ತಂದೆ-ತಾಯಿ ತಮ್ಮ ಮಗುವಿಗೆ ಶಾಲೆಯಷ್ಟು ಸುರಕ್ಷಿತ, ಸಕಾರಾತ್ಮಕ ಜಾಗ ಇನ್ನೊಂದಿಲ್ಲ ಎಂದು ನಂಬಿ ಮಕ್ಕಳು ಶಾಲೆಯಲ್ಲಿರುವಷ್ಟು ಹೊತ್ತು ನಿಶ್ಚಿಂತೆಯಿಂದ ಇರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶಾಲೆಯಲ್ಲಿ ಮಕ್ಕಳ ವರ್ತನೆ ಕೃತ್ಯಗಳ ಬಗ್ಗೆ ಕಂಡುಬರುತ್ತಿರುವ ವರದಿಗಳು, ದೃಶ್ಯಗಳು ನಿಜಕ್ಕೂ ಒಂದು ಕ್ಷಣ ವಿವರಿಸಲಸಾಧ್ಯ ಭಯ ಹುಟ್ಟಿಸುತ್ತವೆ.
-ವಿಭಾ ಡೋಂಗ್ರೆ
ಬೆಂಗಳೂರಿನ ಖಾಸಗಿ ಶಾಲೆಯೊಂದರ ಪ್ರೀ ನರ್ಸರಿಯಲ್ಲಿ ಓದುವ ತಮ್ಮ ಮಗಳ ತಲೆಗೆ ಕಚ್ಚಿದ ಗಾಯವಿದೆ ಎಂದು, ಇದಕ್ಕೆ ಏನು ಕಾರಣ ಎಂಬ ಸಂಗತಿ ತಿಳಿಯಲು ಶಾಲೆಗೆ ಬಂದ ತಂದೆ ತಾಯಿ ನೇರವಾಗಿ ಸಿಸಿಟಿವಿ ಫುಟೇಜ್ ಕೇಳುತ್ತಾರೆ. ಈ ಸಿಸಿ ಟಿವಿ ದೃಶ್ಯಗಳಲ್ಲಿ 5 ನಿಮಿಷ ಶಿಕ್ಷಕಿ ಕೋಣೆಯಲ್ಲಿ ಇಲ್ಲದ ಸಂದರ್ಭದಲ್ಲಿ ಈ ಮಗುವಿಗೆ ಇನ್ನೊಂದು ಮಗು ಬೇಕಾಬಿಟ್ಟಿಯಾಗಿ ಹೊಡೆದಿರುವುದು, ಥಳಿಸಿರುವುದು, ಒದೆಯುವುದು, ಕಚ್ಚುವುದು ಸೆರೆಯಾಗಿರುತ್ತದೆ.
undefined
ವರ್ಷಗಳ ಹಿಂದೆ ದೆಹಲಿ ಪಕ್ಕದ ಗುರುಗ್ರಾಮದ ಪ್ರತಿಷ್ಠಿತ ಶಾಲೆಯಲ್ಲಿ (School) 2ನೇ ತರಗತಿ ಓದುತ್ತಿದ್ದ ಪ್ರದ್ಯುಮ್ನ; ಅವತ್ತು ತನ್ನನ್ನು ಕಳುಹಿಸಲು ಗೇಟಿನವರೆಗೆ ಬಂದ ಅಪ್ಪನಿಗೆ ಟಾಟಾ ಮಾಡಿ ಒಳಗೆ ಹೋದವನು, ತಂದೆ ಮನೆ ಸೇರುವುದರೊಳಗೆ, ಹಾಡುಹಗಲೇ ಶಾಲೆಯ ಶೌಚಗೃಹದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗುತ್ತಾನೆ. ಸಿಸಿ ಟಿವಿ ದೃಶ್ಯ ಅದೇ ಶಾಲೆಯ ಇನ್ನೊಬ್ಬ ವಿದ್ಯಾರ್ಥಿ ಈ ಕೃತ್ಯ ಎಸಗಿರುವ ಸುಳಿವು ನೀಡುತ್ತದೆ.
