Digital Detoxification: ಮೊಬೈಲ್ ಬಿಟ್ಟು ಸಂಬಂಧಕ್ಕೊಂದು ಹೊಸ ಭಾಷ್ಯ ಬರೀರಿ!

By Suvarna News  |  First Published Jul 14, 2023, 12:53 PM IST

ಮಕ್ಕಳ ಕೈಯಲ್ಲಿ ಯಾವಾಗಲೂ ಮೊಬೈಲ್ ಅನ್ನುವ ಪೋಷಕರೂ ಈ ಅಂಗೈ ಅಗಲದ ತಾಂತ್ರಿಕ ಸಾಧನದ ದಾಸರಾಗಿರೋದು ದುರಂತ. ಮಕ್ಕಳಿಗೆ ಮೊಬೈಲ್ ಬಿಡಿಸೋ ಮುನ್ನ ನೀವು ಅದರಿಂದ ಮೊದಲು ದೂರವಾಗಿ. 


- ಸದಾನಂದ್ ರಾವ್, ಮನಃಶಾಸ್ತ್ರಜ್ಞರು

ಜೀವನದ ಅವಿಭಾಜ್ಯ ಅಂಗವಾಗಿದೆ ಮೊಬೈಲ್. 3.8 ಎಂಟು ಬಿಲಿಯನ್ ಮಂದಿ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ಒಂದು ಕ್ಷಣ ಮೊಬೈಲ್ ಕೈಯಲ್ಲಿ ಇಲ್ಲವೆಂದರೆ ಸಾಕು, ಅನೇಕ ಆಕಾಶವೇ ತಲೆ ಮೇಲೆ ಬಿದ್ದಂತೆ ವರ್ತಿಸುತ್ತಾರೆ. ಏನೋ ಚಡಪಡಿಕೆ, ಆತಂಕ. ಏನನ್ನೋ ಕಳೆದುಕೊಂಡ ಭಾವದೊಂದಿಗೆ ಅಭದ್ರತಾ ಭಾವವೂ ಹಲವರನ್ನು ಕಾಡುವುದು ಸುಳ್ಳಲ್ಲ. ಮಕ್ಕಳಿಂದ- ವೃದ್ಧರವರೆಗೂ ಇದಕ್ಕೆ ತಲೆ ಬಾಗಿದ್ದಾರೆ. ಇದನ್ನು ಹತ್ತು ನಿಮಿಷ ನೋಡಿಲ್ಲವೆಂದರೆ ಪ್ರಪಂಚವೇ ತಲೆ ಮೇಲೆ ಬಿದ್ದಂತೆ ಹಲವರು ವರ್ತಿಸುತ್ತಾರೆ. ಪ್ರತಿಕ್ಷಣವೂ ಮೊಬೈಲ್ ಚೆಕ್ ಮಾಡುವುದು, ತಾವು ಹಾಕಿರುವ ಪೋಸ್ಟ್ ಎಷ್ಟು ಜನ ನೋಡಿದ್ದಾರೆ? ಎಷ್ಟು ಕಮೆಂಟ್ ಬಂದಿವೆ, ಎಷ್ಟು ಲೈಕ್ ಬಂದಿವೆ ಇದನ್ನೇ ನೋಡುವ ಗೀಳು ಹೆಚ್ಚಿಸಿಕೊಂಡು, ವೈಯಕ್ತಿಕ ಬದುಕೇ ಮೂರಾಬಟ್ಟೆಯಾಗುತ್ತಿದೆ. ಅಪ್ಪ-ಅಮ್ಮ, ಹೆಂಡತಿ (ಅಥವಾ ಗಂಡ)- ಮಕ್ಕಳನ್ನು ಬೇಕಾದರೂ ಬಿಡುತ್ತೇವೆ, ಈ ಮೊಬೈಲ್ ಇಲ್ಲದೇ ಬದುಕುವುದು ಕಷ್ಟವೆಂಬಂತಾಗಿದೆ ಬದುಕು. 

