ಮಾತು ಮಾತಿಗೂ ಗುರ್ ಎನ್ನುವ ಮಕ್ಕಳಿದ್ದಾರೆ. ಕೇಳಿದ್ದು ಸಿಕ್ಕಿಲ್ಲ, ಬೇಡಿಕೆಯಿಟ್ಟಿದ್ದನ್ನು ಕೊಡಿಸಿಲ್ಲವೆಂದ್ರೆ ಕೋಪ ನೆತ್ತಿಗೇರುತ್ತದೆ. ಕೋಪಗೊಂಡ ಮಕ್ಕಳನ್ನು ಶಾಂತಗೊಳಿಸುವುದು ಸವಾಲಿನ ಕೆಲಸ. ಕೆಲ ಮಕ್ಕಳು ರಸ್ತೆಯಲ್ಲೇ ಬಿದ್ದು ಉಳ್ತಿರುತ್ತಾರೆ. ಚಿಕ್ಕವರಿರುವಾಗ ಇದು ತಮಾಷೆ ಎನ್ನಿಸುತ್ತದೆ. ದೊಡ್ಡವರಾಗ್ತಿದ್ದರೆ ಅಸಹ್ಯವೆನ್ನಿಸುತ್ತದೆ. ಹಾಗಾಗಿ ಬಾಲ್ಯದಲ್ಲಿಯೇ ಮಕ್ಕಳನ್ನು ತಿದ್ದಬೇಕು.
ಮಕ್ಕಳೆಂದ್ರೆ (Children) ಮುಗ್ದತೆ (Innocence) ಯ ಪ್ರತೀಕ. ಮಕ್ಕಳಿಗೆ ತಮ್ಮ ಯಾವುದೇ ಭಾವನೆ (Emotion) ಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಅವರ ಭಾವನೆಗಳು ಸುಲಭವಾಗಿ ಗೋಚರಿಸುತ್ತವೆ. ಖುಷಿ (Enjoy) ಯಾದ ತಕ್ಷಣ ನಗುವ ಮಕ್ಕಳು ಬೇಸರವಾದಾಗ ಅದನ್ನು ಅಳು ಅಥವಾ ಕೋಪದ ಮೂಲಕ ತೋರಿಸ್ತಾರೆ. ಮಕ್ಕಳು ಅನೇಕ ಬಾರಿ ಸಣ್ಣ –ಸಣ್ಣ ವಿಷ್ಯಕ್ಕೂ ಕೋಪಗೊಳ್ತಾರೆ. ನಿಮ್ಮ ಮಕ್ಕಳು ಕೂಡ ಹೆಚ್ಚು ಭಾವನಾತ್ಮಕವಾಗಿದ್ದರೆ, ಸಣ್ಣ ವಿಷ್ಯಕ್ಕೂ ಕೋಪಗೊಳ್ತಿದ್ದರೆ ಅದಕ್ಕೆ ಪಾಲಕರು ಅಸಮಾಧಾನಗೊಳ್ಬೇಕಾಗಿಲ್ಲ. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಂಡು ನೀವು ಅವರ ಕೋಪ ಕಡಿಮೆ ಮಾಡ್ಬೇಕಾಗುತ್ತದೆ. ಕೋಪಗೊಂಡ ಮಕ್ಕಳಿಗೆ ಹೊಡೆದು, ಬೈದು ಮಾಡುವ ಪಾಲಕರಿದ್ದಾರೆ. ಹಾಗೆ ಮಾಡುವುದ್ರಿಂದ ಮಕ್ಕಳ ಕೋಪ ಕಡಿಮೆಯಾಗುವುದಿಲ್ಲ. ಅವರು ತಮ್ಮ ಸಮಸ್ಯೆ ಏನು ಎಂಬುದನ್ನು ನಿಮ್ಮ ಮುಂದೆ ಹೇಳಲು ಅವರಿಗೆ ಅವಕಾಶ ನೀಡಿ, ಶಾಂತ ವಾತಾವರಣದಲ್ಲಿ ಅವರ ಸಮಸ್ಯೆಯನ್ನು ಕೇಳಿ ಅರ್ಥ ಮಾಡಿಕೊಳ್ಳಿ. ಇಂದು ಮಕ್ಕಳ ಕೋಪವನ್ನು ಪಾಲಕರಾದವರು ಹೇಗೆ ನಿಭಾಯಿಸಬೇಕು ಎಂಬುದನ್ನು ಹೇಳ್ತೇವೆ.
