ಅನಿಸಿದ್ದೆಲ್ಲಾ ಗೀಚಲು ಸೋಷಿಯಲ್‌ ಮೀಡಿಯಾ ನಿಮ್ಮ ಡೈರಿಯೇ?

By Kannadaprabha News  |  First Published Dec 11, 2019, 5:08 PM IST

ಯಾಕೆ ಎಲ್ಲರೂ ಸೋಷಲ್‌ ಮೀಡಿಯಾಗೆ ಇಷ್ಟುಹತ್ತಿರವಾಗಿದ್ದಾರೆ? ವೈಯಕ್ತಿಕ ಮಾಹಿತಿಗಳನ್ನು ಅಷ್ಟುಸುಲಭವಾಗಿ ಹರಿಬಿಡುತ್ತಿದ್ದಾರೆ ಎಂಬುದರ ಅಧ್ಯಯನಕ್ಕೆ ಕೆಲ ಸಂಶೋಧಕರು ಅಡಿಯಿಟ್ಟಾಗ ರೋಚಕ ಮಾಹಿತಿಗಳು ಗೋಚರಿಸಿದವು.


ನನ್ನ ಅಜ್ಜ ಆಗಿನ ಕಾಲದಲ್ಲೇ ನಾಲ್ಕಾರು ಅಕ್ಷರ ಕಲಿತಿದ್ದವರು. ಅನಿಸಿದ್ದೆಲ್ಲವನ್ನೂ ಯಾರಿಗೂ ಕಾಣದಂತೆ ಹಾಳೆ ಮೇಲೆ ಗೀಚಿ ಹಳೇ ಟ್ರಂಕಿನೊಳಗೆ ಗೌಪ್ಯವಾಗಿಡುತ್ತಿದ್ದರಂತೆ. ಅವರ ಕಾಲವಾದ ಮೇಲೆ ನನ್ನಪ್ಪ ಏನೋ ಹುಡುಕಲು ಹೋಗಿ ಟ್ರಂಕಿನೊಳಗೆ ಗೆದ್ದಲು ಹಿಡಿದಿದ್ದ ಆ ನೋಟ್‌ ಪುಸ್ತಕವನ್ನೊಮ್ಮೆ ತಿರುವಿದಾಗ, ‘ಅವರ ವಿವಾಹದ ವೇಳೆ ಎದುರಾದ ಸಮಸ್ಯೆಗಳು, ಸಾಲ ಪಡೆದು ಯಾಮಾರಿಸಿದ ಗೆಳೆಯರ ಪಟ್ಟಿ, ಮಗನ ಓದಿಗಾಗಿ ಅನುಭವಿಸಿದ ಕಷ್ಟಕಾರ್ಪಾಣ್ಯಗಳು, ಇದ್ದ ಚೂರು ಪಾರು ಜಮೀನು ಸಾಲಗಾರರ ಪಾಲಾದ ಪರಿ’ ಹೀಗೆ ತೀರ ಖಾಸಗಿ ಎನಿಸುವ ಒಂದಷ್ಟುವಿಚಾರಗಳು ಅದರಲ್ಲಿದ್ದವಂತೆ.

ನನ್ನ ತಾತ ಮಾತ್ರವಲ್ಲ ನಿಮ್ಮ ಮನೆಯ ಹಿರಿಯರು ಅಷ್ಟೆಸಾಮಾಜಿಕ ವಲಯದಲ್ಲಿ ಖಾಸಗಿ ಬದುಕಿನ ನೆರಳು ಸೋಕದಂತೆ ಗೌಪ್ಯತೆ ಕಾಪಾಡಿಕೊಳ್ಳುತ್ತಿದ್ದವರು. ಆದರೆ, ನಾವು ಮಾತ್ರ ದಶಕದಲ್ಲೇ ‘ಸೋಷಲ್‌ ಮೀಡಿಯಾ’ ಎಂಬ ರಬ್ಬರ್‌ನಿಂದ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನ ನಡುವೆ ಇದ್ದ ಆ ಸಣ್ಣಗೆರೆಯನ್ನು ಅಳಿಸಿ ಹಾಕಿದ್ದೇವೆ.

