Ticket Fight: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸೇ ಇಲ್ಲಿ ಬಂಡವಾಳ!

By Govindaraj S  |  First Published Dec 19, 2022, 3:00 AM IST

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ಸಕ್ಕರೆ ಲಾಬಿ, ಇನ್ನೊಂದೆಡೆ ಹೊಂದಾಣಿಕೆ ಹಾಗೂ ಒಳ ಒಪ್ಪಂದದ ರಾಜಕಾರಣ ಮಾಮೂಲಿ. ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ಪ್ರತಿಷ್ಠೆ ಮೇಲೆಯೇ ರಾಜಕಾರಣ ನಿಂತಿದೆ. 


ಶ್ರೀಶೈಲ ಮಠದ

ಬೆಳಗಾವಿ (ಡಿ.19): ಗಡಿ ಜಿಲ್ಲೆ ಬೆಳಗಾವಿಯಲ್ಲಿ ಒಂದೆಡೆ ಸಕ್ಕರೆ ಲಾಬಿ, ಇನ್ನೊಂದೆಡೆ ಹೊಂದಾಣಿಕೆ ಹಾಗೂ ಒಳ ಒಪ್ಪಂದದ ರಾಜಕಾರಣ ಮಾಮೂಲಿ. ಇಲ್ಲಿ ಪಕ್ಷಗಳಿಗಿಂತ ವೈಯಕ್ತಿಕ ಪ್ರತಿಷ್ಠೆ ಮೇಲೆಯೇ ರಾಜಕಾರಣ ನಿಂತಿದೆ. ಪ್ರಸ್ತುತ ಬೆಳಗಾವಿ ಲೋಕಸಭಾ ಕ್ಷೇತ್ರವ್ಯಾಪ್ತಿಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ವೈಯಕ್ತಿಕ ಪ್ರತಿಷ್ಠೆ ಮೇಲೆ ಜಾರಕಿಹೊಳಿ ಸಹೋದರರು ತಮ್ಮ ಕ್ಷೇತ್ರಗಳನ್ನು ಗಟ್ಟಿಯಾಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸತೀಶ ಜಾರಕಿಹೊಳಿ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್‌ ತಯಾರಿ ನಡೆಸಿದೆ. ‘ಕೈ’-‘ಕಮಲ’ದ ನಡುವೆ ನೇರ ಹಣಾಹಣಿ ಇದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಮುನ್ನೆಲೆಗೆ ಬಂದಿದೆ. ಜೆಡಿಎಸ್‌ನದು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ. ಈ ಮಧ್ಯೆ, ಜಿಲ್ಲಾ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಲು ಆಮ್‌ ಆದ್ಮಿ ಪಾರ್ಟಿ ಮುಂದಾಗಿದೆ.

Tap to resize

Latest Videos

1. ಸವದತ್ತಿ: ಮಾಮನಿ ಕ್ಷೇತ್ರ ಕಸಿಯಲು ಕಾಂಗ್ರೆಸ್‌ ಸಿದ್ಧತೆ
ಸವದತ್ತಿ, ಬಿಜೆಪಿಯ ಭದ್ರಕೋಟೆ. ಬಿಜೆಪಿ ಶಾಸಕರಾಗಿದ್ದ ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವುಗೊಂಡಿದೆ. ಈ ಕ್ಷೇತ್ರದ ಮೇಲೆ ಮತ್ತೆ ಅಸ್ತಿತ್ವ ಸಾಧಿಸಲು ಬಿಜೆಪಿ ಪ್ರಬಲ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಇಲ್ಲಿ ಆಕಾಂಕ್ಷಿಗಳ ಪಟ್ಟಿದೊಡ್ಡದಾಗಿದ್ದರೂ, ಬಿಜೆಪಿಯಿಂದ ಪ್ರಮುಖವಾಗಿ ರುದ್ರಣ್ಣ ಚಂದರಗಿ, ಈರಣ್ಣ ಚಂದರಗಿ ಅವರ ಹೆಸರುಗಳು ಕೇಳಿ ಬರುತ್ತಿವೆ. ಬಿಜೆಪಿ ವಶದಲ್ಲಿರುವ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಸಿದೆ. ಕಳೆದ ಬಾರಿ ಪರಾಭವಗೊಂಡಿದ್ದ ವಿಶ್ವಾಸ ವೈದ್ಯ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಪಂಚನಗೌಡ ದ್ಯಾಮನಗೌಡರ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿತ್ತು. ಇದರಿಂದಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. ಆದರೆ, ಈ ಬಾರಿ, ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆಯಿದೆ.

