ಪತಿ-ಪತ್ನಿ ವಿಚ್ಛೇದನ ಪಡೆದುಕೊಳ್ಳುವ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಮುಗಿಯುವುದಿಲ್ಲ. ಹಲವು ತಿಂಗಳ ಕಾಲ ಈ ಮುಜುಗರ, ಬೇಸರದ ಸಮಯ ನಡೆಯುತ್ತಿರುತ್ತದೆ. ವಿಚ್ಛೇದನ ಅನಿವಾರ್ಯವೇ ಆಗಿದ್ದಾಗ ಅದನ್ನು ಎದುರಿಸುವುದೊಂದೇ ಇರುವ ದಾರಿ. ಆ ವೇಳೆ, ಕೆಲವು ವಿಚಾರಗಳ ಬಗ್ಗೆ ಗಮನ ನೀಡಿದರೆ ಹೆಚ್ಚಿನ ಸಂಘರ್ಷವಿಲ್ಲದೆ ಪರಿಸ್ಥಿತಿ ನಿಭಾಯಿಸಬಹುದು.
ಬದುಕಿನಲ್ಲಿ ಎಂದಿಗೂ ನಿರೀಕ್ಷಿಸಿಯೇ ಇರದ ಆ ಹಂತ ಎದುರಾಗಬಹುದು. ಅದು ಸಂಬಂಧವನ್ನು ಮುರಿದುಕೊಳ್ಳುವುದು. ಸಂಗಾತಿಯಿಂದ ಡಿವೋರ್ಸ್ (Divorce) ಪಡೆದುಕೊಳ್ಳುವುದು. ಇದೆಷ್ಟು ನೋವಿನ ಸಂಗತಿಯೆಂದರೆ, ಜೀವನವೇ ಬೇಡ ಎನಿಸಬಹುದು. ಬದುಕಿದ್ದು ಪ್ರಯೋಜನವೇನು ಎನ್ನುವ ಪ್ರಶ್ನೆ ಮೂಡಬಹುದು.
ಪತಿ, ಪತ್ನಿ (Husband and Wife) ಪರಸ್ಪರ ಸಮ್ಮತಿಯಿಂದಲೇ ದೂರವಾಗುತ್ತಿದ್ದರೂ ನೋವು (Pain) ಕಟ್ಟಿಟ್ಟ ಬುತ್ತಿ. ಅಥವಾ ಕೆಲವೊಮ್ಮೆ ಅವರ ನಡತೆ, ವರ್ತನೆ, ಸ್ವಭಾವದಿಂದ ಬೇಸತ್ತು ದೂರವಾಗಬೇಕಾದ ಪರಿಸ್ಥಿತಿ ಎದುರಾಗಿದ್ದರೂ ಹಿಂಸೆ ತಪ್ಪಿದ್ದಲ್ಲ. ಕಾರಣವೇನೇ ಇದ್ದರೂ ವಿಚ್ಛೇದನ ಪಡೆದುಕೊಳ್ಳುವ ನಿರ್ಧಾರ (Decision) ತೆಗೆದುಕೊಳ್ಳುವುದು ಖಂಡಿತವಾಗಿ ಕಷ್ಟದಾಯಕ. ಆದರೂ ನಮ್ಮದೇ ಭವಿಷ್ಯಕ್ಕಾಗಿ, ಮುಂದಿನ ಬದುಕನ್ನು ದಿಟ್ಟವಾಗಿ, ಸ್ವತಂತ್ರವಾಗಿ ಬದುಕಬೇಕೆನ್ನುವುದಕ್ಕಾಗಿ ಈ ನಿರ್ಧಾರ ಅನಿವಾರ್ಯವಾಗಬಹುದು. ಅಂತಹ ಸಮಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಬೇಕಾದ ಕೆಲವು ವಿಚಾರಗಳಿವೆ. ಅವುಗಳ ಬಗ್ಗೆ ಗಮನವಿರಲಿ.
