ಮಂಗಳ ಗ್ರಹದಲ್ಲಿ ಕಟ್ಟಡ ನಿರ್ಮಿಸಲು ‘ಇಟ್ಟಿಗೆ’ ರೆಡಿ!

By Govindaraj S  |  First Published Apr 21, 2022, 3:15 AM IST

ಮುಂದೊಂದು ದಿನ ಮಂಗಳ ಗ್ರಹದಲ್ಲಿ ಮನೆ ನಿರ್ಮಾಣ ಮಾಡುವ ಪರಿಸ್ಥಿತಿ ಬಂದಾಗ ಉಪಯೋಗವಾಗುವಂತಹ ಇಟ್ಟಿಗೆಗಳನ್ನು ಈಗಾಗಲೇ ಸಿದ್ಧಗೊಂಡಿವೆ!


ಬೆಂಗಳೂರು (ಏ.21): ಮುಂದೊಂದು ದಿನ ಮಂಗಳ ಗ್ರಹದಲ್ಲಿ (Mars) ಮನೆ ನಿರ್ಮಾಣ ಮಾಡುವ ಪರಿಸ್ಥಿತಿ ಬಂದಾಗ ಉಪಯೋಗವಾಗುವಂತಹ ಇಟ್ಟಿಗೆಗಳನ್ನು (Bricks) ಈಗಾಗಲೇ ಸಿದ್ಧಗೊಂಡಿವೆ! ಹೌದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಹಭಾಗಿತ್ವದಲ್ಲಿ ಇಂತಹದೊಂದು ವಿನೂತನ ಪ್ರಯೋಗ ನಡೆಸಿ, ಯಶಸ್ವಿಯಾಗಿದ್ದಾರೆ. ಮಂಗಳನ ಮಣ್ಣನ್ನು ಕೃತಕವಾಗಿ ಮರುಸೃಷ್ಟಿಸಿ ಈ ಇಟ್ಟಿಗೆ ರೂಪಿಸಲಾಗಿದೆ. ಭೂಮಿಗೆ ಹೋಲಿಸಿದರೆ ಮಂಗಳ ಗ್ರಹದ ವಾತಾವರಣ 100 ಪಟ್ಟು ತೆಳುವಾಗಿರುವುದರಿಂದ ಅಲ್ಲಿನ ಮಣ್ಣು ಸಹಜವಾಗಿ ಇಟ್ಟಿಗೆಯಂತೆ ಗಟ್ಟಿರೂಪ ತಾಳುವ ಗುಣ ಹೊಂದಿಲ್ಲ. ಹೀಗಾಗಿ ಮಂಗಳನ ಮಣ್ಣು ಗಟ್ಟಿಗೊಳ್ಳುವಂತಹ ವಿಧಾನವನ್ನು ಐಐಎಸ್ಸಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಇಟ್ಟಿಗೆ ಸೃಷ್ಟಿ ಹೇಗೆ?: ಮೊದಲಿಗೆ ಮಂಗಳ ಗ್ರಹದ ಮಣ್ಣನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಯಿಸಿದ್ದಾರೆ. ಈ ಮಣ್ಣನ್ನು ಸಸ್ಯಜನ್ಯ ಅಂಟು, ಸ್ಪೊರಸಾರ್ಸಿನ ಪಾಸ್ಟಿಯುರಿ ಎಂಬ ಬ್ಯಾಕ್ಟೀರಿಯಾ, ಯೂರಿಯಾ, ನಿಕ್ಕೆಲ್‌ ಕ್ಲೋರೈಡ್‌ ಅನ್ನು ಮಿಶ್ರಣ ಮಾಡಿ ಸ್ಲರಿ ರೂಪ ತಂದಿದ್ದಾರೆ. ಈ ಸ್ಲರಿಯನ್ನು ಯಾವುದೇ ಆಕೃತಿಯ ಅಚ್ಚಿಗೆ ಸುರಿಯಬಹುದಾಗಿದೆ. ಕೆಲವು ದಿನಗಳ ನಂತರ ಬ್ಯಾಕ್ಟೀರಿಯಾವು ಯೂರಿಯಾವನ್ನು ಕ್ಯಾಲ್ಸಿಯಂ ಕಾರ್ಬೋನೆಟ್‌ನ ಹರಳುಗಳನ್ನಾಗಿ ಪರಿವರ್ತಿಸುತ್ತದೆ. ಹರಳುಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನು ಸೃಜಿಸುವ ಬಯೋ ಪಾಲಿಮರ್‌ಗಳು ಮಣ್ಣಿನ ಕಣಗಳನ್ನು ಹಿಡಿದಿಡುವ ಸಿಮೆಂಟ್‌ ರೀತಿ ಕಾರ್ಯನಿರ್ವಹಿಸುತ್ತವೆ.

