ತಲೆಮಾರಿನ ಅಂತರ ಎಂದೇ ಸಾಮಾಜಶಾಸ್ತ್ರಜ್ಞರು ಕರೆಯುವ ತಾಯಿ-ಮಕ್ಕಳ, ತಂದೆ-ಮಕ್ಕಳ ನಡುವಿನ ಆಲೋಚನಾ ಕ್ರಮದ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದು. ಪುಟ್ಟಕಂದನಿಗೂ ಪುಟ್ಟತಾಯಿಗೂ ಇರುವ ಜನರೇಷನ್ ಗ್ಯಾಪ್ ಎಲ್ಲಿದೆ ಎಂದು ಹುಡುಕಿದರೆ, ಅದು ತಂತ್ರಜ್ಞಾನದಲ್ಲಿದೆ ಅನ್ನುತ್ತದೆ ದಿನೇ ದಿನೇ ಬದಲಾಗುತ್ತಿರುವ ಉಪಕರಣಗಳು. ಹೌದೇ? ನೀವಿದನ್ನು ಓದಿ!
-ಡಾ. ಸುವರ್ಣಿನೀ ಕೊಣಲೆ
ಮಗ ಬೇಗ ಮಲಗಿದ ದಿನ ಅವನ ಮಾತುಗಳನ್ನೂ, ಉತ್ತರಿಸಲು ಸಾಧ್ಯವಾಗದೇ ಹೋಗುವ ಅವನ ಪ್ರಶ್ನೆಗಳನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅವನ ಪ್ರಶ್ನೆಗಳು ಕೆಲವೊಮ್ಮೆ ನನ್ನ ಬಾಲ್ಯವನ್ನೂ, ಮತ್ತೆ ಕೆಲವೊಮ್ಮೆ ನನ್ನ ಅಜ್ಞಾನವನ್ನೂ ನೆನಪಿಸುತ್ತವೆ. ನನ್ನ ಅಜ್ಞಾನವನ್ನು ಅವನೆದುರು ಪ್ರದರ್ಶಿಸದೇ ಇರುವುದೇ ಸೂಕ್ತ ಎಂದು ಸುಮ್ಮನಿದ್ದುಬಿಡುತ್ತೇನೆ ಕೆಲವು ಸಲ. ಇನ್ನು ನನ್ನ ಬಾಲ್ಯದ ಕಥೆಗಳಲ್ಲಿ ಅವನಿಗೆ ಆಸಕ್ತಿ ಇದೆಯಾದರೂ ಹಲವು ವಿಷಯಗಳನ್ನು ಈ ಆಲ್ಫಾ ಜನರೇಷನ್ನಿನವರಿಗೆ ಅರ್ಥ ಮಾಡಿಸುವುದು ಕಷ್ಟ. ಮಿಲೇನಿಯಲ್ ಗಳು ಎಂಬ ಹಣೆಪಟ್ಟಿಹೊತ್ತ ನಾವು ಈಗ ಓಲ್ಡ್ ಸ್ಕೂಲ್ ಎನಿಸಿಕೊಳ್ಳುವ ಕಾಲ ಬಂದಿದೆ. ಅಥವಾ ನಾವು ಎಷ್ಟೇ ಅಪ್ಡೇಟಾದರೂ ನಮ್ಮ ಮಕ್ಕಳೆದುರು ನಾವು ಓಲ್ಡ್-ಸ್ಕೂಲೇ. ಇದೇ ಅಲ್ಲವೇ ಜನರೇಷನ್ ಗ್ಯಾಪು. ಅಜ್ಜ ಹಳಬ ಎಂದು ಅಪ್ಪನಿಗೆ ಅನ್ನಿಸುವುದು. ಅಪ್ಪ ಹಳಬ ಎಂದು ಮಗನಿಗೆ. ಮಗ ಹಳಬ ಎನ್ನುವ ಮೊಮ್ಮಗ. ಥಿಯರಿ ಆಫ್ ರಿಲೇಟಿವಿಟಿ.
