1.4 ಮಿಲಿಯನ್‌ ಮೈಲಿ ಪ್ರಯಾಣ ಮಾಡಿ ಭೂಮಿಗೆ ವಾಪಾಸಾದ ಬಾಹ್ಯಾಕಾಶ ನೌಕೆ!

By Santosh NaikFirst Published Dec 12, 2022, 1:39 PM IST
Highlights

ನಾಸಾದ ಮಾನವ ರಹಿತ ಚಂದ್ರಯಾನ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಅಂದಾಜು 1.4 ಮಿಲಿಯನ್‌ ಮೈಲಿಗಳನ್ನು ಕ್ರಮಿಸಿದ ಆರ್ಟಿಮಿಸ್‌-1 ಮೂನ್‌ ಮಿಷನ್‌ ಓರಿಯನ್‌ ಬಾಹ್ಯಾಕಾಶ ನೌಕೆ ಭಾನುವಾರ ಪೆಸಿಪಿಕ್‌ ಸಮುದ್ರಕ್ಕೆ ಪ್ಯಾರಾಚೂಟ್‌ ಸಹಾಯದಿಂದ ಭೂಮಿಗೆ ಬಿದ್ದಿದೆ.

ಕ್ಯಾಲಿಫೋರ್ನಿಯಾ (ಡಿ.12): ಮತ್ತೊಮ್ಮೆ ಚಂದ್ರನಲ್ಲಿಗೆ ಹೋಗುವ ತನ್ನ ಕನಸನ್ನು ಸಾಕಾರ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ನವೆಂಬರ್‌ನಲ್ಲಿ ಚಂದ್ರನತ್ತ ಹಾರಿಸಲಾಗಿದ್ದ ಆರ್ಟಿಮಿಸ್‌-1 ಚಂದ್ರಯಾನ ಯೋಜನೆ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಭಾನುವಾರ ರಾತ್ರಿ 11.10 ಗಂಟೆಗೆ ಆರ್ಟಿಮಿಸ್‌-1 ಯೋಜನೆಯ ಮಾನವ ರಹಿತ ಬಾಹ್ಯಾಕಾಶ ನೌಕೆ ಒರಿಯನ್‌ ಪೆಸಿಪಿಕ್‌ ಸಮುದ್ರಕ್ಕೆ ಪ್ಯಾರಚೂಟ್‌ ಸಹಾಯದಿಂದ ಇಳಿದಿದೆ. ಬಾಹ್ಯಾಕಾಶದಲ್ಲಿ ಅಂದಾಜು 1.4 ಮಿಲಿಯನ್‌ ಮೈಲಿಗಳನ್ನು ಕ್ರಮಿಸಿ ಈ ನೌಕೆ ಭೂಮಿಗೆ ವಾಪಾಸಾಗಿದ್ದು, 2024ರಲ್ಲಿ ನಡೆಯಲು ಉದ್ದೇಶಿಸಿರುವ ಮಾನವ ಸಹಿತ ಚಂದ್ರಯಾನದ ಕನಸಿಗೆ ದೊಡ್ಡ ಮಟ್ಟದ ವಿಶ್ವಾಸ ನೀಡಿದೆ. ಒರಿಯನ್‌ ಬಾಹ್ಯಾಕಾಶ ನೌಕೆ ಮೆಕ್ಸಿಕೋದ ಗ್ವಾಡಾಲುಪೆ ದ್ವೀಪದ ಬಳಿ ಪೆಸಿಫಿಕ್ ಸಾಗರದಲ್ಲಿ ಇಳಿಯಿತು. ನವೆಂಬರ್‌ 15ರಂದು ತನ್ನ ಮೂರನೇ ಪ್ರಯತ್ನದಲ್ಲಿ ನಾಸಾ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಸಿತ್ತು. ನಾಸಾ ಕೂಡ ಒರಿಯನ್‌ ಬಾಹ್ಯಾಕಾಶ ನೌಕೆ ಭೂಮಿಗೆ ಇಳಿದಿದ್ದನ್ನು ಬಹಳ ವಿಶೇಷ ಎಂದು ಬಣ್ಣಿಸಿದೆ. ಇದೇ ಮೊದಲ ಬಾರಿಗೆ ಸ್ಕಿಪ್‌ ಎಂಟ್ರಿ ತಂತ್ರ ಬಳಸಿ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ಇಳಿಸಲಾಗಿದೆ ಎಂದು ಹೇಳಿದೆ.

