ಎಲ್ಲರ ಮನೆ ದೋಸೆ ತೂತು ಅನ್ನೋ ಹಾಗೆ ಅತ್ತೆ-ಸೊಸೆ ಜಗಳ ಎಲ್ಲಾ ಮನೆಯಲ್ಲೂ ಇದ್ದಿದ್ದೇ. ಆದ್ರೆ ನಿಜವಾಗಿಯೂ ಅತ್ತೆ-ಸೊಸೆ ಸಂಬಂಧ ಅಂದ್ರೆ ಹೇಗಿರಬೇಕು.ನಟಿ ಮಾಳವಿಕ ಅವಿನಾಶ್ ಈ ಬಗ್ಗೆ ಹೇಳಿದ್ದಾರೆ.
-ಮಾಳವಿಕ ಅವಿನಾಶ್
80 ದಾಟಿ ಯಾವುದೊ ಕಾಲ ಆಯ್ತು,ಇನ್ನೂ ಅದೇನು ನೋಡೋದು ಬಾಕಿ ಇದೆ ಅಂತ ಆಯುಷ್ಯವನ್ನು ಕೈಯಲ್ಲಿ ಹಿಡಿದು ಕೂತಿದ್ದಾರೊ?! ಮಕ್ಕಳು, ಮೊಮ್ಮಕ್ಕಳು,ಮರಿಮಕ್ಕಳು ಎಲ್ಲರನ್ನೂ ನೋಡಿಯಾಗಿದೆ. ಇಂತಹ ಮಾತುಗಳು ಮಧ್ಯಮ ವರ್ಗದ ಮನೆಗಳಲ್ಲಿ ಆಗಾಗ ಕೇಳಿಬರುತ್ತವೆ. ಕೆಲವೊಮ್ಮೆ ಇದೇ ವಿಷಯ, ಇನ್ನೂ ಕಠೋರ ಪದಗಳಲ್ಲಿ ಕೇಳಿ ಬರೋದೂ ಸಹಜನೆ.
ನನಗೆ ಅತ್ತೆ-ಸೊಸೆ ಡೈನಮಿಕ್ಸನ್ನು ಅನುಭವಿಸಿ ಗೊತ್ತಿಲ್ಲ. ನಮ್ಮ ಮದುವೆಗೆ ವರ್ಷಗಳ ಹಿಂದೆಯೇ ಅವಿನಾಶರ ತಂದೆ-ತಾಯಿ ಕಾಲವಾಗಿದ್ದರು. ಪ್ರಾಯಶಃ ಜಗತ್ತಿನಲ್ಲೇ ಎಂಥಹ ವಿಜ್ಞಾನಿಯ, ಸಂಶೋಧನೆ/ತರ್ಕಕ್ಕೂ ನಿಲುಕದ ಒಂದು ಸಂಬಂಧ ಅದು. ನನಗೂ ಕೇಳಿ ಕಂಡಷ್ಟೇ ಗೊತ್ತು. ಅನೇಕ ಸರ್ತಿ, ಹೀಗೂ ಉಂಟೆ ಎನ್ನುವಷ್ಟು ಸ್ನೇಹ-ವೈರತ್ವ, ಹೊಂದಾಣಿಕೆ-ಮುಖ ನೋಡಲಾಗದಷ್ಟು ದ್ವೇಷ, ಹೀಗೆ ಮನೆಗಳಿಗೆ ತಕ್ಕಂತೆ ಎಲ್ಲವೂ ಅತಿರೇಕವೇ.
