ಬಹಳಷ್ಟು ಅನಿಶ್ಚಿತತೆಗಳ ಬಳಿಕ, ಸ್ಟಾರ್‌ಲೈನರ್ ಗಗನಯಾತ್ರಿಗಳ ಪುನರಾಗಮನ ಅಂತಿಮವಾಗಿ ಖಚಿತವಾಗಿದೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಯೋಜನೆಯಾದ ಕ್ರ್ಯೂ ಫ್ಲೈಟ್ ಟೆಸ್ಟ್ ಬಳಿಕ ಅವರಿಬ್ಬರೂ ಭೂಮಿಗೆ ಮರಳಲಿದ್ದಾರೆ.
ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಸುದೀರ್ಘ ಅವಧಿಯಿಂದ ಕಾರ್ಯ ನಿರ್ವಹಿಸುತ್ತಿರುವ ಗಗನಯಾತ್ರಿಗಳ ಪುನರಾಗಮನದ ಕುರಿತು ಆಗಸ್ಟ್ 24ರಂದು ನಾಸಾ ತನ್ನ ಅಂತಿಮ ನಿರ್ಧಾರ ಕೈಗೊಂಡಿತು. ಜೂನ್ 5ರಂದು ಕೇವಲ ಎಂಟು ದಿನಗಳ ಅವಧಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ಬುಚ್ ವಿಲ್ಮೋರ್ ಅವರು ಫೆಬ್ರವರಿ 2025ರ ಬಳಿಕವೇ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಖಾತ್ರಿಪಡಿಸಿದೆ.
undefined
ಅದರೊಡನೆ, ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ತಾವು ಐಎಸ್ಎಸ್‌ಗೆ ತೆರಳಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಮರಳುವುದಿಲ್ಲ ಎಂದಿವೆ. ಸ್ಟಾರ್‌ಲೈನರ್ ಬದಲಿಗೆ ಅವರು ಸ್ಪೇಸ್ಎಕ್ಸ್ ಸಂಸ್ಥೆಯ ಡ್ರ್ಯಾಗನ್ ಕ್ಯಾಪ್ಸೂಲ್ ಬಾಹ್ಯಾಕಾಶ ನೌಕೆಯಲ್ಲಿ ಮರಳಿ ಆಗಮಿಸಲಿದ್ದಾರೆ. ಡ್ರ್ಯಾಗನ್ ನೌಕೆ ಮೂಲತಃ ಸೆಪ್ಟೆಂಬರ್ ತಿಂಗಳಲ್ಲಿ ಉಡಾವಣೆಗೊಳ್ಳಲಿರುವ ಕ್ರ್ಯೂ-9 ಯೋಜನೆಯ ಭಾಗವಾಗಿತ್ತು. ಈ ಡ್ರ್ಯಾಗನ್ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣದಲ್ಲಿರುವ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಮರಳಿ ಕರೆತರುವ ರೀತಿಯಲ್ಲಿ ಮಾರ್ಪಡಿಸಲಾಗುತ್ತದೆ.
ಈ ಬಾಹ್ಯಾಕಾಶ ನೌಕೆ ಕೇವಲ ಇಬ್ಬರು ಗಗನಯಾತ್ರಿಗಳೊಡನೆ ಉಡಾವಣೆಗೊಳ್ಳಲಿದ್ದು, ಸುನಿತಾ ಮತ್ತು ವಿಲ್ಮೋರ್ ಅವರಿಗೆ ಸ್ಥಳಾವಕಾಶ ಹೊಂದಿರಲಿದೆ. ಈ ಬಾಹ್ಯಾಕಾಶ ನೌಕೆ ಸ್ಟಾರ್‌ಲೈನರ್ ಸಿಬ್ಬಂದಿಗೆ ಹೆಚ್ಚುವರಿ ಅವಶ್ಯಕ ವಸ್ತುಗಳು ಮತ್ತು ಡ್ರ್ಯಾಗನ್ ನೌಕೆಗೆ ಸೂಕ್ತವಾದ ಸ್ಪೇಸ್ ಸೂಟ್‌ಗಳನ್ನು ಒಯ್ಯಲಿದೆ.
