Children's Day: ಕನ್ನಡ ನಟ, ನಟಿಯರ ಬಾಲ್ಯದ ಆಟ ಆ ಹುಡುಗಾಟ

By Suvarna News  |  First Published Nov 14, 2021, 5:34 PM IST

ಪ್ರತಿಯೊಬ್ಬರಿಗೂ ಬಾಲ್ಯದ ಖುಷಿ ಅಮರ. ಚಿಕ್ಕಂದಿನಲ್ಲಿ ನಡೆಸಿದ ತುಂಟಾಟ, ಕೀಟಲೆ ಜೀವನಪೂರ್ತಿ ನೆನಪಲ್ಲಿ ಉಳಿದಿರುತ್ತದೆ. ಆ ನೆನಪುಗಳು ತುಟಿಯ ಮೇಲೊಂದು ಕಿರುನಗೆ ಹುಟ್ಟಿಸುವುದು ನಿಶ್ಚಿತ. ಇವತ್ತು ಮಕ್ಕಳ ದಿನಾಚರಣೆ. ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರದ ಸೆಲೆಬ್ರಿಟಿಗಳು ತಮ್ಮ ಬಾಲ್ಯ ನೆನೆಸಿಕೊಂಡಿದ್ದಾರೆ. ಅವರ ಕತೆಗಳನ್ನು ಓದುತ್ತಾ ನೀವು ನಿಮ್ಮ ಬಾಲ್ಯಕ್ಕೆ ಮರಳಬಹುದು.


ಸ್ಯಾಂಕಿಟ್ಯಾಂಕ್‌ನ ಶೂಟಿಂಗ್‌ ನೆನಪು

- ಮೇಘನಾ ಗಾಂವ್ಕರ್‌, ನಟಿ

Tap to resize

Latest Videos

ನಾನು ಕಲಬುರಗಿಯ ಹುಡುಗಿ. ಓದಿದ್ದೆಲ್ಲ ಬೋರ್ಡಿಂಗ್‌ ಸ್ಕೂಲ್‌ನಲ್ಲಿ. ನನಗಿಂತ ಎರಡು ವರ್ಷ ದೊಡ್ಡವಳಾಗಿದ್ದ ನನ್ನ ಅಕ್ಕ ಆಗ ದೇವರಾಜ್‌ ಅವರ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸುತ್ತಿದ್ದಳು. ನಾನೂ ರಜೆಯಲ್ಲಿ ಶೂಟಿಂಗ್‌ ನೋಡಲಿಕ್ಕೆ ಅಂತ ಬೆಂಗಳೂರಿಗೆ ಬಂದಿದ್ದೆ. ಎರಡನೇ ಕ್ಲಾಸಿನಲ್ಲಿದ್ದೆ, ಅಕ್ಕ ನಾಲ್ಕನೆ ತರಗತಿಯಲ್ಲಿದ್ದಳು. ಬೆಂಗಳೂರಿನ ಸ್ಯಾಂಕಿಟ್ಯಾಂಕ್‌ನಲ್ಲಿ ಶೂಟಿಂಗ್‌. ದೇವರಾಜ್‌, ಅಂಜಲಿ, ರಮೇಶ್‌ ಭಟ್‌ ಅವರೆಲ್ಲ ಇದ್ದರು. ನನಗೆ ನೆನಪಿದ್ದಂತೆ ಅದು ‘ಭಲೇ ಕೇಶವ’ ಅನ್ನುವ ಚಿತ್ರ. ಒಳಗೊಳಗೇ ಬಹಳ ಖುಷಿ ಆಗ್ತಿತ್ತು. ಶೂಟಿಂಗ್‌ ಸೆಟ್‌ನಲ್ಲೆಲ್ಲ ಬಹಳ ಉತ್ಸಾಹದಲ್ಲಿ ಓಡಾಡ್ತಿದ್ದೆ. ನಮ್ಮ ಫ್ಯಾಮಿಲಿಗೆ ಹತ್ತಿರದವರೇ ಸಿನಿಮಾ ನಿರ್ಮಿಸುತ್ತಿದ್ದರು. ಒಂದಿಷ್ಟುದಿನಗಳು ಕಳೆದವು. ಆ ಶೂಟಿಂಗ್‌ ದಿನಗಳೂ ಒಂದು ಹಂತದ ಬಳಿಕ ಮನಸ್ಸಿಂದ ಮರೆಯಾದವು.