ನಿಮ್ಗೆ ಗಂಡನಾಗೋ ಮೊದ್ಲು ಆತ ತಾಯಿಗೆ ಮಗ, ಸೋ ಅತ್ತೆ ಜೊತೆ ಸ್ಪರ್ಧೆ ಮಾಡ್ಬೇಡಿ; ಸುಧಾಮೂರ್ತಿ
ಈ ಅತ್ತೆ-ಸೊಸೆ ಡೈನಮಿಕ್ಸ್ ಭಾರತಕ್ಕೇನು ಸೀಮಿತವಲ್ಲ. ಎಲ್ಲಾ ಸಂಸ್ಕೃತಿ ಸಮಾಜಗಳಲ್ಲೂ ಇರುತ್ತೆ ಎನ್ನುವುದು ನನ್ನ ಅರಿವಿಗೆ ಎಟುಕಿದ್ದು,“ಎವ್ರಿಬಡಿ ಲವ್ಸ್ ರೇಮಂಡ್”ಅನ್ನುವ ಸೀರಿಯಲನ್ನು ಟೀವಿಯಲ್ಲಿ ದಶಕಗಳ ಹಿಂದೆ ನೋಡಿದಾಗ. ಅಮೇರಿಕದ ಧಾರಾವಾಹಿಯದು. ಮಗನ ಮನೆಯ ಹಿತ್ತಲಲ್ಲೇ ಅಪ್ಪನ ಮನೆ. ತನ್ನ ಮಗ ಮನೆಯೊಳಗೆ ಬಂದಾಕ್ಷಣ, “Are you hungry Raymond?”, ಅಂತಾಳೆ ತಾಯಿ. ಸೊಸೆಗೆ (Daughter in law) ಮನೆ ಸರಿಯಾಗಿ ನಡೆಸಲು ಬರಲ್ಲ, ಅಡುಗೆ ಮಾಡಲು ಬರಲ್ಲ ಎಂಬುದೇ ಅವಳ ಸ್ಥಾಯಿಭಾವ. ಅದು ಕಾಮೆಡಿ ಸೀರಿಯಲ್ ಆದ್ದರಿಂದ ನಕ್ಕು ಸುಮ್ಮನಾದರೇನೊ ಜನ, ಆದರೆ ಅತ್ತೆ-ಸೊಸೆ ಸಂಬಂಧ (Relationship) ನಿಜ ಬದುಕಿನಲ್ಲೇನು ಕಾಮೆಡಿ ಅಲ್ಲವಲ್ಲ.
ಮಾನ್ಸ್ಟರ್ ಇನ್ ಲಾ ಅಂತ ಒಂದು ಸಿನಿಮಾ. ಆಗರ್ಭ ಶ್ರೀಮಂತ ಅತ್ತೆಗೆ ಹೀರೋಯಿನ್/ಸೊಸೆಯಾಗಿ ಬರೋದು ಇಷ್ಟವಿರಲ್ಲ. ಬಣ್ಣ ಕಮ್ಮಿ, ಮಿಡಲ್ ಕ್ಲಾಸ್ ಅಂತೆಲ್ಲ ಮದುವೆ (Marriage)ಯನ್ನು ತಡೆಯಲು ಹಲವು ತಂತ್ರಗಳನ್ನು ಹೂಡಿ, ಕೊನೆಗೆ ಅವಳತ್ತೆ ಬಂದು ಈ ಅತ್ತೆಯ ಸೊಕ್ಕಡಗಿಸುತ್ತಾಳೆ. ಸೊಕ್ಕಿನ ಸೊಸೆಯರ ಹಲವು (ಮಾಲಶ್ರೀ)ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಿದ್ದೇವೆ. ನಾನು ಲಾ ಕಾಲೇಜು ಮುಗಿಸಿದಾಗಲಿಂದ ಈಗಿನ ವರೆಗೆ ಸುಮಾರು 5-6000ಅತ್ತೆ-ಸೊಸೆ ಜಗಳಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದ್ದೇನೆ. ಮಾಯಾಮೃಗದಲ್ಲೂ ನನ್ನತ್ತೆ ಕೆಟ್ಟವಳು, ಗೃಹಭಂಗದಲ್ಲೂ ನನ್ನತ್ತೆ ಕೆಟ್ಟವಳು..
