ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್‌ ಪಾಲಿಸಲೇಬೇಕು

By Suvarna News  |  First Published Jan 18, 2021, 3:58 PM IST

ಮಕ್ಕಳನ್ನು ಸಾಕೋದು ಅದೆಷ್ಟು ಒತ್ತಡದ ಕೆಲ್ಸ ಅನ್ನೋದು ಹೆತ್ತವರಿಗಷ್ಟೇ ಗೊತ್ತು.ಅದೆಷ್ಟೇ ವಿದ್ಯಾವಂತ ದಂಪತಿಗಳಾದ್ರೂ ಮಗುವಾದ ಮೇಲೆ ಅದರ ಪಾಲನೆ,ಪೋಷಣೆ ಬಗ್ಗೆ ಅವರಲ್ಲಿ ಒಂದಿಷ್ಟು ಅನುಮಾನಗಳು, ಗೊಂದಲಗಳು ಮೂಡೋದು ಸಹಜ. ಮಗುವನ್ನು ಬೆಳೆಸೋ ಸರಿಯಾದ ವಿಧಾನ ಯಾವುದು? ಪೇರೇಂಟಿಂಗ್‌  ಸ್ಟ್ರೆಸ್‌ ಕಡಿಮೆ ಮಾಡಿಕೊಳ್ಳೋದು ಹೇಗೆ ಎಂಬುವರಿಗೆ ಇಲ್ಲಿವೆ 9 ಟಿಪ್ಸ್‌.


ಮಕ್ಕಳನ್ನು ಅದೆಷ್ಟೇ ಕಾಳಜಿ, ಮುತುವರ್ಜಿಯಿಂದ ನೋಡಿಕೊಂಡ್ರೂ ಏನೋ ಒಂದು ಕೊರತೆ ಪೋಷಕರ ಮನಸ್ಸನ್ನೂ ಕಾಡಿಯೇ ಕಾಡುತ್ತೆ.ಹಾಲುಗಲ್ಲದ ಪುಟಾಣಿಯೇ ಇರಲಿ, ಮೀಸೆ ಹೊತ್ತ ಹದಿಹರೆಯ ಮಗನೇ ಇರಲಿ, ಇಂಥದೊಂದು ಅಪೂರ್ಣತೆ ಪ್ರತಿ ತಂದೆ-ತಾಯಿಯನ್ನೂ ಬಾಧಿಸುತ್ತೆ.ಇದೇ ಕಾರಣಕ್ಕೆ ಮಕ್ಕಳನ್ನು ಬೆಳೆಸೋದು ಜಗತ್ತಿನ ಕಠಿಣ ಕೆಲಸಗಳಲ್ಲೊಂದು ಎನ್ನೋದು. ಈಗಂತೂ ತಂದೆ-ತಾಯಿ ಇಬ್ಬರೂ ಉದ್ಯೋಗಸ್ಥರಾಗಿರೋ ಕಾರಣ ಮಕ್ಕಳ ಪಾಲನೆ ಶ್ರಮದಾಯಕ ಹಾಗೂ ಒತ್ತಡಕಾರಿ. ಮೈಂಡ್‌ಫುಲ್‌  ಪೇರೇಂಟಿಂಗ್‌ ಎಂಬ ಹೊಸ ಕಾನ್ಸೆಪ್ಟ್‌ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿದ್ರೂ ಮಕ್ಕಳ ಬೆಳವಣಿಗೆಗೆ ಸಂಬಂಧಿಸಿ ಹೆತ್ತವರ ತಲೆಯೊಳಗೆ ಕೊರೆಯುವ ಪ್ರಶ್ನೆಗಳು, ಅನುಮಾನಗಳು, ತಪ್ಪಿತಸ್ಥ ಭಾವನೆಗಳು ಇನ್ನೂ ತಗ್ಗಿಲ್ಲ.ಹೀಗಿರೋವಾಗ ಮಕ್ಕಳ ಪಾಲನೆ ಬಗ್ಗೆ ನಿಮ್ಗೆ ನೆಮ್ಮದಿ, ತೃಪ್ತಿ ಮೂಡಬೇಕೆಂದ್ರೆ ನೀವು ಈ 9 ಟಿಪ್ಸ್‌ ಪಾಲಿಸೋದು ಉತ್ತಮ.