ನಾಸಾ ಮತ್ತು ಬೋಯಿಂಗ್ ಸಂಸ್ಥೆಗಳು ಸಿಬ್ಬಂದಿ ರಹಿತವಾದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರಲು ಯೋಜನೆ ರೂಪಿಸುತ್ತಿದ್ದು, ಅದನ್ನು ಸೆಪ್ಟೆಂಬರ್ ತಿಂಗಳಲ್ಲಿ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್ ಎಂಬ ಬಾಹ್ಯಾಕಾಶ ನಿಲ್ದಾಣಕ್ಕೆ ತರುವ ಉದ್ದೇಶ ಹೊಂದಿವೆ. ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬರ್ ನ್ಯೂ ಮೆಕ್ಸಿಕೋದ ಮರುಭೂಮಿಯ ಒಳಗಿರುವ ಹೆಚ್ಚುವರಿ ಬಾಹ್ಯಾಕಾಶ ನಿಲ್ದಾಣವಾಗಿದ್ದು, ಮೂಲತಃ ನಾಸಾ ಇದನ್ನು ಬಳಸುತ್ತದೆ.
ಬಹಳಷ್ಟು ಅನಿಶ್ಚಿತತೆಗಳ ಬಳಿಕ, ಸ್ಟಾರ್‌ಲೈನರ್ ಗಗನಯಾತ್ರಿಗಳ ಪುನರಾಗಮನ ಅಂತಿಮವಾಗಿ ಖಚಿತವಾಗಿದೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಯೋಜನೆಯಾದ ಕ್ರ್ಯೂ ಫ್ಲೈಟ್ ಟೆಸ್ಟ್ ಬಳಿಕ ಅವರಿಬ್ಬರೂ ಭೂಮಿಗೆ ಮರಳಲಿದ್ದಾರೆ. ಈ ಮೊದಲು ಸ್ಟಾರ್‌ಲೈನರ್ ಕೇವಲ ಮಾನವ ರಹಿತ ಯೋಜನೆಗಳನ್ನು ಪೂರ್ಣಗೊಳಿಸಿದ್ದರಿಂದ, ಅದರ ಮಾನವಸಹಿತ ಬಾಹ್ಯಾಕಾಶ ಯಾನ ಮಹತ್ವ ಪಡೆದಿತ್ತು.
ನಾಸಾ ಕಾರ್ಯನಿರ್ವಾಹಕರಾದ ಬಿಲ್ ನೆಲ್ಸನ್ ಅವರು ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಐಎಸ್ಎಸ್ ನಲ್ಲೇ ಬಿಟ್ಟು, ಸ್ಟಾರ್‌ಲೈನರ್ ಅನ್ನು ಮಾತ್ರವೇ ಮಾನವ ರಹಿತವಾಗಿ ಭೂಮಿಗೆ ತರುವ ನಿರ್ಧಾರವನ್ನು ಸುರಕ್ಷತೆಯ ಕಾರಣದಿಂದ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಗೆ ಸಂಬಂಧಿಸಿದಂತೆ, ಸುರಕ್ಷತೆಯೇ ಮುಖ್ಯ ಆದ್ಯತೆಯಾಗಿದೆ. ಐಎಸ್ಎಸ್‌ನಲ್ಲಿ ಡಾಕಿಂಗ್ ನಡೆಸುವಾಗ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ತನ್ನ 28 ರಿಯಾಕ್ಷನ್ ಕಂಟ್ರೋಲ್ ಥ್ರಸ್ಟರ್‌ಗಳ (ಆರ್‌ಸಿಟಿ) ಪೈಕಿ ಐದು ಸಮಸ್ಯೆ ಹೊಂದಿದ್ದವು. ಥ್ರಸ್ಟರ್‌ಗಳೆಂದರೆ ಬಾಹ್ಯಾಕಾಶ ನೌಕೆಯಲ್ಲಿರುವ ಸಣ್ಣದಾದ ರಾಕೆಟ್ ಇಂಜಿನ್‌ಗಳಾಗಿದ್ದು, ಬಾಹ್ಯಾಕಾಶ ನೌಕೆಯ ಪಥವನ್ನು ನಿರ್ಧರಿಸಲು ನೆರವಾಗುತ್ತವೆ ಮತ್ತು ಡಾಕಿಂಗ್ ನಡೆಸಲು ಪೂರಕವಾಗಿವೆ.
