ಭೀಷ್ಮ ವಿಶ್ವವಿದ್ಯಾಲಯದ ಪಠ್ಯ, ಏರಿದವನು ಎಚ್ಚರದಿಂದ ಇರಬೇಕು!

By Kannadaprabha NewsFirst Published Nov 22, 2021, 1:27 PM IST
Highlights

ಪರ್ವತದ ತುದಿಯಲ್ಲಿರುವ ಕಲ್ಲಿಗೆ(Stone) ಜಾರುವ ಸಾಧ್ಯತೆ ಹೆಚ್ಚು. ಅಲ್ಲದೆ ಪರ್ವತದ ತುಟ್ಟತುದಿಯ ಕಲ್ಲು ಜಾರತೊಡಗಿದರೆ ಅದು ನೆಲಕ್ಕೆ ಬಂದು ನಿಲ್ಲುತ್ತದೆ. ಅರ್ಧದಲ್ಲಿಯೋ, ಅದಕ್ಕಿಂತ ಕೆಳಗೋ ಇರುವ ಕಲ್ಲು ಜಾರಿದರೆ ಸ್ವಲ್ಪ ಮಾತ್ರ ಕೆಳಗಿಳಿದೀತು. ಮೇಲಿದ್ದವರಿಗೆ ಪತನದ ಸಾಧ್ಯತೆ ಯಾಕೆ ಹೆಚ್ಚು ಎಂದರೆ ಅಲ್ಲಿ ಅವನು ಅವನಾಗಿರುವುದಿಲ್ಲ. ಏರುವವರೆಗೆ ವ್ಯಕ್ತಿ(Person) ಅವನೇ ಆಗಿರುತ್ತಾನೆ

-ಜಗದೀಶ ಶರ್ಮಾ ಸಂಪ

ತಪಸ್ವಿಯೂ ಆಗಿದ್ದ ರಾಜಾ ನಹುಷ ರಾಜರ್ಷಿಯೆಂದೇ ಪ್ರಸಿದ್ಧನಾದವ. ತನ್ನ ಸತ್ಕಾರ್ಯಗಳ ಪುಣ್ಯದ ಫಲವಾಗಿ ಸ್ವರ್ಗದ ಅಧಿಪತಿಯಾದ. ದೇವಲೋಕದಲ್ಲಿ ದೇವರಾಜನಾಗಿದ್ದರೂ ಆಚಾರಗಳನ್ನು ಬಿಟ್ಟಿರಲಿಲ್ಲ. ಮನುಷ್ಯರ ಆಚರಣೆಗಳ ಜೊತೆ ದೇವತೆಗಳ(God) ಆಚರಣೆಗಳನ್ನೂ ಮಾಡುತ್ತಿದ್ದ. ಕಾಲ ಕಳೆಯಿತು. ನಿಧಾನವಾಗಿ ನಹುಷನಿಗೆ ಅಹಂಕಾರ ಮೂಡತೊಡಗಿತು. ಮೂರು ಲೋಕದ ಒಡೆಯ ತಾನೆನ್ನುವ ಹಮ್ಮು ಬಿಮ್ಮು ಹೆಚ್ಚಾಯಿತು. ಇಷ್ಟಾಗುತ್ತಿದ್ದಂತೆ ಸತ್ಕಾರ್ಯ, ಸಜ್ಜನಿಕೆ ಎಲ್ಲ ಮರೆಯಾಯಿತು.