• ಹಣಕಾಸು (Financial) ಸುಭದ್ರತೆಗೆ ಆದ್ಯತೆ (Importance) ನೀಡುವುದು
ಸಾಮಾನ್ಯವಾಗಿ, ವಿಚ್ಛೇದನದ ಸಮಯದಲ್ಲಿ ಪತಿ-ಪತ್ನಿಯರು ಮಾನಸಿಕವಾಗಿ ಭಾರೀ ಹಿಂಸೆ ಅನುಭವಿಸುತ್ತಾರೆ. ಕೆಲವು ಮಹಿಳೆಯರಿಗೆ ಪತಿಯಿಲ್ಲದೆ ಮುಂದಿನ ಜೀವನ ಹೇಗೆ ಎನ್ನುವ ಅಭದ್ರತೆ, ಅಸಹಾಯಕತೆ ಕಾಡಬಹುದು. ಆ ಸಮಯದ ನೋವಿನಲ್ಲಿ ಬೇರ್ಯಾವ ಅಂಶವೂ ಗಣನೆಗೆ ಬಾರದೆ ಇರಬಹುದು. ಆದರೆ, ಮುಂದಿನ ದಿನಗಳಿಗಾಗಿ ಹಣಕಾಸು ಸುಭದ್ರತೆಗೆ ಆದ್ಯತೆ ನೀಡಲೇಬೇಕು. ನೀವೇ ಸ್ವತಃ ದುಡಿಯುತ್ತಿದ್ದು, ಹಣಕಾಸಿಗೆ ಯಾವುದೇ ಚಿಂತೆಯಿಲ್ಲ ಎನ್ನುವ ಸ್ಥಿತಿಯಿದ್ದರೆ ಪರವಾಗಿಲ್ಲ. ಆಗ, ಹಣಕಾಸಿನ ಯಾವುದೇ ಹಂಗಿಲ್ಲದೆ ವಿಚ್ಛೇದನದ ಮೊರೆ ಹೋಗಬಹುದು. ಆದರೆ, ಒಂದೊಮ್ಮೆ ನೀವು ಪತಿಗೆ ಅವಲಂಬಿತರಾಗಿದ್ದರೆ ಖಂಡಿತವಾಗಿ ಪರಿಹಾರ ಪಡೆದುಕೊಳ್ಳುವತ್ತ ಗಮನ ಹರಿಸಬೇಕು. ಮಕ್ಕಳ ಜವಾಬ್ದಾರಿಯೂ ಇದ್ದಾಗ ಇನ್ನಷ್ಟು ಎಚ್ಚರಿಕೆ ಅಗತ್ಯ. ವಿಚ್ಛೇದನದ ಬಳಿಕ ನಿಮ್ಮ ಪತಿ ಹಣಕಾಸು ನೆರವನ್ನು ಸ್ಥಗಿತಗೊಳಿಸುತ್ತಾರೆ. ಆಗ ನೀವೇ ನಿಮ್ಮ ಬೆಂಬಲಕ್ಕೆ (Support) ನಿಲ್ಲಬೇಕಾಗುತ್ತದೆ ಎನ್ನುವ ಅರಿವಿರಲಿ.
Relationship Tips : ಮದುವೆಗೂ ಮುನ್ನ ಈ ವಿಷ್ಯ ತಿಳಿದಿದ್ದರೆ ಸಮಸ್ಯೆ ಬರ್ತಿರಲಿಲ್ಲ…!