ಮಕ್ಕಳ ಕೋಪವನ್ನು ತಕ್ಷಣ ಶಮನಗೊಳಿಸಲು ಇಲ್ಲಿದೆ ಅವಕಾಶ (Easy steps to calm down children):
ಭಾವನೆಗಳನ್ನು ವ್ಯಕ್ತಪಡಿಸಲು ಕಲಿಸಿ : ಅನೇಕ ಮಕ್ಕಳಿಗೆ ತಮ್ಮ ಭಾವನೆಗಳನ್ನು ಬೇರೆಯವರ ಮುಂದೆ ಹೇಗೆ ಹೇಳ್ಬೇಕು ಎನ್ನುವುದು ಗೊತ್ತಿರುವುದಿಲ್ಲ. ಆಗ ಅವರು ಕೋಪಗೊಳ್ತಾರೆ. ನಿಮ್ಮ ಮಕ್ಕಳೂ ಇವರಲ್ಲಿ ಒಬ್ಬರಾಗಿದ್ದರೆ ಮೊದಲು ಮಕ್ಕಳಿಗೆ ತಮ್ಮ ಭಾವನೆಗಳನ್ನು ಹೇಗೆ ಹಂಚಿಕೊಳ್ಳಬೇಕು ಎಂಬುದನ್ನು ಕಲಿಸಿ. ಭಯವಿಲ್ಲದೆ ನಿಮ್ಮ ಮುಂದೆ ಎಲ್ಲವನ್ನೂ ಹೇಳಬಲ್ಲ ವಾತಾವರಣವನ್ನು ನೀವು ಸೃಷ್ಟಿಸಬೇಕು. ಜೊತೆಗೆ ಅವರ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡ್ತೇವೆ ಎಂದು ಪಾಲಕರು ಭರವಸೆ ನೀಡ್ಬೇಕು. ಕುಳಿತು ಮಕ್ಕಳ ಸಮಸ್ಯೆ ಆಲಿಸಬೇಕು. ಆಗ ಮಾತ್ರ ಮಕ್ಕಳು ಭಾವನೆ ಹೊರಹಾಕ್ತಾರೆ.
ಇದನ್ನೂ ಓದಿ: ಮಕ್ಕಳನ್ನು ಈ ರೀತಿ ಬೆಳೆಸ್ಬೇಡಿ, ಸಿಕ್ಕಾಪಟ್ಟೆ ಹಠಮಾರಿಗಳಾಗ್ತಾರೆ
ಕೋಪಗೊಂಡ ಮಕ್ಕಳನ್ನು ಶಾಂತಗೊಳಿಸುವ ಮಾರ್ಗ : ಬಹುತೇಕ ಮಕ್ಕಳು ಕೋಪಗೊಂಡಾಗ ಕೈಗೆ ಸಿಕ್ಕ ವಸ್ತುಗಳನ್ನು ಹೊರಗೆ ಎಸೆಯುತ್ತಾರೆ. ಇಲ್ಲವೆ ಮುಂದಿರುವ ವ್ಯಕ್ತಿಗೆ ಹೊಡೆಯುತ್ತಾರೆ. ಹೀಗೆ ಮಾಡುವ ಬದಲು ಕೋಪ ಬಂದ ನಂತ್ರ ಪೇಂಟಿಂಗ್ ಮಾಡುವುದು, ಪುಸ್ತಕ ಓದುವುದು ಅಥವಾ ಬೇರೆ ಯಾವುದಾದ್ರೂ ಒಳ್ಳೆ ಕೆಲಸ ಮಾಡುವಂತೆ ಅವರಿಗೆ ಸಲಹೆ ನೀಡಿ. ಇದ್ರಿಂದ ಮನಸ್ಸು ಬೇರೆಡೆಗೆ ಹೋಗುವುದ್ರಿಂದ ಕೋಪ ಶಮನವಾಗುತ್ತದೆ.