Splashdown.

After traveling 1.4 million miles through space, orbiting the Moon, and collecting data that will prepare us to send astronauts on future missions, the spacecraft is home. pic.twitter.com/ORxCtGa9v7

— NASA (@NASA)


ಸ್ಕಿಪ್‌ ಎಂಟ್ರಿಯಲ್ಲಿ, ಮೂರು ಹಂತದಲ್ಲಿ ಲ್ಯಾಂಡಿಂಗ್‌ ಪ್ರಕ್ರಿಯೆ ಇರುತ್ತದೆ. ಓರಿಯನ್ ಮೊದಲು ಭೂಮಿಯ ವಾತಾವರಣದ ಮೇಲಿನ ಭಾಗವನ್ನು ಪ್ರವೇಶಿಸಿತು. ಇದಾದ ಬಳಿಕ ಅದರೊಳಗಿರುವ ಕ್ಯಾಪ್ಸೂಲ್ ಸಹಾಯದಿಂದ ಭೂಮಿಯ ವಾತಾವರಣಕ್ಕೆ ತೆರೆದುಕೊಂಡಿದೆ. ಕೊನೆಗೆ ಪ್ಯಾರಾಚೂಟ್‌ ಸಹಾಯದಿಂದ ಭೂಮಿಯ ವಾತಾವರಣದ ಒಳಗೆ ಆಗಮಿಸಿದೆ ಎಂದು ಹೇಳಿದೆ.

ಸ್ಕಿಪ್ ಎಂಟ್ರಿ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಸಿಬ್ಬಂದಿ ಮಾಡ್ಯೂಲ್ ಮತ್ತು ಸರ್ವೀಸ್‌ ಮಾಡ್ಯೂಲ್ ಪರಸ್ಪರ ಬೇರ್ಪಟ್ಟವು. ಸರ್ವೀಸ್‌ ಮಾಡ್ಯೂಲ್ ಬೆಂಕಿಯಲ್ಲಿ ಬೂದಿಯಾಯಿತು. ಆದರೆ ಸಿಬ್ಬಂದಿ ಮಾಡ್ಯೂಲ್ ಅದರ ಗೊತ್ತುಪಡಿಸಿದ ಸ್ಥಳಕ್ಕೆ ಪ್ಯಾರಾಚೂಟ್ ಮೂಲಕ ಇಳಿದಿದೆ.. ವಾತಾವರಣಕ್ಕೆ ಮರು-ಪ್ರವೇಶವು ಅದರ ವೇಗವನ್ನು ಗಮನಾರ್ಹವಾಗಿ ಕಡಿಮೆ ಮಾಡಿತು.

ಮುಂದಿನ ಕಾರ್ಯಾಚರಣೆಗೆ ಓರಿಯನ್ ಲ್ಯಾಂಡಿಂಗ್ ಅಗತ್ಯ: ಆರ್ಟೆಮಿಸ್-1 ಮಿಷನ್ ಪರೀಕ್ಷಾರ್ಥ ಹಾರಾಟ. ಆರ್ಟೆಮಿಸ್-2 ಮಿಷನ್‌ನಲ್ಲಿ ಗಗನಯಾತ್ರಿಗಳನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಒರಿಯನ್‌ ಬಾಹ್ಯಾಕಾಶ ನೌಕೆ ಭೂಮಿಗೆ ಲ್ಯಾಂಡಿಂಗ್‌ ಆಗಿರುವ ಪ್ರಕ್ರಿಯೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದಾರೆ.  ಇದರ ಹೊರತಾಗಿ, ಸ್ಕಿಪ್ ಎಂಟ್ರಿಯು ನಾಸಾದ ಇತ್ತೀಚಿನ ತಂತ್ರಜ್ಞಾನವಾಗಿದೆ ಮತ್ತು ಓರಿಯನ್ ಅದರ ಮೊದಲ ಪ್ರಯತ್ನವಾಗಿದೆ. ಇದರ ಫಲಿತಾಂಶ ಹಾಗೂ ಪ್ರಕ್ರಿಯೆಗಳ ಆಧಾರದ ಮೇಲೆ ಮುಂದಿನ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಉಡಾವಣೆ ಮಾಡುವ ಯೋಜನೆಯ ಕೆಲಸ ನಡೆಸಲಿದೆ. 