ನನ್ನ ಎಜುಕೇಶನ್‌ ಮುಗಿದ ಮೇಲೆ ಬೆಂಗಳೂರಿಗೆ ಬಂದೆ. ಸಿನಿಮಾದಲ್ಲಿ ನಟಿಸಲಾರಂಭಿಸಿದೆ. ಒಮ್ಮೆ ‘ಚಾರ್‌ಮಿನಾರ್‌’ ಸಿನಿಮಾದಲ್ಲಿ ನಟಿಸುತ್ತಿದ್ದೆ. ಒಂದು ಹಾಡಿನ ಶೂಟಿಂಗ್‌ ಸ್ಯಾಂಕಿಟ್ಯಾಂಕ್‌ನಲ್ಲಿತ್ತು. ನನಗೆ ಅಲ್ಲಿ ಒಂಥರಾ ನಾಸ್ತಾಲ್ಜಿಯಾ ಫೀಲ್‌. ಏನು ಅಂತ ಗೊತ್ತಾಗ್ತಿರಲಿಲ್ಲ. ಅವತ್ತು ರಾತ್ರಿ ಕನಸಲ್ಲಿ ನನ್ನ ಬಾಲ್ಯದ ಶೂಟಿಂಗ್‌ ಸನ್ನಿವೇಶ ಬಂದಿತ್ತು. ಎಲ್ಲಾ ನೆನಪಾಯ್ತು. ಅದನ್ನ ಬಂದು ಸೆಟ್‌ನಲ್ಲೂ ಹೇಳಿದೆ, ಹೀಗೆ ವಿಶೇಷ ಕನೆಕ್ಷನ್‌ ಇರೋ ಕಾರಣ ಹಾಡು ಹಿಟ್‌ ಆಗುತ್ತೆ ಅಂತ ಅವರೆಲ್ಲ ಮಾತಾಡಿಕೊಂಡರು. ಹಾಗೇ ಆಯ್ತು. ಚಾರ್‌ಮಿನಾರ್‌ ಸಿನಿಮಾದ ಜೊತೆಗೆ ‘ರಾಧೆ’ ಎಂಬ ಆ ಹಾಡೂ ಹಿಟ್‌ ಆಯ್ತು.

ಭಿನ್ನವಾಗಿ ಮಕ್ಕಳ ದಿನಾಚರಣೆ; ಹೋಂಡಾ ಡಿಜಿಟಲ್ ರಸ್ತೆ ಸುರಕ್ಷತಾ ಅಭಿಯಾನ!

ಗಿಣಿಮೂತಿ ಬೆರಳಿನ ಹುಡುಗಿ ನಾನು

ಮೇಘನಾ ರಾಜ್‌

ನನ್ನ ಬಾಲ್ಯದಲ್ಲಿ ನಡೆದ ಈ ಘಟನೆ ತುಂಬಾ ಜನಕ್ಕೆ ಗೊತ್ತಿಲ್ಲ. ನನ್ನ ಆತ್ಮೀಯ ಸ್ನೇಹಿತರಿಗೆ ಮತ್ತು ಚಿರುಗೆ ಬಿಟ್ಟರೆ ಹೆಚ್ಚಿನವರಿಗೆ ತಿಳಿದಿಲ್ಲ. ಆಗ ನಮ್ಮ ಮನೆ ಡೈರಿ ಸರ್ಕಲ್‌ ಬಳಿ ಇತ್ತು. ಮನೆ ಪಕ್ಕದ್ದಲೇ ಟೇಲರ್‌ ಶಾಪ್‌ ಇತ್ತು. ಅಲ್ಲಿ ಸೀರೆ ನೇಯುವ ಮಿಷನ್‌ ಕೂಡ ಇತ್ತು. ಕಾರ್ಡ್‌ ಬೋರ್ಡ್‌ಗೆ ದಾರ ಸುತ್ತಿಟ್ಟಿರುವುದನ್ನು ನಾನು ಪದೇ ಪದೇ ಹೋಗಿ ಮುಟ್ಟುತ್ತಿದ್ದೆ. ದಾರ ಸುತ್ತುವ ಬೋರ್ಡ್‌ ಆನ್‌ ಆಗಿದ್ದಾಗ ನಾನು ಏನಾದರೂ ಅನಾಹುತ ಮಾಡಿಕೊಳ್ಳುತ್ತೇನೆ ಎಂದು ನಮ್ಮ ತಂದೆಗೆ ಯಾವಾಗಲೂ ಭಯ ಇರೋದು. ಹೀಗಾಗಿ ಆ ಟೇಲರ್‌ ಅಂಗಡಿ ಕಡೆ ಹೋಗುವುದಕ್ಕೆ ಬಿಡುತ್ತಿರಲಿಲ್ಲ.

ಕೊನೆಗೂ ಒಂದು ದಿನ ನಾನು ಅಲ್ಲಿಗೆ ಹೋಗಿದ್ದಾಗ ದಾರ ಸುತ್ತಿದ್ದ ಬೋರ್ಡ್‌ ಮುಟ್ಟಲು ಹೋಗಿ ಬೆರಳಿಗೆ ಏಟು ಮಾಡಿಕೊಂಡೆ. ಯಾವ ಮಟ್ಟಿಗೆ ಎಂದರೆ ಚಿಕಿತ್ಸೆ ಮಾಡಿಕೊಳ್ಳುವ ಹಂತಕ್ಕೆ ಹೋಗಿತ್ತು. ಈಗಲೂ ನನ್ನ ಒಂದು ಬೆರಳು ನೆಟ್ಟಗಿಲ್ಲ, ಸೊಟ್ಟಗೆ ಇದೆ. ನನ್ನ ವಕ್ರವಾಗಿರುವ ಬೆರಳು ನೋಡಿ, ‘ಇಡೀ ಬೆರಳಿಗೆ ಕೆಂಪು ಬಣ್ಣದ ನೇಲ್‌ ಪಾಲೀಶ್‌ ಹಾಕಿದರೆ ನಿನ್ನ ಬೆರಳು ಗಿಣಿ ಮೂತಿಯಂತೆ ಕಾಣುತ್ತದೆ’ ಎಂದು ಚಿರು ರೇಗಿಸುತ್ತಿದ್ದರು. ಸ್ನೇಹಿತರು ಸೇರಿದಾಗ, ಮನೆಯಲ್ಲಿ ಎಲ್ಲರು ಇದ್ದಾಗ ‘ನಮ್‌ ಮನೆಯವರ ಕೈಯಲ್ಲಿ ಗಿಣಿ ಮೂತಿ ಇದೆ ನೋಡಿ’ ಎಂದು ತಮಾಷೆ ಮಾಡುತ್ತಿದ್ದರು. ಬಾಲ್ಯದಲ್ಲಿ ಪೆಟ್ಟು ಮಾಡಿಕೊಂಡ ಬೆರಳು ದೊಡ್ಡವಳಾದ ಮೇಲೆ ಮ

