ಮನುಷ್ಯ ಮುಖದ ಭಾವನೆ ಅಭಿವ್ಯಕ್ತಿಸುವ ಎಐ ಆಧರಿತ ರೊಬೋಟ್ ಅಭಿವೃದ್ಧಿ

By Suvarna News  |  First Published Jun 7, 2021, 3:58 PM IST

ಕೊಲಂಬಿಯಾ ಯುನಿವರ್ಸಿಟಿಯ ವಿಜ್ಞಾನಿಗಳ ತಂಡವೊಂದು ಕೃತಕ ಬುದ್ಧಿಮತ್ತೆ ಆಧರಿತ ಹ್ಯೂಮನಾಯ್ಡ್ ರೊಬೋಟ್ ತಲೆಯನ್ನು ಅಭಿವೃದ್ಧಿಪಡಿಸಿದೆ. ಇದರ ಹೆಸರು ಇವಾ. ಈ ರೊಬೋಟ್, ಮಾನವರ ಮುಖದ ರೀತಿಯಲ್ಲಿ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ಈ ರೀತಿಯ ಅಭಿವೃದ್ಧಿಯು ಹಿಂದೆಯೂ ಆಗಿವೆಯಾದರೂ, ಇವಾ ಇನ್ನೂ ಹೆಚ್ಚಿನ ನಿಖರತೆಯನ್ನು ಸಾಧಿಸಿದೆ.


ರೊಬೋಟ್‌ಗಳು ನಮ್ಮ ಆಧುನಿಕ ಜಗತ್ತಿನ ಭಾಗವೇ ಆಗಿ ಹೋಗಿಬಿಟ್ಟಿವೆ. ಬಹಳಷ್ಟು ಕ್ಷೇತ್ರಗಳಲ್ಲ ರೊಬೋಟ್‌ಗಳು ಬಳಕೆಯಾಗುತ್ತಿವೆ. ಉತ್ಪಾದನಾ ಕ್ಷೇತ್ರದಿಂದ ಹಿಡಿದು ವೈದ್ಯಕೀಯ ಕ್ಷೇತ್ರದವರೆಗೂ ರೊಬೋಟ್‌ಗಳನ್ನು ಬಳಸಿಕೊಂಡು ಕೆಲಸ ಮಾಡುಲಾಗುತ್ತಿದೆ. ಹಾಗಿದ್ದೂ, ರೊಬೋಟ್‌ಗಳನ್ನು ಥೇಟ್ ಮನುಷ್ಯನ ರೀತಿಯಲ್ಲೇ ರೂಪಿಸುವ ಕೆಲಸವೇನೂ ನಿಂತಂತೆ ಕಾಣುತ್ತಿಲ್ಲ. ಈ ದಿಸೆಯಲ್ಲಿ ಸಾಕಷ್ಟು ಪ್ರಯತ್ನಗಳು ನಡೆದೇ ಇವೆ.

ಈ ಸಾಲಿಗೆ ಕೊಲಂಬಿಯಾ ಯುನಿವರ್ಸಿಟಿಯ ಮೆಕ್ಯಾನಿಕಲ್ ಎಂಜಿನಿಯರ್ಸ್ ವಿಭಾಗದ ಸಂಶೋಧಕರು ಹೊಸ ಸಂಶೋಧನೆ ಮಾಡಿದ್ದಾರೆ. ಈ ಸಂಶೋಧನಾ ತಂಡವು ಅಭಿವೃದ್ಧಿಪಡಿಸಿದ ರೊಬೋಟ್, ಮನುಷ್ಯರ ರೀತಿಯಂತೆಯೇ ನಗುತ್ತದೆ, ಕಿರು ನಗೆಯನ್ನು ಬೀರುತ್ತದೆ, ಹುಬ್ಬುಗಳನ್ನು ಮೇಲೇರಿಸಬಲ್ಲದು, ಮಾನವರ ಹಣೆಯ ಮೇಲಿನ ನೇರಿಗೆಗಳನ್ನು ಮಿಮಿಕ್ ಮಾಡಬಲ್ಲದು.

