
ಬಹುತೇಕ ಸಮಯವನ್ನು ಏಕಾಂಗಿಯಾಗಿ ಕಳೆಯುವುದು, ಹೆಚ್ಚಿನದೇನನ್ನೂ ಶೇರ್ ಮಾಡಿಕೊಳ್ಳದೆ ಇರುವುದು, ಸಭೆಸಮಾರಂಭ, ಕುಟುಂಬದ ಕಾರ್ಯಕ್ರಮಗಳಲ್ಲಿ ಜನರೊಂದಿಗೆ ಮಾತನಾಡಲು ಹಿಂಜರಿಯುವುದು, ಹೊರ ಹೋಗಲು ಹಿಂಜರಿಕೆ- ಇವೆಲ್ಲ ಅಂತರ್ಮುಖಿ ಮಗುವಿನ ಲಕ್ಷಣಗಳು. ಇಂಟ್ರೋವರ್ಟ್ ಆಗಿರುವುದರಲ್ಲಿ ಖಂಡಿತಾ ಸಮಸ್ಯೆಯಿಲ್ಲ. ಮಗು ಇಂಟ್ರೋವರ್ಟ್ ಆಗಿರಲಿ, ಎಕ್ಸ್ಟ್ರೋವರ್ಟ್ ಆಗಿರಲಿ- ಅದಕ್ಕೆ ಅದರದೇ ಆದ ಅಗತ್ಯಗಳಿರುತ್ತವೆ. ಇಂಟ್ರೋವರ್ಟ್ ಮಗುವಿನ ಪೋಷಕರಿಗಾಗಿ ಇಲ್ಲಿವೆ ಕೆಲ ಟಿಪ್ಸ್.
ತನ್ನ ಕಂಫರ್ಟ್ ಮೀರಿದ್ದನ್ನು ಮಾಡಲು ಪ್ರೋತ್ಸಾಹಿಸಿ
ಮಗುವು ಹೊರಪ್ರಪಂಚದ ಕುರಿತು ಆತಂಕದಿಂದ ಹೊರಬರಬೇಕಾದರೆ, ಅವನು ಮಾಡಲು ಹಿಂಜರಿಯುವುದನ್ನು ಮಾಡಲು ಆಗಾಗ ಪ್ರೋತ್ಸಾಹಿಸಿ. ಅಂಗಡಿಗೆ ಒಬ್ಬನೇ ಹೋಗಿ ಸಾಮಾನು ತರುವುದು, ನೆಂಟರಿಷ್ಟರೊಂದಿಗೆ ಫೋನಿನಲ್ಲಿ ಮಾತನಾಡುವುದು, ತನ್ನ ವಸ್ತುಗಳನ್ನು ತನ್ನದೇ ವಯಸ್ಸಿನ ಬೇರೆ ಮಗುವಿನೊಂದಿಗೆ ಹಂಚಿಕೊಳ್ಳುವುದು, ಆ ಮೂಲಕ ಆ ಮಗುವಿನ ಗೆಳೆತನ ಮಾಡಲು ಪ್ರಯತ್ನಿಸುವುದು ಇತ್ಯಾದಿ ಇತ್ಯಾದಿ- ಹೀಗೆ ತನ್ನ ಕಂಫರ್ಟ್ ಝೋನ್‌ನಿಂದ ಹೊರಬಂದು ಕೆಲ ಕೆಲಸಗಳನ್ನು ಆಗಾಗ ಮಾಡಲು ಮಗುವಿಗೆ ಪ್ರೋತ್ಸಾಹ ನೀಡಿ. ಆತ ಹೀಗೆ ಮಾಡಲು ಆತಂಕಗಳನ್ನು ಮೀರುವ ಅಗತ್ಯವಿರುತ್ತದೆ. ಇದು ಸುಲಭದ ಕೆಲಸವಲ್ಲ. ಹಾಗಾಗಿ, ಮಗು ಹೀಗೆ ತನ್ನ ಸ್ವಭಾವದ ಹೊರತಾಗಿ ಮಾಡಿದ ಕೆಲಸಗಳನ್ನು ಶ್ಲಾಘಿಸುವುದನ್ನು ಮರೆಯದಿರಿ. ಇದರಿಂದ ಮಕ್ಕಳಲ್ಲಿ ತಮ್ಮ ಬಗ್ಗೆ ಆತ್ಮವಿಶ್ವಾಸ ಬರುತ್ತದೆ.
