ಅಪ್ಪ ಅಮ್ಮ ಮುಂಚೆ ತಂದೆ ತಾಯಿ ದೇವರೆಂದು ಹೇಳಿಕೊಟ್ಟು ಬೈದು ಹೊಡೆದು ಬೆಳೆಸ್ತಿದ್ರು. ಆ ಭಯ, ಕರ್ತವ್ಯಪ್ರಜ್ಞೆ ಮಕ್ಕಳು ಪೋಷಕರ ಜವಾಬ್ದಾರಿ ತೆಗೆದುಕೊಳ್ಳುವಂತೆ ಮಾಡುತ್ತಿತ್ತು. ಮಧ್ಯೆ ಒಂದು ಹಂತ ಪೋಷಕರನ್ನು ತೊರೆದು ಫಾರಿನ್‌ಗೆ ಹೋಗಿ ಬದುಕುತ್ತಿದ್ರು. ಇದೊಂತರಾ ಟ್ರಾನ್ಸಿಷನ್ ಕಾಲ. ಇಂಥ ಕತೆಗಳನ್ನೆಲ್ಲ ನೋಡಿ, ಕೇಳಿ ಬೆಳೀತಿದಾರೆ ಇಂದಿನ ಮಕ್ಕಳು. ಇವರು ಪಕ್ಕಾ ಪ್ರಾಕ್ಟಿಕಲ್. ಪ್ರೀತಿಯಿಂದಲೇ ಬೆಳೀತಾರೆ, ಪ್ರೀತಿಯಿಂದಲೇ ಪೋಷಕರನ್ನು ನೋಡಿಕೊಳ್ತಾರೆ. ಎಲ್ಲೂ ಯಾವ ಹೇರಿಕೆಯೂ ಇಲ್ಲ.
ಕಾಲ ಬದಲಾಗಿದೆ ಕಣ್ರೀ... ನಮ್ ಕಾಲದಲ್ಲಿ ಹೀಗಿರ್ಲಿಲ್ಲ ಎಂಬ ಮಾತು ಕೇಳಿಯೇ ಇರುತ್ತೇವೆ. ಎಲ್ಲರಿಗೂ ತಮ್ಮ ಕಾಲವೇ ಚೆನ್ನಾಗಿದ್ದಿದ್ದೆಂಬ ನಂಬಿಕೆ. ಅಂತೆಯೇ ಇಂದಿನ ತಲೆಮಾರಿನವರಾದ ನಮಗೆ ನಮ್ ಕಾಲನೇ ಚೆನ್ನಾಗೆನಿಸುತ್ತದೆ. ಏನಂತೀರಾ?
ಹೌದು, ಕಾಲ ಬದಲಾಗಿದೆ. ಆದರೆ ಒಳ್ಳೆಯ ರೀತಿಯಲ್ಲೇ ಬದಲಾಗಿದೆ. ಆಗುತ್ತಿದೆ. ನಮ್ಮ ಅಜ್ಜ ಮುತ್ತಜ್ಜನ ತಲೆಮಾರಿಗೆ ಒಮ್ಮೆ ಹೋಗಿ ಬರೋಣ. ಅವ್ರ ಕಾಲದಲ್ಲಿ ಹೀಗಿರ್ಲಿಲ್ಲ ನಿಜ, ಮಕ್ಕಳಿಗೆ ಓದುಬರಹ ಇಲ್ಲ. ಶಾಲೆಗೆ ಹೋದ್ರೂ ಅದಕ್ಕೇನು ಅಂಥ ಪ್ರಾಮುಖ್ಯತೆ ಇಲ್ಲ. ಹೆಣ್ಣುಮಕ್ಕಳು ಮನೆ, ಕೊಟ್ಟಿಗೆ ಕೆಲಸ, ಗಂಡುಮಕ್ಕಳು ಕೃಷಿ ಕೆಲಸವನ್ನು ಚೆನ್ನಾಗಿ ಕಲಿಯುತ್ತಿದ್ದರು. ಒಂದೊಂದು ಮನೆಯಲ್ಲಿ ಕನಿಷ್ಠ ಅರ್ಧ ಡಜನ್ ಮಕ್ಕಳು. ಅವರನ್ನು ಬೆಳೆಸಲು ವಿಶೇಷ ಪ್ರಯತ್ನಗಳೇನೂ ಇರುತ್ತಿರಲಿಲ್ಲ. ಅವರ ಪಾಡಿಗೆ ಅವರು ಬೆಳೆದುಕೊಳ್ಳುತ್ತಿದ್ದರು. ಎಲ್ಲ ಸರಿತಪ್ಪುಗಳಿಗೂ ದೇವರು ದೆವ್ವದ ಹೆಸರಿನಲ್ಲಿ ಹೆದರಿಸಿ ಬೆಳೆಸಲಾಗುತ್ತಿತ್ತು.