ಮೊದಲಿಗೆ ನಾಸಾ ಮತ್ತು ಬೋಯಿಂಗ್ ಗಗನಯಾತ್ರಿಗಳನ್ನು ದೀರ್ಘಕಾಲ ಐಎಸ್ಎಸ್‌ನಲ್ಲಿಟ್ಟು, ಸ್ಟಾರ್‌ಲೈನರ್ ಸಮಸ್ಯೆಯನ್ನು ನಿವಾರಿಸುವುದಾಗಿ ನಿರ್ಧರಿಸಿದ್ದವು. ಆದರೆ ಇಲ್ಲಿಯತನಕ ಇದಕ್ಕೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನಾಸಾದ ಸ್ಟೀವ್ ಸ್ಟಿಚ್ ಅವರು ಥ್ರಸ್ಟರ್‌ಗಳು ಬಹಳಷ್ಟು ತೊಂದರೆ ನೀಡುತ್ತಿವೆ ಎಂದಿದ್ದರು. ಅವುಗಳು ಈಗ ಎಷ್ಟು ಕರಾರುವಾಕ್ಕಾಗಿ ಕಾರ್ಯಾಚರಿಸಲಿವೆ ಮತ್ತು ಎಷ್ಟರಮಟ್ಟಿಗೆ ತಾಪಮಾನ ತಲುಪಲಿವೆ ಎಂದು ಈಗಲೇ ಅಂದಾಜಿಸುವುದು ಕಷ್ಟಕರವಾಗಿದೆ. ಅಂತಹ ಸಂದರ್ಭವನ್ನು ಊಹಿಸುವುದು ಮತ್ತು ನಿರ್ವಹಿಸುವುದು ದುಸ್ಸಾಧ್ಯವಾಗಬಹುದು.
ನಾಸಾದ ಸ್ಪೇಸ್ ಆಪರೇಶನ್ಸ್ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಆಗಿರುವ ಕೆನ್ ಬೋವರ್‌ಸಾಕ್ಸ್ ಅವರು ಭೂಮಿಗೆ ಮರು ಪ್ರಯಾಣ ಬೆಳೆಸುವಾಗ ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳು ಎಷ್ಟರಮಟ್ಟಿಗೆ ಬಳಕೆಯಾಗಬಹುದು ಎಂದು ನಿಖರವಾಗಿ ಹೇಳಲಾಗದು ಎಂದಿದ್ದಾರೆ. ಅದರಲ್ಲೂ ಸ್ಟಾರ್‌ಲೈನರ್ ಬಾಹ್ಯಾಕಾಶ ಪ್ರಯಾಣ ಬೆಳೆಸುವಾಗ ಹೆಚ್ಚಿನ ಉಷ್ಣತೆಯ ಸಮಸ್ಯೆಯೂ ತಲೆದೋರಿತ್ತು ಎಂದು ಅವರು ವಿವರಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಅನಿಶ್ಚಿತತೆಗಳು ಮತ್ತು ಅಪಾಯಗಳು ತಲೆದೋರುವ ಸಾಧ್ಯತೆಗಳಿರುವುದರಿಂದ, ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಅವರು ಬಾಹ್ಯಾಕಾಶಕ್ಕೆ ತೆರಳಿದ ಸ್ಟಾರ್‌ಲೈನರ್ ಮೂಲಕವೇ ಮರಳಿ ಕರೆತರುವುದು ಅಪಾಯಕರ ಎಂದು ನಾಸಾ ಅಭಿಪ್ರಾಯ ಪಟ್ಟಿದೆ.