Ticket Fight: ಸಿಂಧನೂರಿನಲ್ಲೂ ಗಣಿ ರೆಡ್ಡಿ ಸ್ಪರ್ಧೆ ವದಂತಿ: ಕಾಂಗ್ರೆಸ್‌-ಬಿಜೆಪಿ ಟಿಕೆಟ್‌ಗೆ ತೀವ್ರ ಕದನ

2. ಬೆಳಗಾವಿ ದಕ್ಷಿಣ: ಬಿಜೆಪಿಗೆ ಎಂಇಎಸ್‌ ಎದುರಾಳಿ
ಹಿಂದೊಮ್ಮೆ ಗಡಿ ಭಾಷಾ ವಿವಾದ ಮತ್ತು ಗುಂಪು ರಾಜಕಾರಣಕ್ಕೆ ಜೋತು ಬಿದ್ದಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರವೀಗ ಪಕ್ಷ ರಾಜಕಾರಣದತ್ತ ಹೊರಳಿದೆ. ಬಿಜೆಪಿಗೆ ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯೇ ಎದುರಾಳಿ. ಬಿಜೆಪಿಯ ಹಾಲಿ ಶಾಸಕ ಅಭಯ ಪಾಟೀಲ ಅವರು ಮತ್ತೊಮ್ಮೆ ಸ್ಪರ್ಧೆಗೆ ಕಸರತ್ತು ನಡೆಸಿದ್ದಾರೆ. ಬಿಜೆಪಿ ಮುಖಂಡ ಕಿರಣ ಜಾಧವ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿ. ಇನ್ನು, ಮಾಜಿ ಶಾಸಕ ರಮೇಶ ಕುಡಚಿ, ಕೆಪಿಸಿಸಿ ಸದಸ್ಯೆ ಸರಳಾ ಸಾತಪೂತೆ, ಪ್ರಭಾವತಿ ಚಾವಡಿ, ರಮೇಶ ಗೋರಲ್‌ ಕಾಂಗ್ರೆಸ್‌ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಹಿಂದು ಕಾರ್ಯಕರ್ತ, ರಮಾಕಾಂತ ಕೊಂಡಸ್ಕರ್‌ ಅವರು ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಇವರೊಂದಿಗೆ ಕಿರಣ ಸಾಯನಾಕ್‌, ಶುಭಂಕೂಡ ಎಂಇಎಸ್‌ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

3. ಬೆಳಗಾವಿ ಉತ್ತರ: ಬಿಜೆಪಿ, ಎಂಇಎಸ್‌ ಟಿಕೆಟ್‌ಗೆ ಭಾರೀ ಡಿಮಾಂಡ್‌
ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬೆಳಗಾವಿ ಉತ್ತರವೀಗ ಬಿಜೆಪಿ ವಶದಲ್ಲಿದೆ. ಅನಿಲ ಬೆನಕೆ ಬಿಜೆಪಿಯ ಹಾಲಿ ಶಾಸಕರಾಗಿದ್ದು, ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಡಾ.ರವಿ ಪಾಟೀಲ, ಉದ್ಯಮಿ ವೀರೇಶ ಕಿವಡಸಣ್ಣವರ, ಮುರಘೇಂದ್ರಗೌಡ ಪಾಟೀಲ ಕೂಡ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಫಿರೋಜ್‌ ಸೇಠ್‌, ರಾಜು ಸೇಠ್‌, ಮಾಜಿ ಸಚಿವ ಎ.ಬಿ.ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಮರಾಠಾ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಎಂಇಎಸ್‌ ಬೆಂಬಲಿತ ಅಭ್ಯರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಮೇಲ್ನೋಟಕ್ಕೆ ಇಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಎಂಇಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಆಮ್‌ ಆದ್ಮಿ ಪಾರ್ಟಿಯಿಂದ ರಾಜಕುಮಾರ ಟೋಪಣ್ಣವರ ಕಣಕ್ಕೆ ಇಳಿಯಲಿದ್ದಾರೆ. ಎಂಇಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಶುಭಂ ಸೆಳಕೆ, ರೇಣು ಕಿಲ್ಲೇಕರ ಕಣಕ್ಕೆ ಇಳಿಯಲಿದ್ದಾರೆ.