ಗಿಣಿ ಆಗಿ ಗಿಣಿ ಗಿಣಿ ಅಂದ್ರೆ ಆಗ್ಲೇ ಇಲ್ಲ!

- ಅಕ್ಷತಾ ಪಾಂಡವಪುರ, ನಟಿ

ನಾನು ಹತ್ತನೇ ಕ್ಲಾಸ್‌ವರೆಗೂ ಓದಿದ್ದು ಪಾಂಡವಪುರದಲ್ಲೇ. ಪ್ರತೀ ಮಕ್ಕಳ ದಿನಾಚರಣೆಯಲ್ಲೂ ನಮ್ಮನ್ನು ಮೈಸೂರು ಝೂ ಅಥವಾ ಎಕ್ಸಿಬಿಷನ್‌ಗೆ ಕರೆದೊಯ್ಯುತ್ತಿದ್ದರು. ಖುಷಿಯಲ್ಲಿ ಕುಣಿದಾಡಿ ಬಿಡ್ತಿದ್ವಿ. ಆದರೆ ಝೂ ಎಂಟ್ರಿ ಗೇಟ್‌ ಹತ್ರ ಹೋದಾಗ, ನಾಳೆ ನಾನು ದೊಡ್ಡವಳಾದ್ರೆ ಇದೆಲ್ಲ ಇರೋದೆ ಇಲ್ವಲ್ಲ ಅಂತ ಸಡನ್ನಾಗಿ ಬೇಸರ ಆಗೋದು. ಒಂದಿಷ್ಟುಹೊತ್ತು ಮಂಕಾಗಿಯೇ ಇರ್ತಿದ್ದೆ. ಆಗ ನನ್ನ ಪ್ರಕಾರ ಹುಡುಗಿಯರು ಮೆಚ್ಯೂರ್‌ ಆದ್ಮೇಲೆ ಹೀಗೆಲ್ಲ ಕರ್ಕೊಂಡು ಹೋಗಲ್ಲ ಅಂತ. ಆದರೆ ನಮ್ಮನ್ನ ಹತ್ತನೇ ಕ್ಲಾಸ್‌ವರೆಗೂ ಕರ್ಕೊಂಡು ಹೋಗ್ತಿದ್ರು. ಬಾಲ್ಯ ಅಂದ್ರೆ ಆ ನೆನಪೇ ಬರುತ್ತೆ.

ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?

ಎಕ್ಕದ ಗಿಡದಲ್ಲಿ ಹಸಿರು ಬಣ್ಣದ ಕಾಯಿ ಬಿಡುತ್ತೆ, ಅದಕ್ಕೆ ಗಿಳಿಮೂತಿ ಕಾಯಿ ಅಂತಾರೆ. ಹಳ್ಳ, ಕೆರೆ ಅಥವಾ ನದಿ ನೀರಿಗೆ ಈ ಕಾಯಿ ಹಾಕಿ ‘ಗಿಣಿ ಆಗು ಗಿಣಿ ಆಗು ಗಿಣಿ ಗಿಣಿ’ ಅಂತ ಹೇಳ್ತಾ ಇದ್ರೆ ಆ ಕಾಯಿ ಗಿಣಿ ಆಗಿ ಹಾರಿ ಹೋಗುತ್ತೆ ಅಂತ ಹೇಳ್ತಿದ್ರು. ನಾನು ಪಾಂಡವಪುರದಿಂದ ಹಾರೋಹಳ್ಳಿಗೆ ಹೋಗುವಾಗ ನಾಲೆ ಕೆಳಗೆ ಈ ಕಾಯಿ ನೋಡಿದೆ.