Tap to resize

Latest Videos

undefined

ಮಂಗಳನ ಅಂಗಳದಿಂದ ಸೂರ್ಯೋದಯ ಹೇಗೆ ಕಾಣುತ್ತೆ ಗೊತ್ತಾ? ನಾಸಾ ಸೆರೆಹಿಡಿದ ಈ ಚಿತ್ರ ನೋಡಿ

ಹೆಚ್ಚು ಪರಿಣಾಮಕಾರಿ: ಮಂಗಳನ ಮಣ್ಣನ್ನು ಹಿಡಿದಿಡುವ ಅನ್ಯ ವಿಧಾನಗಳಿಗಿಂತ ಭಾರತೀಯ ವಿಜ್ಞಾನಿಗಳು ರೂಪಿಸಿರುವ ಈ ವಿಧಾನ ಹೆಚ್ಚು ಪರಿಣಾಮಕಾರಿ ಎಂದು ಐಐಎಸ್‌ಸಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ. ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವು ಐಐಎಸ್‌ಸಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದ ಸಹ ಪ್ರಾಧ್ಯಾಪಕ ಅಲೋಕ್‌ ಕುಮಾರ್‌ ಪ್ರಕಾರ, ಈ ವಿಧಾನದಲ್ಲಿ ಬಳಸಿರುವ ಬ್ಯಾಕ್ಟಿರಿಯಾವು ರಂಧ್ರದಂತಿರುವ ಜಾಗಗಳನ್ನು ಪ್ರವೇಶಿಸಿ ತಮ್ಮ ಪ್ರೊಟೀನ್‌ಗಳನ್ನು ಬಳಸಿ ಕಣಗಳನ್ನು ಗಟ್ಟಿಯಾಗಿ ಹಿಡಿದಿಡುವಂತೆ ಮಾಡುತ್ತದೆ. ಇದರಿಂದ ರಂಧ್ರಗಳು ಕಡಿಮೆಯಾಗಿ ಇಟ್ಟಿಗೆ ಗಟ್ಟಿಯಾಗಿ ಇರುತ್ತದೆ ಎಂದು ಹೇಳುತ್ತಾರೆ.

ಇದೇ ತಂಡ ಈ ಹಿಂದೆ ಚಂದ್ರನ ಮೇಲ್ಮೈಯ ಮಣ್ಣನ್ನು ಬಳಸಿ ಇದೇ ಮಾದರಿಯಲ್ಲಿ ಇಟ್ಟಿಗೆ ರೂಪಿಸಿತ್ತು. ಆದರೆ ಆಗ ಕೇವಲ ಸಿಲಿಂಡರ್‌ ಆಕಾರದ ಇಟ್ಟಿಗೆಗಳನ್ನು ಮಾತ್ರ ರೂಪಿಸಲು ಸಾಧ್ಯವಾಗಿತ್ತು. ಆದರೆ ಮಂಗಳನ ಮಣ್ಣನ್ನು ಬಳಸಿ ವಿವಿಧ ಆಕೃತಿಯ ಇಟ್ಟಿಗೆ ನಿರ್ಮಿಸಲು ಸಾಧ್ಯವಾಗಿದೆ. ಐಐಎಸ್‌ಸಿಯ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನ ಸಹಾಯಕ ಪ್ರೊಫೆಸರ್‌ ಕೌಶಿಕ್‌ ವಿಶ್ವನಾಥನ್‌ ಅವರ ನೆರವಿನಿಂದ ಸ್ಲರಿ ಕಾಸ್ಟಿಂಗ್‌ ಮೆಥಡ್‌ ಅಭಿವೃದ್ಧಿ ಪಡಿಸಲಾಗಿದೆ.

ಮಂಗಳನ ಮಣ್ಣನ್ನು ಬಳಸಿ ಇಟ್ಟಿಗೆ ನಿರ್ಮಾನ ನಡೆಸುವುದು ಸವಾಲಿನ ಕೆಲಸವಾಗಿತ್ತು. ಮಂಗಳನ ಮಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಆರಂಭದಲ್ಲಿ ನಮ್ಮ ಬ್ಯಾಕ್ಟೀರಿಯಾ ಈ ಮಣ್ಣಿನಲ್ಲಿ ಬೆಳೆಯಲೇ ಇಲ್ಲ, ಈ ಸಂದರ್ಭದಲ್ಲಿ ನಿಕ್ಕೆಲ್‌ ಕ್ಲೊರೈಡ್‌ ಬಳಸಿ ಮಂಗಳನ ಮಣ್ಣುನ್ನು ಬ್ಯಾಕ್ಟಿರಿಯಾ ಬೆಳೆಯಲು ಯೋಗ್ಯಗೊಳಿಸಲಾಯಿತು. ಇದು ನಮ್ಮ ಸಂಶೋಧನೆಯ ಮಹತ್ವದ ಘಟ್ಟಎಂದು ಅಲೋಕ್‌ ಕುಮಾರ್‌ ವಿವರಿಸುತ್ತಾರೆ.