Latest Videos

undefined

ಜತೆಗೆ ಲೇಖಕಿ ಜರ್ಮನಿ ಕೆಂಟ್‌ ಹೇಳಿದ ‘ಸೋಷಲ್‌ ಮೀಡಿಯಾ ಈಸ್‌ ನಾಟ್‌ ಯುವರ್‌ ಡೈರಿ’ ಎಂಬ ಮಾತನ್ನು ಹುಸಿಗೊಳಿಸಿ ‘ಸೋಷಲ್‌ ಮೀಡಿಯಾ ಈಸ್‌ ಮೈ ಡೈರಿ ವಿಥ್‌ ರಿಲೇಟೆಡ್‌ ಪಿಕ್ಚರ್‌’ ಎಂಬುದನ್ನು ನಿತ್ಯವೂ ಸಾಬೀತು ಪಡಿಸುತ್ತಲೇ ಇದ್ದೇವೆ.

ರಾಜಸ್ಥಾನದಲ್ಲಿ ಸೋಲೋ ಟ್ರಿಪ್‌ ಮಾಡಿ ಬಂದಿದ್ದಾರೆ ಸಿಂಧೂ ಲೋಕನಾಥ್‌

ಈಗಿನವರು ಅದೆಷ್ಟರ ಮಟ್ಟಿಗೆ ಸೋಷಲ್‌ ಮೀಡಿಯಾವನ್ನು ಒಪ್ಪಿ, ಅಪ್ಪಿಕೊಂಡಿದ್ದಾರೆಂದರೆ, ಬೆಳಗ್ಗೆ ತಾವು ತಯಾರಿಸಿದ ತಿಂಡಿ-ತಿನಿಸಿನ ಬಗ್ಗೆ ಮನೆಯವರಿಗೇ ತಿಳಿದಿರುವುದಿಲ್ಲ, ಆಗಲೇ ಫೇಸ್‌ಬುಕ್ಕಿನಲ್ಲಿ ಫೋಟೋ ಲಗತ್ತಿಸಿ ‘ಬನ್ನಿ ಫ್ರೆಂಡ್ಸ್‌ ಬಿಸಿ ಬಿಸಿ ವೆಜ್‌ ಬಿರಿಯಾನಿ ಸವಿ ಸವಿಯೋಣ’ ಎಂದು ಬರೆದಿರುತ್ತಾರೆ. ಯಾವ ಥಿಯೇಟರಿನಲ್ಲಿ, ಯಾವ ಸಮಯದಲ್ಲಿ, ಯಾರೊಂದಿಗೆ, ಯಾವ ಸಿನೆಮಾ ನೋಡುತ್ತಿದ್ದೇವೆ ಎಂಬ ಲೈವ್‌ ಲೊಕೇಶನ್‌ ಸಹಿತ ಶೇರ್‌ ಮಾಡಿರುತ್ತಾರೆ.

ನಿಶ್ಚಿತಾರ್ಥ, ದಾಂಪತ್ಯಕ್ಕೆ ಕಾಲಿಡುತ್ತಿದ್ದೇವೆ, ವಿಚ್ಛೇದನವಾಯ್ತು (ಕಾರಣ ಸಮೇತ), ಗರ್ಭಿಣಿಯಾದೆ, ಮುದ್ದು ಮಗುವಿನ ಜನನವಾಯಿತು ಎಂಬಿತ್ಯಾದಿ ವೈಯಕ್ತಿಕ ವಿಚಾರಗಳ ಅಧಿಕೃತ ಘೋಷಣೆಗೆ ಸೋಷಲ್‌ ಮೀಡಿಯಾವನ್ನು ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಸೋಷಲ್‌ ಮೀಡಿಯಾದಲ್ಲಿ ಸಕ್ರಿಯಗೊಂಡಿಲ್ಲವೆಂದರೆ ಅವರ ಅಸ್ತಿತ್ವದ ಬಗ್ಗೆಯೇ ಶಂಕಿಸುತ್ತಾರೆ. ಲೈಕು, ಕಮೆಂಟು ಮಾಡುತ್ತಿಲ್ಲವೆಂದು ಕುಪಿತಗೊಂಡು ಸಂಬಂಧವನ್ನೇ ಕಡಿದು ಹಾಕಿಕೊಳ್ಳುತ್ತಾರೆ.