ತನ್ನ ದೊಡ್ಡಸ್ತಿಕೆಯನ್ನು ತೋರಿಸಬೇಕಲ್ಲ. ಅದಕ್ಕೆ ಎಲ್ಲರನ್ನೂ ಕನಿಷ್ಠವಾಗಿ ಕಾಣತೊಡಗಿದ. ಈಗ ಅವನ ಪಲ್ಲಕಿ ಹೊರಲು ಸಾಮಾನ್ಯರನ್ನು ಬಳಸುತ್ತಿರಲಿಲ್ಲ. ತಪಸ್ವಿಗಳಾದ ಮಹರ್ಷಿಗಳು ಅದಕ್ಕೆ ನಿಯುಕ್ತರಾದರು. ಅವನಿಗೊಂದು ವರವಿತ್ತು. ಅದು ಬ್ರಹ್ಮ ಕೊಟ್ಟಿದ್ದು. ಯಾರು ತನ್ನ ಎದುರು ಬಂದರೂ ಅವರು ತನ್ನ ವಶವಾಗಬೇಕು ಎಂದು ವರ ಪಡೆದಿದ್ದ. ಸ್ವರ್ಗದ(Heaven) ಅಧಿಪತಿಯಾಗು ಎಂದು ಅವನಲ್ಲಿ ಹೇಳಿದಾಗ ಈ ವರದ ನಿಬಂಧನೆಯೊಂದಿಗೆ ಬಂದವ ಆತ. ಹಾಗಾಗಿ ಎದುರು ನಿಂತು ಯಾರೂ ಅವನನ್ನು ಎದುರಿಸದಂತಾಗಿದ್ದರು. ಮಹರ್ಷಿಗಳೂ ಏನೂ ಮಾಡಲಾಗದೆ ಪಲ್ಲಕಿ ಹೊರತೊಡಗಿದ್ದರು. ಅದಕ್ಕೆ ಅವನು ಪಾಳಿಯ ವ್ಯವಸ್ಥೆ ಮಾಡಿದ್ದ. ಪ್ರತಿದಿನ ಬೇರೆ ಬೇರೆ ಮಹರ್ಷಿಗಳು ಅದನ್ನು ಮಾಡಬೇಕಿತ್ತು. ಹೀಗೆಯೇ ಎಷ್ಟೋ ಕಾಲ ಕಳೆಯಿತು.

ಅವತ್ತು ಅಗಸ್ತ್ಯರ ಪಾಳಿ. ಅವರು ಪಲ್ಲಕಿ ಹೊರಲು ಹೊರಡಬೇಕು. ಅಷ್ಟರಲ್ಲಿ ಭೃಗು ಮಹರ್ಷಿ ಅವರ ಆಶ್ರಮಕ್ಕೆ ಬಂದರು. ‘ಈಗಿನ ಇಂದ್ರನಾದ ನಹುಷನ ಈ ಅವಮಾನವನ್ನು ನಾವೇಕೆ ಸಹಿಸಬೇಕು ಮಹರ್ಷಿ? ದುರ್ಬುದ್ಧಿ ಅವನದ್ದು’ ಎಂದರು ಭೃಗು.

ಅರ್ಧಕ್ಕೇ ಕೆಲವು ಕೆಲಸಗಳನ್ನು ಬಿಟ್ಟರೆ, ಕೆಡಕು ಗ್ಯಾರಂಟಿ!

‘ನಾನೇನು ಮಾಡಲಿ ಮುನಿ, ಶಾಪ ಕೊಡಲೂ ಸಾಧ್ಯವಿಲ್ಲ. ವರದನೇ ವರ ಕೊಟ್ಟಿದ್ದಾನಲ್ಲ ಅವನಿಗೆ. ನಿಮಗೂ ಗೊತ್ತು ಅದು. ಹಾಗಾಗಿಯೇ ನೀವೋ ನಾನೋ ಇನ್ನೊಬ ಋುಷಿಯೋ ಅವನನ್ನು ಸುಡದೇ ಬಿಟ್ಟಿರುವುದು. ಇಲ್ಲವಾದರೆ ಯಾರದೋ ಶಾಪಕ್ಕೆ ಈ ಹೊತ್ತಿಗೆ ಅವನು ಉರಿದು ಹೋಗುತ್ತಿದ್ದ ಅಥವಾ ಉದುರಿ ಬಿದ್ದಿರುತ್ತಿದ್ದ. ಇನ್ನು ಹಿಂದೆಯೇ ಇವನಿಗೆ ಅಮೃತವನ್ನು ಕೊಟ್ಟಾಗಿದೆ. ಹಾಗಾಗಿ ನಾವು ಇವನನ್ನು ನಾಶ ಮಾಡುವಂತೆಯೂ ಇಲ್ಲ. ಜೀವಿಗಳಿಗೆ ಕಷ್ಟಕೊಡುವ ವರವನ್ನು ದೇವರೇ ಈ ನರಾಧಮನಿಗೆ ಕೊಟ್ಟಂತಾಯಿತು. ಈಗ ಈ ವಿಷಯದಲ್ಲಿ ನಾನು ಮಾಡಬೇಕಾಗಿರುವುದು ಏನಾದರೂ ಇದೆಯೇ? ನೀವು ಹೇಳಿದಂತೆ ಮಾಡುತ್ತೇನೆ’ ಎಂದರು ಅಗಸ್ತ್ಯರು.