ಅವತ್ತು ಸಂಜೆ ಸ್ಕೂಲ್‌ ಮುಗಿಸಿ ಬರ್ತಾ ನನ್ನ ಫ್ರೆಂಡ್ಸ್‌ಗೆ ಈ ಕಾಯಿಯಿಂದ ಗಿಣಿ ಬರುತ್ತೆ ನೋಡ್ತಿರಿ ಅಂತ ಕಾಯಿನ ಮಳೆ ನೀರು ನಿಂತಿದ್ದ ಹಳ್ಳಕ್ಕೆ ಹಾಕಿ, ‘ಗಿಣಿ ಆಗು ಗಿಣಿ ಆಗು ಗಿಣಿ ಗಿಣಿ’ ಅನ್ನುತ್ತಾ ಕೂತೆ. ಫ್ರೆಂಡ್ಸ್‌ ಎಲ್ಲಾ ಮನೇಲಿ ಬೈತಾರೆ ಅಂತ ಹೊರಟು ಹೋದ್ರು. ನಾನು ಐದೂವರೆವರೆಗೂ ಹೇಳ್ತಾನೇ ಇದ್ದೆ, ಗಿಳಿ ಬರಲೇ ಇಲ್ಲ. ಫುಲ್‌ ಡಿಸಪಾಯಿಂಟ್‌ಮೆಂಟ್‌. ಮನೆಗೆ ಹೋದರೆ ಚೆನ್ನಾಗಿ ಮಂಗಳಾರತಿ.

ಮಿಲಿಟ್ರಿ ಸ್ಕೂಲಲ್ಲಿ ಫ್ರೆಂಡ್‌ ಜುಟ್ಟಿಗೆ ಕತ್ತರಿ ಹಾಕಿದ್ದೆ!

- ಕಿರಣ್‌ರಾಜ್‌, ನಟ

ನಾನು ಓದಿದ್ದು ಮಿಲಿಟ್ರಿ ಸ್ಕೂಲಲ್ಲಿ. ಇಡೀ ವರ್ಷದಲ್ಲಿ ನಮಗೆ ಕಲರ್‌ ಡ್ರೆಸ್‌ ಹಾಕಿಕೊಳ್ಳೋಕೆ ಸಿಗುತ್ತಿದ್ದ ಏಕೈಕ ಅವಕಾಶ ಮಕ್ಕಳ ದಿನದಂದು ಮಾತ್ರ. ಆ ದಿನಕ್ಕಾಗಿ ನಮ್ಮ ಬಟ್ಟೆಗಳಲ್ಲೇ ಬೆಸ್ಟ್‌ ಬಟ್ಟೆಯನ್ನು ಆರಿಸಿಕೊಳ್ಳುತ್ತಿದ್ದೆವು. ಫ್ಯಾನ್ಸಿ ಡ್ರೆಸ್‌, ಬೇರೆ ಬೇರೆ ಕಾಂಪಿಟೀಶನ್‌ಗಳು, ಆ ಆ್ಯಂಬಿಯನ್ಸೇ ಚೆಂದ ಇರುತ್ತಿತ್ತು. ಅಂದಿನ ನಮ್ಮ ಖುಷಿ, ಮಕ್ಕಳ ದಿನಾಚರಣೆಯಿಂದ ವಂಚಿತರಾದ ಸ್ಲಮ್‌ನ ಮಕ್ಕಳಿಗೂ ಇರಲಿ ಅಂತ ಇವತ್ತು ಮೈಸೂರಲ್ಲಿ ಒಂದು ಪ್ರೋಗ್ರಾಂ ಮಾಡುತ್ತಿದ್ದೇನೆ. ಈ ಸ್ಲಮ್‌ ಹತ್ರದ ಒಂದಿಷ್ಟುಹೊಟೇಲ್‌ಗಳಿಗೆ ಹೋಗಿ ಅವರು ಬೇಕಾದ್ದು ತಿನ್ನಬಹುದು, ಬೆಳಗ್ಗಿಂದ ರಾತ್ರಿಯವರೆಗೂ ಏನು ತಿಂದರೂ ಫ್ರೀ. ಈ ಭಾಗದ ಹೊಟೇಲ್‌ಗಳನ್ನೆಲ್ಲ ಬೆಲೂನ್‌ಗಳಿಂದ, ಮಕ್ಕಳಿಗಿಷ್ಟಆಗೋ ಹಾಡು ಹಾಕಿ ಉತ್ತಮ ಆ್ಯಂಬಿಯೆನ್ಸ್‌ ಕ್ರಿಯೇಟ್‌ ಮಾಡ್ತಿದ್ದೀನಿ. ನೂರಾರು ಮಕ್ಕಳು ಹೊಟ್ಟೆತುಂಬ ಉಂಡು ಮನಸಾರೆ ನಗ್ತಾ ಈ ದಿನವನ್ನು ಬದುಕಿಡೀ ನೆನಪಿಟ್ಟುಕೊಳ್ಳಬೇಕು ಅಂತ ಆಸೆ.