ಸಿಂಗಲ್ ಆಗಿರೋರು ಮಾಡುವ ಸಾಮಾನ್ಯ ತಪ್ಪುಗಳಿವು

Tap to resize

Latest Videos

1.ಮಗುವಿನ ಆತ್ಮಾಭಿಮಾನ ಹೆಚ್ಚಿಸಿ
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎನ್ನುತ್ತಾರೆ.  ಹೆತ್ತವರ ಮಾತು, ವರ್ತನೆ ಮಗುವಿನ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತೆ. ಒಂದರ್ಥದಲ್ಲಿ ಮಗುವಿನ ಆತ್ಮಾಭಿಮಾನ ಅನ್ನೋದು ಹೆತ್ತವರ ಮಾತು, ವರ್ತನೆ ಆಧಾರದಲ್ಲೇ ರೂಪುಗೊಳ್ಳುತ್ತೆ. ಮಗು ಒಳ್ಳೆಯ ಕೆಲ್ಸ ಮಾಡಿದಾಗ ವೆರಿ ಗುಡ್‌, ವೆಲ್‌ ಡನ್‌ ಅನ್ನೋ ಪುಟ್ಟ ಪದಗಳು ಹೆತ್ತವರ ಬಾಯಿಯಿಂದ ಬಂದ್ರೂ ಅದು ಮಗುವಿಗೆ ಹೆಮ್ಮೆಯ ಸಂಗತಿ. ಪುಟ್ಟ ಶ್ಲಾಘನೆ ಮಗುವಿನ ಆತ್ಮವಿಶ್ವಾಸ ಹೆಚ್ಚಿಸುತ್ತೆ. ಹಾಗೆಯೇ ಸ್ವತಂತ್ರವಾಗಿ ಕೆಲ್ಸ ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಿದಾಗ ಅವರಿಗೆ ಅವರ ಸಾಮರ್ಥ್ಯದ ಮೇಲೆ ನಂಬಿಕೆ ಮೂಡುತ್ತೆ, ಮಾನಸಿಕವಾಗಿ ಇನ್ನಷ್ಟು ಬಲಿಷ್ಠರಾಗುತ್ತಾರೆ. ಕೆಲವೊಮ್ಮೆ ಮಕ್ಕಳನ್ನು ಬೈಯಲು ಬಳಸೋ ಪದಗಳು ಅಥವಾ ಇತರರೊಂದಿಗೆ ಹೋಲಿಸೋದು ಅವರ ಆತ್ಮಾಭಿಮಾನ ಕುಗ್ಗಿಸುತ್ತೆ.ಹೀಗಾಗಿ ಮಕ್ಕಳೊಂದಿಗೆ ಮಾತಾಡೋವಾಗ ಹೆತ್ತವರು ಪದ ಬಳಕೆ ಬಗ್ಗೆ ಎಚ್ಚರ ವಹಿಸಬೇಕು. ಮಗುವಿನ ವರ್ತನೆಯನ್ನು ನೀವು ಇಷ್ಟಪಡದಿದ್ರೂ ಅವರನ್ನು ತುಂಬಾ ಪ್ರೀತಿಸುತ್ತೀರಿ ಎಂಬ ಸಂದೇಶ ಸ್ಪಷ್ಟವಾಗಿ ರವಾನೆಯಾಗಬೇಕು.