Tap to resize

Latest Videos

undefined

ಮಗು ಹುಟ್ಟಿದ್ದಕ್ಕೆ ಶುಭಾಶಯ, ತಮ್ಮವರು ಸತ್ತಿದ್ದಕ್ಕೆ ಸಂತಾಪ ಸೂಚಿಸಲೂ ಈ ಮೊಬೈಲ್ ಸಾಕು. ಅವರ ಹತ್ತಿರವೇ ಹೋಗಿ ನಾಲ್ಕು ಸಂತಾಪದ ಮಾತುಗಳನ್ನಾಗಿ ಮತ್ತಷ್ಟು ಮುದ ನೀಡುವುದೂ ಮರೆಯಾಗುತ್ತಿದೆ. ಮೊಬೈಲ್ (High Usage of Mobile) ಅತಿಯಾಗಿ ಬಳಸುವುದರಿಂದ ದ್ವೇಷ (Enmity) ಹೆಚ್ಚುತ್ತಿದೆ. ಮಕ್ಕಳಿಗೆ ಮಾನಸಿಕ ಸಮಸ್ಯೆ (Psychological Problem) ಕಾಡುತ್ತಿದೆ. ಮಕ್ಕಳ ನಡೆಯಂಥೂ ಯಾರಿಗೂ ಇಷ್ಟವಾಗೋಲ್ಲ. ಮನೆಯಲ್ಲಿರುವವ ಜೊತೆ ಬಾಂಧವ್ಯ ಮರೆಯಾಗಿದೆ. ಮೊಬೈಲ್‌ನಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳು ಸಿಗೋದ್ರಿಂದ ಬೇಕಾದ್ದು, ಬೇಡದ್ದು ಮಕ್ಕಳ ಮನಸ್ಸು, ಮೆದುಳು ಸೇರುತ್ತಿವೆ. 

ಸೋಶಿಯಲ್ ಮೀಡಿಯಾದಿಂದ ರೊಮ್ಯಾಂಟಿಕ್ ಲೈಫೂ ಹಾಳು!