ಚಿಕ್ಕವನಾಗಿದ್ದಾಗ ನನಗೆ ಬಹಳ ಆ್ಯಕ್ಟಿಂಗ್‌ ಕ್ರೇಜ್‌. ಹಿಂದಿನ ದಿನ ಅಮಿತಾಬ್‌ ಸಿನಿಮಾ ನೋಡಿದರೆ ಮರುದಿನ ಇಡೀ ಅಮಿತಾಬ್‌ ಡೈಲಾಗ್‌ ಹೊಡೆದುಕೊಂಡು ಓಡಾಡ್ತಿದ್ದೆ. ಇವನಿಗೇನಾಯ್ತಪ್ಪಾ ಅಂತ ಎಲ್ರೂ ವಿಚಿತ್ರವಾಗಿ ನೋಡ್ತಿದ್ರು. ಕೆಲವೊಮ್ಮೆ ಇದೇ ಫೋರ್ಸ್‌ನಲ್ಲಿ ಕಲ್ಲು ಹೊಡೀತಿದ್ದೆ. ಆ ತಪ್ಪಿಗೆ ಮೂರು ದಿನ ಪ್ರಿನ್ಸಿಪಾಲ್‌ ರೂಮ್‌ ಎದುರು ನಿಲ್ಲೋ ಪನಿಶ್‌ಮೆಂಟ್‌. ಇಷ್ಟೆಲ್ಲ ಆ್ಯಕ್ಟಿಂಗ್‌ ಉತ್ಸಾಹ ಇದ್ದ ನನ್ನನ್ನ ಸ್ಕಿಟ್‌, ಡ್ರಾಮಾಗಳಲ್ಲಿ ಮರ ಮಾಡಿ ನಿಲ್ಲಿಸ್ತಿದ್ರು. ಡೈಲಾಗೇ ಇಲ್ಲ!

ಮಕ್ಕಳೆಂದರೆ ನೆನಪಾಗುವವರು ಇವರು; ಹೀಗೆ ನೆನೆಸಿಕೊಂಡ್ರು ಸ್ಯಾಂಡಲ್‌ವುಡ್‌ನವ್ರು!

ಆಗ ನಮಗೆ ಜಾಕಿಚಾನ್‌ ಕ್ರೇಜ್‌. ಒಬ್ಬ ಹುಡುಗ ಜಾಕಿಚಾನ್‌ ಥರ ಉದ್ದ ಕೂದಲು ಬಿಟ್ಕೊಂಡಿದ್ದ. ನನಗೆ ಅದರ ಮೇಲೇ ಕಣ್ಣು. ಒಮ್ಮೆ ಅವನತ್ರ ಜಡೆ ಹಾಕ್ಕೊಂಡು ಬಾ, ಜಾಕಿಚಾನ್‌ ಥರನೇ ಕಾಣ್ತೀಯಾ ಅಂದಿದ್ದೆ. ಪಾಪ ಹಾಕ್ಕೊಂಡು ಬಂದ, ನಾನು ಸೀಸರ್‌ನಲ್ಲಿ ಕಟ್‌ ಮಾಡಿಬಿಟ್ಟೆ. ಅವನ ಹೇರ್‌ ಕಳ್ಳಿಗಿಡದ ಥರ ಆಗಿತ್ತು!

ಕಳ್ತನ ಮಾಡಿದ್ರೆ ಸ್ಲೇಟ್‌ ಹಿಡಿದು ಬೀದಿಲಿ ನಿಲ್ತಿದ್ದೆ

ಎಂ ಆರ್‌ ಕಮಲಾ, ಕವಯತ್ರಿ

ನಮ್ಮೂರಲ್ಲಿ ನಮ್ಮದು ಡಿಗ್ನಿಫೈಡ್‌ ಫ್ಯಾಮಿಲಿ. ಮಕ್ಕಳ ವರ್ತನೆಯೂ ಹಾಗೇ ಇರುತ್ತೆ ಅಂತ ಊರವರ ನಿರೀಕ್ಷೆ. ಆದರೆ ನಾವೂ ಕೆಲವೊಮ್ಮೆ ಮಾವಿನ ಕಾಯಿ, ಪಕ್ಕದ ಹಿತ್ತಲ ದಾಸವಾಳ ಕಳ್ಳತನ ಮಾಡುವುದಿತ್ತು. ಅದಕ್ಕೆ ಅಪ್ಪ ಕೊಡುವ ಶಿಕ್ಷೆ ವಿಶೇಷವಾಗಿರುತ್ತಿತ್ತು. ‘ನಾನು ಪಕ್ಕದ ಮನೆ ಗಿಡದಿಂದ ದಾಸವಾಳ ಕದ್ದು ಕೊಯ್ದಿದ್ದೀನಿ, ಈ ಅಪರಾಧವನ್ನು ಕ್ಷಮಿಸಿ’ ಅಂತ ಸ್ಲೇಟಲ್ಲಿ ನಮ್ಮಿಂದ ಬರೆಸುತ್ತಿದ್ದರು. ಅದನ್ನು ಹಿಡಿದು ನಾವು ಬೀದಿಯಲ್ಲಿ ನಿಲ್ಲಬೇಕಿತ್ತು. ಇದು ಕಳ್ಳತನ ಮಾಡಬಾರದು ಅನ್ನೋದಕ್ಕೆ ಪಾಠ. ಬೀದಿಯಲ್ಲಿ ಹೋಗುವವರು ನಮ್ಮನ್ನೇನೂ ದೂರುತ್ತಿರಲಿಲ್ಲ. ಆದರೆ ನಮ್ಮ ಕಳ್ಳತನದ ಬಗ್ಗೆ ನಮಗೇ ಬೇಸರ ಬರುತ್ತಿತ್ತು.

