ಈವರೆಗಿನ ಚುನಾವಣೆಗಳಲ್ಲಿ ಕ್ಷೇತ್ರದೊಳಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಆದರೆ, ಈ ಬಾರಿ ಬಿಜೆಪಿ ಸಹ ಎರಡು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಮೇ.06): ರೇಷ್ಮೆ ನಗರಿ ಎಂದು ಹೆಸರು ಪಡೆದಿರುವ ರಾಮನಗರ ಕ್ಷೇತ್ರ ಎರಡು ದಶಕಗಳಿಂದ ಜೆಡಿಎಸ್‌ನ ಪಾರುಪತ್ಯದ ಜೊತೆಗೆ ಕುಟುಂಬ ರಾಜಕಾರಣಕ್ಕೆ ನೆಲೆಯಾಗಿ ನಿಂತಿದೆ. ಇದಕ್ಕೆ ಶತಾಯಗತಾಯ ಇತಿಶ್ರೀ ಹಾಡಲು ಕಾಂಗ್ರೆಸ್ ಮತ್ತು ಬಿಜೆಪಿ ಮುಂದಾಗಿರುವ ಕಾರಣ ತ್ರಿಕೋನ ಸ್ಪರ್ಧೆಗೆ ಮುನ್ನುಡಿ ಬರೆದಿದೆ.
ಈವರೆಗಿನ ಚುನಾವಣೆಗಳಲ್ಲಿ ಕ್ಷೇತ್ರದೊಳಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. ಆದರೆ, ಈ ಬಾರಿ ಬಿಜೆಪಿ ಸಹ ಎರಡು ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಇದೇ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸತ್ ಚುನಾವಣೆ ಸೋಲು ಕಂಡವರು. ಬಿಜೆಪಿ ಅಭ್ಯರ್ಥಿ ಗೌತಮ್ ಗೌಡ ಅವರಿಗೆ ಮೊದಲ ಚುನಾವಣೆಯಾಗಿದೆ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ ಮೋಸದಿಂದ ಸೋಲಿಸಿದ್ರು: ದೇವೇಗೌಡ ಕಣ್ಣೀರು!
ರಾಜಕೀಯ ಆಶ್ರಯ ಪಡೆಯುವ ತವಕ:
ಮಾಜಿ ಪ್ರಧಾನಿ ದೇವೇಗೌಡರ ರಾಜಕೀಯ ಹಾಸನದಿಂದ ಆರಂಭಗೊಂಡರೂ ಸೋತು ಸುಣ್ಣವಾಗಿದ್ದ ಅವರಿಗೆ ರಾಮನಗರ ರಾಜಕೀಯವಾಗಿ ಮರು ಹುಟ್ಟು ನೀಡಿತು. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾರವರ ಪಾಲಿಗೆ ಕರ್ಮಭೂಮಿ. ಈಗ ಅದೇ ಕುಟುಂಬದ ಮೂರನೇ ತಲೆಮಾರಾಗಿರುವ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಹುರಿಯಾಳಾಗಿ ರಾಜಕೀಯ ಆಶ್ರಯ ಪಡೆಯುವ ತವಕದಲ್ಲಿದ್ದಾರೆ.
ಕುಟುಂಬದ ಕುಡಿ ನಿಖಿಲ್ ಅವರ ರಾಜಕೀಯ ಮರು ಜನ್ಮಕ್ಕೆ ರಾಮನಗರದಲ್ಲಿಯೇ ವೇದಿಕೆ ಕಲ್ಪಿಸುವ ಆಲೋಚನೆ ಕುಮಾರಸ್ವಾಮಿ ಅವರಲ್ಲಿತ್ತು. ಇದೇ ಉದ್ದೇಶದಿಂದ ನಿಖಿಲ್ ಮದುವೆ ರಾಮನಗರದಲ್ಲಿ ನೆರವೇರಿಸಿದರು. ನಂತರ ಅವರ ತಾಯಿ ಅನಿತಾರವರು ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದರು.