ಹೀಗೆ ಹೇಳುತ್ತಾ ಹೋದರೆ ಸಿಗುವ ಉದಾಹರಣೆಗಳು ಹಲವು. ಆದರೆ ವಾಸ್ತವದಲ್ಲಿ ತುರ್ತಾಗಿ ಇದಕ್ಕೆ ಉತ್ತರ ಹುಡುಕಬೇಕಿದೆ. ಇಲ್ಲಿ ‘ಯಾರ ತಪ್ಪು?’ ಎನ್ನುವುದಕ್ಕಿಂತ, ‘ಎಲ್ಲರ ಜವಾಬ್ದಾರಿ’ ಎನ್ನುವ ದೃಷ್ಟಿಕೋನದಿಂದ ಈ ಸಮಸ್ಯೆಯನ್ನು ನೋಡಬೇಕಿದೆ.
Bengaluru: ಮಕ್ಕಳನ್ನು ಡೇ ಕೇರ್ ಸೆಂಟರ್‌ಗೆ ಸೇರಿಸೋ ಪೋಷಕರೇ ಎಚ್ಚರ.!
ಎಷ್ಟೋ ಬಾರಿ ಮಗುವಿಗೆ (Children) ಮನಸ್ಸಿದೆ ಎನ್ನುವುದನ್ನೇ ನಾವು ಮರೆತಿರುತ್ತೇವೆ. ಎಲ್ಲವೂ ಹೇಳಿಯೇ ಕಲಿಸಬೇಕು ಎನ್ನುವ ಭಾವದಿಂದ ದೊಡ್ಡವರು ಆದೇಶ ನೀಡುವುದರಲ್ಲಿ ನಿರತರಾಗುತ್ತೇವೆ. ಇದಕ್ಕೆ ಪ್ರತಿಯಾಗಿ ಮಗು ಕೆಲವೊಮ್ಮೆ ಹಠ ಮಾಡುತ್ತದೆ, ಕಿರುಚಿ ಅರಚಿ ನಮ್ಮನ್ನು ಪೇಚಿಗೆ ಸಿಲುಕಿಸುತ್ತದೆ, ಅಳುತ್ತದೆ. ಸರ್ವೇಸಾಮಾನ್ಯವಾಗಿ ಸಮಾಧಾನದ ಹೆಸರಿನಲ್ಲಿ ‘ಗುಡ್ ಬಾಯ್ ಆದ್ರೆ ಹಠ ಮಾಡಬಾರ್ದು’, ‘ಗುಡ್ ಗರ್ಲ್ ಆದ್ರೆ ಅಳಬಾರ್ದು’ ಎಂದಿರುತ್ತೇವೆ. ಇದು ಮಗುವಿನ ಮನಸ್ಸಿನಲ್ಲಿ ‘ಗುಡ್ ಗರ್ಲ್ ಅಳುವುದಿಲ್ಲ’ ಎಂಬ ಭಾವ ಮೂಡಿಸುತ್ತಾ ಪ್ರತಿಬಾರಿ ಅಳುವ ಸನ್ನಿವೇಶದಲ್ಲಿ ಕೆಲವು ಮಕ್ಕಳು ಬಲವಂತವಾಗಿ ಭಾವನೆಗಳನ್ನು (Feelings) ತಡೆ ಹಿಡಿಯುತ್ತಾರೆ. ಈ ತಡೆ ಹಿಡಿದ ಭಾವನೆಗಳು ಮುಂದೆ ವಿಕೃತ ರೀತಿಯಲ್ಲಿ ಹೊರಬರುತ್ತವೆ. ಹೆಚ್ಚು ಸಿಡುಕುವುದು, ಹೊಡೆಯುವುದು ಹೀಗೆ.