ಒಂದು ವೇಳೆ ಅನ್‌ಡಾಕ್ ನಡೆಸುವಾಗ, ಡಿ ಆರ್ಬಿಟ್ ಬರ್ನ್ ಮತ್ತು ಬೇರ್ಪಡುವಿಕೆಯ ಹಂತಗಳಲ್ಲಿ ಥ್ರಸ್ಟರ್‌ಗಳು ಹೇಗೆ ಕಾರ್ಯಾಚರಿಸಬಹುದು ಎಂದು ಸರಿಯಾಗಿ ಊಹಿಸಲು ಸಾಧ್ಯವಾದರೆ, ಆಗ ನಾಸಾದ ನಿರ್ಧಾರ ಬೇರೆಯೇ ಆಗಿರುವ ಸಾಧ್ಯತೆಗಳಿದ್ದವು ಎಂದು ಸ್ಟಿಚ್ ಹೇಳಿದ್ದಾರೆ. ಆದರೆ, ಪ್ರಸ್ತುತ ಸ್ಟಾರ್‌ಲೈನರ್ ಕುರಿತು ಲಭ್ಯವಿರುವ ಮಾಹಿತಿಗಳನ್ನು ಅವಲೋಕಿಸಿದಾಗ, ಗಗನಯಾತ್ರಿಗಳು ನೌಕೆಯಲ್ಲಿರುವಾಗ ಥ್ರಸ್ಟರ್‌ಗಳು ವಿಫಲವಾಗುವ ಸಾಧ್ಯತೆಗಳನ್ನು ಪರಿಗಣಿಸಿ, ಮೂಲ ಯೋಜನೆಯನ್ನು ಕಾರ್ಯಗತಗೊಳಿಸುವುದು ಅತ್ಯಂತ ಅಪಾಯಕಾರಿ ಎಂಬ ನಿರ್ಧಾರಕ್ಕೆ ನಾಸಾ ಬಂದಿತು.
ನೆಲ್ಸನ್ ಅವರು ತಾವು ನಿರ್ಧಾರ ಕೈಗೊಳ್ಳುವಾಗ 14 ಜನ ಗಗನಯಾತ್ರಿಗಳು ಪ್ರಾಣ ಕಳೆದುಕೊಂಡ 1986 ಮತ್ತು 2003ರ ದುರ್ಘಟನೆಗಳ ಕುರಿತು ಯೋಚಿಸುತ್ತಿದ್ದೆ ಎಂದಿದ್ದರು. ಎರಡನೇ ಅಪಘಾತ ಸಂಭವಿಸಿದಾಗ ನೆಲ್ಸನ್ ಓರ್ವ ಸೆನೇಟರ್ ಸಹ ಆಗಿದ್ದು, ಆ ಘಟನೆ ಅವರ ಮೇಲೆ ಬಹುದೊಡ್ಡ ಪರಿಣಾಮ ಬೀರಿತ್ತು.
ಚಾಲೆಂಜರ್: ಸಂವಹನ ಮತ್ತು ಸುರಕ್ಷತೆಯ ಪಾಠ: 1986ರಲ್ಲಿ, ಬಾಹ್ಯಾಕಾಶ ನೌಕೆ ಚಾಲೆಂಜರ್ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟಿಸಿ, ಅದರೊಳಗಿದ್ದ ಎಲ್ಲ ಏಳು ಜನ ಸಿಬ್ಬಂದಿಗಳು ಪ್ರಾಣ ಕಳೆದುಕೊಳ್ಳುವ ಮೂಲಕ ಬಹುದೊಡ್ಡ ದುರಂತವನ್ನು ಎದುರಿಸಿತು. ಈ ದುರ್ಘಟನೆಯ ಕುರಿತು ವಿಶ್ಲೇಷಣೆ ನಡೆಸಿದಾಗ, ಉಡಾವಣೆಯ ದಿನದ ತಂಪಾದ ಹವಾಮಾನದಲ್ಲಿ ಒಂದು ಘನ ಇಂಧನ ರಾಕೆಟ್ ಬೂಸ್ಟರ್‌ನ ಒ - ರಿಂಗ್ ಸೀಲ್ ವಿಫಲಗೊಂಡಿದ್ದರಿಂದ ಚಾಲೆಂಜರ್ ನೌಕೆ ಸ್ಫೋಟಗೊಂಡಿತು ಎಂದು ತಿಳಿದುಬಂತು.
