ಮದುವೆಯಾದ ಮೇಲೂ ಐ ಲವ್‌ ಯೂ ಹೇಳಿ; ಇದು ಡಾಕ್ಟರ್ ಸಲಹೆ

By Kannadaprabha News  |  First Published Jul 17, 2022, 12:51 PM IST

ಡಿಜಿಟಲ್ ಇಂಟಿಮೆಸಿ ಈಗ ಹೆಚ್ಚೆಚ್ಚು ಬಳಕೆಯಲ್ಲಿರುವ ಪದ. ಆನ್‌ಲೈನ್‌ ಚಾಟ್‌, ಮೆಸೇಜ್‌ಗಳು ಈ ಜಗತ್ತು ಸಾಕಷ್ಟು ಜನರನ್ನು ಹತ್ತಿರ ತರುತ್ತಿದೆ.ಆದರೆ ಹಳತಾಗುತ್ತಿರುವ ದಾಂಪತ್ಯದಲ್ಲೂ ಇದು ಮ್ಯಾಜಿಕ್ ಮಾಡವಲ್ಲದೇ?


ಡಾ ಕೆ ಎಸ್‌ ಪವಿತ್ರಾ

ಗಂಡ ಹೆಂಡತಿ ಎದುರು ಕುಳಿತಿದ್ದರು. ಒಬ್ಬರಿಗೆ ಮತ್ತೊಬ್ಬರ ಮೇಲೆ ಸಂದೇಹ. ಇವರು ಯಾರ ಜೊತೆಗಾದ್ರೂ ಚಾಟ್‌ ಮಾಡಿರಬಹುದಾ? ಯಾರ ಜೊತೆ ಇಷ್ಟುಹೊತ್ತು ಮಾತಾಡ್ತಿದ್ದಾರೆ? ಇತ್ಯಾದಿ ಇತ್ಯಾದಿ. ಆಗ ಪತ್ನಿ ಕೇಳಿದ ಪ್ರಶ್ನೆ ‘ಯಾಕೆ ಮೇಡಂ? ಇವರು ನನಗೆ ಮಾತ್ರ ಒಂದಿನಾನೂ ಐ ಲವ್‌ ಯೂ ಅಂತ ಮೆಸೇಜ್‌ ಮಾಡಲ್ಲ, ಮಾಡಬಹುದಲ್ವ? ನನ್ನ ಮುಖದಲ್ಲೂ ಒಂದು ನಗು ಆಗ ಅರಳಬಹುದಲ್ವ?’ ಪತ್ನಿ ಕೇಳಿದ ಆ ಪ್ರಶ್ನೆ ಬರೀ ಆಕೆಯ ಪತಿಗಷ್ಟೇ ಅಲ್ಲ, ವೈದ್ಯೆಯಾಗಿ ಕುಳಿತಿದ್ದ ನನಗೂ ‘ಆ’ ಎನ್ನುವಂತೆ ಮಾಡಿತ್ತು.

Latest Videos

undefined

ಆಗಲೇ ಅಂತರ್ಜಾಲದ ತುಂಬಾ ಓಡಾಡುವ ‘ಯೂ ಕಾಂಟ್‌ ಡೌನ್‌ಲೋಡ್‌ ಲವ್‌, ಯೂ ಕಾಂಟ್‌ ಅಪಲೋಡ್‌ ಫೀಲಿಂಗ್‌್ಸ, ಯೂ ಕಾಂಟ್‌ ಗೂಗಲ್‌ ಆಲ್‌ ಲೈಫ್‌ ಆನ್ಸ​ರ್‍ಸ್’ ಎಂಬ ವಾಕ್ಯ ನೆನಪಾದದ್ದು. ಹಾಗೆಯೇ ಆ್ಯಪಲ್‌, ಬ್ಲ್ಯಾಕ್‌ ಬೆರ್ರಿ ಬರೀ ಹಣ್ಣುಗಳಾಗಿದ್ದಾಗ ಜೀವನ ತುಂಬಾ ಸಿಂಪಲ್‌ ಆಗಿತ್ತಂತೆ. ಈಗ ಆ್ಯಪಲ್‌-‘ಬ್ಲ್ಯಾಕ್‌ಬೆರ್ರಿ ಗುಂಡಗೆ -ಕೆಂಪಗೆ, ತಿನ್ನುವ ಸವಿ ನೆನಪಿಸುವ ಬದಲು, ನೆನಪಿಗೆ ತರುವುದು ಏನೇನನ್ನೋ..