ಈಗ ರಾಮನಗರವು ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದು 15 ವರ್ಷ ಪೂರೈಸಿದೆ. ಸರ್ಕಾರಿ ಕಟ್ಟಡಗಳು ತಲೆ ಎತ್ತಿರುವುದು ಬಿಟ್ಟರೆ ಮಹತ್ವದ ಬದಲಾವಣೆ ಏನೂ ಆಗಿಲ್ಲ. ನಿರೀಕ್ಷೆಯಂತೆ ಕ್ಷೇತ್ರ ಅಭಿವೃದ್ಧಿ ಹೊಂದಿಲ್ಲ. ಇಲ್ಲಿಂದ ಗೆದ್ದವರು ಕೈಗೆ ಸಿಗುವುದಿಲ್ಲ ಎಂಬ ಕೊರಗು ಜನರನ್ನು ಪದೇ ಪದೇ ಕಾಡುತ್ತಿದೆ.
ಜೆಡಿಎಸ್ ಮೈತ್ರಿ ಸರ್ಕಾರದ ಭಾಗವಾಗಿದ್ದಾಗ ಪಕ್ಷದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಲಿಲ್ಲ. ಕೋವಿಡ್ ಸಂಕಷ್ಟಕಾಲದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಐದಾರು ತಿಂಗಳು ಕ್ಷೇತ್ರದತ್ತ ಸುಳಿಯಲೇ ಇಲ್ಲ. ಕಾರ್ಯಕರ್ತರು ಸ್ಪರ್ಧಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಕುಮಾರಸ್ವಾಮಿ ಕುಟುಂಬದವರು ದೂರ ಉಳಿಯುತ್ತಾರೆ.
ಜೆಡಿಎಸ್ ಅಭ್ಯರ್ಥಿಯನ್ನಾಗಿ ನಿಖಿಲ್ ಅವರನ್ನು ಘೋಷಿಸುವುದಕ್ಕೂ ಮುನ್ನ ಪಕ್ಷದ ಮುಖಂಡರು - ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ತಾತಾ, ಮಗ, ಸೊಸೆಗಾಗಿ ಹೋರಾಟ ನಡೆಸಿದವರೇ ಈಗ ಮೊಮ್ಮಗನ ಗೆಲುವಿಗೂ ಶ್ರಮಿಸಬೇಕಿದೆ. ಇದು ಪಕ್ಷದ ಹಿರಿಯ ಮುಖಂಡರಲ್ಲಿ ಹಿಂಜರಿಕೆ ತರಿಸಿದೆ. ಇದೆಲ್ಲ ಕಾರಣಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಪಕ್ಷದ ಕೆಲ ಮುಖಂಡರಲ್ಲಿ ಸ್ವಲ್ಪ ಮಟ್ಟಿನ ಬೇಸರವೂ ಇದೆ.
ಸುಮಲತಾ ಅವರಿಂದ ಪ್ರತೀಕಾರಾಸ್ತ್ರ:
ಕುಮಾರಸ್ವಾಮಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಂಡ್ಯ ಸಂಸದೆ ಸುಮಲತಾ ರಾಮನಗರಕ್ಕೂ ಕಾಲಿಟ್ಟಿರುವುದು ದಳಪತಿಗಳ ನಿದ್ದೆಗೆಡಿಸಿರುವುದಂತು ಸುಳ್ಳಲ್ಲ. ಆದರೆ, ದೇವೇಗೌಡರ ಕುಟುಂಬದ ಮೇಲೆ ಕ್ಷೇತ್ರದ ಜನರಿಗಿರುವ ಪ್ರೀತಿ, ಜೆಡಿಎಸ್ ಒಕ್ಕಲಿಗರ ಪಕ್ಷವೆಂಬ ಟ್ಯಾಗ್ ಲೈನ್ ಮತ್ತು ಬಲಿಷ್ಠ ಕಾರ್ಯಕರ್ತರ ಪಡೆ ನಿಖಿಲ… ಅವರನ್ನು ಈ ಬಾರಿ ಗೆಲುವಿನ ದಡ ಸೇರಿಸಲಿದೆ ಎಂಬುದು ಜೆಡಿಎಸ್ ಕಾರ್ಯಕರ್ತರ ಅಭಿಮತ.