ಚಾಲೆಂಜರ್ ಬಾಹ್ಯಾಕಾಶ ನೌಕೆಯಲ್ಲಿ ಬಳಸಿದ್ದ ಘನ ಇಂಧನ ರಾಕೆಟ್ ಬೂಸ್ಟರ್‌ಗಳನ್ನು ನಿರ್ಮಿಸುವ ಜವಾಬ್ದಾರಿ ಹೊಂದಿದ್ದ ಸಂಸ್ಥೆಯಾದ ಮೋರ್ಟನ್ ತಿಕೋಲ್ ಸಂಸ್ಥೆಯ ಇಂಜಿನಿಯರ್‌ಗಳು ತಮ್ಮ ಉನ್ನತಾಧಿಕಾರಿಗಳಿಗೆ ತಂಪಾದ ಹವಾಮಾನದ ಕಾರಣದಿಂದ ನೌಕೆಯನ್ನು ಉಡಾವಣೆಗೊಳಿಸದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮುನ್ನೆಚ್ಚರಿಕೆಯನ್ನು ಸಮರ್ಥವಾಗಿ ಸಂವಹನ ನಡೆಸಲು ಸಾಧ್ಯವಾಗದೆ, ದುರಂತ ಘಟನೆ ನಡೆದುಹೋಯಿತು. ಇದು ಬಾಹ್ಯಾಕಾಶ ಯೋಜನೆಗಳಲ್ಲಿನ ಸಮಗ್ರ ಸಂವಹನದ ಮಹತ್ವ ಮತ್ತು ಭೂ ಕೇಂದ್ರದ ತಜ್ಞರ ಪ್ರಾವೀಣ್ಯತೆಗೆ ಕಿವಿಗೊಡುವ ಅಗತ್ಯಗಳ ಪಾಠವನ್ನು ಮಾಡಿತ್ತು.
ಕೊಲಂಬಿಯಾ ದುರಂತ: ಕಲಿತ ಪಾಠಗಳು, ಕಳೆದುಕೊಂಡ ಪ್ರಾಣಗಳು: ಕೊಲಂಬಿಯಾ ಯೋಜನೆಯ ಸಂದರ್ಭದಲ್ಲಿ, ಒಂದು ಹಾರ್ಡ್‌ವೇರ್ ಸಮಸ್ಯೆಯ ಕುರಿತ ಕಳವಳಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ಸಮಯದಲ್ಲಿ ಇಂತಹ ಸಮಸ್ಯೆಯನ್ನು ಹಂಚಿಕೊಳ್ಳುವುದನ್ನು ಬೆಂಬಲಿಸದಂತಹ ಸಂಸ್ಕೃತಿಯಿತ್ತು. ಆದರೆ ಅಂದಿನಿಂದ ನಾಸಾ ತನ್ನಲ್ಲಿ ಬದಲಾವಣೆ ತಂದಿದ್ದು, ಸಿಬ್ಬಂದಿಗಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸೂಕ್ತವಾದ ವಾತಾವರಣ ಕಲ್ಪಿಸಲು ಪ್ರಯತ್ನ ನಡೆಸಿದೆ. ಮುಕ್ತ ಸಂವಹನ ನಡೆಸಲು ಬದ್ಧವಾಗಿರುವುದು ನಾಸಾ ಅಭ್ಯಾಸವಾಗಿ ಇಂದಿಗೂ ಮುಂದುವರೆದಿದೆ.