‘ಮಕ್ಕಳೇ ಹೀಗೆ ಮಾಡಿ, ಹೀಗೆ ಮಾಡಬೇಡಿ’ ಅನ್ನುವುದರ ಜೊತೆ ಜೊತೆಗೆ ಹೀಗೆ ಹೇಳಿಕೊಡುತ್ತಿರುವವರ ನಡವಳಿಕೆ ಅತಿಮುಖ್ಯವಾಗುತ್ತದೆ. ಚಿಕ್ಕ ಮಕ್ಕಳು ಎಳವೆಯಲ್ಲಿ ತಮ್ಮ ಸುತ್ತಮುತ್ತಲಿನವರನ್ನೇ ಆದರ್ಶಪ್ರಾಯರಾಗಿಸಿಕೊಂಡಿರುತ್ತಾರೆ. ಅಪ್ಪನಂತೆ ನಡೆಯಬೇಕು, ಅಮ್ಮನಂತೆ ಹಾಡಬೇಕು ಹೀಗೆ. ಇದೇ ಮುಂದುವರಿದು ಅಪ್ಪನಂತೆ ಗದರುತ್ತಾರೆ, ಅಮ್ಮನಂತೆ ಸಿಡುಕುತ್ತಾರೆ. ತಮ್ಮ ಟೀಚರ್ ಹೆದರಿಸಿದಂತೆ ಇನ್ನೊಬ್ಬರನ್ನು ಹೆದರಿಸುತ್ತಾರೆ. ಇದು ಅವರು ತಮ್ಮ ಭವಿಷ್ಯದ ವ್ಯಕ್ತಿತ್ವ ಬೆಳವಣಿಗೆಗೆ ಬುನಾದಿ. ಇದನ್ನು ಪ್ರಾಯೋಗಿಕವಾಗಿ ಮನಶಾಸ್ತ್ರಜ್ಞ ಆಲ್ಬರ್ಟ್ ಬಂದೂರನ ಬೋಲೋ ಬೊಂಬೆ ಪ್ರಯೋಗ ಸಾಬೀತು ಪಡಿಸಿದೆ. ಅಲ್ಲಿಗೆ ನಾವು ಮಗುವಿನ ಸುತ್ತಲಿನ ಪರಿಸರದ ಭಾಗವಾದರೆ ನಮ್ಮ ನಡವಳಿಕೆ ಮಗುವಿಗೆ ಮಾದರಿ ಎನ್ನುವುದು ನಮ್ಮ ಗಮನದಲ್ಲಿರಬೇಕು.
ಆಟವಾಡುತ್ತಿದ್ದ ಮಕ್ಕಳಿಗೆ ಕಚ್ಚಿದ ಪ್ರಾಂಶುಪಾಲರ ಪ್ರೀತಿಯ ಶ್ವಾನ: ಪೋಷಕರ ಆಕ್ರೋಶ
ಜೊತೆಗೆ ಮಗುವಿಗೆ ಈಗ ಅನೇಕ ಮಾಧ್ಯಮಗಳು ಕೈತುದಿಗೆ ಎಟಕುತ್ತಿವೆಯಾದ್ದರಿಂದ ಈ ನೂತನ ಮಾಧ್ಯಮಗಳು ಹಿಂಸಾತ್ಮಕ ಪ್ರವೃತ್ತಿಯನ್ನು ಪ್ರಭಾವಿಸುವ ದಾಸ್ತಾನಾಗಿವೆ. ಈ ಹಿಂದೆ ಒಂದು ಜನಪ್ರಿಯ ಕಾರ್ಟೂನ್ ಆದ ‘ಟಾಮ್ ಆ್ಯಂಡ್ ಜೆರ್ರಿ’ಯನ್ನೂ ಮಕ್ಕಳಲ್ಲಿ ಹಿಂಸೆ ಮತ್ತು ವರ್ಣಭೇದಕ್ಕೆ ಪ್ರಚೋದನೆ ಆಪಾದನೆ ಅಡಿಯಲ್ಲಿ ಬ್ರಿಟನ್ ನ್ಯಾಯಾಲಯ ನಿಷೇಧಿಸಿತ್ತು.