53 ವರ್ಷಗಳ ನಂತರ ಮತ್ತೊಮ್ಮೆ ಆರ್ಟೆಮಿಸ್ ಮಿಷನ್ ಮೂಲಕ ಚಂದ್ರನ ಮೇಲೆ ಮಾನವರನ್ನು ಕಳುಹಿಸಲು ಅಮೆರಿಕ ಸಿದ್ಧತೆ ನಡೆಸಿದೆ. ಇದನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಆರ್ಟೆಮಿಸ್-1, 2 ಮತ್ತು 3. ಆರ್ಟೆಮಿಸ್-1 ಚಂದ್ರನ ಸುತ್ತ ಸುತ್ತಿದ್ದಲ್ಲದೆ,  ಕೆಲವು ಸಣ್ಣ ಉಪಗ್ರಹಗಳನ್ನು ಬಿಡುಗಡೆ ಮಾಡಿತು ಮತ್ತು ಚಂದ್ರನ ಅನೇಕ ಪ್ರಮುಖ ಫೋಟೋಗಳು ಮತ್ತು ವೀಡಿಯೊಗಳನ್ನು ಕಳಿಸಿದೆ.

Artemis mission: 50 ವರ್ಷ ಬಳಿಕ ಮತ್ತೆ ಚಂದ್ರಯಾನದ ಕನಸಿಗೆ ಅಮೆರಿಕದ ನಾಸಾ ಯಶಸ್ವಿ ಮುನ್ನುಡಿ

ಆರ್ಟೆಮಿಸ್-2 ಅನ್ನು 2024 ರ ಸುಮಾರಿಗೆ ಉಡಾವಣೆ ಮಾಡಲಾಗುತ್ತದೆ. ಕೆಲವು ಗಗನಯಾತ್ರಿಗಳು ಸಹ ಹೋಗುತ್ತಾರೆ, ಆದರೆ ಅವರು ಚಂದ್ರನ ಮೇಲೆ ಕಾಲಿಡುವುದಿಲ್ಲ. ಚಂದ್ರನ ಕಕ್ಷೆಯಲ್ಲಿ ಸುತ್ತಾಡಿದ ನಂತರವೇ ಅವು ಹಿಂತಿರುಗುತ್ತವೆ. ಈ ಕಾರ್ಯಾಚರಣೆಯ ದೀರ್ಘ ಅವಧಿಯದ್ದಾಗಿರುತ್ತದೆ.

 ನಾಸಾ ಚಂದ್ರಯಾನಕ್ಕೆ ತಾಂತ್ರಿಕ ದೋಷ: ಆರ್ಟೆಮಿಸ್‌ 1 ಯೋಜನೆ ಮುಂದೂಡಿಕೆ

ಇದರ ನಂತರ, ಅಂತಿಮ ಮಿಷನ್ ಆರ್ಟೆಮಿಸ್ -3 ರವಾನೆಯಾಗುತ್ತದೆ. ಇದರಲ್ಲಿ ಹೋಗುವ ಗಗನಯಾತ್ರಿಗಳು ಚಂದ್ರನ ಮೇಲೆ ಇಳಿಯುತ್ತಾರೆ. ಈ ಮಿಷನ್ ಅನ್ನು 2025 ಅಥವಾ 2026 ರಲ್ಲಿ ಪ್ರಾರಂಭ ಮಾಡುವ ಯೋಜನೆ ಇದು. ಮೊದಲ ಬಾರಿಗೆ, ಮಹಿಳೆಯರು ಕೂಡ ಮಾನವ ಚಂದ್ರ ಮಿಷನ್‌ನ ಭಾಗವಾಗಲಿದ್ದಾರೆ. ಇದರಲ್ಲಿ, ಪರ್ಸನ್ ಆಫ್ ಕಲರ್ (ಬಿಳಿಗಿಂತ ವಿಭಿನ್ನ ಜನಾಂಗದ ವ್ಯಕ್ತಿ) ಸಹ ಸಿಬ್ಬಂದಿ ಸದಸ್ಯರಾಗಿರುತ್ತಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇರುವ ನೀರು ಮತ್ತು ಮಂಜುಗಡ್ಡೆಯ ಕುರಿತು ಗಗನಯಾತ್ರಿಗಳು ಸಂಶೋಧನೆ ನಡೆಸಲಿದ್ದಾರೆ.

click me!