ಪ್ರತಿಭೆಯತ್ತ ಗಮನ ಹರಿಸಲಿ
ಯಾರೇ ಆಗಲಿ, ಪ್ರತಿಭೆ ಇದ್ದರೆ ಭಯ ದೂರಾಗುತ್ತದೆ. ಹಾಗಾಗಿ, ನಿಮ್ಮ ಮಗುವಿನ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಿ. ಆತ ಚೆನ್ನಾಗಿ ಚಿತ್ರ ಬಿಡಿಸಬಹುದು, ಸಂಗೀತದಲ್ಲಿ ಆಸಕ್ತಿ ಇರಬಹುದು, ಕ್ರೀಡೆ ಇಷ್ಟವಿದ್ದೂ ಹೊರ ಹೋಗಲು ಭಯದಿಂದಾಗಿ ಮನೆಯಲ್ಲಿರಬಹುದು, ಹಾಗಿದ್ದಲ್ಲಿ ಚೆಸ್, ಸ್ವ್ಕ್ವಾಶ್‌ನಂಥ ಇಂಡೋರ್ ಗೇಮ್ಸ್ ಆಡಬಹುದು. ಒಟ್ಟಿನಲ್ಲಿ ಆತನಿಗೆ ಸಾಧ್ಯವಾದುದನ್ನೆಲ್ಲ ಕಲಿಸಿ. ಹೀಗೆ ಕಲಿವಾಗ ತನ್ನ ನಿಜವಾದ ಆಸಕ್ತಿ ಏನೆಂದು ಆತನೇ ಅರಿತುಕೊಳ್ಳುತ್ತಾನೆ. ಹಾಗೆ ನಿಜವಾದ ಆಸಕ್ತಿ ಮತ್ತು ಪ್ರತಿಭೆ ಏನಿರುತ್ತದೆಯೋ ಅದನ್ನು ಚೆನ್ನಾಗಿ ರೂಢಿಸಿಕೊಳ್ಳಲು ಅವಕಾಶ ಕಲ್ಪಿಸಿ. ಯಾವುದರಲ್ಲಾದರೂ ಎಕ್ಸ್‌ಪರ್ಟ್ ಆಗಿದ್ದಾಗ ಮಗುವಿಗೆ ತನ್ನ ಬಗ್ಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಜೊತೆಗೆ, ಹೆಚ್ಚು ಹೆಚ್ಚು ಜನ ಅದನ್ನು ಮೆಚ್ಚಿಕೊಳ್ಳಲಾರಂಭಿಸಿದಾಗ ಆತ ನಿಧಾನವಾಗಿ ಎಲ್ಲರೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಹೀಗೆ ವಿವಿಧ ತರಗತಿಗಳಿಗೆ ಸೇರಿಕೊಳ್ಳುವುದರಿಂದ ಹೆಚ್ಚು ಮಕ್ಕಳೊಂದಿಗೆ ಬೆರೆಯಲು ಕೂಡಾ ವೇದಿಕೆ ಸಿಕ್ಕಂತಾಗುತ್ತದೆ.
ಮಗುವಿನೊಂದಿಗೆ ಹೆಚ್ಚು ಮಾತನಾಡಿ
ಇಂಟ್ರೋವರ್ಟ್ ಮಕ್ಕಳು ಶಾಲೆಯಲ್ಲೇನಾಗುತ್ತಿದೆ, ಯಾವ ವಿಷಯಗಳಲ್ಲಿ ತಮಗೆ ಸಮಸ್ಯೆಯಾಗುತ್ತಿದೆ ಎಂಬ ಯಾವೊಂದು ವಿಷಯವನ್ನೂ ತಾವಾಗಿಯೇ ಹಂಚಿಕೊಳ್ಳುವುದಿಲ್ಲ. ಈ ಬಗ್ಗೆ ಅರಿಯಲು ಪೋಷಕರು ಹೆಚ್ಚಿನ ಪ್ರಯತ್ನ ಹಾಕಬೇಕು. ಮಗುವಿನ ಬಳಿ ಕುಳಿತು ಪ್ರತಿದಿನ ಹೆಚ್ಚು ಮಾತನಾಡಿಸಬೇಕು. ಏನೇ ಸಮಸ್ಯೆ ಇದ್ದರೂ ಹೇಳಿಕೊಳ್ಳುವಂತೆ, ಜೊತೆಗೆ ಪೋಷಕರಿರುವುದಾಗಿ ಧೈರ್ಯ ತುಂಬಬೇಕು. ಯಾವಾಗ ಬೇಕಾದರೂ, ಯಾವ ವಿಷಯದ ಕುರಿತು ಬೇಕಾದರೂ ನಿಮ್ಮ ಬಳಿ ಹೇಳಿಕೊಳ್ಳಬಹುದು, ನಿಮ್ಮ ಸಹಾಯ ಬಯಸಬಹುದು ಎಂಬ ನಂಬಿಕೆ ಅವರಲ್ಲಿ ಬೆಳೆಯುವಂತೆ ನೋಡಿಕೊಳ್ಳಿ. ಇದರಿಂದ ಆತ ತನ್ನ ಆತಂಕಗಳನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಆರಂಭಿಸಬಹುದು. ಅಂಥ ಸಮಯದಲ್ಲಿ ಪಾಸಿಟಿವ್ ಯೋಚನೆಗಳನ್ನು ಅವನಲ್ಲಿ ತುಂಬಿ. ಯಾವುದೇ ಕಾರಣಕ್ಕೂ ಬಯ್ಯುವುದು, ಹೊಡೆಯುವುದು ಮಾಡಬೇಡಿ. ಹಾಗೊಂದು ವೇಳೆ ನೀವು ತಾಳ್ಮೆಗೆಟ್ಟರೆ ಮತ್ತೆ ಮಗು ಎಂದಿಗೂ ನಿಮ್ಮೊಂದಿಗೆ ಮನ ಬಿಚ್ಚಿ ಮಾತನಾಡದೆ ಉಳಿಯಬಹುದು.