ಬಾಳಲ್ಲಿ ಜೈಸಬೇಕಾ? ಹಾಗಿದ್ರೆ ಪೂಲ್‌ನಲ್ಲಿ ಈಸಬೇಕು!

ಡಿಜಿಟಲ್‌ ಪ್ರೀತಿಯ ಯುಗ ಇದು. ಪ್ರೀತಿಯ ಆಳವನ್ನು ಕಂಡುಹಿಡಿಯುವುದು ಕಷ್ಟಇರಬಹುದು. ಆದರೆ ಡಿಜಿಟಲ್‌ ಯುಗದಲ್ಲಿ ಪ್ರೀತಿಯನ್ನು ಅಳೆಯುವುದು ಮತ್ತೂ ಕಷ್ಟ. ಫ್ರಾಯ್ಡ್‌ನ ಮಗಳು ಮನೋವಿಜ್ಞಾನಿ ಆ್ಯನ್ನಾ ಫ್ರಾಯ್ಡ್‌ ‘ಮೇಲ್ಮೈಯಲ್ಲಿ ಆಳವಿದೆ’ (ದೇರ್‌ ಈಸ್‌ ಡೆಪ್‌್ತ ಇನ್‌ ಸರ್‌ಫೇಸ್‌) ಎಂಬ ಮಾತನ್ನು ಹೇಳಿದ್ದಾಳೆ. ಆದರೆ ಮೊಬೈಲ್‌ ತೆರೆಯ ಮೆಸೇಜ್‌ ಹಿಂದಿನ ಆಳ ಕಂಡು ಹಿಡಿಯುವುದಾದರೂ ಹೇಗೆ?

‘ಇಂಟಿಮೆಸಿ’- ‘ಅನ್ಯೋನ್ಯತೆ’ಯ ಬಗ್ಗೆ ಈವರೆಗೆ ಮನೋವಿಜ್ಞಾನಿಗಳು ಮಾಡಿದ್ದ ಅಧ್ಯಯನಗಳೆಲ್ಲ ಅರ್ಧ ಸತ್ಯವಷ್ಟೇ ಆಗಿಬಿಟ್ಟಿವೆ. ನಿಜ ಜೀವನದಲ್ಲಿ, ಒಬ್ಬರಿಗೆ ನಾವೆಷ್ಟುಕ್ಲೋಸ್‌ ಎಂಬುದನ್ನು ನಿರ್ಧರಿಸುವುದು ಯಾವುದು? ನಮ್ಮ ಬಗ್ಗೆ ಅವರಿಗೆ ಎಷ್ಟುಗೊತ್ತು, ನಾವು ನಮ್ಮ ಸೀಕ್ರೆಟ್‌ಗಳನ್ನು ಅವರಿಗೆ ಎಷ್ಟುಹೇಳಿಕೊಂಡಿದ್ದೇವೆ ಎಂಬುದರ ಮೇಲೆ ತಾನೆ? ಇಲ್ಲಿ ತೆರೆದು ಹೇಳುವುದು, ಹಂಚಿಕೊಳ್ಳುವುದು ಒಂದು ಆಯ್ಕೆ. ಆದರೆ ಈಗ ಇದು ಉಲ್ಟಾ. ವಾಟ್ಸ್‌ ಆ್ಯಪ್‌ ಚ್ಯಾಟ್‌ಗಳಲ್ಲಿ ಇತರ ಡಿಜಿಟಲ್‌ ಇಂಟಿಮೆಸಿಯಲ್ಲಿ ನೀವೆಷ್ಟುಮುಚ್ಚಿಡುತ್ತೀರಿ, ಇನ್ನೊಬ್ಬರ ಬಗ್ಗೆ ಇನ್ನೆಷ್ಟುಭ್ರಮಿಸುತ್ತೀರಿ ಅಷ್ಟುಸಂಬಂಧಗಳು ಇಂಟಿಮೇಟ್‌ ಆಗುತ್ತವೆ. ನೀವು ಗಂಟೆಗಟ್ಟಲೆ ಪ್ರೀತಿಯಲ್ಲಿ ಮುಳುಗುವಂತೆ ಮಾಡುತ್ತವೆ.