ಬಾಲ್ಯ ಕಾಲದ ಇನ್ನೊಂದು ನೆನಪು ‘ಕಳೆದುದು ಸಿಕ್ಕಿದೆ’ ಬಗ್ಗೆ. ಆಗ ಎಲ್ಲರಿಗೂ ಬಡತನ. ಸ್ಕೂಲ್‌ನಲ್ಲಿ ಪೆನ್ಸಿಲ್‌, ಬಳಪವನ್ನು ಮಕ್ಕಳು ಕಳ್ಕೊಳ್ತಿದ್ರು. ಸಿಕ್ಕವರು ಅದನ್ನು ಮೇಷ್ಟಿ್ರಗೆ ಕೊಡುತ್ತಿದ್ದರು. ಮೇಷ್ಟು್ರ ಬೋರ್ಡ್‌ ಮೇಲೆ ‘ಕಳೆದುದು ಸಿಕ್ಕಿದೆ’ ಅಂತ ಅಂಡರ್‌ಲೈನ್‌ ಮಾಡಿ ಏನು ಸಿಕ್ಕಿದೆ ಅಂತ ಬರೀತಿದ್ರು. ಕಳೆದುಕೊಂಡವರು ತಮ್ಮ ವಸ್ತುವಿನ ವರ್ಣನೆ ಮಾಡಿ ಅದನ್ನು ಪಡೆದುಕೊಳ್ಳುತ್ತಿದ್ದರು. ಇದರಿಂದ ಉತ್ತೇಜಿತಳಾಗಿ ಬೀದಿಯಲ್ಲಿ 5 ಪೈಸೆ, 10 ಪೈಸೆ ಸಿಕ್ಕಿದರೆ, ಅದನ್ನ ಸ್ಲೇಟ್‌ ಮೇಲೆ ಬರೆದು ಹಿಡಿದುಕೊಂಡು ಬೀದಿ ಬದಿ ನಿಲ್ಲುತ್ತಿದ್ದೆ. ಕಳೆದವರು ಗುರುತು ಹೇಳಿ ಪಡೆಯುತ್ತಿದ್ದರು. ಹೀಗೆ ಸ್ಲೇಟ್‌ ನನ್ನ ಬದುಕಿನಲ್ಲಿ ಕಳ್ಳತನ ತಡೆಯೋದು ಹಾಗೂ ಇನ್ನೊಬ್ಬರ ವಸ್ತುವನ್ನು ಹಿಂದಿರುಗಿಸುವ ಪಾಠ ಹೇಳಿಕೊಟ್ಟಿದೆ. ಬಾಲ್ಯದಲ್ಲಿ ನಮಗೆ ಸಾಕಷ್ಟುಸ್ವಾತಂತ್ರ್ಯವೂ ಇತ್ತು. ಅದು ನಮ್ಮನ್ನು ವಿಕಾಸಗೊಳಿಸುತ್ತಾ ಹೋಯಿತು.

ನಕ್ಷತ್ರ ನೋಡ್ತಾ ಊಟ, ಆಕಾಶ ನೋಡ್ತಾ ನಿದ್ದೆ

- ಆಲ್‌ಓಕೆ, Rapper

ನಾನು ಹುಟ್ಟಿಬೆಳೆದಿದ್ದೆಲ್ಲ ಬೆಂಗಳೂರಿನ ಬನಶಂಕರಿ, ಕತ್ರಿಗುಪ್ಪೆ ಏರಿಯಾದಲ್ಲಿ. ಇಲ್ಲೆಲ್ಲ ನನ್ನ ಬಾಲ್ಯದ ನೆನಪುಗಳಿವೆ. ಆಗೆಲ್ಲ ಈಗಿನ ಥರದ ಆಟಗಳಿರಲಿಲ್ಲ. ಕೊಕ್ಕೋ, ಕಬಡ್ಡಿ, ಗಿನ್ನಿದಾಂಡು, ಮರಕೋತಿ ಆಟಗಳನ್ನು ಮಜವಾಗಿ ಆಡ್ತಾ ಇದ್ವಿ. ಈಗಿನ ಥರ ಜಂಕ್‌ ಫುಡ್‌ಗಳಿರಲಿಲ್ಲ. ತೋತಾಪುರಿ ಮಾವಿನ ಕಾಯಿಯೇ ನಮ್‌ ಪಾಲಿನ ಜಂಕ್‌ಫುಡ್‌. ಬನಶಂಕರಿ, ಕತ್ರಿಗುಪ್ಪೆ ಏರಿಯಾ ಕಾಡಿನ ಥರ ಇತ್ತು. ಮರಗಿಡ, ಗುಡ್ಡಗಳಿಂದ ಕೂಡಿತ್ತು.