ಕಾಂಗ್ರೆಸ್ ಭದ್ರಕೋಟೆಯನ್ನು ಜೆಡಿಎಸ್ ವಶ ಪಡಿಸಿಕೊಂಡ ನಂತರ 2013ರ ಚುನಾವಣೆ ಹೊರತು ಪಡಿಸಿದರೆ ಬೇರೆ ಚುನಾವಣೆಗಳಲ್ಲಿ ಕೈಪಾಳಯಕ್ಕೆ ಸಮರ್ಥ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. 2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಇಕ್ಬಾಲ್ ಹುಸೇನ್ ಪ್ರಬಲ ಪೈಪೋಟಿ ನೀಡಿ ಪರಾಭವಗೊಂಡರು. ಈಗ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಡಿಕೆಶಿ ಬರದಿದ್ದರೆ ವದಂತಿಗೆ ಪುಷ್ಠಿ:
ಕಳೆದ ಚುನಾವಣೆಯಲ್ಲಿನ ಸೋಲು, ಕೋವಿಡ್ ಸಂಕಷ್ಟದಲ್ಲಿ ಜನರಿಗೆ ಸ್ಪಂದನೆ, ಕಷ್ಟವೆಂದು ಹೇಳಿಕೊಳ್ಳವ ಹಾಗೂ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಹಾಯ ಹಸ್ತ ಚಾಚುತ್ತಿರುವ ಇಕ್ಬಾಲ್ ಪರ ಅನುಕಂಪವೂ ಇದೆ. ಜೆಡಿಎಸ್‌ನ ಕುಟುಂಬ ರಾಜಕಾರಣ, ಕ್ಷೇತ್ರ ಅಭಿವೃದ್ಧಿ ಹೊಂದದಿರುವ ಬಗ್ಗೆ ಕಾಂಗ್ರೆಸ್ಸಿಗರು ಮತದಾರರಲ್ಲಿ ಅರಿವು ಮೂಡಿಸುವ ಜೊತೆಗೆ ಸ್ವಾಭಿಮಾನದ ಕಿಚ್ಚು ಹಚ್ಚುತ್ತಿದ್ದಾರೆ. ದಳದ ಮನೆಯಲ್ಲಿ ಮುನಿದಿರುವ ಮಖಂಡರನ್ನು ಕೈ ಪಾಳಯ ತನ್ನತ್ತ ಸೆಳೆದುಕೊಂಡು ಶಕ್ತಿ ವೃದ್ಧಿಸಿಕೊಳ್ಳುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲಿ ಕನಿಷ್ಠ 3 ಕ್ಷೇತ್ರಗಳಲ್ಲಾದರು ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಳ್ಳುವ ಸವಾಲಿದೆ. ಆದರೆ, ರಾಮನಗರಕ್ಕೆ ನಾನು ತಲೆಹಾಕುವುದಿಲ್ಲ, ಕನಕಪುರಕ್ಕೆ ನೀನು ತಲೆ ಹಾಕಬಾರದೆಂದು ಡಿಕೆಶಿ ಮತ್ತು ಎಚ್ ಡಿಕೆ ನಡುವೆ ಹೊಂದಾಣಿಕೆ ನಡೆದಿದೆ ಎಂಬ ವದಂತಿ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಡಿಕೆಶಿ ರಾಮನಗರ ಕ್ಷೇತ್ರದ ಪ್ರಚಾರ ಕಾರ್ಯದಿಂದ ದೂರ ಉಳಿದರೆ ವದಂತಿಗೆ ಪುಷ್ಠಿ ನೀಡಿದಂತಾಗುತ್ತದೆ.