ಆದರೆ ನಾನು ಇವೆಲ್ಲವನ್ನು ಬರೆಯಲು ಕೂತದ್ದು ಬೇರೆಯ ಕಾರಣಕ್ಕೆ. ವಯಸ್ಸಾದವರು ಸಮಾಜಕ್ಕೆ ಬೇಡ. ಮನೆಯಲ್ಲಂತೂ ಬೇಡವೇ ಬೇಡ…ಅಪ್ಪ ಅಮ್ಮ ಆಗಿರಲಿ ಅತ್ತೆ ಮಾವ ಆಗಿರಲಿ, ನಮಗೆ ಅವರು ಬದುಕಿದ್ದು ಸಾಕು ಎಂದಾಕ್ಷಣ ಅವರೇನು ಆತ್ಮಹತ್ಯೆ ಮಾಡಿಕೊಳ್ಳಬೇಕೆ? ಏಕೀ ಅಸಹನೆ? ಹಿರಿಯರ ಬಳಿ ದುಡ್ಡು ಕಾಸು ಮನೆ ಇತ್ಯಾದಿ ಇದ್ದರೆ ಓಕೆ, ಅದೂ ಇಲ್ಲವೆಂದರೆ ಅಸಹನೆ ಇನ್ನೂ ಹೆಚ್ಚು.
Relationship Tips: ಹಾವು-ಮುಂಗಸಿ ರೀತಿ ಕಚ್ಚಾಡೋ ಅತ್ತೆ-ಸೊಸೆ ಜಗಳಕ್ಕೆ ಸದ್ಗುರು ಟಿಪ್ಸ್
“ಹೆಣ್ಮಗಳಿಗೆ ಎಲ್ಲವನ್ನೂ ಸುರಿದಿರಿ, ನೋಡ್ಕೊಳ್ಳೋಕೆ ಮಾತ್ರ ನಾವು ಬೇಕಾ?” “ಹೋಗಿ ಅವಳ ಮನೆಯಲ್ಲೇ ಇರಿ”! ಅಂತ ಮಗ
“ಅಯ್ಯೋ ನಮ್ಮತ್ತೆ ಬೇರೆ ಇದಾರೆ. ನಾನೆಲ್ಲಿಗೆ ಕರೆದುಕೊಂಡು ಹೋಗಲಿ”, ಅಂತ ಮಗಳು.
“ನನ್ನ ಮಗಳು ಹೆರಿಗೆಗೆ ಅಮೇರಿಕಾಗೆ ಬಾ ಬಾ ಅಂತಿದಾಳೆ.ಇನ್ನೆಷ್ಟು ವರ್ಷ ನಿಮಗೆ ಮಾಡಿ ಹಾಕ್ಕೊಂಡು ಇಲ್ಲೇ ಕೊಳೀತಿರಲಿ?”, ಅಂತ ಸೊಸೆ.
“ನಮ್ಮ ತಾಯಿಗೆ 92. ನಮ್ಮತ್ತೆಗೆ 88, ಇಬ್ಬರೂ ನಮ್ಮನೆಯಲ್ಲೇ ಇದಾರೆ. ಇಬ್ರೂ ಹಾಸಿಗೆ ಹಿಡಿದಿದ್ದಾರೆ. ಈಗ ನಮಗೂ ಸೊಸೆ ಬಂದಾಯ್ತು.ಯಾವಾಗ ತಾನೆ ಮುಕ್ತಿಯೊ?”, ಅಂತ ಸ್ನೇಹಿತರೊಬ್ಬರು ಹೇಳಿದ ನೆನಪು.
ಅಬ್ಬಬ್ಬಬ್ಬ…ಅದೆಷ್ಟು ಸಂಕೀರ್ಣ ಮಾನವ ಸಂಬಂಧಗಳು ಮತ್ತು ಪ್ರಹಸನಗಳು.
