ಬಾಂಧವ್ಯ ಮಧುರವಾಗಿರಲು ಇಲ್ಲಿವೆ ಕೆಲಪು ಸಿಂಪಲ್ ಟೆಕ್ನಿಕ್ಸ್!

By Suvarna NewsFirst Published Jul 16, 2022, 11:32 AM IST
Highlights

ಸಂಬಂಧದಲ್ಲಿ ತಣ್ಣಗಿನ ಮನಸ್ಥಿತಿ ಸೃಷ್ಟಿಯಾದರೆ ಸಂಗಾತಿಗಳ ನಡುವೆ ದೂರ ಹೆಚ್ಚಾಗುತ್ತದೆ. ಎಂದೆಂದಿಗೂ ಮತ್ತೆ ಸೇರದಂತೆ ದೂರ ಹೆಚ್ಚಾಗಬಹುದು. ಹೀಗಾಗಿ, ಆರಂಭದಲ್ಲೇ ಎಚ್ಚರಿಕೆ ವಹಿಸಬೇಕು. ಸಂಗಾತಿಯ ಭಾವನೆಗಳನ್ನು ಅರಿತು ಅವರೊಂದಿಗೆ ಮಾತುಕತೆ ನಡೆಸಬೇಕು.

ಸಂಬಂಧಗಳು ಯಾವಾಗಲೂ ಸುಮಧುರವಾಗಿಯೇ ಇರುವುದಿಲ್ಲ. ಹಿಂದೊಮ್ಮೆ ಅತಿಯಾಗಿ ಪ್ರೀತಿಸಿದ್ದ ವ್ಯಕ್ತಿಯೊಂದಿಗೇ ಭಿನ್ನಾಭಿಪ್ರಾಯ ಮೂಡುವುದು ವಿಚಿತ್ರವೆನಿಸಿದರೂ ಬದುಕಿನ ಸತ್ಯವೆನ್ನುವುದು ಅನುಭವಕ್ಕೆ ಬರುತ್ತಿರುತ್ತದೆ. ಅವರನ್ನು ಬಿಟ್ಟು ಬದುಕುವುದು ಸಾಧ್ಯವಿಲ್ಲ ಎಂದುಕೊಂಡಿದ್ದ ಮನಸ್ಸು ಕ್ರಮೇಣ ಅವರು ದೂರವಿದ್ದರೆ ಸಾಕು ಎಂದು ಬಯಸುವಂತೆ ಆಗಿಬಿಡುತ್ತದೆ. ಹೀಗಾಗಿ, ಸಂಬಂಧವನ್ನು ನಾಜೂಕಾಗಿ ನಿಭಾಯಿಸಬೇಕಾಗುತ್ತದೆ. ಸಂಬಂಧದಲ್ಲಿ ಏನಾದರೂ ಕೊಸರು ಕಂಡುಬಂದಾಗ ಕೆಲವರು ಅದನ್ನು ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ, ನೋವುಣ್ಣುತ್ತಾರೆ. ಸಂಗಾತಿ ಹಾಗೂ ತಮ್ಮ ನಡುವೆ ದೊಡ್ಡದೊಂದು ಗೋಡೆ ಎಬ್ಬಿಸಿಕೊಳ್ಳುತ್ತಾರೆ. ಈ ಮೂಲಕ ಸಮಸ್ಯೆಯನ್ನು ಇನ್ನಷ್ಟು ಜಾಸ್ತಿ ಮಾಡಿಕೊಳ್ಳುತ್ತಾರೆ. ಮನಸ್ತಾಪವಾದರೆ ಅದನ್ನು ಸ್ವಲ್ಪ ಸಮಯದಲ್ಲೇ ಮರೆಯುವುದಿಲ್ಲ, ಮರೆತು ಮೊದಲಿನಂತೆ ಆಗುವುದಿಲ್ಲ. ಅಂಥವರು ಇಂತಹ ಸನ್ನಿವೇಶದಲ್ಲಿ ತಮ್ಮಷ್ಟಕ್ಕೆ ತಾವೇ ಹೆಪ್ಪುಗಟ್ಟಿದಂತೆ ಆಗಿಬಿಡುತ್ತಾರೆ. ಮನಸ್ಸಿನಲ್ಲಿ ಪ್ರತ್ಯೇಕತೆ ಮೂಡಿಸಿಕೊಂಡು ತಮ್ಮಷ್ಟಕ್ಕೆ ತಾವಿರಲು ಆರಂಭಿಸುತ್ತಾರೆ. ಇದನ್ನು ನಿಭಾಯಿಸುವುದು ಹೇಗೆ? ಈ ರೀತಿಯ ಪ್ರತಿಕ್ರಿಯೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ಇರಬೇಕು ಎಂದಿಲ್ಲ. ನಮಗೆ ತಿಳಿಯದೇ ಅಂಥದ್ದೊಂದು ಶೀತಲತೆ ಅಥವಾ ಕಲ್ಲಿನಂತಹ ಮನಸ್ಥಿತಿ ಸೃಷ್ಟಿಯಾಗಬಹುದು. ಆದರೆ, ಸಂಬಂಧದಲ್ಲಿ ಮತ್ತೆ ಚಿಗುರು ಮೂಡಲು ನಾವು ಉದ್ದೇಶಪೂರ್ವಕವಾಗಿ ಪ್ರಯತ್ನ ಪಡಬೇಕು. ಇಲ್ಲವಾದಲ್ಲಿ ಸಂಬಂಧ ಖಂಡಿತವಾಗಿ ಹಳಸುತ್ತದೆ.