• ವಿಚ್ಛೇದನದ ಪ್ರಕ್ರಿಯೆಯ ಬಗ್ಗೆ ಡೈರಿ (Diary) ಮೆಂಟೇನ್ ಮಾಡಿ
ಇದೊಂದು ನೋವಿನ ಕ್ರಿಯೆ. ಇದನ್ನು ಡೈರಿಯಲ್ಲಿ ದಾಖಲಿಸುವುದು ಬೇಡ ಎನ್ನುವ ವಿಚಾರವಿದ್ದರೆ ತೆಗೆದುಹಾಕಿ. ಇದರಿಂದ ನಿಮಗೆ ಮುಂದೆ ಎಷ್ಟೋ ಅನುಕೂಲವಾಗುತ್ತದೆ. ನೀವು ಮೊದಲ ಬಾರಿಗೆ ಗಂಭೀರವಾಗಿ ವಿಚ್ಛೇದನದ ಕುರಿತು ಮಾತನಾಡಿದ ದಿನಾಂಕ, ಇಬ್ಬರೂ ಪರಸ್ಪರ ಸಹಮತ್ಯದ ಮೇರೆ ಮಾತನಾಡಿದ್ದರೆ ಆ ದಿನಾಂಕ ಹಾಗೂ ಮಾತುಕತೆಯ ವಿವರ ದಾಖಲಿಸಿ ಇಬ್ಬರೂ ಸಹಿ ಮಾಡಿ. ವಕೀಲರನ್ನು (Lawyer) ಭೇಟಿಯಾಗಿದ್ದುದು, ಕೌಟುಂಬಿಕ ಸಮಾಲೋಚಕರೊಂದಿಗೆ ನಡೆಸಿದ ಮಾತುಕತೆ, ಹಣಕಾಸು ವಿಚಾರಗಳಿಗೆ ಸಂಬಂಧಿಸಿದ ಬದಲಾವಣೆಗಳು ಎಲ್ಲವನ್ನೂ ನಮೂದಿಸುತ್ತ ಹೋಗಿ. ಮಕ್ಕಳಿದ್ದರೆ ಅವರು ಯಾರ ಬಳಿ, ಹೇಗೆ ಬೆಳೆಯಬೇಕು ಎನ್ನುವ ಕುರಿತಾಗಿಯೂ ಆದ್ಯತೆ ಮೇರೆಗೆ ಮಾತನಾಡಿ. ಅವೆಲ್ಲವನ್ನೂ ದಾಖಲಿಸಿ. ಭಾವನಾತ್ಮಕವಾಗಿ ಇದು ಕಷ್ಟವೆನಿಸಬಹುದು. ಆದರೆ, ಇದರಿಂದ ಕೆಲವು ವಿಚಾರಗಳಲ್ಲಿ ನಿಮಗೆ ಪರದಾಡುವುದು ತಪ್ಪುತ್ತದೆ.
Punganur Cow: ಜಗತ್ತಿನ ಸ್ಪುರದ್ರೂಪಿ ಹಸು ಪುಂಗನೂರಿನ ಪುಟಾಣಿಗಳನ್ನು ನೋಡಿದ್ದೀರಾ?
• ಕೆಲಕಾಲ ಸಾಮಾಜಿಕ ಜಾಲತಾಣಗಳಿಂದ (Social Media) ದೂರವಿರಿ
ಭಾವನಾತ್ಮಕವಾಗಿ ಭಾರೀ ಕೆಟ್ಟ ಸ್ಥಿತಿಯಲ್ಲಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವುದು ಸರಿಯಲ್ಲ. ನಿಮ್ಮ ಅಸ್ಥಿರತೆ ಅಥವಾ ನೋವು ಅಲ್ಲಿ ವ್ಯಕ್ತವಾಗುವುದು ಬೇಡ. ನಿಮ್ಮ ಆಪ್ತ ಸ್ನೇಹಿತರೊಂದಿಗೆ ಭೇಟಿಯಾಗಿ, ಮಾತನಾಡಿ. ಅವರಿಂದ ಬೆಂಬಲ ಪಡೆದುಕೊಳ್ಳಿ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವುದು ಬೇಡ. ಅಲ್ಲಿನ ಕೆಲವು ಮಾತುಕತೆ, ವಿಚಾರಗಳು ನಿಮ್ಮನ್ನು ಮತ್ತಷ್ಟು ಘಾಸಿಗೊಳಿಸಬಹುದು. ಅಲ್ಲದೆ, ತಾಳ್ಮೆ ಕಳೆದುಕೊಂಡು ಪತಿಗೆ ಕೆಟ್ಟ ಮಾತು, ಬೈಗುಳಗಳನ್ನು ಪೋಸ್ಟ್ ಮಾಡಬಹುದು. ಇದರಿಂದ ಕೋರ್ಟ್ (Court) ಪ್ರಕ್ರಿಯೆ ನಡೆಯುತ್ತಿರುವಾಗ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡಬಹುದು. ವಿಚ್ಛೇದನದ ಸಮಗ್ರ ಪ್ರಕ್ರಿಯೆ ಮುಗಿಯುವವರೆಗೆ, ನಿಮ್ಮನ್ನು ಆವರಿಸಿರುವ ಒಂದು ರೀತಿಯ ಆವೇಗ, ಆವೇಶ ಕೊನೆಯಾಗುವವರೆಗೆ ಸಾಮಾಜಿಕ ಜಾಲತಾಣದತ್ತ ಮುಖ ಮಾಡಬೇಡಿ.