ಎಲ್ಲರ ಮನಃಶಾಂತಿಯೂ ಉಳಿಯಬೇಕಾದರೆ ಏನು ಮಾಡಬೇಕು. ವಿದೇಶ ಹಾಗೆ, ಹಿರಿಯರನೆಲ್ಲಾ ಹೋಮಿಗೆ ಕಳುಹಿಸಬೇಕೆ? ಕೋಟ್ಯಾಂತರ ರೂಪಾಯಿಗಳನ್ನು ಕಟ್ಟಿ ಬಗೆಬಗೆಯ ತಿಂಡಿ ಊಟ ಆಟಗಳು ಭಜನೆ ಔಷದೋಪಚಾರ ಎಲ್ಲವೂ ಇರುವ ಐಶಾರಾಮಿ ರಿಟೈರ್ಮೆಂಟ್ ಹೋಮ್ಸಿಗೆ ಹೋಗುವವರೆ ಒಂದೆರಡು ವರ್ಷಗಳಾದರೆ, ಸಾಕಪ್ಪ ಎನ್ನುತ್ತಾರೆ. ಇನ್ನೂ ಓಲ್ಡೇಜ್ ಹೋಮ್ ಹೇಗಿರಬಹುದು?
ಅವರು ನಮನ್ನು ಹೇಗೆ ಬೇಕಿದ್ದರೂ ನಡೆಸಿಕೊಂಡಿರಲಿ, ನಾವು ಲೆಕ್ಕಿಸದೆ ಕೊನೆಯ ಕಾಲದಲ್ಲಿ ಅವರ ಆರೈಕೆ ಮಾಡಬೇಕು ಎಂಬ ಕನಿಷ್ಠ ಮಾನವೀಯತೆಯನ್ನು ತೋರಲು ಏಕೆ ನಮಗೆ ಸಾಧ್ಯವಾಗುತ್ತಿಲ್ಲ?
“ಅವರದ್ದೇ ಅಂತ ಒಂದು ಮನೆ ಇದ್ದರೆ, ಹೀಗೆ ಮನೆ ಮನೆ ತಿರುಗೊ ಗೋಜಿರುವುದಿಲ್ಲ”, ಎನ್ನುತ್ತಾಳೆ ಮಗಳು.
“ಅಲ್ಲಮ್ಮಾ, ನಿಮ್ಮ ಮದುವೆ ಖರ್ಚು, ಓದಿನ ಖರ್ಚನ್ನು ಭರಿಸಲು ತಾನೆ ಅವರು ಇದ್ದ ಮನೆಯನ್ನು ಮಾರಿದ್ದು?”
ಸರಿ ಸ್ವಂತ ಮನೆ ಇದ್ದರೆ ಹಿರಿಯ ಜೀವಗಳನ್ನು ಅವರಷ್ಟಿಗವರೆ ಇರಲಿ ಎಂದು ಮನೆಯಲ್ಲಿ ಬಿಟ್ಟುಬಿಡಬೇಕೆ? ಮುಂಬಯ್ಯಿನ ಒಬ್ಬ ಸಾಹುಕಾರ ಸ್ತ್ರೀ ಹಲವು ಮನೆಗಳ ಬಾಡಿಗೆ ದುಡ್ಡಲ್ಲಿ ಬದುಕುತ್ತಿದ್ದರು. ಯಾಕೊ ತಾಯಿ ಫೋನನ್ನು ರಿಸೀವ್ ಮಾಡುತ್ತಿಲ್ಲವೆಂದು ಅಮೇರಿಕಾದಲ್ಲಿದ್ದ ಮಗ,2-3 ವರ್ಷಗಳ ನಂತರ ಬಂದು ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕಂಡದ್ದು ಸೋಫಾದ ಮೇಲೆ ಸೀರೆಯಲ್ಲಿ ಬರಿಯ ಒಡಲು(ಸ್ಕೆಲಿಟನ್)ಮಾತ್ರ. ಅವಳು ಸತ್ತು ಯಾವ ಕಾಲವಾಗಿರಬಹುದು, ಯೋಚಿಸಿ. ಆ ಘೋರವಾದ ಚಿತ್ರವನ್ನೂ ಯಾರೊ ಶೇರ್ ಮಾಡಿದ್ದ ನೆನಪು.