Latest Videos

undefined

ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

ಕೊಲಂಬಿಯಾ ಯುನಿವರ್ಸಿಟಿಯ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್ ಇಂಟೆಲಜೆನ್ಸ್-ಎಐ) ಆಧರಿತ ರೊಬೋಟ್ ಹೆಸರು- ಇವಾ. ರೊಬೋಟ್ ಕ್ಷೇತ್ರದಲ್ಲಿ ಮಾನವ ರೀತಿಯ ಭಾವನೆಗಳನ್ನು ಅಭಿವ್ಯಕ್ತಿಸುವ ಅನೇಕ ರೊಬೋಟ್‌ಗಳನ್ನು ನಿರ್ಮಿಸಲಾಗಿದೆ. ಆದರೂ ಈಗ ಅಭಿವೃದ್ಧಿಪಡಿಸಲಾಗಿರುವ ಇವಾ ರೊಬೋಟ್ ಇನ್ನೂ ಹೆಚ್ಚು ನಿಖರವಾಗಿದೆ ಮತ್ತು ಈ ಹಿಂದಿನ ಎಲ್ಲ ರೊಬೋಟ್‌ಗಳಿಗಿಂತಲೂ ತುಂಬ ಭಿನ್ನವಾಗಿದೆ. ಈ ರೊಬೋಟ್ ಹೆಚ್ಚು ಅಭಿವ್ಯಕ್ತಿಯನ್ನು ಹೊರ ಹಾಕುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. 

ಹ್ಯೂಮನಾಯ್ಡ್ ರೊಬೋಟ್(ಮಾನವಪ್ರೇರಿತ ರೊಬೋಟ್) ಗಳನ್ನು  ಅಭಿವೃದ್ಧಿಪಡಿಸುವುದು ತುಂಬ ದುಬಾರಿ. ಆರ್ಥಿಕವಾಗಿಯೂ ಹೊರೆಯಾಗುತ್ತದೆ, ಬಹಳಷ್ಟು ಮಂದಿಗೆ ಇದೂ ಸಾಧ್ಯವೂ ಆಗುವುದಿಲ್ಲ. ಹಾಗಾಗಿಯೇ ಹ್ಯೂಮನಾಯ್ಡ್ ರೊಬೋಟ್‌ಗಳ ಕ್ಷೇತ್ರದಲ್ಲಿ ಸೀಮಿತವಾದ ಸಂಶೋಧನೆಗಳಾಗುತ್ತಿವೆ ಎಂದು ಇವಾ ರೊಬೋಟ್ ಅಭಿವೃದ್ಧಿಯಲ್ಲಿ ಭಾಗಿಯಾಗಿರುವ ಕೊಲಂಬಿಯಾ ಯುನಿರ್ಸಿಟಿಯ ವಿಜ್ಞಾನಿಗಳು ಹೇಳುತ್ತಾರೆ.

ಈ ಹ್ಯೂಮನಾಯ್ಡ್ ರೊಬೋಟ್ ಇವಾ ಬಗ್ಗೆ ಸೈನ್ಸ್ ಡೈರೆಕ್ಟ್ ಜರ್ನಲ್‌ನಲ್ಲಿ ವಿಸ್ತ್ರತವಾದ ವರದಿ ಪ್ರಕಟವಾಗಿದೆ. ಇದೇ ವರದಿಯನ್ನು ಉಲ್ಲೇಖಿಸಿ ಅನೇಕ ಮಾಧ್ಯಮಗಳು ವರದಿ ಮಾಡಿವೆ. ಫೇಷಿಯಲೀ ಎಕ್ಸ್‌ಪ್ರೆಸ್ಸಿವನ್ ಹ್ಯೂಮನಾಯ್ಡ್ ರೊಬೋಟಿಕ್ ಫೇಸ್ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿದೆ. ತುಲನಾತ್ಮಕವಾಗಿ ಅಗ್ಗದ, ಓಪನ್ ಸೋರ್ಸ್ ರೋಬೋಟ್ ಅನ್ನು ಒದಗಿಸುವ ಮೂಲಕ ಸಂಭಾವ್ಯ ಕೃತಕ ಬುದ್ಧಿಮತ್ತೆ ಸಂಶೋಧಕರಿಗೆ ಈ ಅಭಿವೃದ್ಧಿಯು ಸಹಾಯ ಮಾಡುತ್ತದೆ. ಇದು ಮಾನವರು ಮತ್ತು ಯಂತ್ರಗಳ ನಡುವಿನ ಭಾವನಾತ್ಮಕ ಸಂವಹನದ ಸಂಶೋಧನೆಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

10 ದಶಲಕ್ಷ ವರ್ಷ ಹಳೆಯ ಪಳೆಯುಳಿಕೆಗಳು ಪತ್ತೆ..!

