ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಮಾತುಗಳನ್ನಾಡಿ; ಇದು ಹೊಸ ವರ್ಷದ ರೆಸಲ್ಯೂಶನ್!

By Suvarna NewsFirst Published Jan 1, 2020, 4:01 PM IST
Highlights

ಸೋಷಲ್‌ ಮೀಡಿಯಾ ದೂರದ ಬೆಟ್ಟವಿದ್ದಂತೆ. ಸುಂದರ, ನುಣುಪು, ಆಕರ್ಷಕ. ಸಮಸ್ಯೆಯಾದಾಗಲೇ ಅದರ ಅಸಲಿಯತ್ತು ಬಹಿರಂಗವಾಗುವುದು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯಗೊಳ್ಳುವುದು ಒಳ್ಳೆಯ ವಿಚಾರವೇ. ಆದರೆ ವರ್ಚುವಲ್ ಜಗತ್ತಿನ ಆಕರ್ಷಣೆಯಿಂದ ಬಾಂಧವ್ಯದ ಭಾವಾರ್ಥ ಬದಲಾಗುವಂತಾಗಬಾರದು. 

ಪ್ರಸಂಗ -1

‘ಅದೊಂದು ನೀವು ಬರ್ದಿದ್ದು ಭಾರೀ ಚಂದಿತ್ತು ಮಾರ‌್ರೇ’ ಹೀಗೆ ಒಬ್ರು ಮೊನ್ನೆಯಷ್ಟೇ ಸಿಕ್ಕಾಗ ಹೇಳಿದವರಲ್ಲಿ ‘ಯಾವುದು?’ ಪ್ರಶ್ನೆ ಹಾಕಿದೆ. ‘ಅದೇ ಮೊನ್ನೆ ನೀವೊಂದು ಫೋಟೋ ಹಾಕಿದ್ರಲ್ಲ ಅದು’ ಉತ್ತರ ಬಂತು. ‘ಮತ್ತೆ ಬರೆದದ್ದು?’ ಈ ಸಲ ಕೇಳಿದಾಗ ‘ಅಯ್ಯೋ ಅದೆಲ್ಲ ಓದೋ ಅಷ್ಟು ಟೈಮಿಲ್ಲ, ನಿಮ್ ಫೋಟೋ ಚಂದಿತ್ತು, ಲೈಕು ಒತ್ತಿದೆ’ ಬಂದ ಉತ್ತರಕ್ಕೆ ನಗು ಉಕ್ಕಿದರೂ ‘ಮತ್ಯಾಕೆ ಬರ್ದಿದ್ದು ಚಂದಿದೆ ಅಂದ್ರಿ?’ ಕೇಳಿದಾಗ ‘ಅದೂ ನಿಮ್ಮನ್ನು ಮಾತಾಡಿಸ್ಬೇಕಿತ್ತು ಅದಕ್ಕೆ’ ಎಂದು ಹೋದವರನ್ನು ನೋಡಿ ‘ಭಲೇ ಆಸಾಮಿ’ ಅಂದ್ಕೊಂಡೆ. 