2. ಒಳ್ಳೆತನವನ್ನು ಗುರುತಿಸಿ
ದಿನದಲ್ಲಿ ನೀವು ಮಗುವಿಗೆ ಎಷ್ಟು ಬಾರಿ ಬೈದಿದ್ದೀರಿ ಅಥವಾ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದೀರಿ ಎಂಬುದನ್ನು ಲೆಕ್ಕ ಹಾಕಿ. ಖಂಡಿತಾ ನಿಮ್ಗೆ ಆಶ್ಚರ್ಯದ ಜೊತೆ ನಾಚಿಕೆಯೂ ಆಗುತ್ತೆ. ಅಷ್ಟೊಂದು ಬಾರಿ ನೀವು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುತ್ತೀರಿ. ನೀವೇ ಯೋಚಿಸಿ, ಆಫೀಸ್‌ನಲ್ಲಿ ನಿಮ್ಮ ಬಾಸ್‌ ನಿಮ್ಮೊಂದಿಗೆ ಹೀಗೆ ವ್ಯವಹರಿಸಿದ್ರೆ ಬೇಸರವಾಗುತ್ತೋ ಇಲ್ಲವೋ? ಆಗುತ್ತೆ ತಾನೇ. ಅದೇರೀತಿ ನಿಮ್ಮ ವರ್ತನೆಯಿಂದ ಮಗುವಿಗೂ ಬೇಸರವಾಗುತ್ತೆ. ಯಾರಾದ್ರೂ ನಮ್ಮನ್ನು ಹೊಗಳಿದಾಗ ಖುಷಿಯ ಜೊತೆ ಆತ್ಮವಿಶ್ವಾಸವೂ ಹೆಚ್ಚುತ್ತೆ ಅಲ್ವಾ! ಹಾಗೆಯೇ ಮಗುವಿನ ಒಳ್ಳೆಯ ಗುಣಗಳನ್ನು ಗುರುತಿಸಿ ದಿನದಲ್ಲಿ ಒಮ್ಮೆಯಾದ್ರೂ ಅವರನ್ನು ಶ್ಲಾಘಿಸಿದ್ರೆ, ಅಭಿನಂದಿಸಿದ್ರೆ ಅವರೆಷ್ಟು ಖುಷಿ ಪಡುತ್ತಾರೆ. ಮುಂದೆ ಒಳ್ಳೆಯ ಕೆಲ್ಸಗಳನ್ನು ಮಾಡಲು ನಿಮ್ಮ ಪುಟ್ಟ ಪುಟ್ಟ ಶ್ಲಾಘನೆಗಳೇ ಪ್ರೇರಣೆಯಾಗುತ್ತವೆ.

ಲೈಂಗಿಕತೆಯ ಬಗ್ಗೆ ಪುರುಷರು ತಿಳಿದುಕೊಳ್ಳಲೇಬೇಕಾದ ವಿಷ್ಯಗಳು

3.ಶಿಸ್ತಿನ ಪಾಠದೊಂದಿಗೆ ರಾಜೀ ಬೇಡ
ಮಕ್ಕಳಿಗೆ ಶಿಸ್ತಿನ ಪಾಠ ಕಲಿಸೋದು ಅಗತ್ಯ. ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರಿಂದ ಹಿಡಿದು ಸ್ವಚ್ಛತೆಯ ಪಾಠದ ತನಕ ಪ್ರತಿಯೊಂದನ್ನು ಮಕ್ಕಳಿಗೆ ಕಲಿಸಬೇಕು. ಆಟ, ಊಟ, ಪಾಠ ಎಲ್ಲದಕ್ಕೂ ಸಮಯ ಮಿತಿ ನಿಗದಿಪಡಿಸೋದು ಅಗತ್ಯ. ಹೋಂವರ್ಕ್‌ ಪೂರ್ಣಗೊಳಿಸಿದ ಮೇಲೆಯೇ ಆಟ ಅಥವಾ ಟಿವಿ ನೋಡಬೇಕು ಎಂಬ ರೂಲ್ಸ್‌ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಅನುಸರಿಸುವಂತಿರಬೇಕು. 