‘ನಾನೀಗ ಬ್ರಹ್ಮನ ಸೂಚನೆಯಂತೆಯೇ ನಿಮ್ಮ ಬಳಿಗೆ ಬಂದಿರುವುದು. ದರ್ಪಿಷ್ಠನಾದ ನಹುಷನಿಗೆ ಬುದ್ಧಿ ಕಲಿಸಲೆಂದೇ ಬಂದಿರುವುದು. ಇವತ್ತು ಆ ದುರ್ಬುದ್ಧಿಯವ ನಿಮ್ಮನ್ನು ರಥಕ್ಕೆ ಕಟ್ಟುತ್ತಾನೆ. ಇಂದು ಅವನ ಇಂದ್ರಪದವಿಯ ಕೊನೆಯ ದಿನ. ಅಂಕೆ ಮೀರಿದವನನ್ನು ನಾನಿಂದು ಕೆಳಗಿಳಿಸುತ್ತೇನೆ. ಅವನನ್ನು ಎಳೆದು ಹಾಕಿ ಮತ್ತೆ ಶತಕ್ರತುವನ್ನು ಆ ಸ್ಥಾನದಲ್ಲಿ ಕೂರಿಸುತ್ತೇನೆ. ಆ ಪೆದ್ದ ಇಂದು ಆತ್ಮಘಾತಿಯಾದ ಕೆಲಸವೊಂದನ್ನು ಮಾಡುತ್ತಾನೆ. ಧರ್ಮ ಮೀರಿದ ಆ ದುಷ್ಟನಿಗೆ ಅದೇ ಕ್ಷಣದಲ್ಲಿ ನಾನು ಶಾಪ ನೀಡುತ್ತೇನೆ. ನೀವು ನೋಡುತ್ತಿರುವಂತೆಯೇ ಧಿಕ್ಕಾರದ ಶಬ್ದದಿಂದ ತೇಜೋಹೀನನನ್ನಾಗಿಸಿ ನೆಲಕ್ಕೆ ಕೆಡವುತ್ತೇನೆ’ ಎಂದರು. ಭೃಗುವಿನ ಈ ಮಾತು ಅಗಸ್ತ್ಯರ ಚಿಂತೆಯನ್ನು ದೂರ ಮಾಡಿತು. ಅವರು ನೆಮ್ಮದಿಯಾದರು.

ಅದೇ ಹೊತ್ತಿಗೆ ನಹುಷನಿಂದ ಅವರಿಗೆ ಸೂಚನೆ ಬಂತು. ಸರಸ್ವತೀ ತೀರದಿಂದ ತನ್ನನ್ನು ಕರೆದೊಯ್ಯಲು ಆದೇಶ ಕಳುಹಿಸಿದ್ದ ನಹುಷ. ಆಗ ಭೃಗು ಅಗಸ್ತ್ಯರಿಗೆ ‘ನೀವೀಗ ಕಣ್ಮುಚ್ಚಿ ನಿಶ್ಚಲವಾಗಿ ಕುಳಿತುಕೊಳ್ಳಿ. ನಾನು ಯಾರ ಕಣ್ಣಿಗೂ ಕಾಣಿಸದಂತೆ ನಿಮ್ಮ ಜಟೆಯಲ್ಲಿ ಅಡಗಿ ಕೂರುತ್ತೇನೆ. ಅವನ ಕಣ್ಣಿಗೆ ನಾನು ಕಾಣಿಸಿಕೊಂಡರೆ ನಾನು ಅವನ ವಶವಾಗಬೇಕಾಗುತ್ತದೆ. ಆಗ ಶಾಪ ಕೊಡಲು ಸಾಧ್ಯವಾಗುವುದಿಲ್ಲ’ ಎಂದರು. ಅಗಸ್ತ್ಯರು ನಿಶ್ಚಲರಾದರು, ಭೃಗು ಅವರ ಜಟೆಯ ಒಳಹೊಕ್ಕರು.

ಅಲ್ಪಾಯುಷಿ ಮಾರ್ಕಂಡೇಯ ಚಿರಂಜೀವಿ ಆದುದು ಹೇಗೆ?