4ಜಿ, 5ಜಿ ಭರಾಟೆಯಲ್ಲಿ ಈ ಜನರೇಷನ್ ನಲುಗುತ್ತಿದೆ:
4ಜಿ ಮತ್ತು 5ಜಿ ಅಂತ ವಿವಿಧ ಜನರೇಷನ್ ವರ್ಷನ್ ಬರುತ್ತಿರುವುದು ಸರಿ. ಇದು ಕರೆಂಟ್ ಜನರೇಷನ್ ಹಾಳು ಮಾಡುತ್ತಿರೋದು ಸುಳ್ಳಲ್ಲ. ಇಂಟರ್ನೆಟ್ (Internet)ಇಲ್ಲದ ಬಾಳೊಂದು ಬಾಳೇ ಎನ್ನುವಂತಾಗಿದೆ. ಅತಿ ಕಡಿಮೆ ದರದಲ್ಲಿ ಹೆಚ್ಚು ಡೇಟಾ ಪ್ಯಾಕೇಜ್ ಸಿಕ್ತಿದೆ ಹೌದು. ಆದರೆ, ಬದುಕಿಗೆ ಏನು ಬೇಕೋ ಅವೆಲ್ಲವೂ ಕಣ್ಮರೆಯಾಗುತ್ತಿದೆ. ನೆಟ್‌ಫ್ಲಿಕ್, ಅಮೇಜಾನ್ ಪ್ರೈಮ್...ಅದೂ ಇದು ಅಂತ ನೂರಾರು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸಬ್‌ಸ್ಕ್ರಿಪ್ಷನ್. ಜೊತೆಗೆ ಎಲ್ಲ ಮನೋರನಂಜನೆಯನ್ನೂ ಪಡೆಯುವಂಥ ದಾವಂತ. ಸಬ್‌ಸ್ಕ್ರಿಪ್ಷನ್ ಫೀ ವೇಸ್ಟ್ ಆಗುತ್ತೆ ಅಂತ ಅದು ಇದು ನೋಡೋ ಅವಸರ. ಮೊಬೈಲ್ ಇಂಟರ್ನೆಟ್‌ನಲ್ಲಿ ಹಲವು ಮನೋರಂಜನೆ ಮಾಹಿತಿ (Entertainment Information) ಆಟಗಳು ಹೆಚ್ಚೆಚ್ಚು ಇರುವುದರಿಂದ ತಮಗೆ ಇಷ್ಟವಾದ ವಿಷಯವನ್ನು ನೋಡುತ್ತಿರುವುದು ಒಂದು ಕೆಲಸವಾಗಿದೆ. ವಿಡಿಯೋ ಗೇಮ್ಸ್ ಮಕ್ಕಳು ಮತ್ತು ಯುವಕ ಯುವತಿಯರನ್ನು ಅತಿ ಹೆಚ್ಚು ಮೊಬೈಲ್ ವ್ಯಸನಕ್ಕೆ ದಾರಿ ಮಾಡಿ ಕೊಡುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕೋಪ, ಚಡಪಡಿಕೆ, ಖಿನ್ನತೆ (Depression), ಒತ್ತಡ (Anxiety) ಹೆಚ್ಚುತ್ತಿದೆ ನೆಟ್ವರ್ಕ್ ಸರಿಯಾಗಿ ಸಿಗದಿದ್ದರೆ, ಬ್ಯಾಟರಿ ಕಡಿಮೆಯಾದರೆ ಜೀವನದಲ್ಲಿ ಏನೋ ಆಗಿದೆ ಎನ್ನೋ ಆತಂಕ. ಜಗತ್ತಿನಿಂದ ದೂರವಾಗುತ್ತಿರುವ ನೋವು. ಈ ಭಾವ ತರೋ ಸ್ಟ್ರೆಸ್ ಇದೆಯಲ್ಲ, ಯಾವ ಕಾಯೆಲೆಗಿಂತಲೂ ಕಡಿಮೆ ಇರೋಲ್ಲ. 

ಗುಪ್ತ್ ಗುಪ್ತ್ ಹುಟ್ಟಿ ಕೊಳ್ಳುವ ಅನೈತಿಕ ಸಂಬಂಧಗಳು (Illicit Relationship) ಕೌಟುಂಬಿಕ ಜೀವನದ (Family Life) ನೆಮ್ಮದಿಯನ್ನೇ ಹಾಳುಗೆಡವುತ್ತಿದೆ. ಕಣ್ಣಿಗೆ ಹೆಚ್ಚು ಆಯಾಸವಾಗುತ್ತಿದೆ. ದೃಷ್ಟಿ ದೋಷ ಮಕ್ಕಳಲ್ಲಿ ಹೆಚ್ಚುತ್ತಿವೆ. ಕುತ್ತಿಗೆ ನೋವು ಕಾಮನ್ ಆಗುತ್ತಿದೆ. ಬರೀ ಮೊಬೈಲ್‌ನಲ್ಲಿ ಬೇಡದ ವೀಡಿಯೋಗಳನ್ನು ನೋಡಿ ಕಳೆಯುವ ಗಂಡಸರಲ್ಲಿ ನಪುಂಸಕತೆ ಜೊತೆಗೆ, ಅಪಕ್ವ ವೀರ್ಯಾಣು ಸಮಸ್ಯೆಯೂ ಹೆಚ್ಚುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ, ಇನ್ನೇನೂ ಬೇಡವೆನ್ನುವ ಮನಸ್ಸು, ಸಾಮಾಜಿಕ ಕಾರ್ಯಕ್ರಮಗಳಿಂದ ದೂರವಾಗುವಂತೆ ಮಾಡುತ್ತಿದೆ. ಅಕ್ಕಪಕ್ಕದವರ ಜೊತೆ ಸಂವಹನ ಕಡಿಮೆಯಾಗಿದೆ. ರಾತ್ರಿ ಹೊತ್ತು ಬಿಡದ ಈ ಪೀಡೆ ನಿದ್ರೆಯನ್ನು ಕಸಿಯುತ್ತಿದೆ. ಮನಸ್ಸಿಗೆ ಮುದ ನೀಡುವ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಕ್ಕಳು ಹೊರಗೆ ಆಡೋ ಬದಲು ಮೊಬೈಲ್ ಅನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. 