ಫೆಬ್ರವರಿ 1, 2003ರಂದು ಬಾಹ್ಯಾಕಾಶ ನೌಕೆ ಕೊಲಂಬಿಯಾ ಭೂಮಿಯ ವಾತಾವರಣಕ್ಕೆ ಮರಳಿ ಪ್ರವೇಶಿಸುವಾಗ ದುರಂತಮಯವಾಗಿ ಪ್ರಾಣ ಕಳೆದುಕೊಂಡ ಏಳು ಗಗನಯಾತ್ರಿಗಳಲ್ಲಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಅವರೂ ಒಬ್ಬರಾಗಿದ್ದರು. ಉಡಾವಣೆಯ ಸಂದರ್ಭದಲ್ಲಿ, ನೌಕೆಯ ಬಾಹ್ಯ ಇಂಧನ ಟ್ಯಾಂಕ್‌ನಿಂದ ಫೋಮ್ ಇನ್ಸುಲೇಶನ್ನಿನ ಒಂದು ತುಂಡು ಬಿದ್ದು, ನೌಕೆಯ ಎಡ ರೆಕ್ಕೆಗೆ ಹೊಡೆದಿತ್ತು. ಈ ಆಘಾತ ನೌಕೆಯ ಉಷ್ಣ ರಕ್ಷಣಾ ವ್ಯವಸ್ಥೆಯ, ಅದರಲ್ಲೂ ರೆಕ್ಕೆಯ ಉಷ್ಣ ನಿರೋಧಕ ಟೈಲ್ಸ್‌ಗೆ ಹಾನಿ ಉಂಟುಮಾಡಿತ್ತು.
ಆದರೆ, ಈ ಹಾನಿಯನ್ನು ಯಾರೂ ಗಮನಿಸಲಿಲ್ಲ ಮತ್ತು ಅದರ ಕುರಿತು ಸರಿಯಾಗಿ ಸಂವಹನ ನಡೆಸಿರಲಿಲ್ಲ. ಇದರ ಪರಿಣಾಮವಾಗಿ, ಬಾಹ್ಯಾಕಾಶ ನೌಕೆ ಭೂಮಿಗೆ ಮರಳುವಾಗ ಗಂಭೀರ ವೈಫಲ್ಯ ಅನುಭವಿಸಿತು. ಈ ದುರ್ಘಟನೆಯಲ್ಲಿ, ಅನುಭವಿ, ಮತ್ತು ಭಾರತೀಯ ಮೂಲದ ಮೊದಲ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರು ಸಾವನ್ನಪ್ಪಿದ್ದರು.
ಬಾಹ್ಯಾಕಾಶ ಅನ್ವೇಷಣೆಯಲ್ಲಿ ಥ್ರಸ್ಟರ್ ಅಭಿವೃದ್ಧಿ: ಒಂದು ಧನಾತ್ಮಕ ಮಾಹಿತಿಯಾಗಿ, ನಾಸಾದ ಸಹಾಯಕ ನಿರ್ವಾಹಕರಾದ ಜಿಮ್ ಫ್ರೀ ಅವರು ಬೋಯಿಂಗ್ ತಂಡದ ಜೊತೆಗಿನ ಸಹಯೋಗದಲ್ಲಿ, ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿರುವ, ಹೊಸ ಥ್ರಸ್ಟರ್‌ಗಳನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ. ಈ ಅಭಿವೃದ್ಧಿಗಳನ್ನು ಥ್ರಸ್ಟರ್‌ಗಳ ಪರೀಕ್ಷೆ ನಡೆಸಿದ ಪರಿಣಾಮವಾಗಿ ಅವುಗಳ ದ್ರವ ಆಯಾಮವನ್ನು ಅರಿತು, ಅದರಲ್ಲಿನ ವಸ್ತುಗಳ ಗುಣಲಕ್ಷಣಗಳನ್ನು ತಿಳಿಯುವ ಮೂಲಕ ಮಾತ್ರವೇ ಸಾಧಿಸಲು ಸಾಧ್ಯವಾಗಿದೆ.
