ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಕಾಲದ ಕಾಂಗ್ರೆಸ್ ಅಧಿಪತ್ಯಕ್ಕೆ 2018ರ ಚುನಾವಣೆಯಲ್ಲಿ ಬ್ರೇಕ್ ಹಾಕಿ ಪ್ರಾಬಲ್ಯ ಸ್ಥಾಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರೆ, ಕೇವಲ ಒಂದರಲ್ಲಷ್ಟೇ ಕಾಂಗ್ರೆಸ್ ಶಾಸಕರಿದ್ದಾರೆ.
ವಸಂತಕುಮಾರ ಕತಗಾಲ
ಕಾರವಾರ (ನ.29): ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಕಾಲದ ಕಾಂಗ್ರೆಸ್ ಅಧಿಪತ್ಯಕ್ಕೆ 2018ರ ಚುನಾವಣೆಯಲ್ಲಿ ಬ್ರೇಕ್ ಹಾಕಿ ಪ್ರಾಬಲ್ಯ ಸ್ಥಾಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರೆ, ಕೇವಲ ಒಂದರಲ್ಲಷ್ಟೇ ಕಾಂಗ್ರೆಸ್ ಶಾಸಕರಿದ್ದಾರೆ. ಕಾರವಾರ, ಕುಮಟಾ, ಭಟ್ಕಳ, ಶಿರಸಿ ಹಾಗೂ ಯಲ್ಲಾಪುರ ಕ್ಷೇತ್ರ ಬಿಜೆಪಿಗೆ ಒಲಿದರೆ, ಹಳಿಯಾಳ ಮಾತ್ರ ಕಾಂಗ್ರೆಸ್ ಪಾಲಾಗಿದೆ. ಲೋಕಸಭೆ, ಗ್ರಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಜಿಲ್ಲೆಯಾದ್ಯಂತ ಮೇಲ್ನೋಟಕ್ಕೆ ಬಿಜೆಪಿ ಪ್ರಬಲವಾಗಿದೆ.
undefined
ನಂತರದ ಸ್ಥಾನ ಕಾಂಗ್ರೆಸ್‌ನದ್ದು. ಜೆಡಿಎಸ್ ಜಿಲ್ಲೆಯಲ್ಲಿ ಬಲ ಕಳೆದುಕೊಂಡಿದೆ. ಬಹುಸಂಖ್ಯಾತರಾದ ಈಡಿಗರು, ಬ್ರಾಹ್ಮಣರು, ಹಾಲಕ್ಕಿ ಒಕ್ಕಲಿಗರು, ಮರಾಠರು ಇಲ್ಲಿ ನಿರ್ಣಾಯಕರು. ಆದರೆ ಭಟ್ಕಳ ಹೊರತು ಪಡಿಸಿ ಜಿಲ್ಲೆಯ ಇತರ ಕ್ಷೇತ್ರಗಳಲ್ಲಿ ಪ್ರಬಲ ಜಾತಿಗಳ ಅಭ್ಯರ್ಥಿಗಳಿಗಿಂತ ಬೇರೆಯವರೇ ಆಯ್ಕೆಯಾದ ಉದಾಹರಣೆಗಳು ಹೆಚ್ಚಿವೆ. ಇದರಿಂದ ಜಾತಿ ರಾಜಕಾರಣಕ್ಕಿಂತ ಜಿಲ್ಲೆಯಲ್ಲಿ ವ್ಯಕ್ತಿಗಳೇ ಮಹತ್ವ ಪಡೆದುಕೊಂಡಿದ್ದಾರೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆ, ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸದ್ಯಕ್ಕೆ ಜಿಲ್ಲೆಯ ಪ್ರಮುಖ ರಾಜಕಾರಣಿಗಳು.