4.ಸಮಯ ನೀಡಿ
ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಹುತೇಕ ಪಾಲಕರಿಗೆ ಸಾಧ್ಯವಾಗೋದಿಲ್ಲ. ಆದ್ರೆ ಅದೆಷ್ಟೇ ಬಿಡುವಿಲ್ಲದ ಕೆಲ್ಸವಿದ್ರೂ ದಿನದಲ್ಲಿ ಸ್ವಲ್ಪ ಹೊತ್ತು ಮಕ್ಕಳಿಗಾಗಿ ಮೀಸಲಿಡೋದು ಅಗತ್ಯ. ರಾತ್ರಿ ಒಟ್ಟಿಗೆ ಕುಳಿತು ಊಟ ಮಾಡೋದು, ಮಲಗೋ ಸಮಯದಲ್ಲಿ ಕಥೆ ಹೇಳೋದು, ಸ್ವಲ್ಪ ದೂರ ಜೊತೆಯಾಗಿ ವಾಕ್‌ ಮಾಡೋದು ಇವೆಲ್ಲ ಮಕ್ಕಳು ಮತ್ತು ಹೆತ್ತವರ ನಡುವಿನ ಬಾಂಡಿಂಗ್‌ ಗಟ್ಟಿಗೊಳಿಸುತ್ತೆ. ಉದ್ಯೋಗಸ್ಥ ಪಾಲಕರು ಮಕ್ಕಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವೆಂದು ಪಶ್ಚತ್ತಾಪ ಪಡೋ ಬದಲು ಅವರೊಂದಿಗೆ ಕಳೆಯೋ ಸಮಯವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು.

5.ನೀವೇ ರೋಲ್‌ ಮಾಡೆಲ್‌
ಮಕ್ಕಳಿಗೆ ಅಪ್ಪ-ಅಮ್ಮನೇ ರೋಲ್‌ ಮಾಡೆಲ್‌. ಅವರೇನು ಮಾಡುತ್ತಾರೆ ಎಂಬುದನ್ನು ನೋಡಿಯೇ ಮಗು ಕಲಿಯುತ್ತೆ. ಗೌರವ, ಸ್ನೇಹ, ಪ್ರಾಮಾಣಿಕತೆ, ಕರುಣೆ, ತಾಳ್ಮೆ ಮುಂತಾದ ಗುಣಗಳನ್ನು ಮಗುವಿನಲ್ಲಿ ಬಿತ್ತಲು ನೀವು ಕೂಡ ಈ ಗುಣಗಳನ್ನು ಪ್ರದರ್ಶಿಸೋದು ಅಗತ್ಯ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಇನ್ನೊಬ್ಬರಿಗೆ ನೆರವು ನೀಡೋದು, ಸಹಾಯ ಮಾಡಿದವರಿಗೆ ಧನ್ಯವಾದ ಅರ್ಪಿಸೋದು, ತಪ್ಪು ನಡೆದಾಗ ಕ್ಷಮೆ ಕೇಳೋದು ಮುಂತಾದ ಗುಣಗಳನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಿ ಕೊಡಿ. ಎಲ್ಲಕ್ಕಿಂತ ಮುಖ್ಯವಾಗಿ  ಇನ್ನೊಬ್ಬರು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತೀರೋ ಅದೇರೀತಿ ನಿಮ್ಮ ಮಗು ವರ್ತಿಸುವಂತೆ ನೋಡಿಕೊಳ್ಳಿ.

ಹೊಸ ವರ್ಷದಲ್ಲಿ ನಿಮ್ಮ ಮಗುವನ್ನು ಜಾಣಜಾಣೆಯರನ್ನಾಗಿಸಿ!