ಹೋಲಿಸಬೇಡಿ
ಒಂದೊಂದು ಮಗುವೂ ವಿವಿಧ ಬೆಳವಣಿಗೆಗಳಿಗೆ ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ. ಬೇರೆ ಮಕ್ಕಳು ಎಲ್ಲರೊಂದಿಗೆ ಬೆರೆಯುವುದನ್ನು ನೋಡಿಯೋ, ಅವರು ಬೇಗ ಗೆಳೆಯರನ್ನು ಮಾಡಿಕೊಳ್ಳುವುದನ್ನು ನೋಡಿಯೋ ನಿಮ್ಮ ಮಗುವಿಗೆ ಅರ್ಜೆಂಟ್ ಮಾಡಬೇಡಿ. ಇದರಿಂದ ಮಗುವಿನ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ. ಮತ್ತೊಂದು ಮಗುವಿನೊಂದಿಗೆ ಹೋಲಿಸುವುದನ್ನು ಬಿಟ್ಟು, ಇದಕ್ಕೆ ಸೋಷ್ಯಲೈಸ್ ಆಗಲು ತನ್ನದೇ ಆದ ಸಮಯ ನೀಡಿ. ಸ್ವಲ್ಪ ಇಂಪ್ರೂವ್‌ಮೆಂಟ್ ಕಂಡಾಗಲು ಅದನ್ನು ಗುರುತಿಸಿ ಶ್ಲಾಘಿಸಿ.
ನಾಚಿಕೆ ಸ್ವಭಾವ ಎಂದು ಲೇಬಲ್ ಮಾಡಬೇಡಿ
ನೀವು ನಿಮ್ಮ ಮಗುವನ್ನು ನಾಚಿಕೆ ಸ್ವಭಾವದವನು, ಸಂಕೋಚ ಜಾಸ್ತಿ, ಭಯ ಹೆಚ್ಚು ಎಂದೆಲ್ಲ ಲೇಬಲ್ ಮಾಡಿ ಪದೇ ಪದೆ ಅದನ್ನೇ ಹೇಳುತ್ತಿದ್ದಾಗ ಕೇಳಿದ ಮಗು ತನ್ನನ್ನು ತಾನು ಹಾಗೆಯೇ ನೋಡಲು ತೊಡಗುತ್ತದೆ. ತನ್ನ ವ್ಯಕ್ತಿತ್ವವೇ ಹಾಗೆಂದು ಒಪ್ಪಿಕೊಂಡು ಜೀವನಪೂರ್ತಿ ನಾಚಿಕೆಯ ಕಾರಣಕ್ಕೆ ಹಲವಾರು ಅವಕಾಶಗಳಿಂದ ವಂಚಿತವಾಗುತ್ತದೆ. ಹಾಗಾಗಿ, ಮಗುವನ್ನೂ ಯಾವುದೇ ರೀತಿಯಲ್ಲೂ ಲೇಬಲ್ ಮಾಡದೆ, ಸೆಲ್ಫ್ ಡೆವಲಪ್‌ಮೆಂಟ್‌ಗೆ ಪ್ರೋತ್ಸಾಹಿಸುವುದಷ್ಟೇ ಮಾಡುತ್ತಾ ಬನ್ನಿ.
"
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.