ಶ್‌! ಇದು ‘ಸೃಷ್ಟಿ’ಯ ಸಮಯ: ಡಾ ಕೆ.ಎಸ್‌ ಪವಿತ್ರ ಮಾತು

ವಿಮರ್ಶೆ, ತಿರಸ್ಕಾರ, ನಿರ್ಲಕ್ಷ್ಯ ಇವುಗಳು ಯಾರಿಗೆ ಇಷ್ಟವಾಗುತ್ತವೆ? ವ್ಯಂಗ್ಯ, ಟೀಕೆಗಳಿಂದ ತುಂಬಿದ ವಿಮರ್ಶೆಯೇ ವಿವಾಹ ವಿಚ್ಛೇದನದ ನಿರ್ಣಾಯಕ ಅಂಶ ಎಂದು ಅಧ್ಯಯನಗಳು ತೋರಿಸಿವೆ. ಆಗ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ‘ಫೈಟ್‌, ಫ್ಲೈಟ್‌, ಫ್ರೀಜ್‌’ ಎಂಬ ತಂತ್ರ ಜಾಗೃತವಾಗಿಬಿಡುತ್ತದೆ.

ಹೂವರಳಬೇಕು ಎಂದರೆ ಎಲ್ಲವೂ ಸರಿಯಿರಬೇಕಷ್ಟೆ. ಹಾಗೆಯೇ ಹೃದಯ ತೆರೆಯಬೇಕು, ಅದರೊಳಗಿರುವ ರಹಸ್ಯಗಳು ಹೊರಬರಬೇಕು ಎಂದರೆ ಭಾವನಾತ್ಮಕವಾಗಿ ನಾವು ಸೇಫ್‌ ಆಗಬೇಕು. ವಿಮರ್ಶೆ, ತಿರಸ್ಕಾರ, ವ್ಯಂಗ್ಯ, ಟೀಕೆಗಳಿಗೆ ಪ್ರತಿಯಾಗಿ ಗೌರವ, ಕರುಣೆ, ಪ್ರಶಂಸೆ ಸಿಕ್ಕರೆ ಇಂಟಿಮೆಸಿ ಆಳವಾಗಿ ಬೇರೂರುತ್ತದೆ.

