ನಾಸಾದ ಪಾರ್ಕರ್ ಪ್ರೋಬ್‌ ಇಂದು ಸೂರ್ಯನಿಗೆ ಐತಿಹಾಸಿಕ ಸನಿಹದಲ್ಲಿ ಹಾರಾಟ!

By Suvarna News  |  First Published Dec 24, 2024, 11:36 AM IST

ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ಹೊರ ವಾತಾವರಣಕ್ಕೆ ಅಭೂತಪೂರ್ವ ಸನಿಹದ ಹಾರಾಟ ನಡೆಸಲಿದೆ. ಈ ಅಪಾಯಕಾರಿ ಕಾರ್ಯಾಚರಣೆಯಲ್ಲಿ, ನೌಕೆ ಸೂರ್ಯನ ಮೇಲ್ಮೈಯಿಂದ ಕೇವಲ 6.2 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದುಹೋಗಲಿದ್ದು, 1,400 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಭಾರೀ ವಿಕಿರಣವನ್ನು ಎದುರಿಸಲಿದೆ.


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನಾಸಾದ ಬಾಹ್ಯಾಕಾಶ ನೌಕೆಯೊಂದು ಸೂರ್ಯನಿಗೆ ಹಿಂದೆ ಯಾರೂ ನಡೆಸಿರದಷ್ಟು ಸನಿಹದ ಹಾರಾಟ ನಡೆಸುವ ಮೂಲಕ ಐತಿಹಾಸಿಕ ಮೈಲಿಗಲ್ಲೊಂದನ್ನು ಸ್ಥಾಪಿಸಲು ಸಿದ್ಧತೆ ನಡೆಸಿದೆ.

Tap to resize

Latest Videos

undefined

ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆ ಅಪಾರ ಪ್ರಮಾಣದ ತಾಪ ಮತ್ತು ವಿಕಿರಣವನ್ನು ಹೊಂದಿರುವ ಸೂರ್ಯನ ಹೊರ ವಾತಾವರಣವನ್ನು ಪ್ರವೇಶಿಸಲಿದೆ.

ಈ ಅತ್ಯಂತ ಉಷ್ಣತೆಯ ವಾತಾವರಣದಲ್ಲಿ ಸೂರ್ಯನ ಸನಿಹದಿಂದ ಹಾರಾಟ ನಡೆಸುವಾಗ, ಪಾರ್ಕರ್ ಸೂರ್ಯ ಅನ್ವೇಷಣಾ ಯೋಜನೆ ಕನಿಷ್ಠ ಮೂರು ದಿನಗಳ ಕಾಲ ಭೂಮಿಯಿಂದ ಸಂಪರ್ಕ ಕಡಿದುಕೊಳ್ಳಲಿದೆ. ಈ ಯೋಜನೆ ಯಶಸ್ವಿಯಾಗಿ ತನ್ನ ಉದ್ದೇಶವನ್ನು ಸಾಧಿಸಿತೇ ಎಂದು ಖಾತ್ರಿಪಡಿಸಲು ವಿಜ್ಞಾನಿಗಳು ಡಿಸೆಂಬರ್ 27ರಂದು ಅದರಿಂದ ಬರುವ ಸಂಕೇತವನ್ನು ಎದುರು ನೋಡಲಿದ್ದಾರೆ.

'ಮಹಾರತ್ನ' ಎಚ್ಎಎಲ್ ಇನ್ನಷ್ಟು ಸಾಧನೆ ಮೆರೆಯಲಿ: 85ನೇ ಸಂಸ್ಥಾಪನಾ ದಿನದಂದು ಯದುವೀರ್ ಒಡೆಯರ್ ಶ್ಲಾಘನೆ

ಈ ಯೋಜನೆ ಸೂರ್ಯ ಹೇಗೆ ಕಾರ್ಯಾಚರಿಸುತ್ತದೆ ಎಂಬ ಕುರಿತು ಹೆಚ್ಚಿನ ಮಾಹಿತಿಗಳನ್ನು ಗಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ.