6. ಸಂವಹನ ಸ್ಪಷ್ಟವಾಗಿರಲಿ
ಮಕ್ಕಳಿಗೆ ನೀವು ಯಾವುದಾದ್ರೂ ಕೆಲ್ಸ ಮಾಡಲು ಸೂಚಿಸೋ ಮುನ್ನ ಅದರ ಕುರಿತು ಸಂಪೂರ್ಣ ವಿವರಣೆ ನೀಡಿ. ದೊಡ್ಡವರು ಹೇಗೆ ಯಾವುದೇ ಕೆಲ್ಸ ಮಾಡೋ ಮುನ್ನ ವಿವರಣೆ ಕೇಳುತ್ತಾರೋ ಹಾಗೆಯೇ ಮಕ್ಕಳಿಗೂ ಅಂಥ ಕುತೂಹಲ, ಅನುಮಾನ, ಪ್ರಶ್ಮೆಗಳಿರುತ್ತವೆ. ಅವುಗಳನ್ನು ಬಗೆಹರಿಸಿ. ಆಗ ಅವರಿಗೆ ತಾವು ಮಾಡೋ ಕೆಲ್ಸದ ಅಗತ್ಯ, ಮಹತ್ವ ಎರಡೂ ತಿಳಿಯುತ್ತೆ. ಅಲ್ಲದೆ, ನೀವು ಅವರಿಂದ ಏನು ಅಪೇಕ್ಷಿಸುತ್ತೀರಿ, ಆ ಕಾರ್ಯವನ್ನು ಸಮರ್ಪಕವಾಗಿ ಮಾಡೋದು ಹೇಗೆ ಎಂಬುದು ಕೂಡ ಗೊತ್ತಾಗುತ್ತೆ.

7.ಬದಲಾಗಲು ಅಂಜಿಕೆ ಬೇಡ
ಮಕ್ಕಳೊಂದಿಗೆ ಅಪ್ಪ-ಅಮ್ಮನೂ ಬೆಳೆಯಬೇಕಾಗುತ್ತೆ. ಮಗು ತಾನು ಹೇಳಿದಂತೆ ಕೇಳಿಲ್ಲ ಎಂದು ಬೇಸರಪಟ್ಟುಕೊಳ್ಳೋ ಬದಲು ಆತ ಅಥವಾ ಆಕೆ ಹಾಗೇಕೆ ಮಾಡಿದ್ರು ಎಂಬ ಬಗ್ಗೆ ಯೋಚಿಸೋದು ಒಳ್ಳೆಯದು. ಕೆಲವು ಮಕ್ಕಳು ಬೈದು ಬುದ್ಧಿ ಹೇಳಿದ್ರೆ ಕೇಳಲ್ಲ, ಅಂಥವರು ನಯವಾದ ಮಾತಿಗೆ ಬಗ್ಗುತ್ತಾರೆ. ಹೀಗಾಗಿ ಮಕ್ಕಳ ಮನೋರ್ವತನೆಗೆ ಅನುಗುಣವಾಗಿ ಹೆತ್ತವರು ಅವರೊಂದಿಗೆ ವ್ಯವಹರಿಸೋದು ಉತ್ತಮ. ಅದ್ರಲ್ಲೂ ಹದಿಹರೆಯಕ್ಕೆ ಕಾಲಿಟ್ಟ ಮಕ್ಕಳೊಂದಿಗೆ ವ್ಯವಹರಿಸೋವಾಗ ಸಾಕಷ್ಟು ಎಚ್ಚರಿಕೆ ಅಗತ್ಯ. 