ಹತ್ತಾರು ವರ್ಷ ಜೊತೆಯಲ್ಲಿ ಕೆಲಸ ಮಾಡುವವರೊಂದಿಗೆ ಮಾತನಾಡುವುದಕ್ಕೇ ಅಂಜಿಕೆ ತೋರುವ, ಕುಟುಂಬದವರೊಂದಿಗೆ ಕೆಲವೊಂದು ವಿಷಯಗಳನ್ನು ಬಚ್ಚಿಡುವ ನಾವು, ಮುಖ ಪರಿಚಯವೇ ಇಲ್ಲದ, ಗೊತ್ತು ಗುರಿಯಿಲ್ಲದ ಸಾವಿರಾರು ಅಪರಿಚಿತರ ಮುಂದೆ ನಮ್ಮ ನಿತ್ಯದ ಜಂಜಾಟ, ತೊಳಲಾಟ, ಹೋರಾಟ, ಹಾರಾಟವನ್ನೆಲ್ಲಾ ಸಾರಾಸಗಟಾಗಿ ಬಿಚ್ಚಿಡುತ್ತೇವೆಂದರೆ ಅದು ನಮ್ಮ ಹುಂಬತನವೋ? ದಡ್ಡತನವೋ? ಮುಂದೇ ಏನು ತೊಂದರೆಯಾಗದು ಎಂಬ ಹುಸಿ ಭಂಡತನವೋ? ಪ್ರಚಾರದ ಗೀಳೋ? ಆತ್ಮಾವಲೋಕಿಸಬೇಕಿದೆ.

ಒಂಟಿ ಒಂಟಿಯಾಗಿರುವುದು ಬೋರೋ ಬೋರು

ಖಾಸಗಿ ಬದುಕಿನ ಅನಾವರಣಕ್ಕೆ ಸೋಷಲ್‌ ಮೀಡಿಯಾವನ್ನು ಪ್ರಭಾವಿ ಮಾಧ್ಯಮವನ್ನಾಗಿಸಿಕೊಳ್ಳಲು ಪ್ರಾರಂಭಿಸಿದ್ದು ಸೆಲಿಬ್ರೆಟಿಗಳು. ಖ್ಯಾತನಾಮರು ತಪ್ಪೊಪ್ಪಿಗೆಗಾಗಿ, ವಿವಾಹ, ತಮ್ಮ ಬದುಕಿನ ನೋವಿನ ವಿಚಾರವಾಗಿ ಕೋಟ್ಯಂತರ ಅಭಿಮಾನಿಗಳಿಗೆ ವಿಷಯವನ್ನು ಮುಟ್ಟಿಸಲು, ಸ್ಪಷ್ಟೀಕರಣಗೊಳಿಸಲು ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಟ್ವಿಟರ್‌, ಸ್ನಾಪ್‌ಚಾಟ್‌ನ್ನು ಮಾರ್ಗವಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಾಕಿ ಬರಹಗಾರ ಆಡಮ್ ಗ್ರೆಟ್ಜ್ ತನ್ನ ಆಪ್ತವಲಯವೇ ಅರಿಯದ ತನ್ನ ಖಿನ್ನತೆ ಬಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನಟಿ ದಿಯಾ ಮಿರ್ಜಾ ತಾನು ವಿಚ್ಛೇದನಗೊಳ್ಳುತ್ತಿರುವುದನ್ನು ಮೊದಲು ಸೋಷಲ್‌ ಮೀಡಿಯಾದಲ್ಲಿ ಘೋಷಿಸಿದ್ದು, ಚಂದನವನದ ರಾಧಿಕಾ ಪಂಡಿತ್‌, ಶ್ವೇತಾ ಶ್ರೀವಾತ್ಸವ್‌ ಮುಕ್ತವಾಗಿ ಗರ್ಭಿಣಿ ಫೋಟೋಶೂಟ್‌ನ್ನು ಹಂಚಿಕೊಂಡಿದ್ದು, ನಟರಿಬ್ಬರು ಒಳಜಗಳ, ಆರೋಪ-ಪ್ರತ್ಯಾರೋಪಗಳಿಗೆ ಸೋಷಲ್‌ ಮೀಡಿಯಾವನ್ನು ಬಳಸಿಕೊಂಡಿದ್ದೇ ಅದಕ್ಕೆ ಸಾಕ್ಷಿ.