"ಮಾನವರು ಶತಮಾನಗಳ ಕಾಲ ಸೂರ್ಯನ ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಆದರೆ, ಸೂರ್ಯನ ಸನಿಹಕ್ಕೆ ತೆರಳಿ, ಸೂರ್ಯನ ನೇರ ಅನುಭವ ಪಡೆಯುವ ತನಕ ನಿಮಗೆ ಸೂರ್ಯನ ವಾತಾವರಣವನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಿಲ್ಲ" ಎಂದು ನಾಸಾದ ವಿಜ್ಞಾನ ವಿಭಾಗ ಮುಖ್ಯಸ್ಥರಾದ ಡಾ. ನಿಕೋಲಾ ಫಾಕ್ಸ್ ಅವರು ವಿವರಿಸಿದ್ದಾರೆ.

ಅಂದರೆ, ಸೂರ್ಯನ ವಾತಾವರಣದ ಮೂಲಕ ಹಾದು ಹೋಗದಿದ್ದರೆ, ನಮಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

2018ರಲ್ಲಿ ಉಡಾವಣೆಗೊಂಡಿರುವ ಪಾರ್ಕರ್ ಸೋಲಾರ್ ಪ್ರೋಬ್ ನಮ್ಮ ಸೌರಮಂಡಲದ ಹೃದಯವಾಗಿರುವ ಸೂರ್ಯನನ್ನು ವಿಸ್ತೃತವಾಗಿ ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಈಗಾಗಲೇ 21 ಬಾರಿ ಸೂರ್ಯನನ್ನು ದಾಟಿ ಹಾರಾಟ ನಡೆಸಿದ್ದು, ಪ್ರತಿಯೊಂದು ಬಾರಿಯೂ ಅದು ಸೂರ್ಯನಿಗೆ ಹೆಚ್ಚು ಹೆಚ್ಚು ಹತ್ತಿರ ಸಾಗಿದೆ. ಆದರೆ, ಈ ಬಾರಿ ಕ್ರಿಸ್ಮಸ್ ಹಬ್ಬದ ಹಿಂದಿನ ದಿನ (ಡಿಸೆಂಬರ್ 24) ಅದು ಸೂರ್ಯನಿಗೆ ಹೊಸದೊಂದು ದಾಖಲೆ ಬರೆಯುವಷ್ಟು ಸನಿಹದಿಂದ ಸಾಗಲಿದೆ.

ಈ ಅತ್ಯಂತ ಸನಿಹದ ಹಾರಾಟದ ಸಂದರ್ಭದಲ್ಲಿ, ಪಾರ್ಕರ್ ಸೂರ್ಯ ಅನ್ವೇಷಣಾ ಯೋಜನೆ ಸೂರ್ಯನ ಮೇಲ್ಮೈಯಿಂದ ಕೇವಲ 3.8 ಮಿಲಿಯನ್ ಮೈಲಿ (6.2 ಮಿಲಿಯನ್ ಕಿಲೋಮೀಟರ್) ದೂರದಲ್ಲಿರಲಿದೆ. ಇದನ್ನು ಇನ್ನಷ್ಟು ವಿವರಿಸುವುದಾದರೆ, ಸೂರ್ಯ ಭೂಮಿಯಿಂದ ಅಂದಾಜು 150 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಈ ಅಗಾಧ ಅಂತರಕ್ಕೆ ಹೋಲಿಸಿದರೆ, ತನ್ನ ಸಾಮಾನ್ಯ ಅಂತರದಿಂದ ಈ ಯೋಜನೆ ಸೂರ್ಯನಿಗೆ ಅತ್ಯಂತ ಸನಿಹದಿಂದ ಸಾಗಲಿದೆ.

ಈ ಅಂತರ ಅತ್ಯಂತ ಸನಿಹ ಎಂಬಂತೆ ಕಂಡುಬರದಿದ್ದರೂ, ನಾಸಾದ ನಿಕೋಲಾ ಫಾಕ್ಸ್ ಇದನ್ನು ಹೀಗೆ ವಿವರಿಸುತ್ತಾರೆ: "ಭೂಮಿ ಸೂರ್ಯನಿಂದ ಅಂದಾಜು 150 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ನಾವು ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು ಒಂದು ಮೀಟರ್ (100 ಸೆಂಟಿಮೀಟರ್) ಎಂದು ಊಹಿಸಿದರೆ, ಪಾರ್ಕರ್ ಸೂರ್ಯ ಅನ್ವೇಷಣಾ ಯೋಜನೆ ಸೂರ್ಯನಿಂದ ಕೇವಲ ನಾಲ್ಕು ಸೆಂಟಿಮೀಟರ್ ದೂರದಲ್ಲಿ ಇರಲಿದೆ. ಅಂದರೆ, ಪಾರ್ಕರ್ ಯೋಜನೆ ಸೂರ್ಯನಿಗೆ ಅಷ್ಟೊಂದು ಸನಿಹಕ್ಕೆ ತೆರಳಲಿದೆ!"