ಜಪಾನಿನಲ್ಲಿ 80ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರದ್ದೇ ಹೆಚ್ಚಿನ ಜನಸಂಖ್ಯೆ ಎಂದು ಮೊನ್ನೆ ಎಲ್ಲೋ ಓದಿದ ನೆನಪು. ಸರ್ಕಾರ ಮಕ್ಕಳು ಮಾಡಿಕೊಳ್ಳೋದಕ್ಕೆ ಯುವ ಸಮಾಜಕ್ಕೆ ಇನ್ಸೆನ್ಟಿವ್ ಕೊಡುತ್ತದಂತೆ! ಮನೆಯ ಹಿರಿಯರು “ಕರ್ತ”ವಾಗಿದ್ದು ಹಿಂದೂ ಅವಿಭಾಜ್ಯ ಕುಟುಂಭದಲ್ಲಿ ಎಲ್ಲರೂ ಒಟ್ಟಿಗೆ ಬದುಕುವ ಕಾಲ ಹೋಗಿ, ನಗರಗಳಲ್ಲಿ Nuclear family ಅನ್ನೊ ಹೆಸರಿನಲ್ಲಿ ಗಂಡ-ಹೆಂಡತಿ,ಮಕ್ಕಳಷ್ಟೆ ಒಂದು ಮನೆಯಲ್ಲಿ ಇರುವಂತಹ ಏರ್ಪಾಡಾಯಿತು, ಹಿರಿಯರಿಗೆ ಆ ವ್ಯವಸ್ಥೆಯಲ್ಲಿ ಜಾಗವಿಲ್ಲದಂತಾಯಿತು,
ಇದೀಗ DINK-Double income no kids ಅಂತೆ. ಮಕ್ಕಳೇ ಇಲ್ಲದವರ ಹತ್ತಿರ, ನಿಮ್ಮಪ್ಪಾನನ್ನು ನೀನು ಕಡೆಗಣಿಸಿದರೆ, ನಿನ್ನ ಮಕ್ಕಳು ನಿನಗೂ ಅದನ್ನೇ ಮಾಡುತ್ತಾರೆಂದು ಹೇಳುವ ಪ್ರಮಯವೇ ಇರುವುದಿಲ್ಲ. “ರಾಹು-ಕೇತು ಮನೆಯಲ್ಲಿ ಇಲ್ಲ ತಾನೆ? ಇದ್ದರೆ ನನಗೆ ಬೇರೆಯ ಗಂಡು ಹುಡುಕಿ”,ಎಂದು ಅತ್ತೆಮಾವರನ್ನು ಸಂಬೋಧಿಸುವ ಭಾವಿ ಸೊಸೆಯ ಮಾತು…“ಅವರೇ ಇಲ್ಲದೆ ನಿನ್ನ ಗಂಡ ಭೂಮಿಗೆ ಬಂದದ್ದಾದರು ಹೇಗಮ್ಮ? “, ಅಂತ ಕೇಳಬೇಕೆನ್ನಿಸುತ್ತದೆ. “ಅಯ್ಯೊ ನಿಮ್ಮ ಕೆಲಸ ನೋಡ್ಕೊಂಡು ಹೋಗ್ರಿ. ನೀವಾ ಬಂದು ಸಂಸಾರ ಮಾಡುತ್ತೀರ?”,ಅಂತ ನಮಗೆ ವಾಪಸ್ಸು ಕೊಟ್ಟರೆ ಅಂತ ಭಯ!ಪ್ರಾಕ್ಟಿಕಲಿ, ಹೀಗೆ ಫೇಸ್ ಬುಕ್ಕಲ್ಲಿ ಗೀಚುವುದಲ್ಲದೆ, ನಮ್ಮಪ್ಪಾ ಅಮ್ಮನಿಗೆ ಆ ಒಂಟಿತನದ ಬದುಕನ್ನು ತಪ್ಪಿಸುವುದಷ್ಟೇ ನನ್ನಿಂದ ಸಾಧ್ಯ! ನಿಮಗೇನನ್ನಿಸುತ್ತದೆ?