8. ನಿಮ್ಮ ಪ್ರೀತಿಯ ಆಳ ತಿಳಿಸಿ
ಪಾಲಕರಾಗಿ ಮಕ್ಕಳು ಸರಿದಾರಿಯಲ್ಲಿ ನಡೆಯುವಂತೆ ನಿರ್ದೇಶಿಸೋದು ನಿಮ್ಮ ಕರ್ತವ್ಯ. ಮಗು ತಪ್ಪು ಮಾಡಿದಾಗ ಗದರಿಸಿದ್ರೆ, ಶಿಕ್ಷೆ ನೀಡಿದ್ರೆ ಖಂಡಿತಾ ತಪ್ಪಿಲ್ಲ. ಆದ್ರೆ ತಪ್ಪು ಮಾಡೋದು ಸಹಜ, ಅದನ್ನು ಸರಿಪಡಿಸೋದು ಮುಖ್ಯ ಎಂಬ ಸಂದೇಶ ಮಗುವಿಗೆ ತಲುಪಬೇಕು. ಅಷ್ಟೇ ಅಲ್ಲ, ನೀವೆಷ್ಟೇ ಗದರಿಸಿದ್ರೂ ಶಿಕ್ಷೆ ನೀಡಿದ್ರೂ ಅವರನ್ನು ಅಪಾರವಾಗಿ ಪ್ರೀತಿಸುತ್ತೀರಿ ಎಂಬುದನ್ನು ಮಗುವಿಗೆ ಮನದಟ್ಟು ಮಾಡಬೇಕು.

9.ಅಗತ್ಯ ಹಾಗೂ ಮಿತಿಗಳ ಅರಿವಿರಲಿ
ನೀವೊಬ್ಬ ಅಪೂರ್ಣ ಪಾಲಕ ಎಂಬ ಸತ್ಯವನ್ನು ಒಪ್ಪಿಕೊಳ್ಳೋದ್ರಲ್ಲಿ ತಪ್ಪೇನಿದೆ? ಮನುಷ್ಯನೆಂದ ಮೇಲೆ ಬಲಹೀನತೆಗಳು ಇರುತ್ತವೆ. ಅವುಗಳನ್ನು ಗುರುತಿಸಿ, ಒಪ್ಪಿಕೊಳ್ಳಿ. ಹಾಗೆಯೇ ನಿಮ್ಮ ಸಾಮರ್ಥ್ಯದ ಅರಿವೂ ಇರಲಿ. ಮಕ್ಕಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ವರ್ತಿಸದಿದ್ದಾಗ ಸಿಟ್ಟಾಗೋ ಬದಲು ವಾಸ್ತವ ಒಪ್ಪಿಕೊಳ್ಳಿ. ಎಲ್ಲವನ್ನೂ ಒಮ್ಮೆಗೆ ಸರಿಪಡಿಸೋ ಬದಲು ನೀವು ಮಗುವಿನ ಯಾವ ಗುಣ ಅಥವಾ ವರ್ತನೆಯನ್ನು ತಕ್ಷಣಕ್ಕೆ ಬದಲಾಯಿಸಬೇಕಾದ ಅಗತ್ಯವಿದೆಯೋ ಅದಕ್ಕಷ್ಟೇ ಮಹತ್ವ ನೀಡಿ. ಇವೆಲ್ಲದರ ಜೊತೆ ನಿಮಗಾಗಿ ಒಂದಿಷ್ಟು ಸಮಯ ಮೀಸಲಿಡಿ. ಮನಸ್ಸಿಗೆ ಖುಷಿ ನೀಡೋ ಕೆಲ್ಸದಲ್ಲಿ ಪ್ರತಿದಿನ ಸ್ವಲ್ಪ ಸಮಯ  ತೊಡಗಿಕೊಳ್ಳಿ. ಮಕ್ಕಳನ್ನು ಸಾಕೋ ಸಂಪೂರ್ಣ ಜವಾಬ್ದಾರಿಯನ್ನು ಒಬ್ಬರ ಹೆಗಲ ಮೇಲೆ ಹೊತ್ತುಕೊಳ್ಳೋ ಬದಲು ನಿಮ್ಮ ಸಂಗಾತಿ, ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಿ. ಒತ್ತಡ ತಗ್ಗಿದಷ್ಟೂ ಪಾಲಕತ್ವದ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತೆ. 

click me!