ಮಾಹಿತಿ, ಸಂವಹನ, ತಂತ್ರಜ್ಞಾನ, ಮೊಬೈಲ್ ತಂತ್ರಜ್ಞಾನಗಳಲ್ಲದೆ ಕೃತಕ ಬುದ್ಧಿಮತ್ತೆಯ ಚಾಟ್‌ಜಿಪಿಟಿಯಂತಹ ವಿಚ್ಛಿದ್ರಕಾರಕ ಆವಿಷ್ಕಾರಗಳು ಮನುಷ್ಯನ ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ ತರಬಹುದು. ಎಂದು ಪ್ರೊ.ಟಿ.ಎಂ.ಸೀತಾರಾಮ್ ಆತಂಕ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ (ಫೆ.28): ಮಾಹಿತಿ, ಸಂವಹನ, ತಂತ್ರಜ್ಞಾನ, ಮೊಬೈಲ್ ತಂತ್ರಜ್ಞಾನಗಳಲ್ಲದೆ ಕೃತಕ ಬುದ್ಧಿಮತ್ತೆಯ ಚಾಟ್‌ಜಿಪಿಟಿಯಂತಹ ವಿಚ್ಛಿದ್ರಕಾರಕ ಆವಿಷ್ಕಾರಗಳು ಮನುಷ್ಯನ ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ ತರಬಹುದು. ಅನೇಕ ಉದ್ಯೋಗಗಳು ಮಾಯವಾಗಿ, ಹೊಸ ಮಾದರಿಯ ಉದ್ಯೋಗಗಳ ಸೃಷ್ಟಿಯಾಗಬಹುದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಟಿ.ಎಂ.ಸೀತಾರಾಮ್ ಆತಂಕ ವ್ಯಕ್ತಪಡಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆದ ಹತ್ತನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು ವಿದ್ಯಾರ್ಥಿಗಳು ತಮ್ಮನ್ನು ತಾವು ನವೀಕರಿಸಿಕೊಳ್ಳುವ ನಿರಂತರ ಕಲಿಕೆಯೊಂದೇ ನಿರ್ಣಾಯಕ ಪರಿಹಾರ ಎಂದರು. ಸಮಾಜಕ್ಕೆ ಮೌಲ್ಯವನ್ನು ಸೃಷ್ಟಿಸುವ ಹೊಸ ಅಥವಾ ಸುಧಾರಿತ ಉತ್ಪನ್ನಗಳು, ಪ್ರಕ್ರಿಯೆಗಳು, ತಂತ್ರಜ್ಞಾನಗಳು ಅಥವಾ ವ್ಯವಹಾರ ಮಾದರಿಗಳ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಸಂಶೋಧನೆ ಒಳಗೊಂಡಿದೆ ಎಂದರು.
‘ಶಿಕ್ಷಣವು ಕೇವಲ ಜ್ಞಾನವನ್ನು ಸಂಪಾದಿಸುವುದಲ್ಲ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ-ಪರಿಹರಣೆ, ಸಂವಹನ ಮತ್ತು ನಾಯಕತ್ವದಂತಹ ಪ್ರಮುಖ ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು. ಈ ಕೌಶಲ್ಯಗಳು ನೀವು ಆಯ್ಕೆ ಮಾಡುವ ಯಾವುದೇ ವೃತ್ತಿ ಅಥವಾ ಮಾರ್ಗದಲ್ಲಿ ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತವೆ’ಎಂದರು. ಸಂಶೋಧನೆ ಮತ್ತು ನಾವೀನ್ಯತೆ ಎರಡು ನಿಕಟ ಸಂಬಂಧಿತ ಪರಿಕಲ್ಪನೆಗಳಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಮತ್ತು ಪ್ರಗತಿಯನ್ನು ಚಾಲನೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆವಿಷ್ಕಾರವು ಹೆಚ್ಚಾದಂತೆ ಅಸ್ತಿತ್ವದಲ್ಲಿರುವ ಉತ್ಪನ್ನಗಳು ಅಥವಾ ಪ್ರಕ್ರಿಯೆಗಳಿಗೆ ಸಣ್ಣ ಸುಧಾರಣೆಗಳನ್ನು ಪಡೆದುಕೊಂಡು ಹೊಸ ಮಾರುಕಟ್ಟೆ ಮತ್ತು ಕೈಗಾರಿಕೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಒತ್ತಿಹೇಳಿದರು ಮತ್ತು ಅದು ದೈಹಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಂತೆ ಇಡೀ ವ್ಯಕ್ತಿಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಶಿಕ್ಷಣವು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ಮಾತ್ರವಲ್ಲ, ಶ್ರೇಷ್ಠತೆಗಾಗಿ ಶ್ರಮಿಸಲು ಮತ್ತು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಪ್ರೇರೇಪಿಸುವುದು ಮುಖ್ಯವಾಗಿದೆ ಎಂದು ಸಲಹೆ ನೀಡಿದರು.