ಕಳೆದ ಚುನಾವಣೆಯಲ್ಲಿ ಹೊನ್ನಾವರದ ಯುವಕ ಪರೇಶ ಮೇಸ್ತ ಸಾವು ಜಿಲ್ಲೆಯಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಜಿಲ್ಲೆ ಗಲಭೆಯನ್ನೂ ಕಾಣುವಂತಾಯಿತು. ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಯಿತು. ಇದೇ ಕಾರಣಕ್ಕೆ ಬಿಜೆಪಿ ಕರಾವಳಿಯಲ್ಲಿ ಜಯಭೇರಿ ಬಾರಿಸಿತು ಎನ್ನುವುದು ಕಾಂಗ್ರೆಸ್ ಆರೋಪ. ಪರೇಶ ಮೇಸ್ತ ಸಾವು ಆಕಸ್ಮಿಕ ಎಂದು ಈಚೆಗೆ ಸಿಬಿಐ ವರದಿ ನೀಡಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಹುಮ್ಮಸ್ಸಿಗೆ ಕಾರಣವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಪರೇಶ ಮೇಸ್ತ ಸಾವು ಚುನಾವಣಾ ಸರಕಾಗುವ ಸಾಧ್ಯತೆ ದಟ್ಟವಾಗಿದೆ.
Ticket Fight: ಯತ್ನಾಳ ವಿರುದ್ಧ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲಿ 20 ಆಕಾಂಕ್ಷಿಗಳು
ಕಾರವಾರ: ರೂಪಾಲಿ ನಾಯ್ಕ್-ಸೈಲ್ ಟಕ್ಕರ್ ಖಚಿತ
ಕಾರವಾರ ಹಾಗೂ ಅಂಕೋಲಾ ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ರೂಪಾಲಿ ನಾಯ್ಕ ಹಾಲಿ ಶಾಸಕರು. ಮುಂದಿನ ಚುನಾವಣೆಯಲ್ಲೂ ಇವರೇ ಬಿಜೆಪಿಯಿಂದ ಕಣಕ್ಕಿಳಿಯುವುದು ಪಕ್ಕ. ಇವರ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಸತೀಶ ಸೈಲ್ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಮಾಜಿ ಸಚಿವ ಆನಂದ ಅಸ್ನೋಟಿಕರ ಜೆಡಿಎಸ್‌ನಲ್ಲಿದ್ದರೂ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಅನುಮಾನ. ಸತೀಶ ಸೈಲ್ ಹಾಗೂ ಆನಂದ ಅಸ್ನೋಟಿಕರ ಇಬ್ಬರೂ ಬಿಜೆಪಿ ಸೇರಲು ನಡೆಸಿದ ಕಸರತ್ತು ಯಶಸ್ವಿಯಾಗಿಲ್ಲ. ಹಾಗಾಗಿಯೇ ಸೈಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಿರ್ಧರಿಸಿದರೆ, ಆನಂದ್ ಇನ್ನೂ ಗೊಂದಲದಲ್ಲಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಬೇಕೇ ಅಥವಾ ಬೇರೊಬ್ಬ ಅಭ್ಯರ್ಥಿಯನ್ನು ಬೆಂಬಲಿಸಬೇಕೇ ಎನ್ನುವ ವಿಚಾರವೂ ಆನಂದ್ ಅವರ ತಲೆಯಲ್ಲಿದೆ. ಕ್ಷೇತ್ರದಲ್ಲಿ ಹಾಲಕ್ಕಿ ಒಕ್ಕಲಿಗರು, ಕೊಂಕಣ ಮರಾಠಾ, ಕೋಮಾರಪಂತ, ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೂಪಾಲಿ ನಾಯ್ಕ ಹಾಗೂ ಸತೀಶ ಸೈಲ್ ಇಬ್ಬರೂ ಕೊಂಕಣ ಮರಾಠಾ ಸಮಾಜದವರಾಗಿದ್ದಾರೆ. ಆದರೆ ಕಾರವಾರ ಕ್ಷೇತ್ರದಲ್ಲಿ ಜಾತಿಗಿಂತ ಅಭ್ಯರ್ಥಿಗಳ ಪ್ರಭಾವವೇ ಗೆಲುವನ್ನು ನಿರ್ಧರಿಸಲಿದೆ.