undefined
ನಾನು ಅಚ್ಚರಿಯಿಂದ ನೋಡುತ್ತಿದ್ದ ನನ್ನ ಶಾಲಾ ದಿನಗಳ ಅಟ್ಲಾಸ್ ಪುಸ್ತಕಗಳನ್ನು ಮಗನಿಗೆ ತೋರಿಸಿದೆ. ಯಾವುದೋ ಮ್ಯೂಸಿಯಮ್ಮಿನ ವಸ್ತು ಎನ್ನುವಂತೆ ಪುಟಗಳನ್ನು ತಿರುವಿದ. ಪಕ್ಕಕ್ಕಿಟ್ಟ. ಜಿಪಿಎಸ್ ಕಾಲದಲ್ಲಿ ಹುಟ್ಟಿದವನಿಗೆ ಅಟ್ಲಾಸ್ ಆಸಕ್ತಿ ಮೂಡಿಸದೇ ಇದ್ದುದು ಅಚ್ಚರಿಯ ವಿಚಾರವೇ ಅಲ್ಲ ಎನಿಸಿ ನಗು ಬಂತು.
ಮಗುವಿಗೆ ಪಾಲಕರು ನೀಡಬೇಕಿರೋದು ಲಂಚವೋ, ಬಹುಮಾನವೋ?
ಒಂದಾನೊಂದು ಕಾಲದಲ್ಲಿ ಊರಿನಲ್ಲಿ ಕರೆಂಟೇ ಇರಲಿಲ್ಲ. ಸಂಜೆ ಆರುವರೆ ಏಳರ ನಂತರ ಸೀಮೆಎಣ್ಣೆಯ ದೀಪಗಳೇ ಗತಿ. ಕರೆಂಟೇ ಇಲ್ಲದೆ ಬದುಕುವುದು ಹೇಗೆ ಸಾಧ್ಯ ಎಂಬಂತೆ ನೋಡಿದ್ದ! ಹುಟ್ಟಿಐದು ತಿಂಗಳ ಮಗು ಮೊದಲ ಸಲ ಊರಿಗೆ ಹೋದಾಗ ಗಾಳಿಮಳೆಯಿಂದ ಎರಡು ದಿನ ಕರೆಂಟು ಕೈಕೊಟ್ಟಾಗ ಎರಡೂ ದಿನ ರಾತ್ರಿ ಸತತವಾಗಿ ಅತ್ತಿದ್ದ. ಮಗುವಿಗೆ ದೃಷ್ಟಿಆಗಿದೆ. ದೃಷ್ಟಿತೆಗೆಸಬೇಕು ಎಂದು ಅಜ್ಜಿ ದೃಷ್ಟಿತೆಗೆದಿದ್ದೇ ತೆಗೆದಿದ್ದು. ಟ್ಯೂಬ್‌ಲೈಟು ಫಳ್ಳನೆ ಹೊಳೆದಾಗ ತಾಗಿದ್ದ ಎಲ್ಲ ದೃಷ್ಟಿಗಳೂ ಮಂಗಮಾಯ! ಉಸಿರಾಟಕ್ಕೆ ಆಮ್ಲಜನಕ ಹೇಗೆ ಬೇಕೋ ಹಾಗೇ ಬದುಕಿಗೆ ವಿದ್ಯುತ್ ಅಗತ್ಯ ಎಂದು ಅವನ ನಂಬಿಕೆ. ಕರೆಂಟಿಲ್ಲದ ಯುಗ ಅವನ ಪ್ರಕಾರ ಶಿಲಾಯುಗ. ನನ್ನ ಅಮ್ಮನ ಚಿಕ್ಕಮ್ಮ ಒಬ್ಬರು ಮೊದಲ ಸಲ ಮಂಗಳೂರಿನ ತಮ್ಮ ಮಗನ ಮನೆಗೆ ಹೋಗಿ ಬಂದು ’ನಮ್ಮ ಮಗನ ಮನೆಯಲ್ಲಿ ಗೋಡೆ ಒತ್ತಿದರೆ ದೀಪ ಉರಿಯುತ್ತದೆ’ ಎಂದು ಎಲ್ಲರಿಗೂ ಹೇಳಿ ಸಂಭ್ರಮಿಸಿದ್ದರಂತೆ.