ಬಿಜೆಪಿ ಸರ್ಕಾರವಿದ್ದರೂ ರಾಮನಗರದಲ್ಲಿ ಆ ಪಕ್ಷಕ್ಕೆ ಯಾವುದೇ ನೆಲೆ ಇಲ್ಲ. ಈ ಕ್ಷೇತ್ರದಲ್ಲಿ ಇದುವರೆಗೆ ಒಮ್ಮೆಯೂ ಗೆಲ್ಲಲಾಗದ ಬಿಜೆಪಿ, ಎರಡು ಬಾರಿ ಮಾತ್ರ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಈ ಬಾರಿ ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡರ ಪುತ್ರ ಗೌತಮ್ ಗೌಡ ಕಮಲ ಪಾಳಯದಿಂದ ಸ್ಪರ್ಧಿಸಿದ್ದು, ಅಭಿವೃದ್ಧಿ ಹೆಸರಿನಲ್ಲಿ ಮತದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಒಕ್ಕಲಿಗ ಮತಗಳ ಇಬ್ಭಾಗವಾಗುವ ಸಾಧ್ಯತೆ:
ಹಿಂದಿನ ಚುನಾವಣೆಗಳಲ್ಲಿ ಬೇರೆ ಪಕ್ಷಗಳಲ್ಲಿ ಸಮರ್ಥ ಒಕ್ಕಲಿಗ ಅಭ್ಯರ್ಥಿ ಸ್ಪರ್ಧಿಸದ ಕಾರಣ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್ ಪಾಲಾಗುತ್ತಿದ್ದವು. ಆದರೀಗ ನಿಖಿಲ್ ಜೊತೆಗೆ ಗೌತಮ್ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಆ ಸಮುದಾಯದ ಮತಗಳು ಇಬ್ಭಾಗವಾಗುವ ಸಾಧ್ಯತೆಗಳಿವೆ.
ಕುಮಾರಸ್ವಾಮಿಯಂಥ ಮತ್ತೊಬ್ಬ ಸಿಎಂ ಇಡೀ ದೇಶದಲ್ಲಿದ್ದರೆ ತೋರಿಸಿ: ದೇವೇಗೌಡ
ಮುಸ್ಲಿಂ ಸಮುದಾಯಕ್ಕೆ ಸೇರಿರುವ ಕಾರಣ ಇಕ್ಬಾಲ್ ಹುಸೇನ್ ಗೆ ಆ ಸಮುದಾಯದ ಮತಗಳು ಬೆನ್ನಿಗಿವೆ. ಡಿಕೆ ಸಹೋದರರು ಒಕ್ಕಲಿಗರ ಮತಗಳನ್ನು ವಿಭಜಿಸಿದರೆ ಹಾಗೂ ಬಿಜೆಪಿಯ ಗೌತಮ್ ಗೌಡ ಜೆಡಿಎಸ್ ಮತಗಳ ಬುಟ್ಟಿಗೆ ಕೈ ಹಾಕಿದರೆ ಕಾಂಗ್ರೆಸ್ ಗೆ ವರದಾನವಾಗುತ್ತದೆ.
ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮತಗಳು ಚದುರಿ ಹೋಗದಂತೆ ಕುಮಾರಸ್ವಾಮಿ ಎಚ್ಚರ ವಹಿಸಿ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪರಿಶಿಷ್ಟಜಾತಿ - ಪರಿಶಿಷ್ಟಪಂಗಡ ಮತ್ತು ಅಲ್ಪಸಂಖ್ಯಾತ ಮತಗಳು ಒಗ್ಗಟ್ಟು ಪ್ರದರ್ಶಿಸಿದರೆ ಈ ಮತಗಳೂ ನಿರ್ಣಾಯಕವಾಗಲಿವೆ.