ಮನಸ್ಸಿಗೆ ತೀವ್ರವಾಗಿ ನೋವಾದಾಗ (Pain), ಆಘಾತ (Shock)ವಾದಾಗ ಹೀಗಾಗುವುದು ಸಹಜ. ಆದರೆ, ನಮ್ಮ ಮನಸ್ಸನ್ನು ನಾವೇ ಸಂತೈಸಿಕೊಳ್ಳಬೇಕು. ಸಂಗಾತಿ (Partner)ಯೊಂದಿಗೆ ಭಾವನಾತ್ಮಕ (Emotional) ಆಪ್ತತೆ (Intimacy) ಉಂಟಾಗದಂತೆ, ಅಂತಹ ಅನುಭವ ಆಗದಂತೆ ನಮ್ಮನ್ನು ನಾವೇ ತಡೆದುಕೊಳ್ಳಲು ಯತ್ನಿಸುವ ಅಗತ್ಯವಿಲ್ಲ. ಒಂದೊಮ್ಮೆ ನಿಮ್ಮ ಸಂಗಾತಿಗೆ ಇಂಥದ್ದೊಂದು ಅಭ್ಯಾಸವಿದ್ದರೆ ಅವರೊಂದಿಗೆ ನೀವಾಗಿಯೇ ಮಾತುಕತೆ (Conversation) ಆರಂಭಿಸಬೇಕಾಗುತ್ತದೆ. ಹಾಗೆಯೇ ಬಿಡುವುದು ಸರಿಯಲ್ಲ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ಅರಿತುಕೊಳ್ಳಿ.

ಇದನ್ನೂ ಓದಿ: ಯಾವತ್ತೂ ತೋರದ ಪ್ರೀತಿ ಗಂಡ ತೋರಿಸದರೆ ಹೆಂಡತಿಗೇಕೆ ಡೌಟ್?

·       ಸಂಗಾತಿಯ ಭಾವನೆಗಳನ್ನು (Feelings) ಒಪ್ಪಿಕೊಳ್ಳಿ
ನಿಮ್ಮ ಸಂಗಾತಿ ನಿಮ್ಮಿಂದ ಭಾವನಾತ್ಮಕವಾಗಿ ದೂರವಾಗುವಂತೆ, ನಿಮ್ಮಿಬ್ಬರ ನಡುವೆ ಗೋಡೆ (Wall) ಎದ್ದಿರುವಂತೆ ವರ್ತಿಸುತ್ತಿದ್ದರೆ ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಅವರ ಭಾವನೆಗಳನ್ನು ಒಪ್ಪಿಕೊಳ್ಳಿ. “ಅವರಿಗೆ ಸೊಕ್ಕು, ಅದಕ್ಕಾಗಿ ಹಾಗೆ ಮಾಡುತ್ತಾರೆ, ಸೊಕ್ಕು ಕಡಿಮೆಯಾದರೆ ಸರಿಹೋಗುತ್ತಾರೆ’ ಎನ್ನುವ ಧೋರಣೆ ಬೇಡ. ಅದು ಖಂಡಿತವಾಗಿಯೂ ಸೊಕ್ಕಿನ ಮನಸ್ಥಿತಿಯಲ್ಲ. ಅದು ಕುಗ್ಗಿರುವ ಮನಸ್ಸು ಏನೂ ಬೇಡ, ಯಾರೂ ಬೇಡವೆಂದು ತಳ್ಳುವ ಸ್ಥಿತಿ. ಹೀಗಾಗಿ, ನಿಮ್ಮಿಂದ ನೋವಾಗಿದ್ದರೆ ಅರಿತುಕೊಳ್ಳಿ. ಯಾವ ಮಾತು, ಧೋರಣೆಯಿಂದ (Behaviour) ಹೀಗಾಗಿದೆ ಎನ್ನುವುದನ್ನು ತಿಳಿದು ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಿ. ಅಲ್ಲದೆ, ಅವರೊಂದಿಗೆ ನಿಮ್ಮ ಉದ್ದೇಶದ ಕುರಿತು ಸ್ಪಷ್ಟಪಡಿಸಿ. ಅವರನ್ನು ಋಣಾತ್ಮಕವಾಗಿ ಟೀಕೆ ಮಾಡಬೇಡಿ.  