ಈ ಯೋಜನೆ ಸೂರ್ಯನ ಸನಿಹಕ್ಕೆ ತೆರಳಿದಾಗ, 1,400 ಡಿಗ್ರಿ ಸೆಲ್ಸಿಯಸ್‌ಗಳ ಅಪಾರ ತಾಪ ಮತ್ತು ಭಾರೀ ಪ್ರಮಾಣದ ವಿಕಿರಣಗಳನ್ನು ಎದುರಿಸಲಿದೆ. ಇಷ್ಟೊಂದು ಭಾರೀ ಪ್ರಮಾಣದ ತಾಪ ಮತ್ತು ವಿಕಿರಣಗಳು ಬಾಹ್ಯಾಕಾಶ ನೌಕೆಯ ಒಳಗಿರುವ ಇಲೆಕ್ಟ್ರಾನಿಕ್ಸ್ ಮೇಲೆ ದುಷ್ಪರಿಣಾಮಗಳನ್ನು ಬೀರಬಲ್ಲದು.

ಈ ಬಾಹ್ಯಾಕಾಶ ನೌಕೆಗೆ ರಕ್ಷಣೆ ಒದಗಿಸುವ ಸಲುವಾಗಿ, ಇದಕ್ಕೆ 11.5 ಸೆಂಟಿಮೀಟರ್ (4.5 ಇಂಚ್) ದಪ್ಪನೆಯ ಕಾರ್ಬನ್ ಶೀಲ್ಡ್ ಅಳವಡಿಸಲಾಗಿದೆ. ಪಾರ್ಕರ್ ಯೋಜನೆ ಕ್ಷಿಪ್ರವಾಗಿ ಸೂರ್ಯನ ಸನಿಹಕ್ಕೆ ತೆರಳಿ, ಅಲ್ಲಿಂದ ಹಾದು ಮುಂದೆ ಸಾಗುವ ಗುರಿ ಹೊಂದಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಬೇರೆ ಯಾವುದೇ ಮಾನವ ನಿರ್ಮಿತ ವಸ್ತುವಿನಿಂದ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದು, ಪ್ರತಿ ಗಂಟೆಗೆ 6,92,000 ಕಿಲೋಮೀಟರ್ ವೇಗವನ್ನು ತಲುಪಲಿದೆ. ಇದನ್ನು ಸರಳವಾಗಿ ವಿವರಿಸುವುದಾದರೆ, ಲಂಡನ್ನಿನಿಂದ ನ್ಯೂಯಾರ್ಕ್‌ಗೆ 30 ಸೆಕೆಂಡಿಗೂ ಕಡಿಮೆ ಸಮಯದಲ್ಲಿ ತಲುಪುವಷ್ಟು ವೇಗವಾಗಿ ಇದು ಸಾಗಲಿದೆ!

ಸೂರ್ಯನ ಸನಿಹಕ್ಕೆ ತೆರಳಲು ಯಾಕೆ ಇಷ್ಟೊಂದು ಶತಪ್ರಯತ್ನ?

ಬಾಹ್ಯಾಕಾಶ ನೌಕೆ ಕೊರೋನಾ ಎಂದು ಕರೆಯಲಾಗುವ ಸೂರ್ಯನ ಹೊರ ಪದರದ ಮೂಲಕ ಸಾಗಿದರೆ, ಅದರಿಂದ ಸುದೀರ್ಘ ಸಮಯದಿಂದ ಅರಿಯಲು ಸಾಧ್ಯವಾಗಿರದ ಸೂರ್ಯನ ರಹಸ್ಯಗಳನ್ನು ತಿಳಿಯಲು ಸಾಧ್ಯವಾಗಬಹುದು ಎಂದು ಭಾವಿಸಿದ್ದಾರೆ.