ಕುಮಟಾ: ಶೆಟ್ಟಿ ಮನೆತನದವರೇ ಇಲ್ಲಿ ಎದುರಾಳಿಗಳು
ಬಿಜೆಪಿಯ ದಿನಕರ ಶೆಟ್ಟಿಇಲ್ಲಿನ ಹಾಲಿ ಶಾಸಕರು. 3-4 ಚುನಾವಣೆಗಳಲ್ಲಿ ಶೆಟ್ಟಿಮನೆತನದವರೇ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗುತ್ತಿದ್ದಾರೆ. ಈ ಬಾರಿಯೂ ದಿನಕರ ಶೆಟ್ಟಿಬಿಜೆಪಿಯಿಂದ ಸ್ಪರ್ಧಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಶಾರದಾ ಶೆಟ್ಟಿಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಆದರೆ ಶಿವಾನಂದ ಹೆಗಡೆ, ಭಾಸ್ಕರ ಪಟಗಾರ, ಆರ್.ಎಚ್.ನಾಯ್ಕ, ರತ್ನಾಕರ ನಾಯ್ಕ, ಸಾಯಿ ಗಾಂವಕರ್, ಕೃಷ್ಣ ಗೌಡ, ಪ್ರದೀಪ ನಾಯಕ ದೇವರಬಾವಿ ಸೇರಿ ಡಜನ್‌ನಷ್ಟುಆಕಾಂಕ್ಷಿಗಳು ಈಗಾಗಲೇ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಬಿಜೆಪಿಯಿಂದಲೂ ನಾಗರಾಜ ನಾಯಕ ತೊರ್ಕೆ, ಸುಬ್ರಾಯ ವಾಳ್ಕೆ, ಎಂ.ಜಿ.ಭಟ್, ಮತ್ತಿತರರು ಸ್ಪರ್ಧಿಸಲು ಆಸಕ್ತರಾಗಿದ್ದಾರೆ. ಜೆಡಿಎಸ್‌ನಿಂದ ಸೂರಜ್ ನಾಯ್ಕ ಸೋನಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಪಕ್ಷ ಸಂಘಟನೆಯನ್ನೂ ಅವರು ಚುರುಕಾಗಿ ಕೈಗೊಂಡಿದ್ದಾರೆ. ಕುಮಟಾದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹೀಗೆ ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ. ಹಾಲಕ್ಕಿ ಒಕ್ಕಲಿಗರು, ಬ್ರಾಹ್ಮಣರು ಹಾಗೂ ನಾಮಧಾರಿಗಳು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಕುಮಟಾ ತಾಲೂಕು ಹಾಗೂ ಭಾಗಶಃ ಹೊನ್ನಾವರ ತಾಲೂಕನ್ನು ಈ ಕ್ಷೇತ್ರ ಒಳಗೊಂಡಿದೆ.
ಭಟ್ಕಳ: ಈಡಿಗರು ಕೈ ಹಿಡಿದರೆ ಗೆಲುವು
ಸುನೀಲ್ ನಾಯ್ಕ ಹಾಲಿ ಬಿಜೆಪಿ ಶಾಸಕ. ಆದರೆ ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಪೈಪೋಟಿ ಇದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಮಂಕಾಳ ವೈದ್ಯ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಆದರೆ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬಿಜೆಪಿಯಿಂದ ಹಾಲಿ ಶಾಸಕ ಸುನೀಲ ನಾಯ್ಕ ಹೊರತಾಗಿ ಗೋವಿಂದ ನಾಯ್ಕ, ಶಿವಾನಿ ಶಾಂತಾರಾಮ, ಈಶ್ವರ ನಾಯ್ಕ, ರಾಜೇಶ ನಾಯ್ಕ, ಗಣೇಶ ನಾಯ್ಕ, ರವಿ ನಾಯ್ಕ ಮತ್ತಿತರರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಮಂಕಾಳ ವೈದ್ಯ ಜತೆಗೆ, ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಜಿ ಸಚಿವ ಆರ್.ಎನ್.ನಾಯ್ಕ, ಜಿಪಂ ಮಾಜಿ ಸದಸ್ಯ ದೀಪಕ್ ನಾಯ್ಕ ಮಂಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಉದ್ಯಮಿ ಅಯ್ಯಪ್ಪ ನಾಯ್ಕ, ಕಾಯ್ಕಿಣಿ ಗ್ರಾಪಂ ಉಪಾಧ್ಯಕ್ಷ ಶ್ರೀಧರ ನಾಯ್ಕ ಹೀಗೆ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ನಿಂದ ಇನಾಯತ್ ಉಲ್ಲಾ ಶಾಬಂದ್ರಿ, ನಾಗೇಂದ್ರ ನಾಯ್ಕ ಟಿಕೆಟ್ ಆಕಾಂಕ್ಷಿಗಳು. ಆಪ್ ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಡಾ.ನಸೀಮ್ ಖಾನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಭಟ್ಕಳ ತಾಲೂಕು ಹಾಗೂ ಭಾಗಶಃ ಹೊನ್ನಾವರ ತಾಲೂಕನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಈಡಿಗ ಮತದಾರರು ನಿರ್ಣಾಯಕರು.