ಮನಃಶಾಸ್ತ್ರದಲ್ಲಿ ಹೇಳಲಾಗುವ ನೇಚರ್ ಟು ನರ್ಚರ್ ಸಿದ್ಧಾಂತದ ಪ್ರಕಾರ, ಹುಟ್ಟಿದ ಮಗುವಿಗೆ 50 ಪ್ರತಿಶತ ಅನುವಂಶಿಯ ಕಾರಣಗಳು ನಡವಳಿಕೆಯ ಮೇಲೆ ಪರಿಣಾಮ ಬೀರಿದರೆ ಇನ್ನು 50 ಪ್ರತಿಶತ ಮಗು ಬೆಳೆಯುವ ವಾತಾವರಣ ಪರಿಣಾಮ ಬೀರುತ್ತದೆ. ಅಂದರೆ ಕುಟುಂಬದಲ್ಲಿ ಈಗಾಗಲೇ ಅತಿಕೋಪ ಪ್ರವೃತ್ತಿಯ ಹತ್ತಿರದ ರಕ್ತ ಸಂಬಂಧಿಗಳಿದ್ದಲ್ಲಿ ಈ ಗುಣಗಳು ಮಗುವಿನಲ್ಲಿರುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ನೈತಿಕ ನಡವಳಿಕೆ ತಂತ್ರಗಳನ್ನು ಕಲಿಸುವುದು ಅಗತ್ಯ.
ಇವೆಲ್ಲದರ ಜೊತೆ ಇನ್ನೂ ಆತಂಕಕಾರಿ ವಿಚಾರವೆಂದರೆ ಈ ನಡವಳಿಕೆ ಸೂಕ್ತ ಸಮಯದಲ್ಲಿ ಗುರುತಿಸಿ ಸರಿದಾರಿಗೆ ತರದಿದ್ದರೆ; ಇದೇ ಮಕ್ಕಳು ಮುಂದೆ ಮಾನಸಿಕ ಖಾಯಿಲೆಗಳಿಂದ ಬಳಲುವ , ಸಮಾಜ ಘಾತುಕ ಪ್ರವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.
ಮಾಡುವುದೇನು?
ಮಕ್ಕಳ ಮಾತುಗಳಿಗೆ ಕಿವಿಯಾಗುವ ತುರ್ತನ್ನು ನಾವು ಅರಿಯಬೇಕಿದೆ. ಮಕ್ಕಳು ಮನಬಿಚ್ಚಿ ಮಾತನಾಡಲು ಬಿಡಬೇಕು, ಕೇಳಿಸಿಕೊಳ್ಳಬೇಕು. ಮಕ್ಕಳಿಗೆ ತಮ್ಮ ಕಷ್ಟಗಳಿಗೂ ಪರಿಹಾರವಿದೆ ಎನ್ನುವ ಭಾವ ಮೂಡಿಸಿ ಇದಕ್ಕೆ ಬದ್ಧರಾಗಬೇಕು.
ಮಗುವಿನ ಮೈ ಕೈ ಗಾಯಗಳನ್ನು ಗಮನಿಸುತ್ತ, ಮಗು ಕೊಡುವ ಕಾರಣಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು. ನಂತರ ಆ ಸಮಯದಿಂದ ಮಗುವಿನ ಮಾನಸಿಕ ಬದಲಾವಣೆಯನ್ನು ಗಮನಿಸಬೇಕು. ಮಗುವಿಗೆ ಹೆದರಿಕೆ, ಮಂಕು ಎದುರಾಗಿದೆ ಎನಿಸಿದರೆ ಆಪ್ತ ಸಮಾಲೋಚಕರ ಬಳಿ ಕರೆದೊಯ್ಯಬೇಕು.