"ಸೂರ್ಯನ ಹೊರ ಪದರವಾದ ಕೊರೋನಾ ಅತ್ಯಂತ ಬಿಸಿಯ ಪದರವಾಗಿದ್ದು, ಅದು ಯಾಕೆ ಅಷ್ಟೊಂದು ಬಿಸಿಯಾಗಿದೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ" ಎಂದು ಫಿಫ್ತ್ ಸ್ಟಾರ್ ಲ್ಯಾಬ್ಸ್‌ನ ಖಗೋಳಶಾಸ್ತ್ರಜ್ಞರಾದ ಡಾ. ಜೆನಿಫರ್ ಮಿಲ್ಲಾರ್ಡ್ ಹೇಳಿದ್ದಾರೆ.

ಸೂರ್ಯನ ಮೇಲ್ಮೈ ಅಂದಾಜು 6,000 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೊಂದಿರುತ್ತದೆ. ಆದರೆ, ನಮಗೆ ಸೂರ್ಯ ಗ್ರಹಣದ ಸಂದರ್ಭದಲ್ಲಿ ಮಾತ್ರವೇ ಕಾಣುವ ಸೂರ್ಯನ ಹೊರ ಪದರವಾದ ಕೊರೋನಾ ಅತ್ಯಂತ ಹೆಚ್ಚು ಬಿಸಿಯಾಗಿದ್ದು, ಮಿಲಿಯನ್ ಗಟ್ಟಲೆ ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಲುಪುತ್ತದೆ. ಆದರೆ, ವಿಚಿತ್ರ ವಿಚಾರವೆಂದರೆ, ಕೊರೋನಾ ಸೂರ್ಯನ ಮೇಲ್ಮೈಯಿಂದ ಸಾಕಷ್ಟು ದೂರದಲ್ಲಿದೆ. ಆದರೂ ಕೊರೋನಾ ಹೇಗೆ ಅಷ್ಟೊಂದು ಭಾರೀ ಪ್ರಮಾಣದ ತಾಪಮಾನ ಹೊಂದಲು ಸಾಧ್ಯ?

ಪಾರ್ಕರ್ ಯೋಜನೆ ವಿಜ್ಞಾನಿಗಳಿಗೆ ಸೌರ ಮಾರುತಗಳ ಕುರಿತೂ ಮಾಹಿತಿ ಒದಗಿಸಲಿದೆ. ಸೌರ ಮಾರುತಗಳೆಂದರೆ, ಸೂರ್ಯನ ವಾತಾವರಣದ ಹೊರಪದರವಾದ ಕೊರೋನಾದಿಂದ ನಿರಂತರವಾಗಿ ಹರಿದು ಬರುವ ಚಾರ್ಜ್ ಹೊಂದಿರುವ ಕಣಗಳಾಗಿವೆ.

ಈ ಕಣಗಳು ಭೂಮಿಯ ಕಾಂತಕ್ಷೇತ್ರದ ಜೊತೆ ಬೆರೆತಾಗ, ಅವುಗಳ ಆಕಾಶದಲ್ಲಿ ಅರೋರಾಗಳು ಎಂದು ಕರೆಯಲ್ಪಡುವ (ಧ್ರುವ ಪ್ರದೇಶಗಳ ಬಳಿ ಕಾಣಿಸುವ ಪ್ರಕಾಶಮಾನವಾದ, ಬಣ್ಣಗಳ ಬೆಳಕು) ಆಕರ್ಷಕ, ಅದ್ಭುತವಾದ ಬೆಳಕಿನ ಚಿತ್ತಾರವನ್ನು ಮೂಡಿಸುತ್ತವೆ.

ನಾಸಾ ಪಾರ್ಕರ್‌ ಸೋಲಾರ್‌ ಪ್ರೋಬ್‌ಗೂ ಇಸ್ರೋ ಆದಿತ್ಯ ಎಲ್‌ - 1 ಮಿಷನ್‌ಗೂ ವ್ಯತ್ಯಾಸವೇನು? ಇಲ್ಲಿದೆ ವಿವರ..