ಅಗಸ್ತ್ಯರು ನಹುಷನಿದ್ದಲ್ಲಿಗೆ ಬಂದರು. ‘ನನ್ನನ್ನು ವಾಹನಕ್ಕೆ ಕಟ್ಟು. ನಿನಗೆ ಎಲ್ಲಿಗೆ ತೆರಳಬೇಕೋ ಅಲ್ಲಿಗೆ ಕರೆದೊಯ್ಯುವೆ’ ಎಂದರು. ನಹುಷ ವಾಹನಕ್ಕೆ ಅವರನ್ನು ಕಟ್ಟಿದ. ವರದ ಪ್ರಭಾವ ಗೊತ್ತಿದ್ದರಿಂದ ಅಗಸ್ತ್ಯರು ಕೋಪಗೊಳ್ಳಲಿಲ್ಲ. ಆದರೆ ಜಟೆಯಲ್ಲಿದ್ದ ಭೃಗು ಉದ್ದೇಶ ಈಡೇರುವ ಸಂತಸದಲ್ಲಿದ್ದರು. ಸೂಕ್ಷ್ಮರೂಪದಲ್ಲಿ ಇದ್ದ ಅವರು ನಹುಷನಿಗೆ ಕಾಣಿಸಲಿಲ್ಲ.

ನಹುಷ ಚಾವಟಿಯಿಂದ ಅಗಸ್ತ್ಯರಿಗೆ ಹೊಡೆದು ಹೊರಡಲು ಸೂಚಿಸಿದ. ಆಗಲೂ ಅವರು ಸಿಟ್ಟಾಗಲಿಲ್ಲ. ಆಗ ನಹುಷ ಎಡಗಾಲಿನಿಂದ ಅವರ ತಲೆಗೆ ಒದ್ದ. ಭೃಗು ಕುಪಿತರಾದರು. ‘ಕೆಟ್ಟಮನಸ್ಸಿನವನೆ, ಇಂತಹ ಮಹಾಮುನಿಯ ತಲೆಗೆ ಒದೆಯುವೆಯಾ? ಈಗಲೇ ಸರ್ಪವಾಗಿ ಭೂಮಿಗೆ ಬೀಳು’ ಎಂದು ಶಾಪ ಕೊಟ್ಟರು. ಆ ಕ್ಷಣದಲ್ಲೇ ನಹುಷ ಹಾವಾಗಿ ಭೂಮಿಗೆ ಬಿದ್ದಿದ್ದ.