ಮಗುವಿನ ಊಟದಲ್ಲಿ ಈ 5 ಅಂಶ ಮಿಸ್ ಆಗದಿರಲಿ!
ತಂದೆತಾಯಿ ದೇವರು. ಅವರಿಗೆ ಬೈದರೆ, ನೋವು ಮಾಡಿದರೆ ನರಕ ಪ್ರಾಪ್ತಿ ಎಂಬ ಭಯ ಹುಟ್ಟಿಸಲಾಗುತ್ತಿತ್ತು. ತಂದೆತಾಯಿಯ ಋಣ ತೀರಿಸೋಕೆ ಒಂದು ಜನ್ಮ ಸಾಲದಾದರೂ ಅವರು ಇರುವವರೆಗೆ ಗಂಡುಮಕ್ಕಳು ಅವರನ್ನು ನೋಡಿಕೊಳ್ಳುವುದು ಕರ್ತವ್ಯ, ಸೇವೆ ಮಾಡಿದರೆ ಪುಣ್ಯ, ಸ್ವರ್ಗ ಪ್ರಾಪ್ತಿ ಎಂದೆಲ್ಲ ಭಯಭಕ್ತಿ ಹುಟ್ಟಿಸಲಾಗುತ್ತಿತ್ತು.
ಬೇವಿನಕಡ್ಡಿ, ಹರಳುಪ್ಪಿನ ಬದಲು ಪೇಸ್ಟ್ ಬಂತು, ಮಕ್ಕಳ ಹಲ್ಲು ಗಟ್ಟಿ ಅಯ್ತಾ?
ಸೋದರರು ಜಗಳವಾಡಿಕೊಂಡ್ರೆ ವಿಷಯ ಏನು, ತಪ್ಪು ಯಾರದು ನೋಡದೆ ಇಬ್ಬರಿಗೂ ಎರಡೇಟು ಕೊಟ್ಟು ಕೂಗಾಡಿ ಸುಮ್ಮನಾಗುತ್ತಿದ್ದ ಅಪ್ಪ. ಮನೆ ತುಂಬ ಮಕ್ಕಳು ತುಂಬಿರುವಾಗ ವಿಚಾರಿಸಲು ವ್ಯವಧಾನವಾದರೂ ಎಲ್ಲಿಂದ ಬರಬೇಕು? ಪೆಟ್ಟು ತಿನ್ನದ ಮಕ್ಕಳು ಅಂದು ದುರ್ಬೀನು ಹಾಕಿ ಹುಡುಕಿದರೂ ಬಹುಷಃ ಸಿಗಲಿಕ್ಕಿಲ್ಲ. ನೀವೇನಾದರೂ ಅದೇ ಜನರೇಶನ್‌ನ ತಂದೆಯೋ ಮಗನೋ ಆಗಿದ್ದರೆ, ಹಾಗೆ ಪೆಟ್ಟು ಕೊಟ್ಟಿದ್ದಕ್ಕೇ/ತಿಂದಿದ್ದಕ್ಕೇ ನಾವು ಸರಿಯಾದ ದಾರಿಯಲ್ಲಿ ಸಾಗಲು ಸಾಧ್ಯವಾಯಿತು. ಕಿವಿ ಹಿಂಡಿ ಬುದ್ಧಿ ಹೇಳಿದ್ದರಿಂದ ನಾವೆಲ್ಲೂ ತಪ್ಪು ಹಾದಿ ಹಿಡಿಯಲಿಲ್ಲ ಎಂದು ಈ ಪೆಟ್ಟನ್ನು ಸಮರ್ಥಿಸಿಕೊಳ್ಳಬಹುದು. ಹೌದು, ಇರಬಹುದು. ಆದರೆ, ಭಯಭಕ್ತಿಯಿಂದ ಪೋಷಕರನ್ನು ಕರ್ತವ್ಯವೆಂಬಂತೆ ನೋಡಿಕೊಳ್ಳಲು ನೀವು ತರಬೇತಿ ಪಡೆದಿದ್ದಿರಿ, ಅದನ್ನೇ ಮಾಡಿದಿರಿ ಅಷ್ಟೇ!