ಪ್ರಸಂಗ 2

ಇದಕ್ಕಿಂತಲೂ ಸ್ವಾರಸ್ಯದ ಸಂಗತಿ ಇನ್ನೊಂದಿದೆ, ಮೊನ್ನೆಯಷ್ಟೇ ನಮ್ಮ ವಿವಾಹ ವಾರ್ಷಿಕೋತ್ಸವವಿತ್ತು. ‘ಎಲ್ರೂ ಆ್ಯನಿವರ್ಸರಿಗೆ ಏನಾದ್ರೂ ಹಾಕ್ತಾರೆ, ನಾನೂ ಹಾಕ್ತೇನೆ’ ಎಂಬ ಉತ್ಸಾಹದಲ್ಲಿ ಒಂದು ಪೋಸ್ಟ್ ಏರಿಸಿಯೇ ಬಿಟ್ಟೆ ಫೋಟೋ ಸಹಿತ. ನಿಮಿಷ ಕಳೆಯುವಷ್ಟರಲ್ಲಿ ನೋಟಿಫಿಕೇಶನ್ ಕಾಟ ಶುರುವಾಗಿದ್ದೇ ಕೆಲವು ಕಮೆಂಟ್ಸ್‌ಗಳ ಮಧ್ಯೆ ‘ಹಾಯ್, ಹೌ ಆರ್ ಯು? ಯು ಆರ್ ಲುಕ್ಕಿಂಗ್ ಬ್ಯೂಟಿಫುಲ್’ ಎಂಬ ಮೆಸೇಜ್ ಕುಳಿತಿತ್ತು. ಮೆಸೇಜ್ ಮೂತಿಯನ್ನು ಮೊಬೈಲ್ ಸ್ಕ್ರೀನ್ ಕೆಳಕ್ಕೆ ತಂದು ಹೊರದಬ್ಬುವಷ್ಟರಲ್ಲಿ ‘ಲವ್ ಯೂ, ಫೋಟೋದಲ್ಲಿ ತುಂಬಾ ಮುದ್ದಾಗಿ ಕಾಣ್ತಿದ್ದೀರಿ, ಲವ್ ಮೀ’ ಎಂಬ ಇನ್ನೊಂದು ಮೆಸೇಜು. ‘ತಲೆ ಕೆಟ್ಟಿದ್ಯಾ?’ ಎಂದು ಕೆಂಪು ಮುಖದ ಇಮೋಜಿಯೊಡನೆ ಕಳುಹಿಸಿದ್ದೇ ‘ವೈ?’ ಎಂಬೊಂದು ಉತ್ತರ. ‘ಅಲ್ರೀ ಸ್ವಾಮಿ ತಲೆ ಕೆಟ್ಟಿದ್ಯಾ? ಮದ್ವೆಯಾದವ್ರಲ್ಲಿ ಹೀಗಾ ಬಿಹೇವ್ ಮಾಡೋದು?’ ಎಂದಾಗ ‘ಓಹ್ ಸಾರಿ, ನಿಮ್ಗೆ ಮ್ಯಾರೇಜ್ ಆಗಿದ್ಯಾ?’ ಎಂಬ ಸಂದೇಶ ಕಂಡಾಗ ‘ಮತ್ಯಾವ ಫೋಟೋ ನೋಡಿ ಲುಕ್ಕಿಂಗ್ ಬ್ಯೂಟಿಫುಲ್ ಅಂದದ್ದು?’

ನಾನೂ ಒಂದು ಕೆಟ್ಟ ಕುತೂಹಲದಲ್ಲಿ ಕೇಳಿಯೇ ಬಿಟ್ಟೆ. ‘ಅದೂ ಫೋಟೋ ನಿಮ್ದೇ ನೋಡಿದ್ದು, ಬಟ್ ಬರ್ದಿದ್ದೆಲ್ಲಾ ನೋಡಿಲ್ಲ, ಪಕ್ಕದಲ್ಲಿ ನಿಂತವ್ರ ಅಣ್ಣಾನೋ, ಫ್ರೆಂಡೋ ಅಂದ್ಕೊಂಡೆ’ ಸಂದೇಶ ನೋಡಿ ಕಪಾಳಕ್ಕೆ ಬಿಗಿಯಬೇಕು ಎಂಬಷ್ಟು ಕೋಪ ಬಂದಿದ್ರೂ ಸಹವಾಸನೇ ಬೇಡ ಅಂಥ ಮೆಲ್ಲನೇ ಹೆಸರನ್ನು ಬ್ಲಾಕ್ ಲಿಸ್ಟ್‌ಗೆ ವರ್ಗಾಯಿಸಿದೆ.

ಅನಿಸಿದ್ದೆಲ್ಲಾ ಗೀಚಲು ಸೋಷಿಯಲ್‌ ಮೀಡಿಯಾ ನಿಮ್ಮ ಡೈರಿಯೇ?

ಹಿಂಗೆಲ್ಲಾ ಆದ್ರೆ ಹೆಂಗೆ

ಇವೆರಡು ಅನುಭವಗಳು ನನಗೆ ಹೊಸತಲ್ಲ ಹಾಗೂ ಬಹುತೇಕರಿಗೆ ಆಗಿರುವಂತಹದ್ದೇ. ಇದಕ್ಕಿಂತ ಭಿನ್ನವಾದ ಇನ್ನೊಂದು ವರ್ಗದವರಿದ್ದಾರೆ, ಅವರೇ ಕ್ಯಾತೆ ಬರೆಹಗಾರರು ಮತ್ತು ಸ್ಪಾನ್ಸರ್ಡ್‌ (ಪ್ರಾಯೋಜಿತ) ಲೈಕರ್ಸ್. ಇದೇನಿದು? ಅಂಥ ಹುಬ್ಬೇರಿಸೋ ಮೊದಲು ನಾನೇ ಹೇಳಿ ಬಿಡ್ತೇನೆ. ಬೆಳಗ್ಗೆ ಎದ್ದಿದ್ದಕ್ಕೊಂದು ಕವನ, ತಿಂಡಿಗೊಂದು ಕತೆ, ಜಾರಿ ಬಿದ್ದರೊಂದು ಲೇಖನ ಹೀಗೆ ಮೇರು ಜಾಲತಾಣ ಬರೆಹಗಾರರ ನಡುವೆ ತಲೆಬುಡ ಇಲ್ಲದ ಚಾಟಿಂಗ್‌ಗಳು, ಒಳಗೊಳಗಿನ ರಹಸ್ಯ ಒಪ್ಪಂದ ಕರಾರುಗಳು, ಗಪ್‌ಚುಪ್ ಪ್ರೇಮಪ್ರಕರಣಗಳು ಇವುಗಳ ಸೂಚ್ಯದಂತಿರುವ ಬರೆಹವನ್ನೊಮ್ಮೆ ಓದಿದರೆ ಮತ್ತೆ ನಗೆಬರೆಹ ಓದುವ ತಾಪತ್ರಯವಿಲ್ಲ!