4. ಬೆಳಗಾವಿ ಗ್ರಾಮೀಣ: ಮತ್ತೊಮ್ಮೆ ಸ್ಪರ್ಧೆಗೆ ಲಕ್ಷ್ಮೇ ಸಜ್ಜು
ಕಾಂಗ್ರೆಸ್‌ನ ಹಾಲಿ ಶಾಸಕಿ, ಲಕ್ಷ್ಮೇ ಹೆಬ್ಬಾಳಕರ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಮರಾಠರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕಿಯಾಗಿರುವ ಲಕ್ಷ್ಮೇ ಹೆಬ್ಬಾಳಕರ, ಪಕ್ಷಕ್ಕಿಂತ ವೈಯಕ್ತಿಕವಾಗಿ ಇಲ್ಲಿ ವರ್ಚಸ್ಸು ಹೊಂದಿದ್ದಾರೆ. ಆದರೆ, ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಮಾಜಿ ಶಾಸಕ ಸಂಜಯ ಪಾಟೀಲ, ಧನಂಜಯ ಜಾಧವ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ರಮೇಶ ಜಾರಕಿಹೊಳಿ ಆಪ್ತ ನಾಗೇಶ ಮನ್ನೋಳಕರ ಕೂಡ ಬಿಜೆಪಿ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಮೇಯರ್‌ ಶಿವಾಜಿ ಸುಂಠಕರ ಅಥವಾ ಮಾಜಿ ಶಾಸಕ ಮನೋಹರ ಕಿಣೇಕರ ಕಣಕ್ಕೆ ಇಳಿವ ನಿರೀಕ್ಷೆಯಿದೆ.

5. ಗೋಕಾಕ: ಜಾರಕಿಹೊಳಿ ಪುತ್ರ ಕೂಡ ಟಿಕೆಟ್‌ ಆಕಾಂಕ್ಷಿ!
ಬಿಜೆಪಿಯಿಂದ ಈ ಬಾರಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಟಿಕೆಟ್‌ ಆಕಾಂಕ್ಷಿ. ತಂದೆ ಸ್ಪರ್ಧಿಸದಿದ್ದರೆ ಎಂಬ ಮುಂದಾಲೋಚನೆ ಇರಿಸಿಕೊಂಡು ಪುತ್ರ ಅಮರನಾಥ ಜಾರಕಿಹೊಳಿ ಕೂಡ ಬಿಜೆಪಿ ಟಿಕೆಟ್‌ಗೆ ಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿದ್ದ ರಮೇಶ ಜಾರಕಿಹೊಳಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೋಕಾಕ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಜೆಡಿಎಸ್‌ವೆ ವಲಸೆ ಹೋಗುವ ವದಂತಿ ನಡುವೆಯೂ ಅವರು ಈ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಶೋಕ ಪೂಜಾರಿ ಈಗ ಕಾಂಗ್ರೆಸ್‌ನಲ್ಲಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಜೆಡಿಎಸ್‌ನಿಂದ ಪ್ರಕಾಶ ಬಾಗೋಜಿ ಅವರ ಹೆಸರು ಕೇಳಿ ಬರುತ್ತಿದೆ.

6. ಅರಭಾವಿ: ಬಾಲಚಂದ್ರ ಜಾರಕಿಹೊಳಿಗೆ ವೈಯಕ್ತಿಕ ವರ್ಚಸ್ಸಿನ ಬಲ
ಕೆಎಂಎಫ್‌ ಅಧ್ಯಕ್ಷ, ಬಾಲಚಂದ್ರ ಜಾರಕಿಹೊಳಿ ಈ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಈ ಬಾರಿಯೂ ಬಿಜೆಪಿಯಿಂದ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಾಲಚಂದ್ರ ಜಾರಕಿಹೊಳಿ ಬಳಿಕ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಾಲಚಂದ್ರ ಜಾರಕಿಹೊಳಿಯವರು ಇಲ್ಲಿ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಇನ್ನು, ಬಾಲಚಂದ್ರ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಕಾಂಗ್ರೆಸ್‌, ಜೆಡಿಎಸ್‌ ರಣತಂತ್ರ ರೂಪಿಸುತ್ತಿವೆ. ಕಾಂಗ್ರೆಸ್‌ನಿಂದ ಲಖನ್‌ ಸವಸುದ್ದಿ, ಭೀಮಶಿ ಹಂದಿಗುದ್ದ ಟಿಕೆಟ್‌ಗಾಗಿ ಕಸರತ್ತು ಆರಂಭಿಸಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ, ಈ ಬಾರಿ ಕೂಡ ಜೆಡಿಎಸ್‌ನಿಂದ ಕಣಕ್ಕೆ ಇಳಿಯಲಿದ್ದಾರೆ.