* ಭೂಮಿಯ ಮೇಲ್ಪದರದಲ್ಲಿ ಕರಗಿರುವ ಕಬ್ಬಿಣದ ಚಲನೆಯ ಪರಿಣಾಮವಾಗಿ ಭೂಮಿಯ ಕಾಂತೀಯ ಕ್ಷೇತ್ರ ಉಂಟಾಗುತ್ತದೆ. ಇಂತಹ ಚಲನೆಗಳು ವಿದ್ಯುತ್ ಪ್ರವಾಹವನ್ನು ಉಂಟುಮಾಡಿ, ಅದು ಭೂಮಿಯ ಸುತ್ತಲೂ ಕಾಂತಕ್ಷೇತ್ರವನ್ನು ನಿರ್ಮಿಸುತ್ತದೆ.
--
ಆದರೆ, ಈ 'ಬಾಹ್ಯಾಕಾಶ ವಾತಾವರಣ' ಪವರ್ ಗ್ರಿಡ್‌ಗಳಿಗೆ ಹಾನಿ, ಇಲೆಕ್ಟ್ರಾನಿಕ್ ಉಪಕರಣಗಳನ್ನು ಹಾಳುಗೆಡವುವುದು, ಹಾಗೂ ಸಂವಹನ ವ್ಯವಸ್ಥೆಯಲ್ಲಿ ಅಡಚಣೆ ಉಂಟುಮಾಡುವುದು ಸೇರಿದಂತೆ, ಹಲವಾರು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.

ಆದರೆ, ಸೂರ್ಯನ ಅಧ್ಯಯನ ನಡೆಸಿ, ಅದರ ವರ್ತನೆ, ಬಾಹ್ಯಾಕಾಶ ವಾತಾವರಣಗಳು, ಸೌರ ಮಾರುತಗಳನ್ನು ವಿಸ್ತೃತವಾಗಿ ತಿಳಿಯುವುದರಿಂದ, ಭೂಮಿಯಲ್ಲಿ ದೈನಂದಿನ ಜೀವನದ ಮೇಲೆ ಅದರ ಪರಿಣಾಮಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಡಾ. ಮಿಲ್ಲರ್ಡ್ ಹೇಳಿದ್ದಾರೆ.

ನಾಸಾ ವಿಜ್ಞಾನಿಗಳು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಭೂಮಿಯ ಸಂಪರ್ಕದಿಂದ ದೂರಾಗಿರುವ ಬಾಹ್ಯಾಕಾಶ ನೌಕೆಯಿಂದ ಬರುವ ಸಂಕೇತಗಳಿಗಾಗಿ ಕಾತರದಿಂದ ಕಾಯಲಿದ್ದಾರೆ.

ಈ ಬಾಹ್ಯಾಕಾಶ ನೌಕೆ ಒಂದು ಬಾರಿ ಭೂಮಿಗೆ ಸಂಕೇತ ಕಳುಹಿಸಿದ ತಕ್ಷಣವೇ, ಭೂಮಿಯಲ್ಲಿರುವ ತಂಡ ನೌಕೆ ಸುರಕ್ಷಿತವಾಗಿದೆ ಎಂದು ತಿಳಿದು, ಅದಕ್ಕೆ ಹಸಿರು ಹೃದಯದ ಸಂಕೇತ ಕಳುಹಿಸಲಿದ್ದಾರೆ ಎಂದು ನಿಕೋಲಾ ಫಾಕ್ಸ್ ವಿವರಿಸಿದ್ದಾರೆ.

ಅವರು ಈ ಯೋಜನೆಯ ಕುರಿತು ಕಳವಳ ಹೊಂದಿರುವುದಾಗಿ ತಿಳಿಸಿದ್ದು, ಆದರೆ ಪಾರ್ಕರ್ ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಳಿಸಲಿದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ.

"ನನಗೆ ಬಾಹ್ಯಾಕಾಶ ನೌಕೆಯ ಸುರಕ್ಷತೆಯ ಕುರಿತು ಆತಂಕಗಳಿವೆ. ಆದರೆ, ಅದನ್ನು ಇಂತಹ ತೀವ್ರ ಪರಿಸ್ಥಿತಿಗಳನ್ನು, ಕಠಿಣ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗುವಂತೆಯೇ ನಿರ್ಮಿಸಲಾಗಿದೆ. ಅದು ಗಟ್ಟಿಯಾದ, ಸ್ಥಿರವಾದ ಒಂದು ಸಣ್ಣ ಬಾಹ್ಯಾಕಾಶ ನೌಕೆ" ಎಂದು ಅವರು ವಿವರಿಸಿದ್ದಾರೆ.

click me!