ಹೀಗೆ ಸ್ವಲ್ಪ ದಿನಗಳ ಹಿಂದೆ ಒಂದು ಕೊಂಡಿ ಜೊತೆಗೆ ‘ಖ್ಯಾತ ಕವಯತ್ರಿಯ ಕವನಗಳಿಗಾಗಿ ಒತ್ತಿ’ ಎಂಬ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ನೋಡಿ ಸುಮ್ಮನಾದವಳಿಗೆ ‘ಈ ಕವನಗಳ ಬಗ್ಗೆ ನಿಮ್ಮ ಅನಿಸಿಕೆ ಬರೆಯಿರಿ’ ಎಂಬ ಸೂಚನೆ ಬಂತು. ‘ನಾನು ಅನಿಸಿಕೆ ಬರೆವಷ್ಟು ಹಿರಿಯಳಲ್ಲ’ ಉತ್ತರ ರವಾನಿಸಿದ್ದೇ ಇಷ್ಟುದ್ದ ಸಂದೇಶದೊಡನೆ ‘ಇದನ್ನು ಫೇಸ್ಬುಕ್ ಹಾಗೂ ವಾಟ್ಸಾಪ್ ಗ್ರೂಪ್‌ಗಳಿಗೆ ಸೆಂಡ್ ಮಾಡ್ಬಿಡಿ, ಹೆಸರು ನಿಮ್ದೇ ಇರಲಿ’ ಎಂಬ ಮರು ಸಂದೇಶಕ್ಕೆ ಬೆರಗಾಗಿ ‘ಇದೇನಿದು?’ ಕೇಳಿದ್ದೇ ‘ಅಯ್ಯೋ ಈಗ ಎಲ್ಲಾ ಇಂತಹದ್ದೇ, ಅವರವರದ್ದಕ್ಕೆ ಅವ್ರವ್ರೇ ವಿಮರ್ಶೆ ಬರೆಯೋದ್ರಿ, ಹಾಕೋದು ಬೇರೆಯವ್ರ, ನಮ್ಗೆ ಲೈಕ್ಸು ಬಂದ್ರಾಯ್ತು’ ಎಂದಾಗ ‘ಎಲಾ ಕತೆಯೇ?’ ಅಂದ್ಕೊಂಡು ‘ಹಾಕೋಣಂತೆ, ನೀವು ಬರೆದ ಕವನದ ಅರ್ಥ ನನಗಾದ್ರೂ ಗುಟ್ಟಾಗಿ ಹೇಳ್ರೀ’’ ಕೇಳಿದ್ದೇ ತಡ ‘‘ಅದೆಲ್ಲಾ ಮೇಧಾವಿಗಳಲ್ಲಿ ಕೇಳ್ಬೇಕು ನಂಗೊತ್ತಿಲ್ಲ’’ ಅನ್ನೋದೇ ! ಬರೆದವ್ರಿಗೆ ಅರ್ಥ ಗೊತ್ತಿಲ್ದೇ ಇದ್ರೆ ಕೇಳೋದು ಯಾರಲ್ಲಿ ಎಂಬ ಪ್ರಶ್ನೆ ಮತ್ತೆ ಹುಟ್ಟಿಬಿಟ್ಟಿತು!