ಮಗನಿಗೆ ಇಂದಿಗೂ ಅರ್ಥವಾಗದೇ ಇರುವುದು ದೂರವಾಣಿ. ಒಂದು ಪೆಟ್ಟಿಗೆ, ಅದಕ್ಕೆ ವಯರ್ ಮೂಲಕ ಕನೆಕ್ಟಾದ ರಿಸೀವರ್. ಮುಖ್ಯವಾಗಿ ಅದಕ್ಕೆ ಡಿಸ್‌ಪ್ಲೇನೇ ಇಲ್ಲ! ಕೆಮರಾ ಇಲ್ಲ, ಅದು ಸಮಯ ಹೇಳುವುದಿಲ್ಲ. ಅಷ್ಟೆಲ್ಲ ದೂರ ಯಾಕೆ.. ಅವನಿಗೆ ಪುಟಾಣಿ ಡಿಸ್‌ಪ್ಲೇ ಇರುವ, ಟುಕ್ ಟುಕ್ ಟುಕ್ ಎಂದು ಅಕ್ಷರ ಕುಟ್ಟುವ ಮೊದಮೊದಲ ಮೊಬೈಲ್ ಫೋನೇ ವಿಚಿತ್ರವೆನಿಸಿತ್ತು.
ವಯರ್ ಕನೆಕ್ಷನ್ ಇಲ್ಲದೇ ಫೋನಿನಲ್ಲಿ ಮಾತಾಡಿದ್ದು ಇನ್ನೊಬ್ಬರಿಗೆ ಕೇಳುವುದಾದರೂ ಹೇಗೆ ಎಂದು ನಾವು ಅಚ್ಚರಿಪಟ್ಟಿದ್ದೆವು. ಒಂದು ಪೆಟ್ಟಿಗೆಯ ಮೂಲಕ ದೂರದಲ್ಲಿ ಕುಳಿತವನೊಂದಿಗೆ ಮಾತನಾಡಬಹುದಂತೆ ಎಂದು ನಮ್ಮ ಹಿಂದಿನ ತಲೆಮಾರಿನವರು ಅಚ್ಚರಿಪಟ್ಟಿದ್ದರು.
ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್ ಪಾಲಿಸಲೇಬೇಕು ...
ನಗರದಲ್ಲಿ ಬೆಳೆದ ನನ್ನ ಅಣ್ಣನೊಬ್ಬ ಊರಿನ ತೊಂಡೆಚಪ್ಪರದಡಿಯಲ್ಲಿ ನಿಂತು ’ಅಂಗಡಿಯಿಂದ ತೊಂಡೆಕಾಯಿ ತಂದು ಚಪ್ಪರಕ್ಕೆ ಅಂಟಿಸಿದ್ದಾರೆ’ ಎಂದಿದ್ದನಂತೆ. ಎಂಬತ್ತರ ದಶಕದಲ್ಲಿ! ನನ್ನ ಮಗರಾಯನಿಗೆ ತರಕಾರಿ ಅಂಗಡಿಯಲ್ಲಲ್ಲ, ಗಿಡದಲ್ಲಿ ಬೆಳೆಯುತ್ತದೆ ಎನ್ನುವಷ್ಟುಮಾಹಿತಿ ಇದೆ ಎನ್ನುವುದು ಸಮಾಧಾನ.
ಇಂತಹ ನೂರಾರು ಉದಾಹರಣೆಗಳು ಸಿಗುತ್ತವೆ. ಓಲಾ-ಊಬರ್ ಸವೀರ್‍ಸ್ಗಳು, ಸ್ವಿಗಿ-ಜೊಮಾಟೊಗಳು, ಅಮೆಜಾನ್-ಫ್ಲಿಪ್‌ಕಾರ್ಟುಗಳು? ಅದೆಲ್ಲ ಇಲ್ಲದೆ ನಾವು ಬದುಕುತ್ತಿದ್ದೆವು. ನೆಮ್ಮದಿಯಾಗಿಯೂ ಇದ್ದೆವು ಅನ್ನುವುದು ನನ್ನ ಮಗನಿಗೆ ಮತ್ತು ಅವನ ಜನರೇಷನ್ನಿನ ಮಕ್ಕಳಿಗೆ ಅಚ್ಚರಿ.
ಆದರೆ ಇದ್ಯಾವುದನ್ನೂ ನಾವು ಜನರೇಷನ್ ಗ್ಯಾಪ್ ಎನ್ನಲಾಗದು.