·       ಹೊಂದಾಣಿಕೆಗೆ (Adjustment) ನೀವೇ ಮುಂದಾಗಬೇಕೇ?
ಒಂದೊಮ್ಮೆ ನಿಮ್ಮ ಸಂಗಾತಿ ನಿಮ್ಮೊಂದಿಗೆ ಮಾತನಾಡುವುದನ್ನು ಅವಾಯ್ಡ್ ಮಾಡುತ್ತಿದ್ದರೆ ಸದಾಕಾಲ ನೀವೇ ಅದಕ್ಕೆ ಮುಂದಾಗಬೇಕೆಂದಿಲ್ಲ. ಸನ್ನಿವೇಶವನ್ನು ನಿಭಾಯಿಸುವ (Maintain) ಜವಾಬ್ದಾರಿ ನಿಮ್ಮೊಬ್ಬರದೇ ಅಲ್ಲ. ನಿಮ್ಮ ನಡುವೆ ನಡೆದಿರುವ ಸಂಘರ್ಷದ (Conflict) ಬಗ್ಗೆ ಮಾತುಕತೆ ನಡೆಸಬೇಕು ಮತ್ತು ಅದಕ್ಕೆ ಯಾರಾದರೂ ಒಬ್ಬರು ಮುಂದಾಗಲೇ ಬೇಕು. ಆದರೆ, ಪ್ರತಿಬಾರಿಯೂ ನೀವೇ ಅದನ್ನು ಮಾಡುತ್ತಿರುವುದರಿಂದ ಅವರಿಗೆ ಪರಿಸ್ಥಿತಿ ಅರ್ಥವಾಗುವುದಾದರೂ ಹೇಗೆ? ನಿಮಗೆಷ್ಟೇ ಬೇಸರವಾಗುತ್ತಿದ್ದರೂ ಅವರಿಂದ ದೂರವೇ ಇದ್ದುಬಿಡಿ. ಹುಳಿಯಾದ ಸಾಂಗತ್ಯವನ್ನು (Relationship) ಎಷ್ಟೆಂದು ಸರಿಪಡಿಸಲು ಯತ್ನಿಸುತ್ತೀರಿ? ಆದರೆ, ಪ್ರತಿಬಾರಿ ನಿಮ್ಮಿಂದಲೇ ತಪ್ಪುಗಳಾಗುತ್ತಿದ್ದರೆ ಮಾತ್ರ ಸಂಬಂಧವನ್ನು ಸರಿಪಡಿಸುವ ಸಂಪೂರ್ಣ ಜವಾಬ್ದಾರಿ ನಿಮ್ಮದೇ ಆಗುತ್ತದೆ ಎನ್ನುವುದು ನೆನಪಿರಲಿ.

·       ಏಕಾಏಕಿ ಸಂಗಾತಿ ಬದಲಿಸಲು (Change) ಯತ್ನಿಸಬೇಡಿ
ಸಂಗಾತಿ ಕಲ್ಲುಮನಸ್ಸನ್ನು (Stonewall) ಹೊಂದಿದರೂ ಸಂಗಾತಿಯನ್ನು ಬದಲಿಸುವುದು ನಿಮ್ಮ ಉದ್ದೇಶವಾಗದಿರಲಿ. ಬದಲಿಗೆ, ವರ್ತನೆಯ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಿ.

ಇದನ್ನೂ ಓದಿ: ಗಂಡ ಇಷ್ಟವಾಗುತ್ತಿಲ್ಲ, 10 ವರ್ಷ ಚಿಕ್ಕವನೊಂದಿಗೆ ಸಂಬಂಧ ಇಟ್ಟು ಕೊಳ್ಳೋದು ತಪ್ಪಾ?

ಆಪ್ತಸಮಾಲೋಚಕರಲ್ಲಿ ಚರ್ಚಿಸಿ (Discuss with Counsellor)
ಸಂಬಂಧದಲ್ಲಿ ಒಮ್ಮತ ಮೂಡದೇ ಇರುವಾಗ, ಪರಸ್ಪರ ದೂರ ಹೆಚ್ಚುತ್ತಿರುವಾಗ ಆಪ್ತಸಮಾಲೋಚಕರೊಂದಿಗೆ ಸಮಾಲೋಚನೆ ನಡೆಸುವುದು ಅತ್ಯುತ್ತಮ. ಆಗ ಮಾಡಿಕೊಳ್ಳಬೇಕಾದ ಸುಧಾರಣೆಯ ಬಗ್ಗೆ ಅರಿವಾಗುತ್ತದೆ ಅಥವಾ ಪರಸ್ಪರ ದೂರವಾಗುವ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.    

click me!