ಆಗೆಲ್ಲ ಮೊಬೈಲ್‌ ಇರಲಿಲ್ಲ. ಯಾವ ಮೆಸೇಜ್‌ಗಳಿಲ್ಲದೇ ಹುಡುಗ್ರೆಲ್ಲ ನಾಲ್ಕು ಗಂಟೆಗೆ ಕ್ರಿಕೆಟ್‌ ಫೀಲ್ಡ್‌ ಸೇರ್ತಿದ್ರು. ಬೇರೆ ಯಾವ ಟಾರ್ಚರ್‌ಗಳೂ ಇಲ್ಲದೇ ರಾತ್ರಿವರೆಗೂ ಆಟ. ಬಾಲ್ಯದ ದಿನಗಳಲ್ಲಿ ಬಹಳ ಮಿಸ್‌ ಮಾಡೋದು ಅಂದ್ರೆ ಬಾಲ್ಕನಿಯಲ್ಲಿ ನಕ್ಷತ್ರ ನೋಡುತ್ತಾ ಊಟ ಮಾಡುತ್ತಿದ್ದ ನೆನಪು. ಫ್ರೆಂಡ್ಸ್‌ ಎಲ್ಲಾ ಅವರ ಮನೆಯಿಂದ ಕ್ಯಾರಿಯರ್‌ನಲ್ಲಿ ಊಟ ತಗೊಂಡು ನಮ್ಮನೆಗೆ ಬರ್ತಿದ್ರು. ನಕ್ಷತ್ರ ನೋಡ್ಕೊಂಡು ಎಲ್ಲರ ಮನೆಯ ಊಟವನ್ನು ಎಲ್ಲರೂ ಎನ್‌ಜಾಯ್‌ ಮಾಡ್ತಿದ್ವಿ. ರಾತ್ರಿ ಬಾಲ್ಕನಿಯಲ್ಲೇ ಆಕಾಶ ನೋಡ್ತಾ ನಿದ್ದೆ ಮಾಡ್ತಿದ್ದೆ. ಆಗ ಲಾಸ್ಟ್‌ ಬೆಂಚ್‌ ಹುಡುಗನಾಗಿದ್ರೂ ಸಿಂಗಿಂಗ್‌ ಕಾಂಪಿಟೀಶನ್‌ನಲ್ಲಿ ಸ್ಟೇಟ್‌ ಲೆವೆಲ್‌ನಲ್ಲೂ ನನಗೇ ಫಸ್ಟ್‌ ಪ್ರೈಸ್‌.

ನನ್ನ ಸದಾ ಎಚ್ಚರಿಸುವ ಆ ಸತ್ತ ಮೀನು

ರಮೇಶ್‌ ಅರವಿಂದ್‌

ನನ್ನ ಬಾಲ್ಯದ ನೆನಪಿನ ಒಂದು ಪುಟ್ಟಕತೆಯನ್ನು ಹೇಳುತ್ತೇನೆ. ನನ್ನ ಜೀವನದಲ್ಲೂ ಈಗಲೂ ಅಳವಡಿಸಿಕೊಳ್ಳುತ್ತಿರುವ ಕತೆ ಅದು. ಬಹುಶಃ ಎಲ್ಲರಿಗೂ ಅನ್ವಯಿಸುತ್ತದೆ. ನಮ್ಮ ಶಾಲೆಯಲ್ಲಿ ಜೇಸಿ ಎನ್ನುವ ಸಂಸ್ಥೆ ಆಯೋಜಿಸಿದ್ದ ಲೀಡರ್‌ಶಿಪ್‌ ಕ್ಯಾಂಪ್‌ನಲ್ಲಿ ಕೇಳಿದ ಕತೆ ಇದು. ಒಬ್ಬ ವ್ಯಕ್ತಿ ಮೀನು ಹಿಡಿಯಲು ಶ್ರೀರಂಗಪಟ್ಟಣ್ಣಕ್ಕೆ ಹೋಗುತ್ತಾನೆ. ಹೇಗೋ ಆತನ ಗಾಳಕ್ಕೆ ಮೀನು ಸಿಗುತ್ತದೆ. ಅದನ್ನ ಆಚೆ ತೆಗೆಯುತ್ತಾನೆ. ನೀರಿನಿಂದ ಆಚೆ ಬಂದ ಮೀನು ಸಹಜವಾಗಿ ಸತ್ತು ಹೋಗುತ್ತದೆ. ಆಗ ಅಲ್ಲಿಗೆ ಹಿರಿಯರೊಬ್ಬರು ಬಂದು ಆ ಮೀನು ಯಾಕೆ ಸತ್ತು ಹೋಯಿತು ಅಂತ ಕೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ಅದು ನೀರಿನಿಂದ ಆಚೆ ಬಂತು ಅದಕ್ಕೆ ಸತ್ತು ಹೋಯಿತು ಎನ್ನುತ್ತಾನೆ. ಮತ್ತೆ ಆ ಹಿರಿಯರು ‘ಈ ನೀರಿನಲ್ಲಿ ಸಾವಿರಾರು ಮೀನುಗಳು ಇವೆ. ಇದೇ ಮೀನು ಯಾಕೆ ಗಾಳಕ್ಕೆ ಸಿಕ್ಕಿ ಸಾಯಿತು’ ಎಂದು ಮರು ಪ್ರಶ್ನೆ ಹಾಕುತ್ತಾರೆ. ‘ಅನಾವಶ್ಯಕವಾಗಿ ಬಾಯಿ ತೆಗೆದರೆ ಹೀಗೆ ಗಾಳಕ್ಕೆ ಸಿಕ್ಕಿ ಸಾಯುತ್ತೇನೆ’ ಎಂದು ಆ ಹಿರಿಯ ವ್ಯಕ್ತಿ ಹೇಳುತ್ತಾರೆ. ಈಗಲೂ ನಾನು ಮೈಕ್‌ ಮುಂದೆ ನಿಂತಾಗ, ಯಾರ ಜತೆಗಾದರೂ ಮಾತನಾಡುವಾಗ ಅನಾವಶ್ಯಕವಾಗಿ ಬಾಯಿ ತೆಗೆದು ಸತ್ತ ಮೀನು ನೆನಪಾಗುತ್ತದೆ. ನೀವೆಲ್ಲ ನನ್ನ ಆಗಾಗ ಕೇಳುತ್ತೀರಿ ‘ನೀವು ಯಾವ ವಿವಾದಗಳಿಗೂ ಸಿಕ್ಕಲ್ಲ’ ಎಂದು. ಯಾಕೆ ಸಿಕ್ಕಲ್ಲ ಎಂದರೆ ಸಾವಿರಾರು ಮೀನುಗಳು ತಮ್ಮ ಪಾಡಿಗೆ ತಾವು ಇದ್ದಾಗ ಅನಾವಶ್ಯಕವಾಗಿ ಬಾಯಿ ತೆಗೆದು ಗಾಳಕ್ಕೆ ಸಿಕ್ಕಿ ಸತ್ತ ಆ ಮೀನು ನನ್ನ ಎಚ್ಚರಿಸುತ್ತಿರುತ್ತದೆ. ಶಾಲೆಯಲ್ಲಿ ಕೇಳಿದ ಈ ಕತೆ ಹಾಗೂ ಅಂದು ನನಗೆ ಸಿಕ್ಕ ಅತ್ಯುತ್ತಮ ಲೀಡರ್‌ಶಿಪ್‌ ಕಪ್‌ ಈಗಲೂ ನನ್ನ ಜತೆಗೆ ಇದೆ.

