ತಾನೆ.
ನೀವು ಬೇರೆ ಬೇರೆ ಭಾಷೆಗಳ ಹೊಸ ಲೇಖಕರ ಪುಸ್ತಕ ಕನ್ನಡಕ್ಕೆ ತರುತ್ತಿದ್ದೀರಿ, ಕನ್ನಡದ ಪುಸ್ತಕಗಳನ್ನು ಬೇರೆ ಭಾಷೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೀರಾ?
ನನಗೆ ಕನ್ನಡ ಬಿಟ್ಟರೆ ಬೇರೆ ಭಾಷೆಗಳು ಆ ಮಟ್ಟದಲ್ಲಿ ಒಲಿದಿಲ್ಲ. ನಾನು ಈ ಕೆಲಸ ಮಾಡಲು ಹೇಗೆ ಸಾಧ್ಯ? ಅದು ನನ್ನ ಪ್ರಮುಖ ಜವಾಬ್ದಾರಿಯೂ ಅಲ್ಲ. ನಾನು ಕನ್ನಡದಲ್ಲಿ ಇನ್ನೂ ನಾಲ್ಕಾರು ಅತ್ಯುತ್ತಮ ಕಾದಂಬರಿ ಬರೆದರೆ, ನನ್ನ ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸಿದಂತೆ. ಬೇರೆ ಸಂಗತಿಗಳಲ್ಲಿ ಕೈಲಾದ ಮಟ್ಟಿಗೆ ತೊಡಗಿಸಿಕೊಳ್ಳುವೆ, ಆದರೆ ದೊಡ್ಡ ನಿರೀಕ್ಷೆಗಳಿಲ್ಲ. ಛಂದ ಪುಸ್ತಕದ ಕೆಲಸಗಳೇ ನನ್ನ ಸೃಜನಶೀಲ ಸಮಯವನ್ನು ಸಾಕಷ್ಟು ಬೇಡುತ್ತವೆ. ಬೇರೆಯದಕ್ಕೆ ಹೇಗೆ ತೊಡಗಿಸಿಕೊಳ್ಳಲಿ? ಎಲ್ಲವನ್ನೂ ಒಬ್ಬರೇ ನಿರ್ವಹಿಸುವ ಅವಶ್ಯಕತೆಯಿಲ್ಲ. ಕನ್ನಡ ಭಾಷೆಗೆ ತನ್ನ ಅಭ್ಯುದಯಕ್ಕೆ ಬೇಕಾದ ಸೂಕ್ತ ವ್ಯಕ್ತಿಗಳನ್ನು ಕಂಡುಕೊಳ್ಳುವ ಶಕ್ತಿ ಇರುತ್ತದೆ.
ಚಿತ್ರರಂಗದ ಉಳಿವಿಗಾಗಿ, ಏಳಿಗೆಗಾಗಿ ಹೋಮದ ಮೊರೆ: ಹಿರಿಯ ಪತ್ರಕರ್ತ ಜೋಗಿ ಕೊಟ್ಟಿದ್ದಾರೆ ಉತ್ತಮ ಸಲಹೆ!
ನಿಮ್ಮ ಪ್ರಕಾರ ಕನ್ನಡ ಪುಸ್ತಕೋದ್ಯಮದ ಆಯಸ್ಸು ಎಷ್ಟು?
ಎರಡು ಸಾವಿರ ವರ್ಷದಿಂದ ಗಟ್ಟಿಯಾಗಿ ನೆಲೆ ನಿಂತ ಕನ್ನಡ ಇನ್ನೂ ಎರಡು ಸಾವಿರ ವರ್ಷ ಬಾಳುವ ಶಕ್ತಿಯನ್ನು ಹೊಂದಿದೆ. ಭಾಷೆ ದೇವರಿದ್ದಂತೆ. ದೇವರಿಗೆ ಹುಲುಮಾನವ ಯಾವ ಸಹಾಯ ಮಾಡಬಲ್ಲ? ಆದರೆ ಪುಸ್ತಕೋದ್ಯಮ ಈ ಹಿಂದಿನ ವೈಭವದಲ್ಲಿಯೇ ಮುಂದೆಯೂ ಇರಲಿಕ್ಕಿಲ್ಲ. ನಮ್ಮ ರಾಜಕೀಯ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಕನ್ನಡ ಶಾಲೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡಿದ್ದಾರೆ. ಅವರ ಯಜಮಾನಿಕೆಯ ಖಾಸಗಿ ಶಾಲೆಗಳು ಎಂದೂ ಕನ್ನಡ ಭಾಷೆಗೆ ಅಥವಾ ಯಾವುದೇ ಭಾಷೆಗೆ ಪ್ರಾಮುಖ್ಯತೆ ಕೊಡುವುದಿಲ್ಲ. ಅಲ್ಲಿ ವ್ಯಾಕರಣಕ್ಕಿಂತಲೂ ಕಾಂಚಾಣಕ್ಕೆ ಮಹತ್ವವಿರುತ್ತದೆ. ಮುಂದೊಮ್ಮೆ ಕನ್ನಡ ಪುಸ್ತಕೋದ್ಯಮ ಅಂತ್ಯ ಕಂಡರೆ ಅದಕ್ಕೆ ನಮ್ಮ ರಾಜಕೀಯ ನಾಯಕರೇ ಹೊಣೆ ಹೊರಬೇಕಾಗುತ್ತದೆ. ಸರಕಾರಿ ಶಾಲೆಗಳು ಕನ್ನಡ ಸಾಹಿತ್ಯದ ಬೆನ್ನೆಲುಬಾಗಿವೆ. ಅದನ್ನು ಮುರಿಯಲು ಎಲ್ಲ ರಾಜಕೀಯ ನಾಯಕರೂ ಸಜ್ಜಾಗಿದ್ದಾರೆ.