ಇವರೆಲ್ಲರ ಪ್ರೇರಣೆಯೋ ಏನೋ ನಾವೆಲ್ಲರೂ ಸೋಷಲ್‌ ಮೀಡಿಯಾವನ್ನು ನಮ್ಮ ಖಾಸಗಿ ಬದುಕಿಗೆ ಕನ್ನಡಿಯನ್ನಾಗಿಸಿದ್ದೇವೆ. ಅದರಲ್ಲೂ ಹದಿಯರೆಯದವರು ಅದರಿಂದಾಗುವ ದುಷ್ಪರಿಣಾಮಗಳ ಪರಿವೇ ಇಲ್ಲದೇ, ಆನ್‌ಲೈನ್‌ ಸಂವಹನಗಳು ಹೆಚ್ಚು ಅನುಕೂಲಕರ ಮತ್ತು ಸುಲಭ ಎಂದು ಭಾವಿಸಿ ತಮ್ಮ ವೈಯಕ್ತಿಕ ಜೀವನವನ್ನು ಮುಕ್ತವಾಗಿ ಸಾರ್ವಜನಿಕಗೊಳಿಸಿ, ತೊಂದರೆಗಳ ಸುಳಿಗೆ ಸಿಲುಕಿಗೊಂಡಿದ್ದಾರೆ, ಪೊಲೀಸ್‌ ಸ್ಟೇಷನ್ನಿನ ಮೆಟ್ಟಿಲೇರಿದ್ದಾರೆ.

ಇಷ್ಟು ಮೊತ್ತ ನಿಮ್ಮ ಕೈಯ್ಯಲ್ಲಿದ್ರೆ ನಿತ್ಯಾನಂದನಂತೆ ನೀವೂ ಖರೀದಿಸ್ಬಹುದು ದ್ವೀಪ!

ಯಾಕೆ ಎಲ್ಲರೂ ಸೋಷಲ್‌ ಮೀಡಿಯಾಗೆ ಇಷ್ಟುಹತ್ತಿರವಾಗಿದ್ದಾರೆ? ವೈಯಕ್ತಿಕ ಮಾಹಿತಿಗಳನ್ನು ಅಷ್ಟುಸುಲಭವಾಗಿ ಹರಿಬಿಡುತ್ತಿದ್ದಾರೆ ಎಂಬುದರ ಅಧ್ಯಯನಕ್ಕೆ ಕೆಲ ಸಂಶೋಧಕರು ಅಡಿಯಿಟ್ಟಾಗ ರೋಚಕ ಮಾಹಿತಿಗಳು ಗೋಚರಿಸಿದವು.

ಲೈಫ್‌ ಕೋಚ್‌ ಪಿಯೂಷ್‌ ಭಾಟಿಯಾ ಪ್ರಕಾರ ‘ ಕುಟುಂಬಗಳು ಕುಗ್ಗುತ್ತಿರುವುದರಿಂದ ನಿಜ ಜೀವನದಲ್ಲಿ ಒಂಟಿ ಎಂಬ ಭಾವ ಮೂಡಿ, ತನ್ನ ನೋವು ಮತ್ತು ಸಂತಸವನ್ನು ವರ್ಚುಯಲ್‌ ಗೆಳೆಯರೊಂದಿಗೆ ಹಂಚಿಕೊಂಡು ಸನಿಹವಾಗುವುದಕ್ಕೆ ಹದಿಹರೆಯದವರ ಮನಸ್ಸು ತುಡಿಯುತ್ತದೆ.’ ಕಾರ್ನೆಲ್ ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ನಟಾಲಿಯಾ ಬಜರೋವಾ ಪ್ರಕಾರ, ‘ಮುಖಾಮುಖಿ ಸಂವಹನಗಳಿಗಿಂತ ಆನ್‌ಲೈನ್‌ ಸಂವಹನ ಹೆಚ್ಚು ಅನ್ಯೋನ್ಯತೆಯನ್ನು ನೀಡುತ್ತದೆ’.

ಮನಶಾಸ್ತ್ರಜ್ಞೆ ರಚನಾ ಕೆ ಸಿಂಗ್‌ ಪ್ರಕಾರ, ಆನ್‌ಲೈನ್‌ ವ್ಯಕ್ತಿತ್ವ ರೂಢಿಸಿಕೊಂಡವರು, ಮುಖಾಮುಖಿಯಾಗಿ ಭೇಟಿಯಾದ ವ್ಯಕ್ತಿಗಳೊಂದಿಗೆ ಮುಕ್ತವಾಗಿ ಸಂವಹನ ನಡೆಸಲು ಹೆಚ್ಚು ಆತಂಕಕ್ಕೊಳಗಾಗುತ್ತಾರೆ’. ಎಂಬಿತ್ಯಾದಿ ಮಾಹಿತಿಗಳು ಹೊರಬಿದ್ದಿದ್ದು, ಸೋಷಲ್‌ ಮೀಡಿಯಾ ನಮ್ಮ ಭಾವನೆಗಳಿಗೆ ಹೇಗೆ ಕೀಲಿಕೈ ಆಗಿದೆ ಎಂಬುದನ್ನು ಸಾಕ್ಷೀಕರಿಸುತ್ತವೆ.