ಮಗಳ ಬಳಿ ಫೋನ್ ಕಿತ್ತುಕೊಂಡ ತಾಯಿ ಕೊಲ್ಲಲು ಪದೇ ಪದೇ ಸಂಚು ಮಾಡಿದ 13 ವರ್ಷದ ಮೊಬೈಲ್ ವ್ಯಸನಿ!

ಮೊಬೈಲ್ ಬೇಡ, ಕೆಲ ಆ್ಯಪ್ಸ್‌ನಿಂದ ದೂರವಾಗಿ ಸಾಕು:
ಕಾಲ ಬದಲಾಗಿದೆ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗೋದು ಅನಿವಾರ್ಯ. ವಾಚ್, ಪರ್ಸ್ ಎಲ್ಲವನೂ ಬಿಟ್ಟು ಮೊಬೈಲ್ ಹಿಡ್ಕೊಂಡು ಹೋಗುವ ಕಾಲವಿದು. ಅದನ್ನು ಬಿಟ್ಟರಂತೂ ಆಗೋಲ್ಲ. ಆದರೆ, ಮನಸ್ಸು ಆರೋಗ್ಯ ಸರಿಯಾಗಿಸಿಕೊಳ್ಳೋದು ನಿಮ್ಮ ಕೈಯಲ್ಲಿರೋ ಮೊಬೈಲ್‌ನಲ್ಲಿದೆ. ಸಿಕ್ಕಾಪಟ್ಟೆ ನಿಮ್ಮನ್ನು ಬೆಂಬಿಡದಂತೆ ಕಾಡುತ್ತಿರುವ ಕೆಲವು ಆ್ಯಪ್ಸ್‌ನಿಂದ ಒಂದು ನಾಲ್ಕು ವಾರ ದೂರವಾಗಿ ನೋಡಿ. ಬದುಕು ಹೇಗೆ ಬದಲಾಗುತ್ತೆ ಎನ್ನೋದು ನಿಮ್ಮ ಅರಿವಿಗೆ ಬರುತ್ತೆ. ಬ್ಯುಸಿ ಅಂತ ಹೇಳಿ ಮಾಡದೇ ಉಳಿದ ಸಾವಿರಾರು ಕೆಲಸಗಳಿಗೆ ಮುಕ್ತಿ ಸಿಗುತ್ತೆ. ಮಾತನಾಡದೇ ಮೌನವಾಗಿದ್ದ ಸಂಗಾತಿಯೊಂದಿಗೆ ಕಳೆಯುವ ಕೆಲವು ಕ್ಷಣಗಳು ಸಂಬಂಧವನ್ನೇ ಬೆಸೆಯಬಹುದು. ಮಕ್ಕಳೊಂದಿಗೆ ಕಳೆಯುವ ಅಮೂಲ್ಯ ಕ್ಷಣ ಅವರಿಗೆ ಭದ್ರತಾ ಭಾವ ಮೂಡಿಸುವಂತೆ ಮಾಡಿಸಿ, ವ್ಯಕ್ತಿತ್ವವನ್ನೇ ಸುಧಾರಿಸಬಹುದು. 