ಬಹುಜನ ಹೀಗಾಗದೆ ಹೋದಾಗ ಇಂಟಿಮೆಸಿಗೆ ತಮಗೆ ಗೊತ್ತಿಲ್ಲದೇ ಅಲ್ಲಲ್ಲಿ ಹುಡುಕುತ್ತಿರುತ್ತಾರೆ. ಆಗ ತತ್‌ಕ್ಷಣದ, ಸುಲಭವಾಗಿ ಕೈಗೆಟುಕುವಂತಹ, ಜವಾಬ್ದಾರಿ ನಿರೀಕ್ಷಿಸದಂತಹ ಡಿಜಿಟಲ್‌ ಇಂಟಿಮೆಸಿಯ ಕೈಗೆ ಸಿಲುಕುತ್ತಾರೆ. ಮನೆಯಲ್ಲಿರುವ ಜೀವನ ಸಂಗಾತಿ ಮತ್ತೆ ಮತ್ತೆ ಜವಾಬ್ದಾರಿಗಳನ್ನು ಗಮನಕ್ಕೆ ತರುತ್ತಾರೆ, ಹೀಯಾಳಿಸುತ್ತಾರೆ, ನಮ್ಮ ತಪ್ಪುಗಳನ್ನು ಎತ್ತಿ ತೋರಿಸುತ್ತಾರೆ. ಅದೇ ಮೊಬೈಲ್‌ನ ಚಿಕ್ಕ ತೆರೆಯ ತುಂಬ, ಆಗಾಗ ಬರುವ ಮೆಸೇಜ್‌ಗಳು, ವೀಡಿಯೋ/ಆಡಿಯೋ ಮೆಸೇಜ್‌ಗಳು ಕೊಡುವುದು ಅಖಂಡ ಆನಂದ. ಯಾವ ಟೀಕೆ, ಶಂಕೆ, ಜವಾಬ್ದಾರಿ ಇರದ ಒಂದು ರೀತಿಯ ಉನ್ಮಾದ! ಇವುಗಳನ್ನು ಬಿಟ್ಟು ಜೀವಿಸುವುದೇ ಸಾಧ್ಯವಿಲ್ಲ ಎಂಬ ಸ್ಥಿತಿ.

ಈ ಸ್ಥಿತಿಯಿಂದ ಹೊರಬರಬೇಕೆ? ಹೊರಬರುವುದು ಸಾಧ್ಯವೇ? ಖಂಡಿತ ಹೊರಬರಬೇಕು, ಹೊರಬರುವುದು ಸಾಧ್ಯವಿದೆ. ಹೊರ ಬಂದು ಆನಂದವಾಗಿರಲೂ ಸಾಧ್ಯವಿದೆ. ಹಳತಾಗುತ್ತಿರುವ ದಾಂಪತ್ಯದಲ್ಲಿ ಆಗಾಗ್ಗೆ ಒಬ್ಬರಿಗೊಬ್ಬರು ಮೆಸೇಜ್‌ ಮಾಡಬೇಕು, ಡಿಜಿಟಲ್‌ ಇಂಟಿಮೆಸಿಯೇನು ಹಿಂದಿನ, ದೂರವಿರುವ ಸ್ನೇಹಿತ, ಸ್ನೇಹಿತೆಯರ ಮಧ್ಯೆಯೇ ಆಗಬೇಕಿಲ್ಲ. ಗಂಡ ಹೆಂಡತಿಯ ಮಧ್ಯೆಯೂ ನಡೆಯಬಹುದು. ಮದುವೆಯಾದವರು ‘ಐ ಲವ್‌ ಯೂ’ ಎಂದು ಹೇಳಬಾರದೇನು? ಆಗಾಗ ಇಂತಹ ಸಣ್ಣ ಪುಟ್ಟ, ಗಂಟೆಗಟ್ಟಲೆ ಬೇಕಾಗದ ಚಿಕ್ಕ ಚಿಕ್ಕ, ಸಿಲ್ಲಿ ಸಿಲ್ಲಿ ಮೆಸೇಜ್‌, ವಾಯ್‌್ಸ ಮೆಸೇಜ್‌, ವೀಡಿಯೋಗಳು ದಾಂಪತ್ಯದಲ್ಲಿಯೂ ಪ್ರೀತಿ ಮೂಡಿಸಬಹುದು. ಆಗ ಮೊಬೈಲ್‌ ಮುಖಾಂತರ ಅಪ್‌ಲೋಡ್‌ -ಡೌನ್‌ಲೋಡ್‌ ಆಗದಿದ್ದರೂ, ದಾಂಪತ್ಯದಲ್ಲಿ ಪ್ರೀತಿಯನ್ನು ಡೌನ್‌ಲೋಡ್‌ ಮಾಡುವುದೂ, ಫೀಲಿಂಗ್‌್ಸ ಅಪ್‌ಲೋಡ್‌ ಮಾಡುವುದೂ ಸಕ್ಸಸ್‌ ಆಗಬಹುದು!

click me!