ಸೋಷಲ್‌ ಮೀಡಿಯಾ ದೂರದ ಬೆಟ್ಟವಿದ್ದಂತೆ. ಸುಂದರ, ನುಣುಪು, ಆಕರ್ಷಕ. ಸಮಸ್ಯೆಯಾದಾಗಲೇ ಅದರ ಅಸಲಿಯತ್ತು ಬಹಿರಂಗವಾಗುವುದು. ಸೋಷಲ್‌ ಮೀಡಿಯಾದಲ್ಲಿ ಸಕ್ರಿಯಗೊಳ್ಳುವುದು ಒಳ್ಳೆಯ ವಿಚಾರವೇ. ಆದರೆ, ವರ್ಚಯಲ್‌ ಜಗತ್ತಿನ ಆಕರ್ಷಣೆಯಿಂದಾಗಿ ಬಾಂಧವ್ಯದ ಭಾವಾರ್ಥ ಬದಲಾಗುವಂತಾಗಬಾರದು. ತೀರಾ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವ ಮುನ್ನ ಮುಂದೇನಾಗಬಹುದು? ಅದರ ಪರಿಣಾಮಗಳನ್ನು ಎದುರಿಸಲು ನಾವು ನಿಜವಾಗಿಯೂ ಸಿದ್ಧರಿದ್ದೀವಾ ಎಂಬುದರ ಬಗ್ಗೆ ಕೊಂಚವಾದರೂ ಅರಿವಿರಬೇಕು. ಮತ್ತೊಮ್ಮೆ ಹೇಳುತ್ತಿದ್ದೇನೆ, ಖಾಸಗಿ ಬದುಕು ಆದಷ್ಟುಖಾಸ, ಗೌಪ್ಯವಾಗಿದ್ದರೆ ಒಳಿತು. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ. ಕುಟುಂಬದವರೊಂದಿಗೆ ಹೆಚ್ಚು ತೊಡಗಿಕೊಂಡು ಸಂಬಂಧಗಳನ್ನು ಜೀವಂತಗೊಳಿಸಿ.

ಸ್ಮೃತಿಯಲ್ಲಿರಲಿ

* ಬಲವಾದ ರಾಜಕೀಯ ದಾಳಿಯಿಂದ ದೂರವಿರಿ

* ರಜೆಯ ವಿವರಗಳು, ವೈಯಕ್ತಿಕ ಸ್ಥಳ, ಕ್ರೆಡಿಟ್‌ ಕಾರ್ಡ್‌ಗಳ ಚಿತ್ರಗಳು, ರಾರ‍ಯಂಕ್‌ ವಿದ್ಯಾರ್ಥಿ ಎಂಬುದನ್ನು ತೋರಿಸಿಕೊಳ್ಳುವುದಕ್ಕೆ ಸರ್ಟಿಫಿಕೇಟ್‌ ಚಿತ್ರಗಳನ್ನು ಹಂಚಿಕೊಳ್ಳುವುದಕ್ಕೆ ಕಡಿವಾಣ ಹಾಕಿ.

* ಕೋಪಗೊಂಡಾಗ ನಿಮ್ಮ ಮನಸ್ಸಿನ ಸ್ಥಿತಿಯನ್ನು ಪೋಸ್ಟ್‌ ಮಾಡುವ ಮುನ್ನ ಯೋಚಿಸಿ.

* ಸಂಬಂಧಗಳಿಗೆ ಕೊಡಲಿ ಪೆಟ್ಟು ನೀಡುವಂಥ ಪೋಸ್ಟ್‌ಗಳನ್ನು ಹಾಕದಿರುವುದು ಒಳ್ಳೆಯದು.

* ಪ್ರಮುಖ ಸಾಮಾಜಿಕ ನೆಟ್‌ವರ್ಕ್ಗಳೇ ಗೌಪ್ಯತೆ ಉಲ್ಲಂಘನೆಯನ್ನು ಅನುಭವಿಸಿರುವುದರಿಂದ ನೀವು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವ ಎಲ್ಲವನ್ನೂ ಇತರರು ನೋಡಬಹುದು ಎಂಬುದರ ಬಗ್ಗೆ ಅರಿವಿರಲಿ.

* ನಿಮಗೆ ಗೊತ್ತಿಲ್ಲದ ಜನರ ಸಂದೇಶಗಳು ಅಥವಾ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಮುನ್ನ ಯೋಚಿಸಿ.

click me!