ಮಕ್ಕಳು ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವವೇ ಬದಲಾಗುತ್ತದೆ. ನಡೆ-ನುಡಿಗಳಲ್ಲಿ ಅನುಭವವಕ್ಕೆ ಬರುವಷ್ಟು ಬದಲಾವಣೆಗಳನ್ನು ಗುರುತಿಸಬಹುದು. ಯೂಟ್ಯೂಬ್ ಜ್ಞಾನದಿಂದ ಹೊರ ಬಂದು ಕೆಲವು ಪ್ರಾಕ್ಟಿಕಲ್ ನಾಲೆಡ್ಜ್ ಹೆಚ್ಚುವಂತೆ ಮಾಡುತ್ತದೆ. ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ವೃದ್ಧಿಸುವುದರಲ್ಲಿ ಅನುಮಾನವೇ ಇಲ್ಲ. ನೋಮೋಫೋಬಿಯಾ ಕಾಯಿಲೆಯಿಂದ ಬಳಲುತ್ತಿರುವ ಯುವ ಜನರು ಸಮಸ್ಯೆಯಿಂದ ಮುಕ್ತರಾಗುತ್ತಾರೆ. 

ಮೊಬೈಲ್‌ ಅಡಿಕ್ಟ್ ಸೊಸೆಗೆ ಅತ್ತೆಯ ಕ್ಲಾಸ್‌, ಮದ್ವೆಯಾದ ನಾಲ್ಕೇ ದಿನದಲ್ಲಿ ಗಂಡನನ್ನು ಬಿಟ್ಹೋದ ವಧು!

ಮೊಬೈಲ್ ರೇಡಿಯೇಷನ್‌ನಿಂದ ಹೆಚ್ಚುವ ದೇಹದ ಉಷ್ಣಾಂಶಕ್ಕೆ ಸಿಗುತ್ತೆ ಪರಿಹಾರ. ತಲೆನೋವು, ಕತ್ತುನೋವು ಹಾಗೂ ಮೆದುಳಲ್ಲಿ ಗೆಡ್ಡೆಗಳು ಬೆಳೆಯಬಹುದು. ಕಣ್ಣಿನಲ್ಲಿ ನೀರಿನ ಅಂಶ ಕಡಿಮೆ ಆಗುವುದು, ಕಣ್ಣು ತುರಿಕೆ ಸಮಸ್ಯೆಗೂ ಸಿಗುತ್ತೆ ಪರಿಹಾರ. ಮೊಬೈಲ್‌ನಲ್ಲಿರುವ ನೀಲಿ ಬೆಳಕಿನಿಂದ ಮೇಲ್ಟೋನಿನ್ ಎಂಬ ಹಾರ್ಮೋನ್ ಮೆದುಳಲ್ಲಿ ಕಡಿಮೆ ಬಿಡುಗಡೆಯಾಗುವುದರಿಂದ ನಮ್ಮ ನಿದ್ರೆ ದೂರವಾಗುತ್ತದೆ. ಮೊಬೈಲ್ ಬೇಡ, ಕೆಲವು ಆ್ಯಪ್ಸ್ ಬಳಸೋದ ಬಿಟ್ಟರೂ ಈ ಸಮಸ್ಯೆಗೆ ಸಿಗುತ್ತೆ ಪರಿಹಾರ. ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನಲ್ಲಿ ಡೋಪಮೈನ್ ಪ್ರಮಾಣ ಕಡಿಮೆಯಾಗುವುದರಿಂದ, ಹೆಚ್ಚುವ ಒತ್ತಡ, ಖಿನ್ನತೆಗೆ ಸಿಗುತ್ತೆ ಪರಿಹಾರ. 

ಮನೆ ಮಂದಿ ಎಲ್ಲರೂ ಈ ಡಿಜಿಟಲ್ ಡಿಟಾಕ್ಸಿಫಿಕೇಷನ್ ಪ್ರೊಸೆಸ್‌ ಅಳವಡಿಸಿಕೊಂಡರೆ ಹಾಳಾಗುತ್ತಿರುವ ಬಾಂಧವ್ಯಕ್ಕೊಂದು ಹೊಸ ಭಾಷ್ಯ ಬರೆಯಬಹುದು. 
 

click me!