ಇಟ್ಟಿಗೆ ಮೇಲೆ ಗುರುತ್ವ ಪರಿಣಾಮ ಅಧ್ಯಯನ: ಈ ಇಟ್ಟಿಗೆಯ ಮೇಲೆ ಮಂಗಳನ ವಾತಾವರಣ ಮತ್ತು ಕಡಿಮೆ ಗುರುತ್ವಕಾರ್ಷಣೆಯ ಪರಿಣಾಮವನ್ನು ಅಧ್ಯಯನ ನಡೆಸಲು ಚಿಂತನೆ ನಡೆಸಲಾಗಿದೆ. ಭೂಮಿಯ ವಾತಾವರಣಕ್ಕಿಂತ ಮಂಗಳನ ವಾತಾವರಣ 100 ಪಟ್ಟು ತೆಳುವಾಗಿದೆ. ಹಾಗೆಯೇ ಶೇ. 95ರಷ್ಟುಇಂಗಾಲಾಮ್ಲವನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ಕೆಟ್ಟಪರಿಣಾಮ ಬೀರಬಹುದು. ಆದ್ದರಿಂದ ಸಂಶೋಧಕರು ಮಂಗಳ ಗ್ರಹದ ವಾತಾವರಣವನ್ನು ಹೋಲುವ ಚೇಂಬರ್‌ ಒಂದನ್ನು ನಿರ್ಮಿಸಿದ್ದು ಇಲ್ಲಿ ಪ್ರಯೋಗ ಮುಂದುವರಿಯಲಿದೆ ಎಂದು ಅಲೋಕ್‌ ಕುಮಾರ್‌ ಹೇಳಿದ್ದಾರೆ.

Solnet Service: ಚಂದ್ರನ ಮೇಲೂ ಹೈ ಸ್ಪೀಡ್ ಇಂಟರ್ನೆಟ್‌ ಸೇವೆ ನೀಡಲಿದೆ ಅಕ್ವೇರಿಯನ್ ಸ್ಪೇಸ್

ಮಂಗಳ ಗ್ರಹಕ್ಕೆ ಇಟ್ಟಿಗೆ ಕಳಿಸುವ ಯೋಜನೆ: ಹಾಗೆಯೇ ಮಂಗಳ ಗ್ರಹದ ಪರಿಸ್ಥಿತಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ನಿಗಾ ಇಡಲು ಉಪಕರಣವೊಂದನ್ನು ನಿರ್ಮಿಸಲಾಗಿದೆ. ಇಸ್ರೋದ ನೆರವಿನೊಂದಿಗೆ ಈ ಇಟ್ಟಿಗೆಯನ್ನು ಮಂಗಳ ಗ್ರಹಕ್ಕೆ ಕಳುಹಿಸಿ ಅಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪರಿಶೀಲಿಸುವ ಯೋಜನೆ ರೂಪಿಸಲಾಗಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಇನ್ನೊರ್ವ ವಿಜ್ಞಾನಿ ರಶ್ಮಿ ದೀಕ್ಷಿತ್‌ ಹೇಳಿದ್ದಾರೆ.

ಚಂದ್ರನ ಮಣ್ಣು ಬಳಸಿ ಇಟ್ಟಿಗೆ ನಿರ್ಮಿಸಿದ್ದ ತಂಡ: ಐಐಎಸ್‌ಸಿ ವಿಜ್ಞಾನಿಗಳ ತಂಡ ಈ ಹಿಂದೆ ಚಂದ್ರನ ಮೇಲ್ಮೈಯ ಮಣ್ಣನ್ನು ಬಳಸಿ ಇಟ್ಟಿಗೆ ರೂಪಿಸಿತ್ತು. ಆದರೆ ಆಗ ಕೇವಲ ಸಿಲಿಂಡರ್‌ ಆಕಾರದ ಇಟ್ಟಿಗೆಗಳನ್ನು ಮಾತ್ರ ರೂಪಿಸಲು ಸಾಧ್ಯವಾಗಿತ್ತು. ಆದರೆ ಮಂಗಳನ ಮಣ್ಣನ್ನು ಬಳಸಿ ವಿವಿಧ ಆಕೃತಿಯ ಇಟ್ಟಿಗೆ ನಿರ್ಮಿಸಲು ಸಾಧ್ಯವಾಗಿದೆ.

ಹೇಗಿದೆ ಮಂಗಳನ ಇಟ್ಟಿಗೆ?
* ಮಂಗಳ ಗ್ರಹದ ವಾತಾವರಣ ಭೂಮಿಗಿಂತ 100 ಪಟ್ಟು ತೆಳು.
* ಅಲ್ಲಿನ ಮಣ್ಣಿಗೆ ಇಟ್ಟಿಗೆಯಂತೆ ಗಟ್ಟಿರೂಪ ತಾಳುವ ಗುಣವಿಲ್ಲ.
* ಹೀಗಾಗಿ ಮಂಗಳನ ಮಣ್ಣನ್ನೇ ಗಟ್ಟಿಗೊಳಿಸುವ ವಿಧಾನ ಶೋಧ.
* ಅಂಟು, ಪಾಸ್ಟಿಯುರಿ ಬ್ಯಾಕ್ಟೀರಿಯಾ, ಯೂರಿಯಾ, ನಿಕ್ಕೆಲ್‌ ಬಳಕೆ.
* ಈ ವಸ್ತುಗಳ ಸ್ಲರಿಯನ್ನು ಅಚ್ಚಿಗೆ ಹೊಯ್ದು ಇಟ್ಟಿಗೆಗಳ ನಿರ್ಮಾಣ.

click me!