ಮಗುವಿನಲ್ಲಿ ಹೊಡೆಯುವುದು, ಕಚ್ಚುವುದು, ಕಿರುಚುವುದು, ಒದೆಯುವುದು, ತುಚ್ಛ ಶಬ್ದಗಳಿಂದ ನಿಂದಿಸುವುದು, ಬೆದರಿಸುವುದು ಈ ಯಾವುದೇ ಗುಣಗಳು ಕಂಡುಬಂದಲ್ಲಿ, ನೀವು ಇದನ್ನು ಮಗುವಿಗೆ ತಿಳಿ ಹೇಳಿಯೂ ಬದಲಾಗದಿದ್ದಲ್ಲಿ, ಕೂಡಲೇ ನಡವಳಿಕೆ ಪರಿಷ್ಕರಣ ಚಿಕಿತ್ಸೆಯ ಅಗತ್ಯವಿದೆ ಎಂದು ಅರಿತುಕೊಳ್ಳಿ .
ಇನ್ನು ಅತಿಮುಖ್ಯವಾಗಿ ಮಕ್ಕಳಿಗೆ ಮೌಲ್ಯ ಶಿಕ್ಷಣ. ಈ ಮೌಲ್ಯ ಶಿಕ್ಷಣ ಅಮೂರ್ತ ಸ್ವರೂಪದ್ದು. ಅಂದರೆ ಮಗುವಿಗೆ ನೀತಿ ಕತೆಗಳ ಮೂಲಕ ಒಳ್ಳೆತನದ ಮೌಲ್ಯಗಳನ್ನು ಪರಿಚಯಿಸುವುದು. ದ್ವೇಷ, ಅಸೂಯೆಗಳು ನಮಗೆ ಅಪಾಯ ಎನ್ನುವುದರ ಮನವರಿಕೆ ಮಾಡಿಸುವುದು. ಪರಾನುಭೂತಿ ಮಾರ್ಗ ಕಲಿಕೆ, ಎಂದರೆ ಮಗುವಿಗೆ ‘ನೀನು ಇನ್ನೊಂದು ಮಗುವಿನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದೆ?’ ಎಂದು ಮಗುವೇ ತನ್ನ ನಡವಳಿಕೆಯ ಬಗ್ಗೆ ನೈತಿಕತೆಯ ಅಡಿಪಾಯ ಹಾಕಿಕೊಳುವಂತೆ ಮಾಡುವುದು. ಹೀಗೆ ಸಾಧ್ಯವಾದಷ್ಟು ಒಳಿತುಗಳನ್ನು ಮಗುವಿಗೆ ನಿಲುಕುವಂತೆ ಮಾಡಬಹುದು.
ಪ್ರತಿ ಮಗುವು ನಿಷ್ಕಲ್ಮಶ ಮನಸ್ಥಿತಿಯಿಂದ ಈ ಭೂಮಿಗೆ ಬರುತ್ತದೆ. ಮುಂದೆ ತಾನು ಹೊಸ ಮನೋವೃತ್ತಿಯನ್ನು ರೂಢಿಸಿಕೊಳ್ಳುತ್ತದೆ. ಈ ರೂಢಿಸುವ ಪ್ರಕ್ರಿಯೆಯೇ ವ್ಯಕ್ತಿತ್ವ ಕಟ್ಟುವ ಕೆಲಸ. ಇದು ಜಾಗರೂಕತೆಯಿಂದ ನಡೆಯಬೇಕಿದೆ. ಮೃದು ಮನಸುಗಳಿಗೆ ನಾವು ಮಿಡಿಯದಿದ್ದರೆ, ಕರಾಳ ನಾಳೆಗಳು ನಮ್ಮ ಮುಂದಿವೆ.