ಭಾರತದ ವೆಚ್ಚ ನಿಯಂತ್ರಣದ ಸ್ಪರ್ಧಾತ್ಮಕತೆಯು ಹೊಸ ಜ್ಞಾನದ ಆರ್ಥಿಕತೆಯನ್ನು ಸೃಷ್ಟಿಸುವ ಅನೇಕ ಅವಕಾಶಗಳನ್ನು ಸೆಳೆಯುವ, ಸಂಶೋಧನೆ ನಡೆಸುವ ಪರಿಕ್ರಮಗಳು ಎಐಸಿಟಿಇಗೆ ಪ್ರಯೋಜನವಾಗಿವೆ. ಭಾರತೀಯ ವಿದ್ಯಾರ್ಥಿಗಳಲ್ಲಿ ನಾಯಕತ್ವ ರೂಪಿಸುವಲ್ಲಿ, ನವೋದ್ಯಮ ಸ್ಥಾಪಿಸು ಉದ್ದೇಶದಿಂದ ಎಐಸಿಟಿಯು ಹಲವಾರು ನಿಯಂತ್ರಣ ನಿಬಂಧನೆಗಳಲ್ಲಿ ಬದಲಾವಣೆ ತಂದಿದೆ. ಹಲವಾರು ಪರಿವರ್ತಕ ಶಿಕ್ಷಣವನ್ನು ಅಳವಡಿಸಿ, ಸುಸ್ಥಿರ ಸಮಾಜಕ್ಕಾಗಿ ಹೊಸ ಜ್ಞಾನವನ್ನು ಸೃಷ್ಟಿಸುತ್ತಿದೆ. 2035ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಶೇ 50ಕ್ಕೆ ಹೆಚ್ಚಿಸುವ ಮೂಲಕ ಭಾರತವನ್ನು ಜಾಗತಿಕ ಶೈಕ್ಷಣಿಕ ಜ್ಞಾನದ ಸೂಪರ್ ಪಾವರ್ ಮಾಡುವುದು ತಮ್ಮ ಗುರಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈವಿಧ್ಯಮಯ ದೃಷ್ಟಿಕೋನಗಳು, ಸಂಸ್ಕೃತಿಗಳು ಮತ್ತು ಜನರಿಂದ ತುಂಬಿರುವ ಪ್ರಪಂಚವು ಬಹುದೊಡ್ಡದಾಗಿದೆ. ಹೊಸ ಕಲಿಕೆ, ಆಲೋಚನೆ, ಆಲೋಚನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಸವಾಲುಗಳು, ಅಡ್ಡಿ ಆತಂಕಗಳು ಅನುಭವದ ಪರಿಧಿಯನ್ನು ವಿಸ್ತರಿಸುತ್ತವೆ. ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುತ್ತವೆ. ಎಲ್ಲವನ್ನೂ ತಾಳ್ಮೆಯಿಂದ ಎದುರಿಸಿ, ಯಶಸ್ಸಿನ ಗುರಿ ಮುಟ್ಟಲು ಮುಂದಾಗಬೇಕು ಎಂದರು.
ಭಾರತ ವಿಶ್ವಗುರು ಸ್ಥಾನದಲ್ಲಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್
ಕುಲಪತಿ ಪ್ರೊ.ಬಿ.ಡಿ.ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ವಿಶ್ವವಿದ್ಯಾನಿಲಯವು ಕೇವಲ ಹನ್ನೆರಡು ವರ್ಷಗಳಲ್ಲಿ ಹಲವು ಶೈಕ್ಷಣಿಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಉನ್ನತ ಶಿಕ್ಷಣದ ಆಶಯಕ್ಕೆ ಬದ್ಧವಾಗಿ, ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಸಾಮಾಜಿಕ ಜವಾಬ್ದಾರಿ, ನೈತಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ. ಬೋಧನೆ, ಸಂಶೋಧನೆ, ಉನ್ನತ ಮೌಲ್ಯಗಳಿಗೆ ಆದ್ಯತೆ ನೀಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಮಾರುಕಟ್ಟೆಗೆ ಅಗತ್ಯವಿರುವ ವೃತ್ತಿ ಆಧಾರಿತ ಕೌಶಲ್ಯಯುಕ್ತ ಶಿಕ್ಷಣವನ್ನು ನೀಡಲು ಗಮನ ನೀಡಿದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ, ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ದಾವಣಗೆರೆ ವಿವಿಯಲ್ಲಿ 10 ನೇ ಘಟಿಕೋತ್ಸವದ ಸಂಭ್ರಮ, 5 ಸ್ವರ್ಣ ಪದಕ ಪಡೆದ ಕೂಲಿ ಕಾರ್ಮಿಕನ ಪುತ್ರಿ
ಘಟಿಕೋತ್ಸವ ಸಮಾರಂಭದಲ್ಲಿ ಶಿಕ್ಷಣ, ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಕಾರ್ಯ ನಿರ್ವಹಿಸಿದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಉದ್ಯಮಿ ಮತ್ತು ಶಿಕ್ಷಣ ಪ್ರೇಮಿ ಅಥಣಿ ವೀರಣ್ಣ ಮತ್ತು ಸಮಾಜ ಸೇವೆಗಾಗಿ ಹರಪನಹಳ್ಳಿಯ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಅವರನ್ನು ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಸೇವೆಗಾಗಿ ಸಿದ್ಧಗಂಗಾ ಸಂಸ್ಥೆಯ ಶಿವಣ್ಣ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಗೌರವ ನೀಡಿ ಸನ್ಮಾನಿಸಲಾಯಿತು. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು.