ಅಮೆರಿಕಾದ 'ಬ್ಲೂಬರ್ಡ್' ಹಾರಿಬಿಡಲು ಇಸ್ರೋ ಸಜ್ಜು; ಜಾಗತಿಕ ಸಂಪರ್ಕದ ನವಯುಗಕ್ಕೆ ಸಿದ್ಧತೆ

By Girish Linganna  |  First Published Jan 3, 2025, 4:54 PM IST

ಇಸ್ರೋ 2025ರ ಆರಂಭದಲ್ಲಿ ಅಮೆರಿಕಾ ನಿರ್ಮಿತ ಬ್ಲೂಬರ್ಡ್ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಉಪಗ್ರಹವು ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಾಹ್ಯಾಕಾಶದಿಂದ ಅಂತರ್ಜಾಲ ಸಂಪರ್ಕ ಒದಗಿಸಲಿದ್ದು, ಜಾಗತಿಕ ಸಂವಹನದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ.


ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಮೆರಿಕಾ ನಿರ್ಮಾಣದ ಬ್ಲೂಬರ್ಡ್ ಉಪಗ್ರಹವನ್ನು 2025ರ ಆರಂಭದಲ್ಲಿ ಉಡಾವಣೆ ನಡೆಸಲು ಸಿದ್ಧವಾಗಿದೆ. ಈ ಮೂಲಕ, ಜಾಗತಿಕ ಮೊಬೈಲ್ ಸಂವಹನದಲ್ಲಿ ಹೊಸ ಕ್ರಾಂತಿ ನಡೆಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಲು ಇಸ್ರೋ ಸಜ್ಜಾಗಿದೆ. ಶಕ್ತಿಶಾಲಿ ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್‌ವಿ), ಅದರಲ್ಲೂ ಜಿಎಸ್ಎಲ್‌ವಿ ಎಂಕೆ 3 ಮೂಲಕ ನಡೆಯಲಿರುವ ಈ ಉಡಾವಣೆ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳು ಮತ್ತು ಜಾಗತಿಕ ಸಂವಹನದ ಭವಿಷ್ಯಕ್ಕೆ ಹೊಸ ಮೈಲಿಗಲ್ಲಾಗಲಿದೆ. ಟೆಕ್ಸಾಸ್ ಮೂಲದ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆ ನಿರ್ಮಿಸಿರುವ ಬ್ಲೂಬರ್ಡ್ ಒಂದು ತಂತ್ರಜ್ಞಾನದ ಅದ್ಭುತವಾಗಿದ್ದು, ಸ್ಮಾರ್ಟ್ ಫೋನ್ ಮತ್ತು ಬಾಹ್ಯಾಕಾಶದ ನಡುವೆ ನೇರ ಸಂಪರ್ಕ ಕಲ್ಪಿಸಿ, ಭೂಮಿಯ ಮೇಲಿನ ಮೊಬೈಲ್ ಟವರ್‌ಗಳ ಅವಶ್ಯಕತೆಯನ್ನು ಇಲ್ಲವಾಗಿಸುತ್ತದೆ.

Tap to resize

Latest Videos

ಈ ಅಸಾಧಾರಣ ತಂತ್ರಜ್ಞಾನ ಒಂದು ಬೃಹತ್ತಾದ, 64 ಚದರ ಮೀಟರ್‌ಗಳ ಆ್ಯಂಟೆನಾವನ್ನು ಹೊಂದಿದೆ. ಇದು ಬಹುತೇಕ ಒಂದು ಫುಟ್‌ಬಾಲ್‌ ಮೈದಾನದ ಅರ್ಧದಷ್ಟು ದೊಡ್ಡದಾಗಿದೆ. ಭೂಮಿಯ ಕೆಳ ಕಕ್ಷೆಯಿಂದ ಕಾರ್ಯಾಚರಿಸುವ ಬ್ಲೂಬರ್ಡ್, ಜಾಗತಿಕವಾಗಿ ಲಕ್ಷಾಂತರ ಮೊಬೈಲ್ ಫೋನ್‌ಗಳಿಗೆ ನೇರವಾಗಿ ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಒದಗಿಸಲಿದೆ. ಈ ಸೇವೆ, ಭೂಮಿಯಲ್ಲಿನ ಅತ್ಯಂತ ದುರ್ಗಮವಾದ, ಸಾಮಾನ್ಯ ಅಂತರ್ಜಾಲ ಸೇವೆ ಹೊಂದಿರದ ಪ್ರದೇಶಗಳಿಗೂ ಲಭ್ಯವಾಗಲಿದೆ. ಈ ಸಾಮರ್ಥ್ಯ, ಜಾಗತಿಕ ಡಿಜಿಟಲ್ ಅಂತರವನ್ನು ಕಡಿಮೆಗೊಳಿಸಲು ನೆರವಾಗಿ, ಜಗತ್ತಿನಾದ್ಯಂತ ಜನರು ಅವಶ್ಯಕ ಸೇವೆಗಳನ್ನು ಪಡೆಯುವ ವಿಧಾನವನ್ನೇ ಬದಲಾಯಿಸಬಲ್ಲದು. ನೀವು ಯಾವುದೇ ಸ್ಥಳದಲ್ಲಿದ್ದರೂ, ಯಾವುದೇ ಅಡಚಣೆಯಿಲ್ಲದೆ, ಅನಿಯಮಿತ ಕರೆ ಮತ್ತು ಅಂತರ್ಜಾಲ ಸಂಪರ್ಕ ಹೊಂದುವುದನ್ನು ಕಲ್ಪಿಸಿಕೊಳ್ಳಿ. ಈ ಸಾಧ್ಯತೆ ಶಿಕ್ಷಣ, ಆರೋಗ್ಯ ಮತ್ತು ತುರ್ತು ಸೇವೆಗಳ ಬಳಕೆಯಲ್ಲಿ ಹೊಸ ಕ್ರಾಂತಿಯನ್ನು ತರಬಲ್ಲದು. ಅದರಲ್ಲೂ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ, ಭೂಮಿಯಲ್ಲಿರುವ ಮೊಬೈಲ್ ಟವರ್‌ಗಳು ಹಾನಿಗೊಳಗಾದರೂ, ಉಪಗ್ರಹ ಆಧಾರಿತವಾದ ದೂರಸಂಪರ್ಕ ಸೇವೆಗಳು ಅವ್ಯಾಹತವಾಗಿ ಮುಂದುವರಿಯಬಲ್ಲವು.

ಬ್ಲೂಬರ್ಡ್ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ವಿಶಿಷ್ಟ ಅಂತಾರಾಷ್ಟ್ರೀಯ ಸಹಯೋಗವನ್ನೂ ಒಳಗೊಂಡಿದೆ. ಇದೇ ಮೊದಲ ಬಾರಿಗೆ, ಒಂದು ಅಮೆರಿಕನ್ ಸಂಸ್ಥೆ ಬಹುತೇಕ 6,000 ಕೆಜಿ ತೂಕ ಹೊಂದಿರುವ, ಅತ್ಯಂತ ದೊಡ್ಡದಾದ ಸಂವಹನ ಉಪಗ್ರಹದ ಉಡಾವಣೆ ನಡೆಸುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸಿದೆ. ಈ ಸಹಯೋಗದಿಂದಾಗಿ, ಜಾಗತಿಕ ಮಟ್ಟದಲ್ಲಿ ಇಸ್ರೋ ಒಂದು ನಂಬಿಕಾರ್ಹ ಮತ್ತು ಕಡಿಮೆ ವೆಚ್ಚದಾಯಕ ಉಡಾವಣಾ ಸೇವೆ ಒದಗಿಸುವ ಸಂಸ್ಥೆ ಎಂಬ ಹೆಗ್ಗಳಿಕೆ ಸಂಪಾದಿಸುವುದರ ಜೊತೆಗೆ, ಭಾರತಕ್ಕೆ ಉಡಾವಣೆ ನಡೆಸುವ ಮೂಲಕ ಆದಾಯವನ್ನೂ ಒದಗಿಸುತ್ತದೆ. ಅದರೊಡನೆ, ಜಾಗತಿಕ ವಾಣಿಜ್ಯಿಕ ಉಡಾವಣಾ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಭದ್ರಪಡಿಸುತ್ತದೆ. ಭವಿಷ್ಯದ ಸಹಯೋಗಗಳು ಮತ್ತು ಬಾಹ್ಯಾಕಾಶ ವಲಯದಲ್ಲಿ ಭಾರತೀಯ ಸಂಸ್ಥೆಗಳಿಗೆ ಹೊಸ ಅವಕಾಶಗಳ ಬಾಗಿಲುಗಳನ್ನು ಈ ಯೋಜನೆ ತೆರೆಯಲಿದೆ.

2017ರಲ್ಲಿ ಸ್ಥಾಪನೆಯಾದ ಎಎಸ್‌ಟಿ ಸ್ಪೇಸ್ ಮೊಬೈಲ್, ಪ್ರತಿಯೊಬ್ಬರಿಗೂ ಬಾಹ್ಯಾಕಾಶ ಆಧರಿತ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆ ಲಭಿಸುವಂತೆ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ. ಇಸ್ರೋದ ಜೊತೆಗೆ ಸಹಯೋಗ ಸಾಧಿಸುವ ಮೂಲಕ, ಎಎಸ್‌ಟಿ ಸ್ಪೇಸ್ ಮೊಬೈಲ್‌ ಸಂಸ್ಥೆ ತನ್ನ ಕನಸನ್ನು ನನಸಾಗಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ಯೋಜನೆ ಕೇವಲ ಒಂದು ಉಪಗ್ರಹ ಉಡಾವಣೆಗೆ ಸೀಮಿತವಲ್ಲ. ಬದಲಿಗೆ, ಬಾಹ್ಯಾಕಾಶದಲ್ಲಿ ಉಪಗ್ರಹಗಳ ಪುಂಜವನ್ನು ನಿರ್ಮಿಸಿ, ಜಗತ್ತಿನ ಪ್ರತಿಯೊಂದು ಭಾಗಕ್ಕೂ ಸಂಪರ್ಕ ಕಲ್ಪಿಸುವ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆಯ ಕನಸಿನ ಬಹುಮುಖ್ಯ ಭಾಗವಾಗಿದೆ. ಈ ಯೋಜನೆ ಎಎಸ್‌ಟಿ ಸ್ಪೇಸ್ ಮೊಬೈಲ್ ಸಂಸ್ಥೆಯನ್ನು ಈ ವಲಯದ ಇತರ ಸ್ಪರ್ಧಿಗಳಾದ ಸ್ಟಾರ್‌ಲಿಂಕ್, ವನ್ ವೆಬ್‌ಗಳ ಸಾಲಿಗೆ ಸೇರಿಸಲಿದೆ. ಸ್ಟಾರ್‌ಲಿಂಕ್ ಮತ್ತು ವನ್ ವೆಬ್ ಸಂಸ್ಥೆಗಳು ಉಪಗ್ರಹ ಆಧರಿತ ಅಂತರ್ಜಾಲ ಸೇವೆಗಾಗಿ ತಮ್ಮದೇ ಆದ ಪ್ರತ್ಯೇಕ ವಿಧಾನಗಳನ್ನು ಅನುಸರಿಸುತ್ತವೆ.

ಈ ಯೋಜನೆಯ ಫಲಿತಾಂಶಗಳು ಅತ್ಯಂತ ವಿಶಾಲ ಶ್ರೇಣಿಯವಾಗಿವೆ. ಇದು ಆರ್ಥಿಕ ಪ್ರಗತಿಯನ್ನು ಉತ್ತೇಜಿಸಿ, ನಾವೀನ್ಯತೆಗೆ ನೆರವಾಗಿ, ಮಾಹಿತಿಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡಲಿದೆ. ಇಂತಹ ಸುಧಾರಿತ ಸಂಪರ್ಕ ವ್ಯವಸ್ಥೆಯ ಕಾರಣದಿಂದಾಗಿ, ಭಾರತಕ್ಕೂ ತನ್ನ ದೇಶದೊಳಗೆ, ಅದರಲ್ಲೂ ದುರ್ಗಮ ಪ್ರದೇಶಗಳಲ್ಲಿ ಸಂವಹನ ಮೂಲಭೂತ ವ್ಯವಸ್ಥೆಯ ಸುಧಾರಣೆ ನಡೆಸಲು ಸಾಧ್ಯವಾಗಲಿದೆ.