ಮರೆಯಲಾಗದ ಫೋಟೋಶೂಟ್‌

ಶ್ರೀಮುರಳಿ

ನನಗೆ ಈಗಲೂ ನೆನಪಿರುವ ಹಾಗೂ ಬೇಕು ಅಂದರೂ ಮತ್ತೆ ಮರಳಿ ಬಾರದ ನನ್ನ ಬಾಲ್ಯದ ಖುಷಿ ಸಂಗತಿ ಎಂದರೆ ನಮ್ಮ ಅಣ್ಣ ವಿಜಯ್‌ ರಾಘವೇಂದ್ರ ಅವರಿಗೆ ‘ಕೊಟ್ರೇಶಿ ಕನಸು’ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಆ ಸಂಭ್ರಮದಲ್ಲಿ ನಮ್ಮ ಇಬ್ಬರದೂ ಫೋಟೋಶೂಟ್‌ ಆಗಿದ್ದು. ಯಾಕೆಂದರೆ ಅಣ್ಣ ಹೀರೋ ಆಗಿದ್ದರೂ ಆಗ ನಾನು ಏನೂ ಅಲ್ಲ. ಅವರ ಜತೆ ಓಡಾಡಿಕೊಂಡಿದ್ದವನು. ಅಣ್ಣನಿಗೆ ಅವಾರ್ಡ್‌ ಬಂದ ಖುಷಿಯಲ್ಲಿ ನಾನೂ ಕೂಡ ಕ್ಯಾಮೆರಾ ಬೆಳಕಿಗೆ ಮುಖ ಕೊಡುವ ಅವಕಾಶ ಬಂತು. ಆ ಪ್ರಶಸ್ತಿ ಸಂಭ್ರಮ ಮತ್ತು ಆ ದಿನ ಫೋಟೋ ಶೂಟ್‌ ಮಾಡಿಸಿಕೊಳ್ಳುವಾಗ ಇದ್ದ ಅಚ್ಚರಿ ಭಾವನೆಗಳು ಮತ್ತೆ ಬರಲ್ಲ. ಈಗಲೂ ನನ್ನ ಅಚ್ಚುಮೆಚ್ಚಿನ ಫೋಟೋಗಳಲ್ಲಿ ಕಪ್‌ ಜತೆ ನಾನು ಮತ್ತು ಅಣ್ಣ ನಿಂತಿರುವುದೇ. ನಾನು ನಟ ಅಲ್ಲದಿದ್ದರೂ ನನ್ನ ಕೂಡ ನಟ ಎನ್ನುವಂತೆ ಇಬ್ಬರನ್ನು ಸಮಾನರಾಗಿ ನೋಡುತ್ತಿದ್ದರು ಎನ್ನುವುದಕ್ಕೆ ಫೋಟೋ ಸಾಕ್ಷಿ. ನಾನು, ನಮ್ಮ ಅಣ್ಣ, ಅಪ್ಪು ಮಾಮ (ಪುನೀತ್‌ ರಾಜ್‌ಕುಮಾರ್‌) ಎಲ್ಲರು ಜತೆಗೂಡಿ ಸಂಭ್ರಮಿಸಿದ್ದು ಈ ಫೋಟೋ ನೋಡುವಾಗ ನೆನಪಾಗುತ್ತಿದೆ. ಮತ್ತೆ ಆ ದಿನ ಬರಲ್ಲ. ಈ ಫೋಟೋಶೂಟ್‌ ನಂತರ ನಾನು ನಟನೆಯ ತರಬೇತಿಗೆ ಸೇರಿಕೊಂಡೆ.

click me!