ಕಲ್ಪನಾ ಚಾವ್ಲಾ ಸಾವು ಕಲಿಸಿದ ಪಾಠ, ಸುನೀತಾ ವಿಲಿಯಮ್ಸ್‌ಗಾಗಿ ನಾಸಾ ಕಠಿಣ ನಿರ್ಧಾರ
ಐಎಸ್ಎಸ್‌ನಲ್ಲಿ ಹೆಚ್ಚುವರಿ ವಾಸ್ತವ್ಯ: ಕಾರ್ಯಾಚರಣೆ ಮತ್ತು ಅವಶ್ಯಕ ಪೂರೈಕೆಗಳ ನಿರ್ವಹಣೆ: ಐಎಸ್ಎಸ್‌ನಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಅವರ ವಾಸ್ತವ್ಯ ಫೆಬ್ರವರಿ 2025ರ ತನಕ ವಿಸ್ತರಿಸಲ್ಪಟ್ಟಿದೆ. ಇದರಿಂದಾಗಿ ಅವರು ಅನಿರೀಕ್ಷಿತವಾಗಿ ಅಂದಾಜು ಎಂಟು ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲೇ ಕಳೆಯಬೇಕಾಗುತ್ತದೆ. ಈ ವಿಳಂಬ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬ ಕಳವಳ ಮೂಡಿದೆ. ಆದರೆ, ಐಎಸ್ಎಸ್ ಯೋಜನಾ ನಿರ್ವಾಹಕರಾದ ಡಾನಾ ವೀಗೆಲ್ ಅವರು ಗಗನಯಾತ್ರಿಗಳ ಹೆಚ್ಚುವರಿ ವಾಸ್ತವ್ಯದ ಕುರಿತು ಚಿಂತೆ ಹೊಂದಿಲ್ಲ. ಈ ಮೊದಲೂ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಬಹುತೇಕ 12 ತಿಂಗಳು ಕಾಲ ಕಳೆದಿರುವ ಉದಾಹರಣೆಗಳು ನಮ್ಮ ಮುಂದಿವೆ. ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ಅವಶ್ಯಕ ವಸ್ತುಗಳ ಪೂರೈಕೆಗಳಿಗೆ ಮತ್ತು ಆಹಾರ ವಸ್ತುಗಳ ಪೂರೈಕೆಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ.
ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ಇನ್ನೂ 6 ತಿಂಗಳು ವಾಪಾಸ್ ಬರಲ್ಲ!
ಸ್ಟಾರ್‌ಲೈನರ್ ನೌಕೆ ಹೇಗೆ ಭೂಮಿಗೆ ಮರಳಲಿದೆ?: ಇನ್ನು ಮುಂದಿನ ಯೋಜನೆಯಾಗಿ, ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಭೂಮಿಗೆ ಮರಳಿ ತರಲಾಗುತ್ತದೆ. ಇದನ್ನು 'ಅನ್ ಕ್ರ್ಯೂಡ್ ಟೆಸ್ಟ್ ಫ್ಲೈಟ್' (ಸಿಬ್ಬಂದಿ ರಹಿತ ಪರೀಕ್ಷಾ ಹಾರಾಟ) ಎಂದು ಕರೆಯಲಾಗುತ್ತದೆ. ಬೇರ್ಪಡುವಿಕೆ ಪ್ರಕ್ರಿಯೆಗಳಲ್ಲಿ ಬದಲಾವಣೆ ತರಲಾಗಿದ್ದು, ನೌಕೆ ಬಾಹ್ಯಾಕಾಶ ನಿಲ್ದಾಣದಿಂದ ಕ್ಷಿಪ್ರವಾಗಿ ಬೇರ್ಪಡಲಿದೆ. ಇವೆಲ್ಲವೂ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶ ಹೊಂದಿವೆ. ಸಿದ್ಧತಾ ವಿಮರ್ಶೆಯ ಹಂತದಲ್ಲಿ ತಂಡ ಈ ಮಾರ್ಪಾಡುಗಳ ಕುರಿತು ಚರ್ಚಿಸಲಿದ್ದು, ಡಿ ಆರ್ಬಿಟ್ ಬರ್ನ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಲು ಉದ್ದೇಶಿಸಿದೆ.