ಈ ಯೋಜನೆ ಬಹಳಷ್ಟು ಭರವಸೆ ಹೊಂದಿದ್ದು, ಇದರಲ್ಲಿ ಹಲವಾರು ಸವಾಲುಗಳೂ ಇವೆ. ಇಷ್ಟೊಂದು ಬೃಹತ್ತಾದ ಆ್ಯಂಟೆನಾವನ್ನು ಬಾಹ್ಯಾಕಾಶದ ಕಠಿಣ ಸನ್ನಿವೇಶಗಳಲ್ಲಿ ಸುಗಮವಾಗಿ ಕಾರ್ಯಾಚರಿಸುವಂತೆ ಮಾಡುವುದು, ಜಾಗತಿಕವಾಗಿ ಅನಿಯಮಿತ ಸಂವಹನ ಸೇವೆಗಳನ್ನು ಒದಗಿಸುವುದು, ಮತ್ತು ವಿವಿಧ ದೇಶಗಳ ಕಾನೂನು ನಿಯಮಾವಳಿಗಳ ತೊಡಕುಗಳನ್ನು ನಿಭಾಯಿಸುವುದು ಎಎಸ್‌ಟಿ ಸ್ಪೇಸ್ ಮೊಬೈಲ್ ಮುಂದಿರುವ ಮುಖ್ಯ ಸವಾಲುಗಳಾಗಿವೆ.

ಭಾರತೀಯ ನೌಕಾ ದಿನ 2024: ಅಸಾಧಾರಣ ಪ್ರಗತಿ, ಕಾರ್ಯತಂತ್ರದ ಶಕ್ತಿಯತ್ತ ಭಾರತೀಯ ನೌಕಾಪಡೆಯ ಹಾದಿ

ಈ ಉಡಾವಣೆ ಕೇವಲ ಒಂದು ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಷ್ಟೇ ಅಲ್ಲ. ಇದು ಜಾಗತಿಕ ಸಂವಹನದ ನವಯುಗದ ಆರಂಭದ ಸಂಕೇತವಾಗಿದ್ದು, ಭಾರತ ಇದರಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಬ್ಲೂಬರ್ಡ್ ಯೋಜನೆಯ ಉಡಾವಣೆ ಇಸ್ರೋದ ತಾಂತ್ರಿಕ ಸಾಮರ್ಥ್ಯಕ್ಕೆ, ಜಿಎಸ್ಎಲ್‌ವಿ ಎಂಕೆ3ಯ ನಂಬಿಕಾರ್ಹತೆ ಮತ್ತು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಇಸ್ರೋದ ಪ್ರಭಾವಗಳಿಗೆ ಸಾಕ್ಷಿಯಾಗಿದೆ. ಈ ಯೋಜನೆಯ ಮೂಲಕ, ಜಾಗತಿಕ ಸಂವಹನಕ್ಕೆ ಯಾವುದೇ ಮಿತಿಯಿಲ್ಲದ ಭವಿಷ್ಯ ನಿರ್ಮಿಸುವತ್ತ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಈ ಯೋಜನೆ ತಾಂತ್ರಿಕ ನಾವೀನ್ಯತೆ ಮತ್ತು ಪರಸ್ಪರ ಸಂಪರ್ಕ ಹೊಂದಿರುವ ಜಗತ್ತಿನ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಸಹಭಾಗಿತ್ವದ ಮಹತ್ವವನ್ನು ಪ್ರದರ್ಶಿಸಿದೆ.

100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್‌ ಲಿಂಗಣ್ಣ

click me!