ಜನರೇಷನ್ ಗ್ಯಾಪ್ ಮುಖ್ಯವಾಗಿ ಇರುವುದು ಬೌದ್ಧಿಕ ಸ್ತರಗಳಲ್ಲಿ. ಹಿಂದಿನವರಿಗಿಂತ ನಾವು ಬುದ್ಧಿವಂತರು ಎಂಬ ನಂಬಿಕೆ ಪ್ರತಿ ತಲೆಮಾರಿನವರಲ್ಲಿಯೂ ಇರುತ್ತದೆ. ಅದಕ್ಕೆ ಈ ಆವಿಷ್ಕಾರಗಳೂ, ತಂತ್ರಜ್ಞಾನಗಳೂ, ಆಧುನಿಕ ಸೌಕರ್ಯಗಳೂ ಪೂರಕ ಮಾತ್ರ. ಇದು ಇಂದು ನಿನ್ನೆಯದಲ್ಲ. ಇದು ಎಲ್ಲ ಕಾಲದಲ್ಲೂ ಎಲ್ಲ ದೇಶಗಳಲ್ಲೂ ಇರುವ ವಿಚಾರವೇ. ಮತ್ತು ಇದು ಸಮಸ್ಯೆ ಅಲ್ಲ! ಈ ಬದಲಾವಣೆ ಸಹಜವೂ ಹೌದು, ಅನಿವಾರ್ಯವೂ ಹೌದು.
ಹೊಸ ವರ್ಷದಲ್ಲಿ ನಿಮ್ಮ ಮಗುವನ್ನು ಜಾಣಜಾಣೆಯರನ್ನಾಗಿಸಿ!
ಯಾವುದೇ ದೇಶದ, ಯಾವುದೇ ಕಾಲದ ವ್ಯಕ್ತಿಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಆತನ ಬಾಲ್ಯ, ಯೌವನ, ನಡುವಯಸ್ಸು ಹಾಗೂ ವೃದ್ಧಾಪ್ಯದಲ್ಲಿ ಆತ ಈ ರೀತಿಯ ಜನರೇಷನ್ ಗ್ಯಾಪಿನ ಅನುಭವವನ್ನು ತನ್ನ ಹಿರಿಯರೊಂದಿಗೂ, ತನ್ನ ಕಿರಿಯರೊಂದಿಗೂ ಅನುಭವಿಸಿರುತ್ತಾನೆ. ಮಾನಸಿಕವಾಗಿ ಅವೆಲ್ಲವೂ ಒಂದೇ ರೀತಿಯವು. ಭೌತಿಕವಾಗಿ ಆಯಾ ದೇಶಕಾಲಕ್ಕೆ ತಕ್ಕಂತೆ ವ್ಯತ್ಯಾಸಗಳು. ಜೀವನ ಮೌಲ್ಯಗಳು, ನಂಬಿಕೆಗಳು, ಯೋಚನಾಶೈಲಿ, ಆಚರಣೆಗಳು ಈ ಎಲ್ಲ ವಿಚಾರಗಳಿಗಾಗಿಯೇ ಎಲ್ಲ ಎರಡು ಅನುಕ್ರಮ ಜನರೇಷನ್ ಗಳ ನಡುವೆ ಘರ್ಷಣೆ. ಇದು ಇನ್ನು ನೂರು ತಲೆಮಾರು ಕಳೆದರೂ ಹೀಗೆಯೇ. ಇದು ಕೇವಲ ಕುಟುಂಬದ ಒಳಗೆ ಮಾತ್ರ ನಡೆಯುವಂಥದ್ದಲ್ಲ. ಆಫೀಸುಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ವಯಸ್ಸಿನ ಅಂತರದ ಕಾರಣದಿಂದ ಉಂಟಾಗುವ ವ್ಯತ್ಯಾಸಗಳು, ಸಮಸ್ಯೆಗಳು ಇದ್ದೇ ಇರುತ್ತವೆ.
ಹಾಗಾಗಿ ಸಮಾಜಶಾಸ್ತ್ರಜ್ಞರು ಇದನ್ನು ಜನರೇಷನ್ ಗ್ಯಾಪ್ ಎಂದು ಕರೆಯುವ ಬದಲು ’ಇನ್‌ಸ್ಟಿಟ್ಯೂಷನಲ್ ಏಜ್ ಸೆಗ್ರೆಗೇಷನ್ ಎಂದು ಕರೆದಿದ್ದಾರೆ.