ಯಲ್ಲಾಪುರ: ಹೆಬ್ಬಾರರನ್ನು ಕಟ್ಟಿ ಹಾಕುವವರು ಯಾರು?
ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣರಲ್ಲೊಬ್ಬರಾದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಾಲಿ ಬಿಜೆಪಿ ಶಾಸಕರು. ಇವರು ಬಿಜೆಪಿಯಿಂದ ಮತ್ತೆ ಸ್ಪರ್ಧಿಸುವುದು ಖಚಿತ. ಬಿಜೆಪಿಯಲ್ಲೇ ಇದ್ದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ಕಾಂಗ್ರೆಸ್‌ನಿಂದ ಕಣಕ್ಕಿಳಿದು ಶಿವರಾಮ ಹೆಬ್ಬಾರ್ ಅವರಿಗೆ ಎದುರಾಳಿಯಾಗುವ ಸಾಧ್ಯತೆ ಬಹುತೇಕ ಖಚಿತ. ಯಲ್ಲಾಪುರ ಮೂಲದ ಮೈಸೂರಿನ ಉದ್ಯಮಿ ಶ್ರೀನಿವಾಸ ಭಟ್ ಅವರೂ ಪಕ್ಷೇತರವಾಗಿ ಕಣಕ್ಕಿಳಿಯುವ ಸಾಧ್ಯತೆಯೂ ಇದೆ. ಬಿಜೆಪಿಯಲ್ಲಿ ಮೂಲ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಪಕ್ಷಕ್ಕೆ ಬಂದವರಲ್ಲಿ ಹೊಂದಾಣಿಕೆಯ ಕೊರತೆ ಇದೆ. ಪಕ್ಷದಲ್ಲಿ ಎರಡು ಗುಂಪುಗಳ ನಡುವೆ ಹೊಂದಾಣಿಕೆ ಸೃಷ್ಟಿಸೋದು ಹೆಬ್ಬಾರ್ ಅವರಿಗೂ ಸವಾಲು. ಯಲ್ಲಾಪುರ, ಮುಂಡಗೋಡ ಹಾಗೂ ಶಿರಸಿ ತಾಲೂಕಿನ ಬನವಾಸಿಯನ್ನೊಳಗೊಂಡ ಕ್ಷೇತ್ರದಲ್ಲಿ ಬ್ರಾಹ್ಮಣರು, ಲಿಂಗಾಯತರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ.
ಶಿರಸಿ: ಮತ್ತೆ ಕಾಗೇರಿ-ಭೀಮಣ್ಣ ನಾಯ್ಕ ಜಿದ್ದಾಜಿದ್ದಿ?
ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಲಿ ಶಾಸಕರು. ಸತತವಾಗಿ ಆಯ್ಕೆಯಾಗುತ್ತಿರುವ ಕಾಗೇರಿ ಈ ಬಾರಿಯೂ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್‌ನಿಂದ ಭೀಮಣ್ಣ ನಾಯ್ಕ ಮತ್ತೆ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ. ಅರಣ್ಯ ಭೂಮಿ ಅತಿಕ್ರಮಣ ಹೋರಾಟಗಾರರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಇವರೊಂದಿಗೆ ಸುಷ್ಮಾ ರಾಜಗೋಪಾಲ, ದೀಪಕ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ ಸಹ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯಿಂದ ಕೃಷ್ಣ ಎಸಳೆ, ಗುರುಪ್ರಸಾದ ಹೆಗಡೆ ಟಿಕೆಟ್ ಆಕಾಂಕ್ಷಿಗಳಾದರೂ ಕಾಗೇರಿ ಅವರನ್ನು ಪಕ್ಕಕ್ಕೆ ಸರಿಸಿ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಜೆಡಿಎಸ್‌ನಿಂದ ಶಶಿಭೂಷಣ ಹೆಗಡೆ ಅವರನ್ನು ಹೊರತು ಪಡಿಸಿದರೆ ಬೇರಾವ ಪ್ರಬಲ ಅಭ್ಯರ್ಥಿಯೂ ಕಾಣಿಸುತ್ತಿಲ್ಲ. ನಿರಂತರವಾಗಿ ಗೆಲ್ಲುತ್ತಿರುವ ವಿಶ್ವೇಶ್ವರ ಹೆಗಡೆ ಅವರನ್ನು ಸೋಲಿಸಲು ಇದುವರೆಗೆ ಭೀಮಣ್ಣ ನಾಯ್ಕ, ಶಶಿಭೂಷಣ ಹೆಗಡೆ ಅವರು ಯಶಸ್ವಿಯಾಗಿಲ್ಲ. ಶಿರಸಿ ಕ್ಷೇತ್ರ ಶಿರಸಿ ಹಾಗೂ ಸಿದ್ಧಾಪುರ ತಾಲೂಕುಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ಬ್ರಾಹ್ಮಣರು ಹಾಗೂ ಈಡಿಗರು ನಿರ್ಣಾಯಕರಾಗಿದ್ದಾರೆ.
Ticket Fight: ಘಟಾನುಘಟಿಗಳ ಪೈಪೋಟಿಗೆ ಸಜ್ಜಾಗುತ್ತಿದೆ ಮೈಸೂರು ಜಿಲ್ಲೆ
ಹಳಿಯಾಳ: ದೇಶಪಾಂಡೆ ಎದುರು ಗೆಲುವು ಸುಲಭವಲ್ಲ
9 ಬಾರಿ ಚುನಾವಣೆಗೆ ಸ್ಪರ್ಧಿಸಿ 8 ಬಾರಿ ಗೆಲುವು ಸಾಧಿಸಿರುವ ಆರ್.ವಿ.ದೇಶಪಾಂಡೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಬಿಜೆಪಿಯಿಂದ ಸುನೀಲ ಹೆಗಡೆ ಅವರು ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ದೇಶಪಾಂಡೆ ಅವರಿಗೆ ಸೆಡ್ಡು ಹೊಡೆಯುತ್ತಿದ್ದ ಎಸ್.ಎಲ್. ಘೋಟ್ನೇಕರ್ ಈ ಬಾರಿ ಗುಟ್ಟು ಬಿಟ್ಟುಕೊಡುತ್ತಿಲ್ಲ. ಘೋಟ್ನೇಕರ್ ನಡೆ ಏನಾಗಬಹುದು ಎಂಬುದು ಕುತೂಹಲಕರವಾಗಿದೆ. ಹಳಿಯಾಳ ಕ್ಷೇತ್ರದಲ್ಲಿ ನಡೆಯಲಿರುವ ಹೋರಾಟ ಜಿಲ್ಲೆಯಾದ್ಯಂತ ಕುತೂಹಲವನ್ನು ಮೂಡಿಸಿದೆ. ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ಈ ಮೂರೂ ತಾಲೂಕುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಮರಾಠರು ನಿರ್ಣಾಯಕರು. ಆದರೆ ಮರಾಠೇತರ ಸಮುದಾಯದ ಅಭ್ಯರ್ಥಿಗಳೇ ಇಲ್ಲಿ ಗೆಲುವು ಸಾಧಿಸುತ್ತಿರುವುದು ವಿಶೇಷ.
ಬಲಾಬಲ
ಒಟ್ಟು 6
ಬಿಜೆಪಿ 5
ಕಾಂಗ್ರೆಸ್ 1
ಜೆಡಿಎಸ್ 0