7. ರಾಮದುರ್ಗ: ಹಾಲಿ ಶಾಸಕ ಯಾದವಾಡ ಸ್ಪರ್ಧೆಗೆ ಅಪಸ್ವರ
ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಈ ಬಾರಿಯೂ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅವರ ಬಗ್ಗೆ ಸ್ವಪಕ್ಷದಲ್ಲೇ ಅಪಸ್ವರ ಕೇಳಿ ಬರುತ್ತಿದೆ. ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ ಎನ್ನುವ ಆರೋಪವಿದೆ. ಹಾಗಾಗಿ, ಅವರ ಸಹೋದರ ಮಲ್ಲಣ್ಣ ಯಾದವಾಡ ಅವರ ಹೆಸರು ಬಿಜೆಪಿಯಿಂದ ಪ್ರಮುಖವಾಗಿ ಕೇಳಿ ಬರುತ್ತಿದೆ. ಜೊತೆಗೆ, ಜಿ.ಪಂ. ಮಾಜಿ ಸದಸ್ಯ ರಮೇಶ ದೇಶಪಾಂಡೆ, ಪಿ.ಎಫ್‌. ಪಾಟೀಲ ಕೂಡ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳು. ಇನ್ನು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಪಟ್ಟಣ ಅವರು ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜೆಡಿಎಸ್‌ನಿಂದ ಯಾರ ಹೆಸರೂ ಕೇಳಿ ಬರುತ್ತಿಲ್ಲ.

8. ಕಿತ್ತೂರು: ಕಾಂಗ್ರೆಸ್‌ ಟಿಕೆಟ್‌ಗೆ ಅಳಿಯ, ಮಾವನ ಮಧ್ಯೆ ಫೈಟ್‌
ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಹಾಂತೇಶ ದೊಡ್ಡಗೌಡರ, ಹಾಲಿ ಶಾಸಕ. ಈ ಬಾರಿ ಮತ್ತೊಮ್ಮೆ ತಮ್ಮ ರಾಜಕೀಯದ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಈ ಮಧ್ಯೆ, ಮಹಾಂತೇಶ ದೊಡ್ಡಗೌಡರ ಅವರು ಬೇರೆ ಕ್ಷೇತ್ರದಿಂದ ವಲಸೆ ಬಂದವರು. ಹಾಗಾಗಿ, ಬಿಜೆಪಿಯಿಂದ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಮಾವ-ಅಳಿಯಂದಿರಾದ ಕಾಂಗ್ರೆಸ್‌ನಿಂದ ಮಾಜಿ ಸಚಿವ ಡಿ.ಬಿ.ಇನಾಮದಾರ, ಬಾಬಾಸಾಹೇಬ ಪಾಟೀಲ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿ.ಬಿ.ಇನಾಮದಾರ ಸ್ಪರ್ಧಿಸಿದ್ದರೆ, ಅವರ ಅಳಿಯ ಬಾಬಾಸಾಹೇಬ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದರು. ಹಾಗಾಗಿ, ಇಬ್ಬರೂ ಸೋಲನ್ನು ಅನುಭವಿಸಿದ್ದರು. ಈಗ ಕಾಂಗ್ರೆಸ್‌ನಿಂದಲೇ ಯಾರಾದರೊಬ್ಬರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲ.

Ticket Fight: ಹಾಲಿಗಳಿಗೆ ವಯೋಮಿತಿ, ಹೊಸ ಮುಖ ಅಡ್ಡಿ

9. ಯಮಕನಮರಡಿ: ಕಾಂಗ್ರೆಸ್‌ನಿಂದ ಮತ್ತೆ ಕಣಕ್ಕಿಳಿಯಲು ಸತೀಶ ಜಾರಕಿಹೊಳಿ ಸಿದ್ಧತೆ:
ಯಮಕನಮರಡಿ, ಎಸ್‌ಟಿ ಮೀಸಲು ಕ್ಷೇತ್ರ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಇಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ. ಈ ಕ್ಷೇತ್ರದಲ್ಲಿ ತಮ್ಮ ಪುತ್ರಿ ಪ್ರಿಯಾಂಕಾಳನ್ನು ಕಣಕ್ಕಿಳಿಸಿ, ತಾವು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಸತೀಶ ಜಾರಕಿಹೊಳಿಯವರು ಸಿದ್ಧತೆ ನಡೆಸಿದ್ದರು. ಕೊನೆಗೆ ತಾವೇ ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಇಲ್ಲಿ ಸತೀಶ ಜಾರಕಿಹೊಳಿ ಅವರನ್ನು ಸೋಲಿಸಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಮಾರುತಿ ಅಷ್ಟಗಿ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಬಹುದು. ಅಲ್ಲದೆ, ಬಸವರಾಜ ಹುಂದ್ರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಈ ಬಾರಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್‌, ತನ್ನ ಗೆಲುವಿನ ಅಂತರವನ್ನು ಹೆಚ್ಚಿಸಲು ರಣತಂತ್ರ ರೂಪಿಸುತ್ತಿದೆ.

ಕ್ಷೇತ್ರಗಳ ಬಲಾಬಲ
ಒಟ್ಟೂ ಕ್ಷೇತ್ರ: 9
ಬಿಜೆಪಿ: 7
ಕಾಂಗ್ರೆಸ್‌: 2

click me!