ಮಕ್ಕಳು ನಿರರ್ಗಳವಾಗಿ ಓದಲು ಇಲ್ಲಿವೆ ಸಲಹೆಗಳು
ಈ ವಿಷಯದ ಬಗ್ಗೆ ಇತ್ತೀಚೆಗೆ ಕೆಲವು ರೀಸಚ್‌ರ್ ಪೇಪರುಗಳನ್ನು ಓದುತ್ತಿದ್ದೆ. ನನಗೆ ಅಚ್ಚರಿ ಎನಿಸಿದ್ದು ಹಾಗೂ ಬೇಸರ ತರಿಸಿದ್ದು ಒಂದೇ ವಿಚಾರ. ಜಗತ್ತಿನಾದ್ಯಂತ ಜನರೇಷನ್ ಆಫ್ಟರ್ ಜನರೇಷನ್ ಜೀವನ ಮೌಲ್ಯಗಳು ಕುಸಿಯುತ್ತಿವೆ. ವ್ಯಕ್ತಿಗಳು ತಮ್ಮ ಮೂಲದಿಂದ ದೂರಾಗುತ್ತಿದ್ದಾರೆ. ಜನ ಕೌಟುಂಬಿಕ ಹಾಗೂ ವೈಯಕ್ತಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಸಾಮಾಜಿಕವಾಗಿಯೂ ತಮಗೆ ತಾವೇ ಬಹಿಷ್ಕಾರ ಹಾಕಿಕೊಂಡಂತೆ ಒಂಟಿತನಕ್ಕೆ ಬಲಿಯಾಗುತ್ತಿದ್ದಾರೆ. ಗ್ಲೋಬಲೈಸೇಷನ್ ಶಾಪವೋ ವರವೋ ಎಂಬ ಪ್ರಶ್ನೆ ಎದುರಾದಂತೆ ಇದೂ ಒಂದು ಪ್ರಶ್ನೆ ನಮ್ಮೆದುರಿದೆ ಎನಿಸುತ್ತದೆ. ಈ ವ್ಯತ್ಯಾಸಗಳು ಸಹಜವೇ ಆದರೂ ಕಾಲಾಂತರದಲ್ಲಿ ಹೆಚ್ಚುತ್ತಿರುವ ಸಮಸ್ಯೆಗಳು ಅನಿವಾರ್ಯವೇ? ಈ ಎಲ್ಲ ಸಮಸ್ಯೆಗಳು ಇನ್ನಷ್ಟುಹೆಚ್ಚಾಗಿದ್ದು ಇಪ್ಪತ್ತನೆಯ ಶತಮಾನದಲ್ಲಂತೆ. ಅಂದರೆ ಎರಡನೇ ಮಹಾಯುದ್ಧದ ಅನಂತರವಂತೆ. ಮೊದಲಿನ ಕಥೆ ಯಾರಿಗೆ ಗೊತ್ತು ಬಿಡಿ!
ಅದಕ್ಕೆ ಕಾರಣ ಹುಡುಕುವಾಗ ಕಂಡದ್ದು ಎರಡು ಅಂಶಗಳು. ಮೊದಲನೆಯದ್ದು ಪೇರೆಂಟಿಂಗ್ ಸ್ಟೈಲ್ ಎರಡನೆಯದ್ದು ಶಿಕ್ಷಣ ಪದ್ಧತಿ. ಅದೇನೇ ಇದ್ದರೂ ಈ ಮಿಲೇನಿಯಲ್ ಅಮ್ಮನಿಗೂ ಆಲ್ಫಾ ಜನರೇಷನ್ನಿನ ಮಗನಿಗೂ ನಡುವೆ ನಿತ್ಯವೂ ಮೇಲೆ ಹೇಳಿದಂತಹ ಹಲವು ಪ್ರಶ್ನೋತ್ತರಗಳು, ಅಚ್ಚರಿಯ ವಿಚಾರ ವಿನಿಮಯಗಳೂ ನಡೆಯುತ್ತವೆ. ಇವು ನನ್ನ ಸ್ಟೆ್ರಸ್ ಬಸ್ಟರ್ಸ್. ಕೆಲವು ಸಲ ಹೊಸ ವಿಷಯವನ್ನು ಕಲಿಸುತ್ತವೆ. ಅಮ್ಮ-ಮಗನ ನಡುವೆ ಜನರೇಷನ್ ಗ್ಯಾಪಿನ ಸಮಸ್ಯೆ ಬಾರದಂತೆ ತಡೆಯುತ್ತವೆ - ಎಂದು ನಾನು ಅಂದುಕೊಂಡಿರುವುದೂ ಕೂಡ ಓಲ್ಡ್ ಸ್ಕೂಲ್ ಮೆಂಟಾಲಿಟಿಯೇ ಇರಬಹುದೇ?