ಅಪ್ಪುಗೆಯಲ್ಲಿದೆ ಬೆಚ್ಚಗಿನ ಸುಖ, ಸಂಬಂಧ ಬೆಸೆದರೆ ಇಲ್ಲ ದುಃಖ!
ನಂತರ ಒಂದು ಬದಲಾವಣೆಯ ಪರ್ವ. ಶಾಲೆಗಳು ಹೆಚ್ಚಾದವು. ವಿದ್ಯೆಯ ಬಗ್ಗೆ ಸ್ವಲ್ಪ ಸ್ವಲ್ಪವೇ ಅರಿವು ಬೆಳೆಯತೊಡಗಿತು. ವಿದ್ಯೆ ಪಡೆಯುವುದರಿಂದ ಚೆನ್ನಾಗಿ ಸಂಪಾದಿಸಬಹುದಾದ ಹುದ್ದೆಗಳು ಸೃಷ್ಟಿಯಾದವು. ಈ ಹಂತದಲ್ಲಿ ಹಲವರು ಫಾರಿನ್‌ಗೆ ಹೋದವರು ಹಿಂದಿರುಗಲಿಲ್ಲ. ವಿದ್ಯೆ ಕೊಟ್ಟ ತಂದೆತಾಯಿಯನ್ನು ವಿಚಾರಿಸಿಕೊಳ್ಳಲಿಲ್ಲ. ಕೆಲವರು ಅವರ ಖರ್ಚಿಗೆ ಕಳಿಸಿ ಕರ್ತವ್ಯ ಮುಗಿಯಿತೆಂಬಂತೆ ಸುಮ್ಮನಾದರು. ಫಾರಿನ್‌ಗೆ ಹೋದ ಮಕ್ಕಳು ಹಿಂದಿರುಗುವುದಿಲ್ಲ ಎಂಬ ಹತ್ತು ಹಲವು ಕತೆಗಳು ಸುತ್ತಮುತ್ತ ಕೇಳಿಬರತೊಡಗಿದವು. ಆದರೆ ಇದೂ ಕೆಲ ವರ್ಷಗಳಷ್ಟೇ. ನಿಧಾನವಾಗಿ ಫಾರಿನ್ ಎಂಬುದು ಹತ್ತಿರವಾಯಿತು.
ಹೆಣ್ಣುಮಕ್ಕಳನ್ನು ವಿದೇಶದಲ್ಲಿರುವ ಗಂಡಿಗೆ ಕೊಡಲು ಪೋಷಕರು ಮುಗಿ ಬೀಳತೊಡಗಿದರು. ಅಳಿಯನ ಸಂಬಳ ಚೆನ್ನಾಗಿರುತ್ತದೆಂಬ ಯೋಚನೆ ಒಂದು ಕಡೆಯಾದರೆ, ತಮಗೂ ಒಮ್ಮೆ ಹೋಗಿ ಬರಲು ಅವಕಾಶವಾಗಬಹುದೆಂಬ ದೂರಾಲೋಚನೆ ಮತ್ತೊಂದು ಕಡೆ.
ಆದರೆ ಈಗ ಹಾಗಿಲ್ಲ. ಅಪ್ಪ ಅಮ್ಮ ಮಕ್ಕಳನ್ನು ಗೆಳೆಯರಂತೆ ಪ್ರೀತಿಯಿಂದ ಬೆಳೆಸ್ತಾರೆ. ಕೇಳಿದ್ದೆಲ್ಲ ಕೊಡಿಸಿ, ಕಲಿಸ್ತಾರೆ. ಅವರು ಭಯಭಕ್ತಿ ಹೇಳಿಕೊಡಲ್ಲ. ಆದರೆ, ಅವರ ವರ್ತನೆಯಿಂದಲೇ ಈಗ ಮಕ್ಕಳು ಅವರ ಜವಾಬ್ದಾರಿಯನ್ನು ಪ್ರೀತಿಯಿಂದ ಹೆಗಲಿಗೆ ಹಾಕಿಕೊಳ್ತಾರೆ. ಆಸ್ತಿಯ ಆಸೆ ಮಕ್ಕಳಿಗಿಲ್ಲ. ಬದಲಿಗೆ ತಮಗಾಗಿ ಪೋಷಕರು ಪ್ರೀತಿ ತೋರಿಸಿದ್ದನ್ನು, ಕಷ್ಟ ಪಟ್ಟಿದ್ದನ್ನು ಗಮನಿಸಿ, ಶಿಕ್ಷಣ, ಮದುವೆಗೆ ತಾವೇ ಲೋನ್ ಮಾಡಿಕೊಂಡು ಬದುಕು ಕಟ್ಟಿಕೊಳ್ತಾರೆ. ಬುದ್ಧಿ ಬಂದ ಬಳಿಕ ಪೋಷಕರಿಗೆ ಹೊರೆಯಾಗಿರಲು ಬಯಸಲ್ಲ. ಅಷ್ಟೇ ಅಲ್ಲ, ಮದುವೆಯ ಬಳಿಕವೂ ಅಪ್ಪಅಮ್ಮನ ಜವಾಬ್ದಾರಿ ವಹಿಸಿಕೊಳ್ಳಲು ಹುಡುಗರಷ್ಟೇ ಹುಡುಗಿಯರೂ ಸಿದ್ಧವಿದ್ದಾರೆ.