ಕೋಪ ನಿಯಂತ್ರಣ ಕಲಿಸಿ : ಕೋಪದ ಕೈಗೆ ಬುದ್ದಿ ಕೊಡ್ಬಾರದು ಎಂಬ ಮಾತಿದೆ. ಕೋಪದಲ್ಲಿ ಯಾವುದೇ ಕೆಲಸವನ್ನಾಗ್ಲಿ, ನಿರ್ಣಯವನ್ನಾಗ್ಲಿ ತೆಗೆದುಕೊಳ್ಳಬಾರದು. ಮಕ್ಕಳಿಗೆ ಕೋಪದಿಂದಾಗುವ ನಷ್ಟವನ್ನು ವಿವರಿಸಿ. ಕೋಪ ನಿಯಂತ್ರಣ ಹೇಗೆ ಮಾಡ್ಬೇಕೆಂದು ಹೇಳಿ. ಕೋಪ ಬಂದಾಗ ದೀರ್ಘ ಉಸಿರು ತೆಗೆದುಕೊಳ್ಳುವಂತೆ, ನೀರು ಕುಡಿಯುವಂತೆ ಅಥವಾ ಒಂದರಿಂದ 10ರವರೆಗೆ ಎಣಿಸುವಂತೆ ಅಥವಾ ವಾಕ್ ಮಾಡುವಂತೆ ಅವರಿಗೆ ಕಲಿಸಿ.
ಇದನ್ನೂ ಓದಿ: ಮಾತು ಮಾತಿಗೆ ಮಕ್ಕಳಿಗೆ ಏಟು ನೀಡುವ ಪಾಲಕರೇ ಇದನ್ನೋದಿ..
ಕೋಪಕ್ಕೆ ಸಿಹಿ ತಿಂಡಿ ಬೆಸ್ಟ್: ಕೋಪಗೊಂಡಿರುವ ಮಗುವನ್ನು ಶಾಂತಗೊಳಿಸಲು ನೀವು ಸಿಹಿ ತಿಂಡಿ ನೆರವು ಪಡೆಯಬಹುದು. ನಿಮ್ಮ ಮಗುವಿಗೆ ಇಷ್ಟವಾಗುವ ಸಿಹಿ ತಿಂಡಿಯನ್ನು ಮಗುವಿಗೆ ನೀಡ್ಬೇಕು. ಕ್ಯಾಂಡಿ ಅಥವಾ ಚಾಕೋಲೇಟ್ ಬೆಸ್ಟ್ ಆಯ್ಕೆ.
ಅಪ್ಪುಗೆ: ಇದು ಕೂಡ ಮಕ್ಕಳ ಕೋಪವನ್ನು ತಣಿಸುತ್ತದೆ. ಅವರು ಬೇಗ ಕರಗುತ್ತಾರೆ. ಒಂದು ಪ್ರೀತಿಯ ಅಪ್ಪುಗೆ ಅವರ ಕೋಪವನ್ನು ಮರೆಸಬಹುದು.
ಕೊಟ್ಟು ಕಲಿಸಬೇಡಿ : ಅನೇಕ ಪಾಲಕರು ಮಕ್ಕಳು ಕೇಳಿದ್ದೆಲ್ಲವನ್ನೂ ನೀಡ್ತಾರೆ. ಮಕ್ಕಳಿಗೆ ಇದು ಅಭ್ಯಾಸವಾಗಿರುತ್ತದೆ. ಪಾಲಕರ ಸಮಸ್ಯೆಯ ಅರಿವು ಅವರಿಗಿರುವುದಿಲ್ಲ. ಪಾಲಕರು ಹೇಳಿದ್ದು ಕೊಡಿಸಿಲ್ಲವೆಂದಾಗ ಕೋಪ ಮಾಡಿಕೊಳ್ತಾರೆ. ಹಾಗಾಗಿ ಪ್ರತಿ ಬಾರಿ ಮಕ್ಕಳು ಬೇಡಿಕೆಯಿಟ್ಟಾಗೆಲ್ಲ ಅದನ್ನು ತರಬೇಡಿ. ಅದರಿಂದ ಲಾಭವಿದ್ಯಾ? ನಷ್ಟವಿದ್ಯಾ? ಈಗ ಅಗತ್ಯವಿದೆಯಾ ಎಂಬುದನ್ನೆಲ್ಲ ಅವರಿಗೆ ವಿವರಿಸಿ.