ಫೀಲಿಂಗ್ ಹ್ಯಾಪಿ ಹ್ಯಾಪಿ

ನಾವೆಲ್ಲ ಮಾಡರ್ನ್ ಜಮಾನದವರು ಒಪ್ಪಬೇಕಾದದ್ದೇ ಆದರೂ ಮಾಡರ್ನ್ ಗಡಿ ಮೀರಿದೆ ಎಂಬುದನ್ನು ಕೂಡಾ ಒಪ್ಪಿಕೊಳ್ಳಬೇಕು. ಬಿಡುವಿನ ವೇಳೆ ಮಾಡಬೇಕಾದ ಕಾರ್ಯಗಳನ್ನು ಕರ್ತವ್ಯದ ವೇಳೆ, ಮಾಡಲೇಬೇಕಾದ ಕೆಲಸಗಳನ್ನು ಬಿಡುವಿನ ವೇಳೆಗೆ ಹೊಂದಿಸಿಕೊಳ್ಳುತ್ತಿದ್ದೇವೆ ಟಿ.ವಿ. ಜಾಹೀರಾತಿನಂತೆ! ಲೈಕುಗಳನ್ನು ಗಿಟ್ಟಿಸಿಕೊಳ್ಳುವ ಭರದಲ್ಲಿ ಅನರ್ಹ ಭಾವಚಿತ್ರಗಳನ್ನು ಹದ್ದು ಮೀರಿದ ಬರೆಹಗಳನ್ನು ನಡುರಾತ್ರಿ ಪೋಸ್ಟ್ ಮಾಡುತ್ತಾ, ಅರ್ಥವಾಗದಿದ್ದರೂ ಆತ ನನ್ನ ಆಪ್ತನೆಂದು ವಿಚಿತ್ರ ಕಮೆಂಟುಗಳನ್ನು ಹಾಕುತ್ತಾ, ನಡುಹಗಲಿನಲ್ಲಿ ತೂಕಡಿಸುವ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ ಎಂಬುದು ಯೋಚಿಸಬೇಕಾದ ವಿಷಯ ಕೂಡಾ.

ಯಾರದ್ದೋ ಬರೆಹಗಳಿಗೆ ಲೈಕು ಅದುಮುವ ಮೊದಲು ಪೂರ್ತಿಯಾಗಿ ಓದುವ ತಾಳ್ಮೆ ನಮ್ಮಲ್ಲಿರಲಿ, ‘ರವಿ ಕಾಣದ್ದನ್ನು ಕವಿ ಕಂಡ’ ಎಂಬ ಮಾತು ನಿಜವಾದರೂ ಕಂಡದ್ದೆಲ್ಲಾ, ಅನ್ನಿಸಿದ್ದೆಲ್ಲಾ ಗೀಚಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಡುವ ಮೊದಲು ನಾವುಗಳು ಸಮಾಜದೊಳಗಿದ್ದೇವೆ, ನನ್ನಿಂದ ಸಮಾಜ ಎಂಬ ಅರಿವಿರಲಿ.

ಜಾಲತಾಣದಲ್ಲಿ ಕ್ಲೋಸ್ ಫ್ರೆಂಡು, ಎದುರು ಸಿಕ್ಕಾಗ ಹೂ ಆರ್ ಯೂ!

‘ವಿಶ್ವಕ್ಕೊಂದು ಅರೆಬರೆ ಅಡ್ಡಾದಿಡ್ಡಿ ಸುತ್ತು ಬಂದು ಒಡೆಯನಿಲ್ಲದೆ ದಡ ಸೇರಿದ ಮುರುಕು ಹಡಗು ಇನ್ನೂ ಕಡಲು ಕಾಣದ ಯಾರೋ ತುಡುಗು ಹುಡುಗ ಬೆರಳಾಡಿಸಿ ಬರೆದ ಬರೆಹ ‘ಮೆಗಲನ್’ ಅಕ್ಷರಕಾವ್ಯ’ ಹೇಳಿ ಕೇಳಿ ಬರೆಯುತ್ತಿದ್ದ ಅಕ್ಷರಗಳನ್ನು ಉಜ್ಜುವಲ್ಲಿಯವರೆಗೆ ತಂದು ನಿಲ್ಲಿಸಿದ ಇಂದಿನಲ್ಲಿ ದೇವು ಹನೆಹಳ್ಳಿಯವರ ಆಧುನಿಕೋತ್ತರ ಮಹಾಕಾವ್ಯದ ಈ ಸಾಲಿನಂತೆ ಅರೆಬರೆ ಹರಕು ಯೋಚನೆಗಳ ಮುರುಕು ಬರೆಹಗಳನ್ನು ಎಸೆದು ಸೋಶಿಯಲ್ ಮೀಡಿಯಾಗಳನ್ನು ತಿಪ್ಪೆಗುಂಡಿಯನ್ನಾಗಿಸದೆಯೇ ಸಾಮಾಜಿಕ ಜಾಲತಾಣ ಆಗಿಯೇ ಉಳಿಸೋಣ, ಅರಸಿ ಬರುವವರಿಗೆ ಒಳ್ಳೆಯದನ್ನೇ ಹಂಚೋಣ ಅಲ್ವೇ?

click me!