ಹುಡುಗಿಯರನ್ನು ಫಾರಿನ್ ಹುಡುಗನಿಗೆ ಕೊಡುವ ಅಗತ್ಯ ಈಗ ಇಲ್ಲ. ಏಕೆಂದರೆ ಹೆಣ್ಣುಮಕ್ಕಳೇ ಓದಿಗಾಗಿ, ಉದ್ಯೋಗಕ್ಕಾಗಿ, ಕಡೆಗೆ ಟ್ರಿಪ್‌ಗಾಗಿ ಕೂಡಾ ಯಾರ ಅವಲಂಬನೆಯೂ ಇಲ್ಲದೆ ವಿದೇಶಕ್ಕೆ ಹೋಗಿಬರಬಲ್ಲರು. ಪೋಷಕರಿಗೂ ದೇಶಗಳನ್ನು ತೋರಿಸುವಾಸೆ ಅವರಿಗೆ. ಮದುವೆಗೂ ಮುಂಚೆಯೇ ಅವರು ಪ್ರತಿಯೊಂದನ್ನೂ ಯೋಚಿಸುತ್ತಾರೆ. ಬದುಕಿನ ಕೊನೆ ಹಂತದವರೆಗಿನ ಯೋಜನೆ ರೂಪಿಸುತ್ತಾರೆ. ಅಪ್ಪಅಮ್ಮನಿಗಾಗಿ ಹೆಲ್ತ್ ಇನ್ಶೂರೆನ್ಸ್ ಮಾಡಿಸುತ್ತಾರೆ. ಅವರ ಖಾತೆಗೆ ಪ್ರತಿ ತಿಂಗಳೂ ಸ್ವಲ್ಪ ಹಣ ಹಾಕಿ ಆರಾಮಾಗಿರುವಂತೆ ಹೇಳುತ್ತಾರೆ.
ಪೋಷಕರೂ ಅಷ್ಟೇ, ವಯಸ್ಸಾಯಿತೆಂದು ತೀರಾ ಅವಲಂಬಿತರಾಗಿರೋಲ್ಲ. ಅವರಿಗೂ ಒಂದು ಮಟ್ಟಿನ ವಿದ್ಯೆ ಇದೆ. ಸಾಧ್ಯವಾದಷ್ಟು ವರ್ಷ ದುಡಿಯುತ್ತಾರೆ. ಮುಂದಾಲೋಚನೆ ಮಾಡಿಕೊಂಡು ಸೇವಿಂಗ್ಸ್ ಮಾಡಿಟ್ಟುಕೊಳ್ಳುತ್ತಾರೆ. ಮಕ್ಕಳಿಗಾಗಿಯೂ ಕೈಲಾದ ಮಟ್ಟಿಗೆ ಮಾಡಿಡುತ್ತಾರೆ. ಒಟ್ಟಿನಲ್ಲಿ ಇಬ್ಬರೂ ಒಬ್ಬರು ಮತ್ತೊಬ್ಬರ ಬಗ್ಗೆ ಯೋಚಿಸುತ್ತಾರೆ, ಪ್ರೀತಿಸುತ್ತಾರೆ. ಇನ್ನೇನು ತಾನೇ ಬೇಕು? ಈಗ ಹೇಳಿ, ಈಗಿನ ಕಾಲವೇ ಬೆಸ್ಟ್ ಅಲ್ಲವೇ?