ಔನ್ನತ್ಯಕ್ಕೆ ಏರಿದಾಗ ಹೆಚ್ಚು ಜಾಗರೂಕತೆ ಬೇಕು. ಯಾಕೆಂದರೆ ಪರ್ವತದ ತುದಿಯಲ್ಲಿರುವ ಕಲ್ಲಿಗೆ ಜಾರುವ ಸಾಧ್ಯತೆ ಹೆಚ್ಚು. ಅಲ್ಲದೆ ಪರ್ವತದ ತುಟ್ಟತುದಿಯ ಕಲ್ಲು ಜಾರತೊಡಗಿದರೆ ಅದು ನೆಲಕ್ಕೆ ಬಂದು ನಿಲ್ಲುತ್ತದೆ. ಅರ್ಧದಲ್ಲಿಯೋ, ಅದಕ್ಕಿಂತ ಕೆಳಗೋ ಇರುವ ಕಲ್ಲು ಜಾರಿದರೆ ಸ್ವಲ್ಪ ಮಾತ್ರ ಕೆಳಗಿಳಿದೀತು. ಮೇಲಿದ್ದವರಿಗೆ ಪತನದ ಸಾಧ್ಯತೆ ಯಾಕೆ ಹೆಚ್ಚು ಎಂದರೆ ಅಲ್ಲಿ ಅವನು ಅವನಾಗಿರುವುದಿಲ್ಲ. ಏರುವವರೆಗೆ ವ್ಯಕ್ತಿ ಅವನೇ ಆಗಿರುತ್ತಾನೆ. ತನ್ನತನವನು ಸಂಪೂರ್ಣವಾಗಿ ತೊಡಗಿಸುತ್ತಾನೆ. ತಲುಪುವ ಎತ್ತರವನ್ನು ಏರಿದಮೇಲೆ ಅವನ ಮೇಲೆ ಒಂದಿಷ್ಟುಆವಾಹನೆಗಳಾಗುತ್ತವೆ. ‘ನಾನು ಸಾಧಿಸಿದೆ’ ಎನಿಸುತ್ತದೆ. ‘ನಾನೀಗ ಉಳಿದವರಿಗಿಂತ ದೊಡ್ಡವ’ ಎನಿಸುತ್ತದೆ. ಅದಕ್ಕೆ ಸರಿಯಾಗಿ ಭಟ್ಟಂಗಿಗಳು ಜೊತೆಯಾಗುತ್ತಾರೆ. ಯಾರನ್ನೋ ಹಾಡಿ ಹೊಗಳಿ ತಮ್ಮ ಬೇಳೆ ಬೇಯಿಸುವವರು ಇಂತವರನ್ನು ಹುಡುಕುತ್ತಾ ಇರುತ್ತಾರೆ. ಗಾಳಿಗೆ ಉಬ್ಬುವವರು ಸಿಕ್ಕರೆ ಅವರಿಗದು ಪಂಚಭಕ್ಷ್ಯ ಪರಮಾನ್ನ. ಅವರು ‘ನೀನೇ ಇಂದ್ರ ನೀನೇ ಚಂದ್ರ’ ಎನ್ನತೊಡಗಿದಂತೆ ಈತ ಉಬ್ಬತೊಡಗುತ್ತಾನೆ. ಅಲ್ಲಿಗೆ ಅಹಂಕಾರ ಇವನನ್ನು ಮುಸುಕುತ್ತದೆ. ಒಳಬಂದ ಅಹಂಕಾರ ಸುಮ್ಮನೆ ಕೂರುವುದಿಲ್ಲ. ವಿನಯ ಮತ್ತು ಅಹಂಕಾರ ಇವೆರಡಕ್ಕೂ ಒಂದು ವಿಷಯದಲ್ಲಿ ಸಾಮ್ಯವಿದೆ. ಅವೆರಡಕ್ಕೂ ಸುಮ್ಮನಿರಲು ಬರುವುದಿಲ್ಲ. ವಿನಯ ಬಾಗುತ್ತಲೇ ಇದ್ದರೆ ಸೊಕ್ಕು ವಿಜೃಂಭಿಸತೊಡಗುತ್ತದೆ. ಅದು ದರ್ಪದ ಆಕಾರದಲ್ಲಿ ಹೊರಬರುತ್ತದೆ. ದರ್ಪದ ಜೊತೆಗಾರ ಅಸಡ್ಡೆ. ಎಲ್ಲರನ್ನೂ ಅಸಡ್ಡೆಯಿಂದ ನೋಡುವ ನಡವಳಿಕೆ ಮೊದಲಾಗುತ್ತದೆ. ತನ್ನ ಮುಂದೆ ಯಾರೂ ಅಲ್ಲ, ಯಾರೂ ಏನೂ ಅಲ್ಲ ಎನ್ನುವ ಭಾವ ಬಲಿಯುತ್ತದೆ. ಹೀಗೆಲ್ಲ ಆಗುತ್ತಾ ಆಗುತ್ತಾ ಮೇಲೇರಿದವ ತಾನೇ ತನ್ನ ಅಧಃಪತನದ ನೂರಾರು ದಾರಿಗಳನ್ನು ಸೃಷ್ಟಿಮಾಡಿಕೊಳ್ಳತೊಡಗುತ್ತಾನೆ. ಒಂದು ದಿನ ಜಾರಿದವ ಮೊದಲಿದ್ದಲ್ಲಿಗೆ ಬಂದು ನಿಲ್ಲುತ್ತಾನೆ, ಶೂನ್ಯನಾಗುತ್ತಾನೆ. ಅಸಂಖ್ಯ ಸಾಧನೆಗಳನ್ನು ಮಾಡಿ, ಸತ್ಕಾರ್ಯಗಳನ್ನು ಮಾಡಿ, ಸ್ವರ್ಗದ ಅಧಿಪತಿಯಾದ ನಹುಷ ಹಾವಾಗಿ ನೆಲಕ್ಕೆ ಬಿದ್ದಂತೆ ಆಗುತ್ತದೆ.

click me!