ಸಂಶೋಧಕ ತಂಡ ಅಭಿವೃದ್ಧಿಪಡಿಸಿರುವ ಈ ಹ್ಯೂಮನಾಯ್ಡ್ ರೊಬೋಟ್ ಇವಾಗೆ, ವಯಸ್ಕರಿಗಿರುವ ಗಾತ್ರದ ಹ್ಯೂಮನಾಯ್ಡ್ ತಲೆಯನ್ನು ರೂಪಿಸಲಾಗಿದೆ ಮತ್ತು ಇದು ಎಲ್ಲ ರೀತಿಯ ಮುಖ ಭಾವನೆಗಳನ್ನು ಹೊರ ಹಾಕುತ್ತದೆ. ಅಂದರೆ, ತಲೆ ತಲ್ಲಾಡಿಸುವುದು, 25 ಸ್ನಾಯುಗಳನ್ನು ಬಳಸಿಕೊಂಡು ಮಾತನಾಡುತ್ತದೆ, ಪೇಪರ್ ಓದುತ್ತದೆ. ಈ ರೊಬೋಟ್‌ನಲ್ಲಿರುವ 12 ಸ್ನಾಯುಗಳು 15 ಮಿಮೀವರೆಗೂ ಚರ್ಮವನ್ನು ಚಲನೆಗೊಳಪಡಿಸುವ ಸಾಮರ್ಥ್ಯವನ್ನು ಹೊಂದಿವೆ.
 

ಹ್ಯಾನ್ಸನ್ ರೊಬೊಟಿಕ್ಸ್ ಮತ್ತು ಹಿರೋಷಿ ಇಶಿಗುರೊ ಲ್ಯಾಬೊರೇಟರೀಸ್‌ನಂತಹ ಸಂಸ್ಥೆಗಳು ಅಭಿವೃದ್ಧಿಪಡಿಸಿದಷ್ಟು ಅತ್ಯಾಧುನಿಕವಲ್ಲದಿದ್ದರೂ, ಮಾನವ ಮುಖದ ಅಭಿವ್ಯಕ್ತಿಗಳು ಮತ್ತು ತಲೆ ಚಲನೆಯನ್ನು ವಾಸ್ತವಿಕವಾಗಿ ಅನುಕರಿಸುವ ಸಾಮರ್ಥ್ಯ ಇವಾ ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ಕ್ಯಾಮೆರಾ ಮೂಲಕ ಸೆರೆಹಿಡಿಯಲಾದ ಮಾನವನ ಮುಖ ಭಾವನೆಗಳ ವಿಶ್ಲೇಷಣೆ ಮತ್ತು ಡೀಪ್ ಲರ್ನಿಂಗ್ ಬಳಸಿಕೊಂಡು ಇವಾ ತನ್ನ ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತದೆ.  ಕೇಬಲ್‌ಗಳು ಮತ್ತು ಮೋಟರ್‌ಗಳು  ರೋಬೋಟ್‌ನ ಮೃದು ಚರ್ಮದ ವಿವಿಧ ಬಿಂದುಗಳನ್ನು ಎಳೆಯುವ ಮೂಲಕ ಕಾರ್ಯರೂಪಕ್ಕೆ ಬರುತ್ತವೆ ಮತ್ತು ಮುಖದ ಅಭಿವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. 

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಕೊಲಂಬಿಯಾ ಯುನಿವರ್ಸಿಟಿಯ ಮೆಕ್ಯಾನಿಕಲ್ ಎಂಜಿನಿಯರ್ಸ್ ವಿಭಾಗದ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಎಐ ಆಧರಿತ ಈ ರೊಬೋಟ್ ಮುಂದಿನ ಹಲವು ಸಂಶೋಧನೆಗಳಿಗೆ ಮೆಟ್ಟಿಲಾಗಬಹುದು. ಈ ರೀತಿಯ ರೊಬೋಟ್‌ಗಳ ಅಭಿವೃದ್ಧಿ ದುಬಾರಿಯಾದರೂ ಶೈಕ್ಷಣಿಕವಾಗಿ ಕಲಿಕೆಯ ಹಿನ್ನೆಲೆಯಲ್ಲಿ ಮಹತ್ವಪಡೆದುಕೊಂಡಿವೆ.

click me!